ಚಂದನಾ, ಶ್ರೀ ಹರ್ಷ ಹೊಸದಾಗಿ ಮದುವೆಯಾದ ಜೋಡಿಯಂತೆ ಉತ್ಸಾಹಿತರಾಗಿದ್ದರು . ಡಾ.ಅನಿತಾ ಹೇಳಿದ ಸಮಾಚಾರ ಅವರಿಗೆ ಹರ್ಷದಾಯಕವಾಗಿತ್ತು. ಅವರ ೧೨ ವರ್ಷದ ಕನಸು ಬಯಕೆ ಕೈಗೂಡಿತ್ತು. ಸಂತಸದಿಂದ ಮನೆಯತ್ತ ಹೆಜ್ಜೆ ಹಾಕಿದರು. ಸ್ಕೂಲ್ ಬಸ್ ನಿಂದ ಇಳಿದಿದ್ದ ೫ ವರ್ಷದ ಚರಣ್ ಮನೆ ಬಾಗಿಲಲ್ಲಿ ಕಾಯುತಿದ್ದ. ಚಂದನಾ ಅವನ ಮುಖ ತೊಳೆಸಿ ಯುನಿಫಾರ್ಮ್ ಬದಲಾಯಿಸಿ ಒಗೆಯಲು ಹಾಕಿದಳು. ಅವನು ತಿಂಡಿ ತಿನ್ನುತ್ತಾ ಉತ್ಸಾಹದಿಂದ ಶಾಲೆಯ ಸಮಾಚಾರ ಹೇಳುತಿದ್ದ. ಆದರೆ ಅವಳ ಮನಸಿನ ಗತಿ ಬೇರೆತ್ತಲೋ ಸಾಗಿತ್ತು.

ರಾತ್ರಿ ಶ್ರೀ ಹರ್ಷ ಚಂದನಳಿಗೆ ಡಾ.ಅನಿತಾ ಹೇಳಿದ್ದ ಎಚ್ಚರಿಕೆಯ ಮಾತುಗಳನ್ನು ನೆನಪಿಸಿದ. ಕಾಲ ಕಾಲಕ್ಕೆ ಅವಳು ಪುಷ್ಟಿಕರ ಆಹಾರ ಶಕ್ತಿ ವರ್ಧಕ ತೆಳೆದುಕೊಳ್ಳಬೇಕು, ಯಾವುದೇ ಕಾರಣಕ್ಕೆ ಮನಸ್ಸಿಗೆ ದೇಹಕ್ಕೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕು, ಎಚ್ಚರಿಕೆ ವಹಿಸಬೇಕು. ಚಂದನಾ "ನನಗೆ ಮುದ್ದಾದ ಹೆಣ್ಣು ಮಗು ಬೇಕು. ಅದು ರೇಷ್ಮೆ ಲಂಗ ಹಾಕಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಘಲ್ ಘಲ್ ಎಂದು ಓಡಾಡುತ್ತಿದ್ದರೆ ಎಷ್ಟು ಚನ್ನ" ಎಂದಳು. ಶ್ರೀ ಹರ್ಷ ನಕ್ಕು ತಲೆದೂಗಿದ.

ಬೆಳಗ್ಗೆ ಚಂದನ ಎದ್ದಾಗ ಸುಸ್ತಾದಂತೆ ಅನಿಸಿತು. ಬೇಗ ಬೇಗ ಚರಣ್ ಗೆ ಸಿದ್ಧಮಾಡಿ ತಿಂಡಿಯ ಡಬ್ಬಿ ಟೇಬಲ್ ಮೇಲೆ ಇಟ್ಟಳು. ಅವಳಿಗೆ ಆಯಾಸ ಎನಿಸಿ ಅಲ್ಲೇ ಸೋಫಾ ಮೇಲೆ ಮಲಗಿ ಬಿಟ್ಟಳು. ಸ್ಕೂಲ್ ಬಸ್ ಮನೆಯ ಮುಂದೆ ನಿಂತಿತ್ತು. ಚರಣ್ ಬೇಗ ಬೇಗ ಶೂ ಧರಿಸಿ ಬ್ಯಾಗ್ ಎತ್ತಿಕೊಂಡು ಓಡಿದ. ಬಸ್ ಬಳಿ ಹೋಗುತ್ತಾ ಹಿಂತಿರುಗಿ ನೋಡಿದ. ಬಾಗಿಲಲ್ಲಿ ಅಪ್ಪ ಅಮ್ಮ ಇಬ್ಬರೂ ಕಾಣಲಿಲ್ಲ. ಅವನ ಮುಖ ಪೆಚ್ಚಾಯಿತು.

ಚರಣ್ ಸಂಜೆ ಮನೆಗೆ ಬಂದವನೇ ಶೂ ಕಳಚಿ ಬ್ಯಾಗ್ ಅಲ್ಲೇ ಬಿಸಾಕಿ ಅಮ್ಮನ ಬಳಿಗೆ ಬಂದು ಮಂಚ ಹತ್ತಿದ. ಹಿಂದೆಯೇ ಬಂದ ಹರ್ಷ "ಕತ್ತೆಯಂತೆ ಅವಳ ಮೈಮೇಲೆ ಬೀಳಬೇಡ, ದೊಡ್ಡವನಾಗಿದ್ದೀಯ" ಎಂದು ಅವನನ್ನು ಮಂಚದಿಂದ ಇಳಿಸಿದ. ಹರ್ಷ ಮಂಚದ ಮೇಲೆ ಕುಳಿತು ಚಂದನಾ ಜೊತೆ ಮಾತಾಡಲು ಪ್ರಾರಂಭಿಸಿದ. ಚರಣ್ ಗೆ ಹಸಿವಾಗುತ್ತಿತ್ತು. ಅಪ್ಪ ಏಕೆ ಹೀಗೆ ಬೈದರು. ನಾನೇನು ತಪ್ಪು ಮಾಡಿದೆ ಪಿಳಿ ಪಿಳಿ ಕಣ್ಣು ಬಿಟ್ಟ. ಜೊತೆಗೆ ಅಳು ಬಂದು ಹಾಲ್ ನಲ್ಲಿ ಸೋಫಾ ಮೇಲೆ ಕುಳಿತ. ನಿದ್ದೆ ಬಂದಂತಾಗಿ ತೂಕಡಿಸಿದ.

ಅರ್ಧ ಗಂಟೆಯಲ್ಲಿ ಅಮ್ಮ ಬಂದಳು. ತಟ್ಟೆಯಲ್ಲಿ ಹಾಕಿಕೊಟ್ಟ ಅನ್ನವನ್ನು ಗಬಗಬನೆ ತಿಂದು ಸೋಫಾ ಮೇಲೆ ಉರುಳಿದ. ಎಲ್ಲಾ ನಿದ್ದೆಗಣ್ಣಿನಲ್ಲಿ ನಡೆದಿತ್ತು.

ದಿನ ಕಳೆಯುತಿತ್ತು. "ಚರಣ್ ಸ್ನಾನ ಮಾಡಿ ಯುನಿಫಾರ್ಮ್ ಹಾಕಿಕೋ. ಅಡಿಗೆ ಮನೇಲಿರೊ ಊಟದ ಡಬ್ಬಿ ತೊಗೋ. ಸ್ಕೂಲ್ ಬಸ್ ಬರೋ ಮುಂಚೆ ಹೊರಗಡೆ ರೆಡಿ ಇರಬೇಕು. ನೀನೇನು ಪುಟ್ಟ ಮಗುವಲ್ಲ" ಅಮ್ಮನ ಮಾತು. ಅಪ್ಪ ರೂಮ್ನಲ್ಲಿ ಏನೋ ಮಾಡುತ್ತಿರುತ್ತಿದ್ದರು. ಚರಣ್ ಅಧೀರನಾಗತೊಡಗಿದ. ಹೋಂ ವರ್ಕ್ ಮಾಡಿಕೊಳ್ಳುವುದನ್ನು ತಪ್ಪಿಸುತಿದ್ದ. ಈಗ ಅಮ್ಮನ ಹತ್ತಿರ ಹೋಗಲೂ ಭಯ. ಅಪ್ಪ ಬೈತಾನೆ. ಮುಖದಲ್ಲಿ ಪೆಚ್ಚು ಕಳೆ.

ಸ್ಕೂಲ್ ಟೀಚರ್ ನಿಂದ ದೂರು ಬಂತು. ಚರಣ್ ಶಾಲೆಯಲ್ಲಿ ಮೊದಲಿಗ, ತುಂಬಾ ಚುರುಕು, ಈಗೀಗ ಮಂಕು ಕವಿದಂತೆ ಇರುತ್ತಾನೆ. ಏನಾದರೂ ಹೇಳಿದರೆ ಅಳು ಮುಖ ಮಾಡುತ್ತಾನೆ. ಯುನಿಫಾರ್ಮ್, ಶೂ ಹಾಕುವುದರಲ್ಲೂ ಒಂದು ಶಿಸ್ತಿಲ್ಲ.

ಚರಣ್ ಶಾಲೆಯಿಂದ ಹಿಂತಿರುಗಿದಾಗ ಅವನ ಊಟದ ಡಬ್ಬಿ ಹಾಕಿದಂತೆ ಇರುತ್ತದೆ. ಕೆಲಸದವಳು ಅದನ್ನು ಹೊರಗೆ ಚಲ್ಲುತ್ತಾಳೆ. ಚಂದನ "ಮನೆ ತುಂಬಾ ಹಣ್ಣು ಹಾಲು ಇರತ್ತೆ. ಏನು ಬೇಕೋ ತಿನ್ನು, ನೀನು ದೊಡ್ಡವನಾಗಿದ್ದೀಯ" ಹೇಳುತ್ತಾಳೆ. ಅವಳ ಹತ್ತಿರ ಹೋಗಲು ಭಯ. ಅಮ್ಮ ಹೊಟ್ಟೆ ಹಿಡಿದುಕೊಂಡು ಓಡಾಡುತ್ತಿರುತ್ತಾಳೆ. ಎಲ್ಲೆಂದೆರಲ್ಲಿ ಮಲಗಿಬಿಡುತ್ತಾನೆ. ಅಪ್ಪ ಇವನಿಗೆ ಹಾಸಿಗೆ ಮೇಲೆ ಮಲಗಲೂ ತಿಳಿಯುವುದಿಲ್ಲ ಎಂದು ಗೊಣಗುತ್ತಾ ಕರೆದೊಯ್ಯುತ್ತಾನೆ ನಿದ್ದೆಯ ಮಂಪರಿನಲ್ಲೂ. ಅಪ್ಪ ಕೋಪದಿಂದ ಗೊಣಗುವುದು ಚರಣ್ ಗೆ ತಿಳಿಯುತ್ತದೆ .

ಬೆಳಗ್ಗೆ ಶಾಲೆಗೆ ಹೋಗುವ ವೇಳೆಯಲ್ಲಿ ಕೆಲವೊಮ್ಮೆ ಅಮ್ಮ ಮಲಗಿರುತ್ತಾಳೆ. ಟೇಬಲ್ ಮೇಲೆ ಏನೇನೋ ಮಾತ್ರೆಗಳು. ಅಮ್ಮನಿಗೆ ಹುಷಾರಿಲ್ಲವೇನೋ ಅನಿಸುತ್ತದೆ. ಆದರೂ ಅಪ್ಪನೊಂದಿಗೆ ಖುಷಿಯಾಗಿ ಇರುತ್ತಾಳೆ.

ಚಂದನ ಸಂಭ್ರಮದಿಂದ ಹೊಟ್ಟೆಯಲ್ಲಿ ಮಗು ಕದಲುತ್ತಿದೆ. ಇಲ್ಲಿ ನೋಡಿ ಎಂದು ಹೇಳುತ್ತಾಳೆ. ಹರ್ಷ ಅವಳ ಹೊಟ್ಟೆಯ ಹತ್ತಿರ ಮುಟ್ಟಿ ಹೌದಲ್ಲ ಎನ್ನುತ್ತಾನೆ. ನೀನು ತುಂಬಾ ಜಾಗರೂಕವಾಗಿರ ಬೇಕು ಡಾಕ್ಟರ್ ಹೇಳಿದ್ದು ನೆನಪಿದೆ ತಾನೇ. ಅದಕ್ಕೆ ಚರಣ್ ಗೆ ಶಾಲೆಯಲ್ಲೇ ಊಟಕ್ಕೆ ದುಡ್ಡು ಕೊಟ್ಟಿದ್ದೇನೆ. ಕೆಲಸದವಳು ಇದ್ದಾಳೆ" ಪ್ರೀತಿಯಿಂದ ಹೇಳುತ್ತಾನೆ.

ಅಂದು ಹೊರಗಿಂದ ಬಂದು ಪಾಪು ಆರೋಗ್ಯವಾಗಿದೆ ಎಂದು ಮಾತಾಡಿಕೊಳ್ಳುತ್ತಾರೆ.

ಆ ರಾತ್ರಿ ಚರಣ್ ಗೆ ಜ್ವರ ಬಂದಿರುತ್ತದೆ. ಮಾತ್ರೆ ಹಾಕಿ ಬೆಳಗ್ಗೆ ಡಾಕ್ಟರ್ ಗೆ ತೋರಿಸೋಣ. ಈ ರಾತ್ರಿ ಎಲ್ಲಿ ಹೋಗೋದು ಚಂದನ ಹೇಳುತ್ತಾಳೆ.

ಬೆಳಗ್ಗೆ ಹರ್ಷ ಚರಣ್ ನನ್ನ ಹತ್ತಿರದ ನರ್ಸಿಂಗ್ ಹೋಂ ಗೆ ಕರೆದುಕೊಂಡು ಹೋಗುತ್ತಾನೆ. ಡಾ. ಶಶಿಕಾಂತ್ "ಇದು ಸಾಧಾರಣ ಜ್ವರ ಆದರೆ ತುಂಬಾ ನಿಶಕ್ತಿ ಕಾಣುತ್ತಿದೆ. ಅಮ್ಮ ಅಮ್ಮ ಎಂದು ಕನವರಿಸುತ್ತಿದ್ದಾನೆ. ಇಲ್ಲೇ ನರ್ಸಿಂಗ್ ಹೋಮಿನಲ್ಲಿ ಎರಡು ದಿನ ಇರಲಿ" ಎನ್ನುತ್ತಾರೆ. ಇವನ ತಾಯಿ ಬಂದಿಲ್ಲವೇ ಡಾಕ್ಟರ್ ಪ್ರಶ್ನೆಗೆ ಹರ್ಷ ಇಲ್ಲವೆನ್ನುತ್ತಾನೆ.

ಸಂಜೆ ಚಂದನ ಹರ್ಷ ನರ್ಸಿಂಗ್ ಹೋಂ ಗೆ ಬರುತ್ತಾರೆ. ಡಾಕ್ಟರ್ "ಚಂದನ ಇನ್ನೊಂದು ಮಗುವಿನ ತಾಯಿಯಾಗುತ್ತಿದ್ದಾರೆ ಅಲ್ಲವೇ?" ಪ್ರಶ್ನೆಗೆ ಇಬ್ಬರೂ ಸಂಭ್ರಮದಿಂದ ಹೌದು ಎನ್ನುತ್ತಾರೆ. ಹರ್ಷ ಪ್ರೀತಿಯಿಂದ ಅವಳ ಹೊಟ್ಟೆಯತ್ತ ನೋಡುತ್ತಾನೆ. ಡಾ.ಶಶಿಕಾಂತ್" ಆಗಲೇ ಮಗುವಿನ ಮೇಲೆ ಪ್ರೀತಿ ಹುಟ್ಟಿಬಿಟ್ಟಿದೆ" ನಗುತ್ತ ಹೇಳುತ್ತಾಳೆ. ಚಂದನ ಸಂಭ್ರಮದಿಂದ "ಇದು ನಮ್ಮ ಮಗು" ಎನ್ನುತ್ತಾಳೆ. ಡಾ.ಶಶಿಕಾಂತ್ ಸಂದೇಹದಿಂದ ಚರಣ್ ಕಡೆಗೆ ನೋಡುತ್ತಾರೆ.

ಹರ್ಷಗೆ ಡಾಕ್ಟರ್ ಮನಸಿನಲ್ಲಿ ಬಂದ ಪ್ರಶ್ನೆ ಅರ್ಥವಾಗಿ "ಡಾಕ್ಟರ್ ನಮಗೆ ಮದುವೆಯಾಗಿ ೮ ವರ್ಷ ಆದರೂ ಮಗುವಾಗಲಿಲ್ಲ. ಇವನನ್ನು ಅನಾಥ ಆಶ್ರಮಯಿಂದ ಅವನಿಗೆ ೧ ವರ್ಷ ಇದ್ದಾಗ ದತ್ತು ತೆಗೆದುಕೊಂಡೆವು. ಅವನಿಗೆ ಏನೂ ಕಡಿಮೆ ಮಾಡಿಲ್ಲ. ಈಗ ನಮ್ಮದೇ ಮಗು ಆಗುತ್ತಿರುವುದು ಇಬ್ಬರಿಗೂ ತುಂಬಾ ಸಂತೋಷವಾಗಿದೆ.

ಚರಣ್ ನಿದ್ದೆಯ ಮದ್ಯದಲ್ಲಿ ಬೆಚ್ಚಿ ಬೀಳುತ್ತಿದ್ದ. ಡಾಕ್ಟರ್ ಅದನ್ನು ಗಮನಿಸಿ ತುಂಬಾ ಮುದ್ದಾದ ಮಗು ಎಂದು ತಲೆ ಸವರಿದರು. ಅವರು ಹೇಳಿದರು "ನನಗೆ ತಾಯಿಯ ನೆನಪೇ ಬರುತ್ತಿದೆ. ಆಕೆ ನನ್ನನ್ನು ತುಂಬಾ ಪ್ರೀತಿಸುತ್ತಿದ್ದಳು. ಅವಳು ಸಾಯುವವರಗೆ ನನಗೆ ಅವಳು "ಮಲತಾಯಿ" ಎಂದೇ ಗೊತ್ತಿರಲಿಲ್ಲ". ಡಾಕ್ಟರ್ "ಇವತ್ತು ಡಿಸ್ಚಾರ್ಜ್ ಮಾಡುತ್ತೇನೆ. ಮಕ್ಕಳ ಮನಸ್ಸು ತುಂಬಾ ಮೃದು" ಮಾತು ಮುಗಿಸಿ ಹೊರಟುಹೋದರು.

ಮನೆಗೆ ಬಂದಾಗ ಚಂದನಳ ಮನಸಿನಲ್ಲಿ ಆಂದೋಲನ. ತಾನು ತೆರೆದ ಮನಸ್ಸಿನಿಂದ ಚರಣ್ ನನ್ನು ಪ್ರೀತಿಸಲಿಲ್ಲವೇ? ಅವನು ತನ್ನ ತಾಯ್ತನದ ಬಯಕೆಗೆ ಬಳಕೆಯಾದನೇ? ಬಾಡಿದ್ದ ಅವನ ಮುಖ ನೋಡಿ ಅವಳ ಕಣ್ಣಲ್ಲಿ ನೀರು ಬಂತು. ಅವನ ಹಣೆಯ ಮೇಲೆ ತಣ್ಣೀರು ಬಟ್ಟೆ ಹಾಕಿದಳು.

ಬೆಳಗ್ಗೆ ಚರಣ್ ಏಳುವ ಹೊತ್ತಿಗೆ ಚಂದನಾ ಮತ್ತು ಶ್ರೀ ಹರ್ಷ ಅವನ ಮುಂದೆ ಕುಳಿತಿದ್ದರು. "ಚರಣ್ ಇನ್ನು ಕೆಲವೇ ತಿಂಗಳುಗಳಲ್ಲಿ ಒಂದು ಪುಟ್ಟ ಪಾಪ ಮನೆಗೆ ಬರುತ್ತದೆ, ಅದಕ್ಕೆ ನೀನೇ ಅಣ್ಣ" ಚಂದನಾ ಮಾತಿಗೆ ಚರಣ್ ಕಣ್ಣರಳಿಸಿದ. "ಹೌದೇ ಅಮ್ಮ, ಹಾಲು ಕುಡಿದು, ಮಾತ್ರೆ ತೊಗೊಂಡ್ರೆ ಬೇಗ ಸರಿಹೋಗ್ತೀನಿ ಅಲ್ವಾ. ಆಮೇಲೆ ಪಾಪುವನ್ನು ನಾನೇ ನೋಡಿಕೊಳ್ಳುತೇನೆ" ಎಂದ .

ದಿನದಿಂದ ದಿನಕ್ಕೆ ಚರಣ್ ಆರೋಗ್ಯ ಸುಧಾರಿಸಿತು. ಶಾಲೆಗೆ ಹೊರಡಲು ಚಂದನ ತಾನೇ ಅವನಿಗೆ ತಯಾರಿ ಮಾಡಿದಳು. ಗರಿ ಗರಿ ಯುನಿಫಾರ್ಮ್ ಧರಿಸಿ ಅಮ್ಮ ಕೊಟ್ಟ ಊಟದ ಡಬ್ಬಿಯನ್ನು ಬ್ಯಾಗಿಗೆ ಸೇರಿಸಿದ. ಹರ್ಷ ಅವನಿಗೆ ಶೂಸ್ ಹಾಕಿ ಅವನ ಗುಂಗುರು ಕೂದಲ ಮೇಲೆ ಪ್ರೀತಿಯಿಂದ ತಲೆಯಾಡಿಸಿದ. ಶಾಲೆಯ ಬಸ್ ಬಂದಿತ್ತು. ಚಂದನ ಚರಣ್ ಕೆನ್ನೆಗೆ ಮುತ್ತು ಕೊಟ್ಟು "ನಿಧಾನವಾಗಿ ಬಸ್ ಹತ್ತು, ಬಿದ್ದು ಬಿಟ್ಟೀಯಾ?" ಮಾತು ಮುಗಿಸುವ ಮುನ್ನವೇ ಚರಣ್ ಬಸ್ ಹತ್ತಿರ ಓಡಿದ. ಚಂದನ ಹರ್ಷ ಕೈಬೀಸಿದರು. ಚರಣ್ ಉತ್ಸಾಹದಿಂದ ಗೆಳೆಯರ ಹತ್ತಿರ ಮಾತನಾಡತೊಡಗಿದ.

ಸಂಜೆ ಮನೆಗೆ ಬಂದವನೇ ಬ್ಯಾಗ್ ಬಿಸಾಕಿ ಚಂದನಾಳ ರೂಮ್ ಗೆ ಓಡಿದ. ಹರ್ಷ ಅಲ್ಲೇ ಮಂಚದ ಮೇಲೆ ಕುಳಿತಿದ್ದ. ಒಂದು ಕ್ಷಣ ಚರಣ್ ದೂರದಲ್ಲಿ ನಿಂತ. ಚಂದನ ನಸುನಕ್ಕು ಅವನನ್ನು ಹತ್ತಿರಕ್ಕೆ ಎಳೆದುಕೊಂಡಳು. ಅವಳ ತೊಡೆಯ ಮೇಲೆ ಚರಣ್ ತಲೆಯಿರಿಸಿದ. ತಾಯಿಯ ಮಡಿಲು ಅವನಿಗೆ ತುಂಬಾ ಹಿತವಾಗಿತ್ತು .

------


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.