ಪ್ರತೀಕಾರ -14

(ಹಿಂದಿನ ಸಂಚಿಕೆಯಿಂದ)

ಆರಾಧನಳಿಗೆ ಪೋನಿನಲ್ಲಿ ಕೇಳಿದ ಧ್ವನಿ ಪರಿಚಿತ ಎನಿಸಿದರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ವ್ಯವಧಾನ ಅವಳಿಗಿರಲಿಲ್ಲ, ಮೀಟಿಂಗ್ಗೆ ಆಗಲೇ ಬಹಳ ಸಮಯವಾಗಿದ್ದರಿಂದ ಅದರತ್ತ ಗಮನ ಕೊಟ್ಟಳು, ಇತ್ತ ಅರ್ಜುನ್ ಅರ್ಧದಿನ ರಜೆ ಹಾಕಿ ಮನೆಗೆ ಓಡಿ ಬಂದ, ಅಮ್ಮನಿಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಎಂದ ಕ್ಷಣ ಅವನಿಗೆ ಕೈ ಕಾಲೆ ಆಡಲಿಲ್ಲ, ಅಪ್ಪನ ಸ್ಥಿತಿಯೇ ಚಿಂತಾಜನಕವಾಗಿರುವಾಗ ಅಮ್ಮನು ಹಾಸಿಗೆ ಹಿಡಿದರೆ ಎಂಬ ಯೋಚನೆಯೇ ಅವನನ್ನು ಕಂಗಾಲು ಮಾಡಿತ್ತು, ಮನೆಗೆ ಬಂದಾಕ್ಷಣ ತಂಗಿ ಎಲ್ಲವನ್ನು ಹೇಳಿದಳು ಅಲ್ಲದೇ ಅಮ್ಮನಿಗೆ ಈ ವಿಷಯ ಹೇಳಲಿಲ್ಲ ಆ ಅಕ್ಕ ಎಂದಳು.

"ಅಕ್ಕ ಬಹಳ ಒಳ್ಳೆಯವರು, ಪಾಪ ಅವರು ಇಂದು ಸಹಾಯ ಮಾಡದಿದ್ದರೆ ಆ ನಡು ರಸ್ತೆಯಲ್ಲಿ ನಾನೇನು ಮಾಡಬೇಕಿತ್ತೋ" ಎಂದು ಚಾಚು ತಪ್ಪದೇ ನಡೆದದ್ದೆಲ್ಲಾ ಹೇಳಿದಳು, "ಅವರ ಹೆಸರೇನು, ಬ್ಯುಸಿ ಇದ್ರು ಅನ್ಸುತ್ತೆ ಸರಿಯಾಗಿ ಮಾತಾಡೋಕೆ‌ ಆಗ್ಲಿಲ್ಲ" ಎಂದ, ಅಷ್ಟರಲ್ಲಿ ಅಲ್ಲಿಗೆ ಬಂದ ಅವನ ತಾಯಿ ಭವಾನಿ "ಆರಾಧನ ಅಂತೆ ಕಣೋ ಅರ್ಜುನ್, ತುಂಬಾ ಒಳ್ಳೆ ಹುಡುಗಿ, ಎಷ್ಟು ಚೆನ್ನಾಗಿದಾಳೋ ಅಷ್ಟೆ ಚೆನ್ನಾಗಿ ಮಾತಾಡ್ತಾಳೆ, ದೇವರ ಹಾಗೆ ಸಮಯಕ್ಕೆ ಬಂದು ಸಹಾಯ ಮಾಡಿದ್ಲು" ಎಂದರೂ ಅವರು ಇನ್ನೇನೇನು ಹೇಳುತ್ತಿದ್ದರೋ ಅವನಿಗೆ ಅವಳ ಹೆಸರು ಕೇಳಿದ ಮೇಲೆ ಮುಂದಿನದೇನು ಕಿವಿಗೆ ಬೀಳಲೇ ಇಲ್ಲ, "ಆರಾಧನನಾ ಯಾವ ಬಣ್ಣದ ಕಾರು" ಎಂದ. ಮನದಲ್ಲಿ ಅವಳಾಗಿರಬಾರದು ಎಂದುಕೊಂಡ, ಸುನಿತಾ "ಕೆಂಪು ಬಣ್ಣದ ಬೆಂಜ್ ಎಂದಳು" "ಅಯ್ಯೋ ಆರು ಯಾಕೆ ನೀನು ಮತ್ತೆ ಮತ್ತೆ ನನ್ನ ಕೆಳಗೆ ಹೋಗೋ ಹಾಗೆ ಮಾಡ್ತಿದ್ಯಾ, ಒಂದು ಕಡೆ ನನ್ನ ದ್ವೇಷಿಸ್ತ್ಯಾ ಮತ್ತೊಂದು ಕಡೆ ನನಗೆ ಸಹಾಯ ಮಾಡ್ತಿಯಾ" ಎಂದು ಮನದಲ್ಲೇ ತೊಳಲಾಡಿದ ಅರ್ಜುನ್, ನಂತರ ತಂಗಿಗೆ "ಅವರನ್ನು ಒಳಗೆ ಕರ್ದಿದ್ದಾ" ಎಂದ ,"ಕರೆದೆ ಕಣೋ ತುಂಬಾ ಅರ್ಜೆಂಟ್ ಅಂತ ಹೊರಟೋದ್ರು ಮತ್ತೊಮ್ಮೆ ಬರ್ತೀನಿ ಅಂತ ಪ್ರಾಮಿಸ್ ಮಾಡಿದಾರೆ " ಎಂದಳು , ಅಲ್ಲಿದ್ದ ಎದ್ದು ತನ್ನ ರೂಮಿಗೆ ಬಂದ, ಅದೇ ರಾಧ ಕೃಷ್ಣ ಮೂರ್ತಿಯನ್ನು ಕೈಯ್ಯಲ್ಲಿಡಿದು ತನಗೆ ಎಂಬಂತೆ ಹೇಳಿಕೊಂಡ," ಮತ್ತೊಮ್ಮೆ ಬರ್ತಾಳ ನನ್ನ ಕುಟುಂಬ ಅಂತ ಗೊತ್ತಿದ್ರೆ ಸಹಾಯ ಮಾಡ್ತಿದ್ಲೋ ಇಲ್ವೋ , ಆದರೂ ನಮ್ಮಿಬ್ಬರನ್ನು ದೇವರು ಹೀಗೆ ಮತ್ತೆ ಮತ್ತೆ ಸೇರುಸ್ತಿರೋದು ನೋಡಿದ್ರೆ ,ನಮ್ಮ ಮಧ್ಯೆ ಬ್ರಹ್ಮ ಗಂಟಿರೋದು ನಿಜ, ನಾನು ನಿನ್ನ ಈಗಲೂ ಬಹಳ ಪ್ರೀತಿಸ್ತೀನಿ ಆರು , ಒಂದಲ್ಲ ಒಂದಿನ ನಿಂಗೆ ನಿಜ ಗೊತ್ತಾಗುತ್ತೆ ಅಲ್ಲಿವರೆಗೂ ಕಾಯ್ತಿನಿ" ಎನ್ನುತ್ತಾ ಅದನ್ನು ಸವರಿ ಅವಳೆ ಎಂಬಂತೆ ಚುಂಬಿಸಿದ.

ಅಂದು ತಿಂಗಳ ಕೊನೆಯ ದಿನ , ಕಂಪನಿಯ ಪ್ರಕಾರ ಅಂದು ಚಿಕ್ಕ ಪಾರ್ಟಿ ಮಾಡಿ ಆ ತಿಂಗಳಿನಲ್ಲಿ ಹೊರ ಹೋಗುವವರಿಗೆ ವಿದಾಯ, ಒಳಬಂದವರಿಗೆ ಸ್ವಾಗತ ಕಾರ್ಯಕ್ರಮ ಇರುತ್ತದೆ, ಈ ಬಾರಿಯೂ ಹಾಗೆ ಸಾಯಂಕಾಲದ ವೇಳೆಗೆ ಕಾರ್ಯಕ್ರಮ ನಿಶ್ಚಿತವಾಗಿತ್ತು, ಅರ್ಜುನ್ ಈ ಬಾರಿಯ ಕಂಪನಿಯ ಜೂನಿಯರ್ಗಳಲ್ಲಿ ಒಬ್ಬನಾಗಿದ್ದ, ಅವನು ಕೆಲಸಕ್ಕೆ ಸೇರಿ ಆಗಲೆ ಇಪ್ಪತ್ತು ದಿನಗಳಾಗಿತ್ತು, ಅವನಿಗೇನೋ ಆರಾಧನಾಳನ್ನು ನೋಡುವ ತವಕ, ಅವಳ ಕೈಯಿಂದ ಬೊಕ್ಕೆ ನೀಡುತ್ತಾಳೆಂಬ ಖುಷಿಯಲ್ಲಿ ಎದುರು ನೋಡುತ್ತಿದ್ದೆ, ಇನ್ನೇನು ಸಂಜೆ ಐದೂವರೆಯ ಹೊತ್ತಿಗೆ ಪಾರ್ಟಿ ಶುರುವಾಗುವುದರೊಳಗೆ, ಲೋಕೇಶ್ ಅರ್ಜುನ್ ಬಳಿ ಬಂದು ಹೇಳಿದ, "ಅರ್ಜುನ್ ಬೇಗ ನೀನು ಮಾಡಿರೋ ಪ್ರೊಜೆಕ್ಟ್ ಪ್ಲಾನಿಂಗ್ನೆಲ್ಲ ಫೈಲ್ ಮಾಡಿ ರೆಡಿ ಮಾಡು, ಸೌರಭ್ ಬರ್ತಿದಾರೆ, ಈ ಪ್ರಾಜೆಕ್ಟ್ ಪೂರ್ತಿ ರೊಬೋಟಿಕ್ಸ್ ರಿಲೇಟೆಡ್ ಆಗಿರೋದ್ರಿಂದ ನಮ್ಮಿಬ್ಬರಲ್ಲಿ ಒಬ್ಬರು ಪ್ರೆಸೆಂಟ್ ಮಾಡ್ಬೇಕು , ಸದ್ಯಕ್ಕೆ ನೀನೆ ಇದನ್ನ ಪ್ರೆಸೆಂಟ್ ಮಾಡು, ಇದರಿಂದ ನಿನಗೆ ಯೂಸ್, ನಿನ್ನ ಅಚೀವ್ಮೆಂಟ್ಸ್ಗೆ ಪಾಯಿಂಟ್ ಸೇರುತ್ತೆ, ಅಲ್ಲದೇ ಸೌರಭ್ ಸರ್ ಮುಂದೆ ಒಳ್ಳೆಯ ಇಮೇಜ್ ಸಿಗುತ್ತೆ". ಅರ್ಜುನ್ ಒಂದು ನಿಮಿಷ ಏನು ತೋಚಲಿಲ್ಲ, ಅಲ್ಲ ಇದ್ದಕ್ಕಿದ್ದ ಹಾಗೆ ಪ್ರೆಸೆಂಟ್ ಮಾಡು ಅಂದ್ರೆ ಹೇಗ್ ಮಾಡ್ಲಿ ಅದು ಅವರ ಮುಂದೆ ಎಂದ, "ಇಲ್ಲ ಇದರಲ್ಲಿ ಹೊಸ ಫೀಚರ್ಸ್ನ ನೀನೆ ಸೇರಿಸಿರೋದು, ಯು ನೌ ವೆಲ್ ಅಬೌಟ್ ದಿಸ್, ಭಯ ಪಡ್ಬೇಡ ಮಾಡು" ಎಂದು ಅವನ ಭುಜ ಅದುಮಿ ಆತ್ಮವಿಶ್ವಾಸ ತುಂಬಲೆತ್ನಿಸಿದ ಲೋಕೇಶ್. ಅರ್ಜುನ್ ಅಳುಕುತ್ತಲೆ ತಲೆಯಾಡಿಸಿದ ಆಯಿತೆನ್ನುವಂತೆ.

ತನ್ನ ಫೈಲ್ ತೆಗೆದುಕೊಂಡ ಅರ್ಜುನ್ ನಿಧಾನಕ್ಕೆ ಮೀಟಿಂಗ್ ಹಾಲಿನೊಳಗೆ ಹೆಜ್ಜೆ ಇಟ್ಟ ಬಾಸ್ಗಳು ಇನ್ನು ಬಂದಿರಲಿಲ್ಲ, ಹೋಗಿ ತನ್ನ ಸ್ಥಾನದಲ್ಲಿ ಕುಳಿತ, ಒಂದತ್ತು ನಿಮಿಷದ ನಂತರ ಆರಾಧನಾ ಒಳಗೆ ಬಂದಳು ಅವಳ ಜೊತೆ ನಗುತ್ತ ಮಾತನಾಡುತ್ತ, ಅರ್ಜುನಷ್ಟೇ ಎತ್ತರದ ಅವನಿಗಿಂತ ಸ್ಮಾರ್ಟ್ (ಅವನಿಗನ್ನಿಸಿದಂತೆ) ಆದ ಹುಡುಗ ಬರುತ್ತಿದ್ದ, ಅವನೇ ಸೌರಭ್ ಇರಬೇಕು ಎಂದುಕೊಂಡ, ಸೌರಭ್, ಆರಾಧನಾ ಎಲ್ಲರಿಗೂ ವಿಶ್ ಮಾಡಿ ತಮ್ಮ ಸ್ಥಾನದಲ್ಲಿ ಕುಳಿತರು, ಒಬ್ಬೊಬ್ಬರಾಗೆ ತಮ್ಮ ತಮ್ಮ ಪ್ರಾಜೆಕ್ಟ್ಗಳ ಬಗ್ಗೆ ವಿವರ ನೀಡುತ್ತಾ ಹೋದರು, ಅರ್ಜುನ್ ಸರದಿ ಬಂದೆ ಬಿಟ್ಟಿತು ಆ ತಿಂಗಳ ೪ ಪ್ರಾಜೆಕ್ಟ್ಗಳಲ್ಲಿ ಅರ್ಜುನ್ನದು ಒಂದು, ಅವನು ಮೊದಲಿಗೆ ತನ್ನ ಪರಿಚಯ ಹೇಳಿಕೊಂಡು, ತನ್ನ ಪ್ರೆಸೆಂಟೇಷನ್ ತೋರಿಸುತ್ತ ಪ್ರೊಜೆಕ್ಟಾನ್ನು ವಿವರಿಸುತ್ತಾ ಹೋದ, ಆರಾಧನಾ ಯಥಾಪ್ರಕಾರ ಅದಕ್ಕೋ ತನಗೂ ಸಂಬಂಧವಿಲ್ಲ ಎಂಬಂತೆ ಕುಳಿತಿದ್ದಳು, ಅವನಿಗೆ ಅವಳ ಮುಖದ ಮೇಲಿನ ತಿರಸ್ಕಾರ ಎದ್ದು ಕಾಣುತಿತ್ತು, ಅವನು ಅವಳೆಡೆಗೆ ತಿರುಗದೆ ತನ್ನ ವಿವರಣೆ ನೀಡುತ್ತಿದ್ದನು, ಎಲ್ಲಿ ಅವಳತ್ತ ನೋಡಿದರೆ ಅವಳ ಕಣ್ಣಲ್ಲಿನ ತಿರಸ್ಕಾರ ತನ್ನ ಆತ್ಮ ವಿಶ್ವಾಸ ಕುಗ್ಗಿಸಿಬಿಡುವುದೋ ಎಂಬ ಭಯವಿತ್ತು ಅವನಿಗೆ, ಅಂತೂ ಮುಗಿಸಿದ, ಅವನ ನಿರೀಕ್ಷೆಗಿಂತ ಹೆಚ್ಚಾಗಿ ಆ ಪ್ರಾಜೆಕ್ಟ್ ಎಲ್ಲರಿಗೂ ಇಷ್ಟವಾಗಿತ್ತು, ಸೌರಭ್ ಎದ್ದು ನಿಂತು ಚಪ್ಪಾಳೆ ತಟ್ಟಿದ, "ಎಕ್ಸಲೆಂಟ್ ಅರ್ಜುನ್, ನೀವು ಫ್ರೆಷೆರ್ ಅಂತೀರಾ, ಬಟ್ ತುಂಬಾ ಚೆನ್ನಾಗಿ ಪ್ರೆಸೆಂಟ್ ಮಾಡಿದ್ರಿ , ನಾನು ಲಾಸ್ಟ್ ಮೀಟಿಂಗ್ನಲ್ಲಿ ಕೇಳಿದ್ದಕ್ಕಿಂತ ಹೊಸ ವಿಷಯಗಳು ಇದರಲ್ಲಿವೆ, ತುಂಬಾ ಚೆನ್ನಾಗಿದೆ, ಬಟ್ ಟೈಮ್ ಲೈನ್ ಮೇಂಟೈನ್ ಮಾಡಿ ಪ್ರಾಜೆಕ್ಟ್ ಮುಗಿಸಿ, ಖಂಡಿತ ಸಕ್ಸಸ್ ಆಗುತ್ತೆ" ಅರ್ಜುನ್ಗೆ ಅವನ ಮಾತು ಕೇಳಿ ತುಂಬಾ ಖುಷಿ ಆಯಿತು.

ಮೀಟಿಂಗ್ ಮುಗಿದ ತಕ್ಷಣ ಪಾರ್ಟಿಗೆ ಹೊರಟರು ಎಲ್ಲರೂ, ಅಲ್ಲೂ ಸೌರಭ್ ತಾನಾಗೇ ಬಂದು ಅರ್ಜುನ್ನ ಮಾತನಾಡಿಸಿ, ಅವನನ್ನು ಹುರಿದುಂಬಿಸಿದ. ಆರಾಧನಾ ಸುಮ್ಮನೆ ನಿಂತು ನೋಡುತ್ತಿದ್ದಳು, ಅವಳಿಗೆ ಅರ್ಜುನ್ ಕೆಲಸದ ವಿಷ್ಯದಲ್ಲಿ ನಿಜಕ್ಕೂ ಹಿಡಿಸಿದ್ದ, ಅವನ ಬಳಿ ನೇರವಾಗಿ ಮಾತನಾಡದಿದ್ದರೂ, ಲೋಕೇಶ್ ಆಗಾಗ ಅವನ ಗುಣಗಾನ ಮಾಡುವನು, ಲೋಕೇಶ್ ಅಷ್ಟು ಸುಲಭವಾಗಿ ಯಾರನ್ನು ಮೆಚ್ಚುವ ಆಸಾಮಿಯಲ್ಲ, ಈ ಹಿಂದೆ ಒಂದಿಬ್ಬರು ಅವನ ಕಾಟ ತಾಳಲಾರದೆ ತಾವಾಗೇ ಟ್ರೈನಿ ಪಿರಿಯಡ್ನಲ್ಲೆ ಬಿಟ್ಟು ಹೋಗಿದ್ದರು, ಅರ್ಜುನನ್ನು ಅವನ ಟೀಮಿಗೆ ಹಾಕಲು ರೊಬೋಟಿಕ್ ಸ್ಟೂಡೆಂಟ್ ಎಂಬುದರ ಜೊತೆಗೆ ಇದು ಒಂದು ಕಾರಣವಾಗಿತ್ತು, ಆದರೆ ಅರ್ಜುನ್ ಅವನ ಮನಸ್ಸನ್ನು ಗೆದ್ದು ಬಿಟ್ಟಿದ್ದ, ಅದು ಇಪ್ಪತ್ತು ದಿನಗಳಲ್ಲೇ, ಗೆಲ್ಲದೇ ಏನು ಯಾರನ್ನಾದರೂ ಮರುಳು ಮಾಡುತ್ತಾನೆ, ನಯವಂಚಕ!!! ಅಷ್ಟಿಲ್ಲದಿದ್ದರೆ, ನನ್ನಂತಹ ಹುಡುಗಿ ಒಂದೇ ತಿಂಗಳಲ್ಲಿ ಇವನಿಂದ ಮೋಸ ಹೋಗುವುದು ಸಾಧ್ಯವಿತ್ತೇ ಎಂದು ಕೊಂಡಳು. ಬೇರೆಲ್ಲ ಹೊಸಬರಿಗೂ ತಾನೇ ಸ್ವತಃ ಬೊಕ್ಕೆ ನೀಡಿದಳು , ಅರ್ಜುನ್ಗೆ ಮಾತ್ರ ಸೌರಭ್ನಿಂದ ಬೊಕ್ಕೆ ಕೊಡಿಸಿದಳು, ಆಗ ಅರ್ಜುನ್ ಮುಖದಲ್ಲಾದ ಬದಲಾವಣೆ ಅವಳಿಗೆ ವಿಚಿತ್ರ ಆನಂದ ನೀಡಿತ್ತು.

***********
(ಮುಂದುವರೆಯುವುದು.....)


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.