ನನ್ನೊಳಗಿನ ಎದೆಯ ಗೂಡಲ್ಲಿ

ನನ್ನೊಳಗಿನ ಎದೆಯ ಗೂಡಲ್ಲಿ ಗುಬ್ಬಿಯಂತಿದ್ದ ನೆನಪು ದಿಢೀರನೆ ರೆಕ್ಕೆ ಬಿಚ್ಚಿ, ಬೆಚ್ಚನೆಯ ನೆನಪು ಮೂಡಿತು. ಮನುಷ್ಯ, ಆಸ್ತಿ ಅಂತಸ್ತು, ಅಧಿಕಾರ , ನೆಲೆ ಬೆಲೆ, ಪ್ರೀತಿ, ಸಂಬಂಧ,ಹೀಗೆ ಎಲ್ಲವೂ ಕಳೆದುಕೊಂಡಾಗ ,ಸದಾ ನಮ್ಮೊಳಗಿನ ಸಂಗಾತಿ ನೆನಪೊಂದೆ ಉಳಿಯ ಬಲ್ಲದು ಎಂಬರು ಬಲ್ಲವರು!! 'ಬಲ್ಲವರ ಮಾತು ಬೆಲ್ಲವನು ಮೆದ್ದಂತೆ'! . ಆ ಹಿತ 'ಅಹಿತ'ವೂ ಹೌದು! ಅಹಿತದಲ್ಲಿ 'ಹಿತ'ವು ಸೇರಿರುವುದು ಮರೆಯಲಾಗದ್ದು.

ಮೊನ್ನೆ, ಎಸ್,ಎಸ್.ಎಲ್,ಸಿ ಮಕ್ಕಳ ಪ್ರಗತಿ ಪರಿಶೀಲನೆಗಾಗಿ ಪೋಷಕರ ಸಭೆ ಕರೆಯಲಾಗಿತ್ತು. ಸಭೆಗೆ ಸ್ವಾಗತ ಬಯಸಿ, ಪೋಷಕರೊಂದಿಗೆ ಮುಕ್ತ ಸಂವಾದ ನಡೆಸಿ, ಅವರಿಂದ ಮಕ್ಕಳ ಹಿಮ್ಮಾಹಿತಿಯೂ ನೂರು ತರಹದ ಉತ್ತರಗಳು! ನಿರುತ್ತರಗಳು!! ಬಂದವು. ಇನ್ನೇನೂ ಸಭೆಗೆ ವಂದಿಸುವ ಸಮಯ ಬೇರೆ. ಒಬ್ಬ ತಾಯಿ ಜೋರಾಗಿ ಮೈದಾನದಲ್ಲಿ ಹೆಜ್ಜೆಯಿಡುತ್ತಾ ರೂಮಿನೊಳಗೆ ಧಾವಿಸಿ ಬಂದಳು. ವಿದ್ಯೆ ಬಲ್ಲವಳಲ್ಲ, ಅಕ್ಷರ ಜ್ಞಾನ ಇನಿತಿಲ್ಲ. ಆಯಾಸಗೊಂಡಿದ್ದಾಳೆ . ಇದನ್ನರಿಯಲು ನಮಗೆ ಯಾವ ಜ್ಞಾನವೂ ಬೇಕಿರಲಿಲ್ಲ .ಆದ್ರೆ ಮಗನ ಸಾಲಿ ಓದು ತಿಳುಕೊಳ್ಳೋ ಕಾತುರತೆ ಮತ್ತು ಕುತೂಹಲದಲ್ಲಿ, ಹಣೆಯ ಮೇಲಿನ ಬೆವರು ಒರಸಿಕೊಳ್ಳದೆ ಹಾಗೆಯೇ ನಿಂತಿದ್ದಾಳೆ. ಅದೆಂಥಾ ಜೀವ ಅಂತೀರಾ ಅಲ್ವ......? ಕರುಳು ಬಳ್ಳಿಗಂಟಿದ ತೇವ ಅನ್ನಿ......!! ಕೂದಲೆಲ್ಲಾ ಚದುರಿವೆ, ಧೂಳು ಮೈಮೇಲೆಲ್ಲಾ ಹರಡಿಕೊಂಡಿದೆ, ತುಟಿಗಳೆಲ್ಲ ಒಣಗಿದೆ , ಬಾಯಾರಿದ ಗಂಟಲು ,ದನಿಬಾರದೆ ಸೊರಗುತ್ತಿದೆ , ಆದರೂ ಲೆಕ್ಕಕ್ಕಿಲ್ಲ!!

ಶಿಕ್ಷಕರ ತುಟಿ ಚಲನೆಯಲ್ಲಿಯೇ ಮಗನ ಕಲಿಕೆ ಅರಿವಾಯ್ತು, ಒಮ್ಮೆ ಮಗನ ಮುಖವನ್ನೇ ನೋಡುತ್ತಾ, ಸಪ್ಪೆಯಾಗಿ ಆಕೆಯ ಕಣ್ಣಲ್ಲಿ ನೀರೂರಿ ಬಂತು! ಕೋಪವೂ ಬಂತು! ಎಲ್ಲರೆದುರಿಗೆ ಹೇಗೆ ಅತ್ತಾಳು! ಹೇಗೆ ಕೋಪಿಸಿಕೊಂಡಾಳು ಆ ಅಸಹಾಯಕ ಉಸಿರು.,..? ಎಲ್ಲವನ್ನೂ ಬಿಗಿದಿಡಿದುಕೊಂಡಳು . ಅರ್ಥವಾಯ್ತು ಮಗನ ಓದು.ಮನದಲ್ಲಿಯೇ ಸಾರ್ಥಕವಾಯ್ತು ನನ್ನ ಶ್ರಮ ಎಂದುಕೊಂಡು ಮರಗುತ್ತಾ, ಹೊರ ನಡೆದು ಆವರಣದ ಮರದಡಿಯಲ್ಲಿ ಸುಮ್ಮನೆ ಕುಳಿತಳು. ಆಕೆಯ ಆಳದಲ್ಲಿನ ಭರವಸೆಯ ಬೆಳಕು ಈ ಮಗನೇ ಇರಬೇಕು. ಅದು ಅವನ ಮೋಗದಿಂದ ಕಣ್ಮರೆಯಾಗಿರುವುದು ಕಂಡು ಆಕೆಯ ಹೃದಯವೇ ಕತ್ತಲಾಗಿ ದುಃಖ ಇಮ್ಮಡಿಸಿರಬೇಕು. ಎದೆಯೊಡೆದಂತಾಗಿರಬೇಕು!! ಆ ನೋವು ಯಾರಿಗೆ ಹೇಳ್ಬೇಕು? ಪಾಪ!! ಒಮ್ಮೆ ಆಕಾಶವನ್ನು ನೋಡಿ ತನ್ನೆರೆಡು ಕೈಗಳಿಂದ ಮುಖಕ್ಕೊತ್ತಿಕೊಂಡು ತಲೆ ಬಾಗಿಸಿಕೊಂಡಳು. ಅಯ್ಯೋ ....ದೇವರೇ....! ಇಂಥಾ ಮಕ್ಳನ್ನ ಯಾಕೆ ಹಡ್ದೆ? ಎಂದು ಮೊರೆಯಿಟ್ಟಂತೆ ಕಾಣಿಸಿತು. ಮುಖವು ಕರುಳು ಕಿವುಚಿದಂತಿತ್ತು. ಆ ಕಣ್ಣೀರಿನ ಹಿಂದೆ ಹೇಳಲಾಗದ ಬಾಧೆ, ವ್ಯಥೆಗಳಿರಬೇಕಂಬುದನ್ನು ಎಂಥವರಿಗೂ ಅರ್ಥವಾಗುತ್ತಿತ್ತು.

ಸಭೆ ಮುಗಿದ ಬಳಿಕ-

ಸಾಮೀ ........ ತಂದೆಯಿಲ್ದ ಅನಾಥ ಮಗ. ನೆತ್ತರ ಬತ್ತಿ ಇದು. ಅಂದ್ರೆ... ತಲೆ ಮಾಸ ಆರಿ ಇನ್ನೂ ಮೂರ್ನಾಲ್ಕು ತಿಂಗಳ ಮಗು. ಆಗ್ಲೆನೇ ನನ್ನ ಗಂಡ ಸತ್ತ. ಸಾಮೀ ..... ಅಲ್ಲಿಂದ ಇಲ್ಲಿವರ್ಗೆ ಇವ್ನಿಗೆ ಏನೂ ಕಡ್ಮೆ ಮಾಡಿಲ್ಲ. ಏನೂ ಕೊರ್ತೆ ಮಾಡಿಲ್ಲ. ರೆಪ್ಪೆಯಂಗೆ, ಬೆಂಕಿನಂಗೆ, ಕೋತಿಯಂಗೆ ಕಚ್ಕೊಂಡು, ಮುಚ್ಚ್ಕೊಂಡು ಬಿಗಿತುಟಿಯಲ್ಲಿಯೇ ಸಾಕ್ದೆ! ತಂದೆಯ ನೆನಪು ಬಾರ್ದಂಗ ತಂದೆಯೂ ನಾನೇ.... ತಾಯಿಯೂ ನಾನೇ ಆಗಿ ನೋಡ್ಕೊಂಡಿದಿನಿ ಗೊತ್ತ? - ಅಂಥ ಗಳಗಳನೆ ಅಳಲು ತೊಡಗಿದಳು.

ಮೇಲಕ್ಕೆ ನೋಡಿ, ಯಾಕಪ್ಪಾ.....ದೇವರೆ ಈ ಜೀವ ಬದುಕ್ಸಿದೆ? ಇದ್ನೆಲ್ಲ ನೋಡ್ಲಿಕ್ಕೆ ಉಸಿರಿಟ್ಟಿದಿಯಾ? ಬೇಡಪ್ಪಾ ...... ಸಾಕು ಮಾಡು ಇನ್ನೂ....... ಆವತ್ತೆ ನನ್ನ ಗಂಡನ ಜೊತೆನೇ ಕಣ್ಮುಚ್ಚ್ಕೊಬೇಕು ಅಂತಿದ್ದೆ! ಆಗ ಸೆರಗಿನಲ್ಲಿದ್ದ ಇವ್ನಿಗಾಗಿ... ಇವ್ನಿಗಾಗಿ ......ಬದುಕ್ದೆ ....ಅಂಥ ಮುಖವೆತ್ತಿ ಮಗನ ಕಡೆಗೆ ನೋಡಿದಳು.

ಮಾತು ಮುಂದುವರಿದು - ಪಕ್ಕದ್ಮನೆಯಲ್ಲಿ ಇವ್ನ ವಾರಿಗೆಯವನೊಬ್ಬ ಹುಡ್ಗ ಇದಾನೆ. ಅವ್ನು ಎಸಲ್ಸಿಯೇ ...ಅಪ್ಪ ಅಮ್ಮರಿಬ್ರೂ ತಮ್ಮ ಕೆಲ್ಸದಲ್ಲಿ ಬಿಸಿಯಾಗ್ಬಿಡ್ತಾರೆ. ಅವ್ನಿಗೆ ಮೈ ತೊಳೆಯಲ್ಲ , ಊಟ ಅನ್ನಲ್ಲ ,ತಿಂದ್ನೊ... ಇಲ್ಲವೊ....ಅನ್ನಲ್ಲ ತಮ್ಮ ಪಾಡಿಗೆ ತಾವಿರ್ತವೆ . 'ಅದ್ಕೆ ಕೋಣೆ ಮಕ್ಳು ಕೊಳಿತವೆ ಬೀದಿ ಮಕ್ಳು ಬೆಳಿತಾವೆ' ಅಂತಾರೆ ದೊಡ್ಡವರ ಮಾತು ಎಂದೂ ಸುಳ್ಳಲ್ಲ. ಆದ್ರೆ ಆ ಮಗು ಚೆನ್ನಾಗಿ ಓದ್ತಿದಂಥ ಮೇಷ್ಟ್ರೆಲ್ಲಾ ಹೇಳ್ತಾರೆ. ಇಲ್ಲಿ ಅಷ್ಟೇ ಯಾವಾಗ್ಲು ಪುಸ್ತಕ ಪೆನ್ನು ಹಿಡ್ಕೊಂಡಿರ್ತಾನೆ. ಆಗಾಗ ಬಿಡುವಲ್ಲಿ ಕೆಲ್ಸನೂ ಮಾಡ್ತಾನೆ. ಭಗವಂತ! ಅಂಥ ಮಕ್ಳಿರಬೇಕು..... ಯಾರ್ ಮಗು ಆದ್ರೇನು ಒಳ್ಳೆದಾಗಲಿ...... ಅವ್ನ ಹೊಟ್ಟೆ ತಣ್ಣಗಿರಲಿ..... ಎಂದು ಹಾರೈಸಿದಳು. ಮನದಲ್ಲಿ ಮಗನ ಈ ಓದಿಗೆ ಅತಿಯಾದ ಆರೈಕೆಯೇ ಹೀಗಾಗಿರಬೇಕೆಂದು ನಿಟ್ಟುಸಿರಿಟ್ಟಳು.

'ನೊಂದ ನೋವ ನೊಯದವರೆತ್ತ ಬಲ್ಲರು' ವಚನವಾಣಿ. ನಿಜ, ಇವರಪ್ಪ ಇರೋವರ್ಗೂ ನನ್ನನ್ನ ಬಿಸಿಲುಮುಖ ತೋರ್ಸಿರ್ಲಿಲ್ಲ . ಈಗ ಹೇಳ್ತೀರದೂ......ಕೂಲಿಗೂ ಕರೆಯವ್ರೂ ಇಲ್ಲ. ವಾರದಾಗೆ ಎಲ್ಡ ಮೂರ್ದಿನ ಸಿಗುತ್ತೆ. ಅದು ಮಣ್ಣೆಲ್ಲಾ ಮೈಮೇಲೆ ಹಾಕ್ಕೊಂಡು ದುಡಿಬೇಕು. ಬಂದಿದ್ರಲ್ಲಿ ಹೊಟ್ಟೆ ಬಟ್ಟೆಗೆ!! ಇದು ನಮ್ ಬವಣೆ!! ಇವರಿಗೊಸ್ಕರ್ನೆ ಈ ಮಣ್ಣಿನ ಧೂಳು ಮತ್ತು ಬೆವರು ಅಂಥ ಕೈಗಳನ್ನ ತೋರ್ಸಿದ್ಲು. ನನ್ನ ಗಂಡ ಯಾವಾಗ್ಲೂ ಹೇಳ್ತಿದ್ರೂ "ನಮ್ ಕಾಲದಲ್ಲಿ ಹೊಲ, ಮನೆ, ದನ, ಕುರಿಗಳೆ ನಮಗಾಸ್ತಿ . ಅವು ನಮ್ಗೆ ಅಕ್ಸರ ಕಲ್ಸ್ತಿದ್ರೂ, ಗ್ಯಾನ ಮತ್ತು ಬದ್ಕಂತೂ ಕಲ್ಸಿ ಕೊಟ್ಟಿವೆ ಅಂದ್ರೆ ತಪ್ಪಾಗಲ್ಲ!!

ಈಗಿನ ಪರಿಸ್ಥಿತಿ ಬದ್ಲಾಗಿದೆ ಎಲ್ಡಕ್ಸರ ಇಲ್ಲಂದ್ರೆ ಬಾಳ ಕಷ್ಟೈತೆ" -ನಮ್ಮವ್ರು ಮಾತು ನಿಜ ಅನ್ಸ್ತಿದೆ. ಮೇಲಿನ ಆಸ್ತಿ ಯಾವುದು ಇಲ್ಲ. ನಮಗಂತೂ ಸಾಲಿ ಭಾಗ್ಯ ಸಿಗಲಿಲ್ಲ. ಎಲ್ಡಕ್ಸರನೂ ಕಲಿಲಿಲ್ಲ. ಇವ್ರಾದ್ರೂ ಬುದ್ಧಿವಂತ್ರಾಗಲಿ ಎಂಬುದೆ ನಮ್ಮಾಸೆ. ಕಷ್ಟನೋ... ನಷ್ಟನೋ ಅದು ನಮ್ಗೆ ಇರ್ಲಿ. ಧಣಿ ಕಾಲಲ್ಲಿ ತೋರ್ಸಿದ್ದನ್ನ ನಾವು ಕೈಯಲ್ಲಿ ಮಾಡಬೇಕು..... ಇಂಥಾ ಭಾಗ್ಯ ಇವರ್ಗೆಕಂಥ ಸಾಲಿಗಾಕಿದ್ವಿ.... ಆದ್ರೆ ಇವ್ನು ಮಾಡಿದ ಘನ ಕಾರ್ಯವೇನು? ಎಂದು ಅಂತರಂಗದ ವೇದನೆಯನ್ನು ನಿವೇದಿಸಿಕೊಂಡಳು.

ಇದನ್ನೆಲ್ಲಾ ಗಮನಿಸಿದ ಆ ಮಗನಲ್ಲಿಯೂ ದುಃಖದ ಕಟ್ಟೆಯೊಡೆಯಿತು. ತಪ್ಪಿನ ಅರಿವು ಮೂಡಿದಂಥ ಬದಲಾವಣೆಯೂ ಎದ್ದು ಕಾಣುತಿತ್ತು . ಪಶ್ಚಾತ್ತಾಪದಿಂದ ತಲೆ ತಗ್ಗಿಸಿ ನಿಂತುಕೊಂಡ. ಹಾಗೆ ನೋಡಿದರೆ, ಹುಡುಗನೇನು ದಡ್ಡನಲ್ಲ. ಚುರುಕಾಗಿದ್ದಾನೆ. ಒಳ್ಳೆ ವಿನಯವಂತ ಯಾರ ತಂಟೆಗಾಗಲಿ, ತಗಾದೆಗಾಗಲಿ ಹೋಗುವವನಲ್ಲ. ಆಸಕ್ತಿ ಮತ್ತು ಕಾಳಜಿಗಳ ಕೊರತೆಯಿಂದ ಹಿನ್ನಡೆಯಾಗಿರಬೇಕೆಂದೆನಿಸಿ ಆಕೆಯನ್ನು ಸಮಾಧಾನಸಿದೆ.

ಕೊನೆಗೆ- ಸಾಮೀ...... ತಪ್ಪು ತಿಳ್ಕೋಬೇಡ್ರಿ..... ಇವ್ನ ಬಿಟ್ರೆ ನಂಗೆ ಯಾರಿದರೆ ? ನಿಮ್ ಪಾಲ್ಗೆ ಹಾಕಿದೇನೆ. ನೀವೆ ಬುದ್ಧಿ ಹೇಳಿ ಅಂಥ ಕೈ ಮುಗಿದು ಹೆಜ್ಜೆ ಕಿತ್ತಿಡಲಾರದ ಭಾರದಿಂದ ನಡೆದಳು.

ಆ ತಾಯಿ ಹೊರ ನಡೆದಂತೆಲ್ಲಾ ಆ ಹೆಜ್ಜೆಗಳು ನನ್ನ ಹೃದಯಾಳಕ್ಕಿಳಿಯಲಾಂಭಿಸಿದಳು. ಆ ಆರ್ತತೆ , ಆ ದುಃಖ , ಆ ಹಪಾಹಪಿ, ಆ ಹಂಬಲಿಕೆ, ಆ ಮಾತುಗಳು -ಎಂದೋ ಮಣ್ಣಾಗಿ ಹೋದ ನನ್ನಮ್ಮನ ನೆನಪು ಪಾತಾಳಿಯಲ್ಲಿ ಗಾಢವಾಗಿ ಮೂಡಲಾರಂಭಿಸಿತು . ನಾಲ್ಕು ಹೆಣ್ಣು ಮಕ್ಕಳು, ಎರಡು ಗಂಡು ಮಕ್ಕಳನ್ನು ಬಿಟ್ಟು ಅಗಲಿ ಹೋದ ಮೇಲೆ ( ಕೊನೆಯ ಮಗ ಮೂರು ತಿಂಗಳಿನವ) ತಾಯಿಯಾಗಿ..... ತಂದೆಯಾಗಿ.....ಬೆಳಸಿದ ನನ್ನಪ್ಪನ ನೆನಪು ಇನ್ನಷ್ಟು ಗಟ್ಟಿಯಾಗಿ ಬಂತು. ಈಗ ಸುಮಾರು ಮೈಲುಗಳಷ್ಟು ದೂರದಲ್ಲಿದ್ದರೂ ಸಾಕಿ ಬೆಳೆಸಿದ ಮಮತೆ , ಹೃದಯದ ಕರುಳಿನ ಕೂಗು ಬಿಕ್ಕಳಿಸುತ್ತಿದೆ. ಇಷ್ಟ್ಹೊತ್ತು ಮಾತಾಡಿದ ಈ ತಾಯಿಯ ಕಕ್ಕುಲತೆಯ ಮಾತುಗಳು, ಆ ಭಾವ, ಆ ದುಃಖ ಅಕ್ಷರಶಃ ನನ್ನಪ್ಪನದೇ..... ಅದೇ ಉವಾಚ, ಅದೇ ಬೋಧನೆ . "ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ"(ಜಿ.ಎಸ್.ಎಸ್) ಎಂಬ ಮಾತನ್ನು ಸ್ವಲ್ಪ ಮಾರ್ಪಡಿಸಿದರೆ- ಒಳಗಿನ ನೆನಪಿನ ತಿಳಿಯನ್ನು ಒಮ್ಮೆ ಕಲಕಿ ಬಿಟ್ಟರೆ ಅಮೃತದ ಸವಿ ನೆನಪು ನಾಲಗೆಗಿಳಿದು ಬಿಡುತ್ತದೆ. ಇದು ಈ ತಾಯಿಯಿಂದ ಬಂದ ಭಿಕ್ಷೆ!! ನನ್ನಪ್ಪನ ಬಗೆಗಿನ ಹೆಮ್ಮೆ, ಗೌರವಗಳು ಆಕೆಯಿಂದಲೇ ಮತ್ತಷ್ಟು ಹೆಚ್ಚಸಿದವು. ತಂದೆ-ತಾಯಿಯನ್ನು ಕಳೆದುಕೊಂಡವರು ಬಾಳು ಹೀಗೆ ಇರಬೇಕಲ್ವೇ?

ಕೆಲಸದ ಒತ್ತಡದಲ್ಲಿ ಯಾಂತ್ರಿಕವಾಗಿ ದುಡಿಯುತ್ತಿದ್ದೆ. ಇಂಥ ಸಮಯದಲ್ಲಿ ಈ ಸನ್ನಿವೇಶವು ನನ್ನ ಅಂತರಂಗವನ್ನೇ ಕಲಕಿದ ಈ ತಾಯಿಗೆಷ್ಟು ಕೃತಜ್ಞತೆ ಸಲ್ಲಿಸಬೇಕೋ ನಾ ಕಾಣೆ? ಈ ಋಣವನ್ನು ಹೇಗೆ ತೀರಿಸಬೇಕೆಂದು ಯೋಚಿಸುತ್ತಿರುವಾಗ , ಆ ತಾಯಿಯ ಒಡಲಾಳದ ನೋವು ಆ ಮಗುವಿನ ಕಲಿಕೆ. ಆ ಕಾಳಜಿಯನ್ನು ವಹಿಸುವುದೇ ಉತ್ತಮವೆಂದು ಭಾವಿಸಿ ಈ ತಾಯಿಯ ಕಳಕಳಿ, ಕಷ್ಟ ನಿಷ್ಠೂರಗಳು ಅಂದು ನನ್ನ ತಂದೆಯವೂ ಎಂದು ಮೌನಿಯಾದೆ, ಮೂಕನಾದೆ, ಭಾವಪರವಶನಾದೆ!!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.