ನನ್ನನ್ನು, ನನಗಿಂತ ಹೆಚ್ಚು ಪ್ರೀತಿಸುವ ನಿನಗೆ...

ಹಾಯ್ ಕೋತಿ,
ಇವತ್ತು ವಿಶ್ವ ಪ್ರೇಮಿಗಳ ದಿನವಾದ ಬಳಿಕದ ದಿನವಂತೆ! ಅದಕ್ಕೆ ಸುಮ್ಮನೆ ತರ್ಲೆಗೆ ನಿಗೊಂದು ಪತ್ರ ಬರೆಯೋಣ ಅಂತ ಹೊರಟ್ನಾ? 'ಆಮೇಲೆ' ಅನ್ನೊ ನಿನ್ನ ವಾಯ್ಸ್ ಮಿಸ್ಸಿಂಗ್ ಅನ್ನಿಸ್ತಿದೆ. ಹೋಗ್ಲಿ ಬಿಡು. ನೇರವಾಗಿ ವಿಷ್ಯಕ್ಕೆ ಬರ್ತೀನಿ.

'ಬಸ್‌ನಲ್ಲಿ ತನ್ನನ್ನು ತಾನು ಅತೀವ ಸುಂದರಿ ಅಂದುಕೊಂಡ ಹುಡುಗಿಯನ್ನು ಆಗೊಮ್ಮೆ, ಈಗೊಮ್ಮೆ ನೋಡಿ...ನಾನು ನೋಡುತ್ತಿರುವುದನ್ನು ಅವಳು ಗಮನಿಸಿ, ತನ್ನನ್ನೇ ನೋಡುತ್ತಿದ್ದಾನೆಂದು ಖಾತ್ರಿಪಡಿಸಿಕೊಂಡು... ಆಗಾಗ ವೇಲ್ ಸರಿ ಮಾಡಿಕೊಳ್ಳುತ್ತ, ಓರೆಗಣ್ಣಿನಲ್ಲಿ ಅವನ ದೃಷ್ಟಿ ಮತ್ತೆ ಬೇರೆ ಎಲ್ಲಾದ್ರು ಹರಿದಿದೆಯಾ ಎಂಬುದನ್ನು ಆಗಾಗ ನೋಡುತ್ತ...’ ನನಗೆ ಬಸ್‌ನಲ್ಲಿ ಇದೊಂಥರ ಸಖತ್ ಮಜಾ ಕೊಡುವ ಸೀನ್. ಹೀಗೆ ನಾನೊಂದು ಹುಡುಗಿಗೆ ಬಕ್ರಾ ಮಾಡುತ್ತಿದ್ದಾಗ ಅಚಾನಕ್ಕಾಗಿ ಕಣ್ಣಿಗೆ ಬಿದ್ದವಳು ನೀನು. ನಮ್ಮಿಬ್ಬರ ಆಟ ನೋಡಿ ನೀನು ಸುಮ್ಮನೆ ಮಜಾ ತೆಗೆದುಕೊಳ್ಳುತ್ತಿದ್ದೆ. ಅದು ನನಗೆ ಗೊತ್ತಾಗಿ, ನಿನಗೆ ಉರಿಸಲೆಂದು ನಿನ್ನನ್ನು ದಿಟ್ಟಿಸಲು ಶುರುವಿಟ್ಟಾಗ, ತಿರುಗಿ ನೀನು ನನಗಿಂತ ಜೋರಾಗಿ ಕಣ್ಣು ತೆರೆದು, ಬಿಟ್ಟೂ ಬಿಡದಂತೆ ನೋಡಿ ನಾನು ಕರಗಿಹೋದೆ ಎಂಬ ನಮ್ಮ ಪ್ರೇಮಕಥೆಗೀಗ ೯ ವರ್ಷ.

ಪ್ರೀತಿಯನ್ನು ಬಿಡಿಸಿಕೊಳ್ಳದಿದ್ದರೆ ಬಂಧನವಾಗುತ್ತೆ ಎಂದವನು ಓಶೋ. ’ಮೇಕ್ ಯುವರ್ ಲವ್ ಎ ಫೆಸ್ಟೀವ್ ಅಫೈರ್’ ಎಂಬ ಅವನ ನುಡಿಯಂತೆ ನಾವಿಬ್ಬರು ಬದುಕುತ್ತಿದ್ದೇವೆ ಎಂಬುದು ಖುಷಿ. ಪ್ರೀತಿ-ಸಂಬಂಧ-ಮದುವೆ ಮೂರನ್ನು ಒಟ್ಟಿಗೆ ಬೆರೆಸಿ, ಹಿಸುಕಿ ಸಂಸಾರವೆಂಬ ಪಟ್ಟಕಟ್ಟಿ ಪ್ರೇಮದ ಘಮಲಿನ ರುಚಿ ಕೆಡಿಸುವ ಅಪಾಯದಿಂದ ನಾವಿಬ್ಬರೂ ದೂರ ಉಳಿದಿದ್ದೇವೆ.
’ಅತಿಯಾಗಿ ಬರುವ ಫಾವರ್ಡ್ ಮೆಸೇಜ್‌ಗಳು ಗಂಡ-ಹೆಂಡತಿಯದ್ದು. ಆದಾಗ್ಯೂ ಜನ ಮದ್ವೆಯಾಗ್ತಾರೆ ಅಂದರೆ ಮಕ್ಕಳು ಹುಟ್ಟಿಸಿ, ಅವರು ದೊಡ್ಡವರಾದ ಮೇಲೆ ನಮ್ಮ ಕ್ರಿಯಾದಿ ಕರ್ಮಗಳನ್ನು ಮಾಡಿ ಆತ್ಮಕ್ಕೆ ಮೋಕ್ಷ ದೊರೆಕಿಸಿಕೊಡುತ್ತಾರೆ ಎಂಬ ಏಕೈಕ ಸದುದ್ದೇಶವಿರಬೇಕು’ ಎಂಬ ನಿನ್ನ ಜೋಕು ಈಗಲೂ ಕಿವಿಯಲ್ಲಿ ಗುಂಯ್‌ಗುಡುತ್ತಿದೆ.

ಪ್ರೀತಿಯೆಂಬುದು ಒಂದು ಒಳ್ಳೆಯ ಕಾಫಿ ಕುಡಿದ ನಂತರ ಸದಾ ನಾಲಿಗೆಯಲ್ಲಿ ಉಳಿಯುವ ರುಚಿಯಂತೆ. ಉತ್ತಮ ಊಟದ ಬಳಿಕ ಬರುವ ತೇಗಿನಂತೆ. ತಿರುಪತಿಗೆ ಹೋಗುತ್ತ ನಡುರಾತ್ರಿಯಲ್ಲಿ ನಾನು ನೀನು ಒಟ್ಟಾಗಿ ಕುಳಿತು ಕುಡಿದ ಕುಂಬದ್ರೋಣಂ ೩೬೦ಡಿಗ್ರಿ ಕಾಫಿಯ ರುಚಿ ಇನ್ನೂ ಹಾಗೆ ಹಸಿಹಸಿಯಾಗಿಯೇ ಇದೆ.

ಹಾಗೆಲ್ಲ ನೋಡಿ ಮರುಳು ಮಾಡಿದ ನೀನು ಬಸ್ ಇಳಿಯುವಾಗ, ಒಂಚೂರು ನಾಚಿಕೆಯಿಲ್ಲದೆ ನಿನ್ನ ಮೊಬೈಲ್ ನಂಬರ್ ಕೇಳಿದ ನನ್ನ ಆ ಧೈರ್ಯವನ್ನು ನೆನಪಿಸಿಕೊಂಡರೆ ನನಗೆ ಈಗಲೂ ಭಯವಾಗುತ್ತೆ. ’ಹುಡುಗಿ ನಂಬರ್ ಇನ್ಯಾಕ್ರಿ ಕೇಳ್ತಾರೆ? ಫ್ಲರ್ಟ್ ಮಾಡೋಕೆ. ಒಂಚೂರು ಸಲುಗೆ ಹೆಚ್ಚಾದ್ರೆ ಮೊದ್ಲಿಗೆ ಪೋಲಿಪೋಲಿಯಾದ ಫಾವರ್ಡ್ ಸಂದೇಶ ಕಳುಹಿಸಲಿಕ್ಕೆ, ಆಮೇಲೆ ಡೈರೆಕ್ಟ್ ಆಗಿ ಸೆಕ್ಸ್‌ಟಿಂಗ್ ಮಾಡ್ಲಿಕ್ಕೆ. ಇಷ್ಟವಿದ್ರೆ ನಂಬರ್ ಕೊಡಿ, ಕಷ್ಟವಾದ್ರೆ ಬಿಟ್ಟುಬಿಡಿ ಅಂದಿದ್ದೆ!’ ಆಗಲೂ ನಂಬರ್ ಕೊಟ್ಟ ನೀನು ನನಗಿಂತ ಒಂದು ಹಿಡಿಯಷ್ಟು ಹೆಚ್ಚು ಧೈರ್ಯವಂತೆ ಬಿಡು.
ನಮ್ಮಿಬ್ಬರ ಮುನಾರ್ ಟ್ರಿಪ್ ಪ್ರೀತಿಯ ಪುಟದಲ್ಲಿನ ಮಸ್ತ್, ಮಸ್ತ್ ಅನುಭವ. ಚಿನ್ನಾರ್ ಅಭಯಾರಣ್ಯದೊಳಗೆ ಕಿಲೋಮೀಟರ್‌ಗಟ್ಟಲೆ ನಡೆದಿದ್ದು, ಅಲ್ಲಿನ ತೂವಾನಂ ಫಾಲ್ಸ್‌ನಲ್ಲಿ ಇಬ್ರು ತೊಯ್ದು ತೊಪ್ಪೆಯಾಗಿ, ಒಬ್ರಿಗೊಬ್ರು ಹಸಿಬಟ್ಟೆಯ ಮೈ ನೋಡಿಕೊಂಡು ನಾಚಿಕೆಗೊಂಡಿದ್ದು, ಫೈರ್‌ಕ್ಯಾಂಪ್ ಹಾಕಿ ಕಾಡಿನ ನಡುವಿನಲ್ಲಿ ಟೆಂಟ್ ಕಟ್ಟಿ ಮಲಗಿದ್ದು...ಓ, ಅದೇ ಅಲ್ವೇನೆ ನಮ್ಮಿಬ್ರಿಗೂ ಫಸ್ಟ್‌ನೈಟ್...ನಿಂದು ಅದಕ್ಕೂ ಮೊದ್ಲೆ ಆಗಿತ್ತು ಅಂದಿದ್ಯಲ್ವಾ?
ನಮ್ಮಿಬ್ಬರ ತುಂಡು, ತುಂಡು ಪ್ರಯಾಣಗಳು, ಹಾದಿಯುದ್ದಕ್ಕು ಸಿಕ್ಕ ಬಿಡಿಬಿಡಿ ಚಿತ್ರಗಳು, ಜಗಳಗಳು, ಖುಷಿಗಳು, ನೋವುಗಳು...ಆದ್ರೂ ಯಾವತ್ತೂ ನಮ್ಮಿಬ್ಬರ ನಡುವೆ ’ಇಷ್ಟ ವರ್ಷವಾದ್ರು ನಾನು ನಿನಗಿನ್ನೂ ಅರ್ಥವಾಗಲಿಲ್ವಾ’ ಎಂಬ ಪ್ರಶ್ನೆ ಬರಲೇ ಇಲ್ಲ. ಅದೇ ನಮ್ಮಿಬ್ಬರ ಪ್ರೀತಿಯ ಯಶಸ್ಸಿನ ಗುಟ್ಟು. ದಣಿದು ಬಂದವನನ್ನು ತೊಡೆಯ ಮೇಲೆ ಮಲಗಿಸಿಕೊಂಡು ತಲೆಗೆ ಕೊಬ್ಬರಿ ಎಣ್ಣೆ ಸವರಿದ್ದು, ಹಸಿವಿಲ್ಲದಾಗ ನಂಗೊಂದು ತುತ್ತು, ನಿಂಗೊಂದು ತುತ್ತು ಎನ್ನುತ್ತ ಇಬ್ಬರು ಹೊಟ್ಟೆ ತಂಪಾಗುವಷ್ಟು ಊಟ ಮಾಡಿದ್ದು, ನಟ್ಟನಡುರಾತ್ರಿಯಲ್ಲಿ ಚಹಾ ಕುಡಿಯುವ ಹುಚ್ಚೆದ್ದು ಕೈಗಾಡಿಗಳನ್ನು ಹುಡುಕಿಕೊಂಡು ಹೊಸೂರಿನ ತುದಿಯವರೆಗೆ ಹೋಗಿ ಬಂದಿದ್ದು...

ರೈಸಿಂಗ್ ಇನ್ ಲವ್ ಎಂಬುದು ನಿಜ. ಒಟ್ಟಾಗುವಿಕೆಯೊಂದು ಧ್ಯಾನಸ್ಥ ಸ್ಥಿತಿ. ಒಂದು ಪ್ರೀತಿಗೆ ಮದುವೆಯ ಬಂಧಬೇಕಿಲ್ಲ. ಸಂಬಂಧಗಳ ಸಂಕೋಲೆ ಹಾಕಿಕೊಳ್ಳಬೇಕಾಗಿಲ್ಲ. ನನ್ನ ಮೇಲೆ ನಿನಗೆ, ನಿನ್ನ ಮೇಲೆ ನನಗೆ ಅತಿಯಾದ ಕಾಳಜಿಯೋ, ಹುಚ್ಚು ಭ್ರಮೆಯೋ ಇಲ್ಲ. ಆದಾಗ್ಯೂ ಹೆಣ್ಣಿನ ಹುಟ್ಟು ಗುಣದಂತೆ ನಿನಗೆ ನಿನಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸಲು ಗೊತ್ತಿದೆ...ಅದೊಂದು ನಿಷ್ಕಲ್ಮಶವಾದ ಪ್ರೀತಿ, ಅವಲಂಬನೆಯಿಲ್ಲದ ಪ್ರೀತಿ, ಬೇಡಿಕೆ ರಹಿತ ಪ್ರೀತಿ...ಅದು ಒಂಬತ್ತು ತೊಂಬತ್ತಾಗುವವರೆಗೂ ಹಾಗೆ ಇರಲಿ. ಹ್ಯಾಪಿ, ಹ್ಯಾಪಿ ಪ್ರೇಮಿಗಳ ದಿನ ನಿನಗೆ ಮತ್ತು ನನಗೆ...!

"Relationship is a structure, and love is unstructured. So love relates, certainly, but never becomes a relationship. Love is a moment-to-moment process. Remember it. Love is a state of your being, not a relationship. There are loving people and there are unloving people. Unloving people pretend to be loving through the relationship. Loving people need not have any relationship – love is enough’’
-Osho

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.