ಆತ್ಮ (ಭಾಗ 1)

ಹಲೋ ಜಗನ್,

ಹೇಳೋ ರೋಹನ್ ಏನೋ ಇಷ್ಟು ಬೆಳಬೆಳಗ್ಗೆ ಕಾಲ್ ಮಾಡಿದ್ದೀಯಾ? ಹನ್ನೊಂದಕ್ಕೆ ಎದ್ದೆಳೋನು, ಎಂಟಕ್ಕೆ ಎದ್ದು ಬಿಟ್ಟಿದ್ದೀಯಾ ಏನಪ್ಪಾ ವಿಶೇಷ?.

ಅಯ್ಯೋ ಸುಮ್ನೆ ಇರಪ್ಪ ನಾನ್ ಏನ್ ನಿನ್ನ ಹಾಗೆ ಸಂಸಾರಿನ ಬೇಗಾ ಎದ್ದು ಕೆಲಸಕ್ಕೆ ಹೋಗಿ ಮನೆ ಮಕ್ಕಳು ಅಂತ ಕಾಪಾಡಬೇಕು ಅನ್ನೋಕ್ಕೆ,

ಒಟ್ನಲ್ಲಿ ಮಗನೆ ಕಷ್ಟ ಇಲ್ಲದೆ ನಾನು ಆರಾಮಾಗಿ ಇದ್ದೀನಿ ಅನ್ನೋದನ್ನ ಹೀಗೆ ಹೇಳ್ತಾ ಇದ್ದೀಯಾ,?

ಎಲ್ಲೋ ಕಷ್ಟನ ಹುಡುಕ್ತಾನೆ ಇದ್ದೀನಿ ಸಿಕ್ತಾ ಇಲ್ಲ ಈಗ ಹೋಗ್ತಾ ಇರೋದು ಅದೇ ಕಷ್ಟನ ಹುಡುಕಿನೇ?

ಅಂದ್ರೆ ಏನೋ?. ಏನೋ ನನ್ನ ಕಷ್ಟ ಗೊತ್ತಿದ್ದೂ ಕೇಳ್ತೀಯಲ್ಲೋ? ನಿನಗೆನ್ ಪ್ರೀತಿಸಿದವಳನ್ನೇ ಮದ್ವೆ ಆದೆ ಎರಡು ಮಕ್ಕಳೂ ಆದ್ವು, ಸುಂದರ ಸಂಸಾರ, ಬಯಸಿದ್ದನ್ನ ನೀನ್ ಹೇಳುವ ಮುನ್ನವೇ ಕಣ್ಣ ಮುಂದೆ ತಂದಿಡುವ ಮಾವ, ನಿಮ್ಮ ಮಾವ, ಕಣೋ ಎಲ್ಲದಕ್ಕಿಂತ ಅದರಲ್ಲಿ ಪುಣ್ಯ ಮಾಡಿದ್ದೆ ನೀನು, ನಂದು ನೋಡು, ಮದ್ವೆಗೆ ಹೆಣ್ಣು ಇಲ್ಲಿ ಎಲ್ಲೂ ಸೆಟ್ ಆಗ್ಲಿಲ್ಲ ಅಂತ, ಸಿಟಿ ಕಡೆ ಬಿಟ್ಟು ಅಪ್ಪ ಹಳ್ಳಿಯಲ್ಲಿ ನೋಡಿದ್ದಾರೆ ಈಗ ಅಲ್ಲಿಗೆ ಹೋಗ್ತಾ ಇದ್ದೀನಿ,

ಅದೇನೋ ನಮಗಿಂತ ಬಡವರಂತೆ, ಇರ್ಲಿ ವಯಸ್ಸು ಬೇರೆ ಅಗ್ತಾ ಇದೆ ಬಿಳಿ ಕೂದಲು ಕಿವಿ ಪಕ್ಕ ಇಣುಕಿ ನೋಡ್ತಾ ಇದೆ, ಸೊ ಏನೋ ಒಳ್ಳೆಯ ಹೆಣ್ಣು ಸಿಕ್ಕರೆ ಸಾಕು ಅಂತ ಇದ್ದೀನಿ. ಎಂದು ತನ್ನ ಮನದ ಭಾರವನ್ನು ಹೊರ ಚೆಲ್ಲಿದವನಿಗೆ.

ಬಿಡು ಯಾಕೋ ಬೇಜಾರು ಎಲ್ಲದಕ್ಕೂ ಕಾಲ ಕೂಡಿಬರಬೇಕು ಮಗ, ಅದ್ಸರಿ ನೀನ್ ಒಬ್ಬಾನೆ ಎಲ್ಲೂ ಹೋಗೋನು ಅಲ್ವಲ್ಲ?. ವಿಮಲ್ ಕೂಡ ಬರ್ತಾ ಇದ್ದಾನ?

ಹೇಗೋ ಅವನಿಗೂ ಇನ್ನೂ ಮದ್ವೆ ಆಗಿಲ್ಲಾ ಅಲ್ಲೇ ಇನ್ನೊಂದು ಹುಡುಗಿನ ನೋಡಬಹುದಿತ್ತು.


ಅಯ್ಯೋ ಆ ಬಡ್ಡಿ ಮಗನಿಗೆ ಮದ್ವೆ ಆಗಿಲ್ಲ ಅನ್ನೋ ಯೋಚನೇನೆ ಇಲ್ಲ ಕಣೋ, ಚೆನ್ನಾಗಿ ಉನ್ಕೊಂಡ್ ತಿನ್ಕೊಂಡು ಹುಡುಗೀರ ಜೊತೆ ತಿರ್ಕೊಂಡು ಇದ್ದಾನೆ, ಬಾರೋ ಅಂದ್ರೆ ಹಳ್ಳಿ ನಾ ಅಂತ ರಾಗ ಎಳೆದು ಅಲ್ಲೇನೂ ಎಂಟರ್ಟೈಮೇಂಟ್ ಇರಲ್ಲಾ , ಮೊಬೈಲ್ ನೆಟ್ ವರ್ಕ್ ಕೂಡ ಸಿಗಲ್ಲಾ, ಅಲ್ಲಿ ಬಂದ್ ಏನ್ ಮಾಡೋದು ಅಂತ ಬರಲ್ಲ ಅಂದ,

ಅದಕ್ಕೆ ಉರ್ಕೊಂಡು ಒಬ್ಬಾನೆ ಕಾರ್ ತಗೊಂಡು ಬಿಯರ್ ಹೊಡ್ಕೊಂಡು ಹೋಗ್ತಾ ಇದ್ದೀನಿ, ನಿಂಗೆ ಹೇಳಿ ಹೋಗೋಣ ಅಂತ ನಿಲ್ಲಿಸಿದೆ, ಸರಿ ಮಗ ನಾನ್ ಅಲ್ಲಿಗೆ ಹೋಗಿ ಕಾಲ್ ಮಾಡ್ತೀನಿ ಬಿಸಿಲು ಆದ್ರೆ ಕಾರ್ ಓಡಿಸಕ್ಕೆ ಮೈಭಾರ,


ನಾನೂ ಬರ್ತಾ ಇದ್ದೆ ಬಟ್ ನನಗೆ ಸ್ವಲ್ಪ ಕೆಲಸ ಇದೆ , ನೀನು ಹುಷಾರಾಗಿ ಹೋಗಿ ಬಾ, ಇರ್ಲಿ ಬಿಡೋ, ಟೆಕ್ ಕೇರ್. ಎಂದು ಜಗನ್ ಫೋನಿಟ್ಟ. ಪಕ್ಕದಲ್ಲೇ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಜಗನ್ನ ಹೆಂಡತಿ ವರ್ಷ, ಅಲ್ಲಾ ಜಗನ್ ನೀನು ವಿಮಲ್ ರೋಹನ್ ಒಟ್ಟಿಗೆ ಓದಿದ್ದು, ನಾನು ಕಾಲೇಜ್ ಡೇಸ್ ಇಂದಾ ನೋಡ್ತಾ ಇದ್ದೀನಿ, ರೋಹನ್ ಗೆ ಮಾತ್ರ ನಿನ್ನ ಮೇಲೆ ಹೊಟ್ಟೆ ಕಿಚ್ಚು ಹೋಗಿಲ್ಲಾ, ನಾವು ಲವ್ ಮಾಡುವಾಗಲೂ ಅಷ್ಟೇ, ನಮ್ಮನ್ನ ನೋಡಿ ಅಸೂಯೆ ಪಡ್ತಾ ಇದ್ರು,

ಅದಕ್ಕೆ ನೋಡಿ ಉರ್ಕೊಲ್ಲಿ ಅಂತಾನೆ ನಮಗೆ ಎರಡು ಮಕ್ಕಳಾದರೂ ಅವರಿಗಿನ್ನೂ ಹೆಣ್ಣು ಸಿಕ್ಕಿಲ್ಲಾ. ಪಾಪ ವಿಮಲ್ ಹೀಗೆಲ್ಲಾ ಇಲ್ಲಾ. ಎಂದ ಹೆಂಡತಿಗೆ.

ಹೇಯ್ ವರ್ಷ ಹೊಟ್ಟೆ ಉರಿ ಅಂತ ಏನಿಲ್ಲಾ, ಅವನಿಗೆ ಎಲ್ಲಾದರಲ್ಲೂ ತಾನೇ ಮೊದಲಿರಬೇಕು ಅನ್ನೋ ಆಸೆ ಇದೆ, ಅವನೇ ಮೊದಲು ನಮ್ಮಿಬ್ಬರಿಗಿಂತ ಮೊಬೈಲ್, ಬೈಕ್, ಕಾರ್, ತಗೊಂಡಿದ್ದು,

ಹಾಗೆ ಲವ್ ಮಾಡಿ ಮದ್ವೆನೂ ಆಗ್ಬೇಕು ಅಂತ ಇದ್ದ, ಅವನ ಹಣೆಬರಹ ಲವ್ ಸೆಟ್ ಆಗಲೇ ಇಲ್ಲಾ, ಸರಿ ನೋಡಿ ಮದ್ವೆ ಆಗೋಣ ಅಂದ್ರೆ ಅದಕ್ಕೂ ಇಲ್ಲಾ, ನೋಡಿದ್ರೆ ಅದೆಷ್ಟು ಕೋಟಿಗೆ ಬಾಳ್ತಾರೋ ಅವರು,

ಅವರಿಗೆ ಹೆಣ್ಣು ಸಿಕ್ತಾ ಇಲ್ಲ, ಅದಕ್ಕೆ ಈಗ ಈ ಸಿಟಿ ಬೇಡವೇ ಬೇಡ ಅಂತ , ಕೊಡೈಕಾನಲ್ ಇಂದ ಸ್ವಲ್ಪ ದೂರದಲ್ಲಿ ಒಂದು ಊರಿದೆ ಅಲ್ಲಿ ಹೆಣ್ಣು ನೋಡಿದ್ದಾರಂತೆ ಅವರಪ್ಪ, ಅದಕ್ಕೆ ಹೆಣ್ಣು ನೋಡಕ್ಕೆ ಹೋಗ್ತಾ ಇದ್ದಾನೆ ಇದಾದರೂ ಸೆಟ್ ಆಗಿ ಅವನಿಗೆ ಮದ್ವೆ ಆಗಲಿ ಅನ್ನೋದೇ ನನ್ನ ಆಸೆ. ಒಹ್ ನನ್ನ ತವರೂರಿನ ಪಕ್ಕದಲ್ಲೇ, ಬಿಡಿ ಹಾಗಿದ್ರೆ ಅವರಿಗೆ ಸುಂದರವಾಗಿರೋ ಹೆಣ್ಣೇ ಸಿಕ್ತಾಳೆ.


ಅಯ್ಯೋ ಹಾಗೆ ಅನ್ಕೊಂಡೆ ನಾನ್ ಮೋಸ ಹೋದೆ. ಹೌದಾ ನಿನ್ನ ಮೂತಿಗೆ ನಾನ್ ಸಿಗದೇ ಇದ್ದಿದ್ದರೆ ನೀನೂ ಸಹ ಇವತ್ತು

ರೋಹನ್ ಜೊತೆ ಊರೂರು ಅಳೆಯಬೇಕಿತ್ತು.. ಎನ್ನುತಾ ಮೂತಿ ತಿರುವಿದಳು..

ಅಯ್ಯೋ ಸುಂದರಿ ಕೋಪ ಮಾಡ್ಕೋಬೇಡ ನೀನೆ ನನ್ನ ತ್ರಿಲೋಕ ಸುಂದ್ರಿ, ಎನ್ನುತ್ತಾ ಅವಳನ್ನು ಅಲಂಗಿಸಿಕೊಂಡ ಅವನ ಅಪ್ಪುಗೆಯಲ್ಲಿ ಅವಳ ಕೋಪ ಕರಗಿ ಹೋಯಿತು.


ಇತ್ತ, ರೋಹನ್ ಬಂದು ಊರು ತಲುಪಿದ ಸಂಜೆಯಾಗಿತ್ತು, ಅವನು ಬರುವುದನ್ನು ಅವನ ತಂದೆ, ಎಸ್ಟೇಟ್ ಮ್ಯಾನೇಜರ್ ಚಂದ್ರುವಿಗೆ ಕರೆ ಮಾಡಿ ತಿಳಿಸಿದರಿಂದ. ಅವನು ಉಳಿದುಕೊಳ್ಳುವ ಕೋಣೆ ಸ್ವಚ್ಚಗೊಳಿಸಿ ಸಿದ್ಧಪಡಿಸಲಾಗಿತ್ತು. ಇಬ್ಬರೂ ಕೋಣೆಯೊಳಗೆ ಹೋದರು. ತುಂಬಾ ಚೆನ್ನಾಗಿದೆ ರೂಂ ಚಂದ್ರು, ಇಷ್ಟ ಆಯಿತು, ಥ್ಯಾಂಕ್ಸ್ ಸಾರ್, ನಿಮ್ಮ ತಂದೆ ಮೊದಲೇ ಕಾಲ್ ಮಾಡಿ ಹೇಳಿದ್ರು, ಅದಕ್ಕೆ ಆಳುಗಳನ್ನು ಕರೆಸಿ ಕ್ಲೀನ್ ಮಾಡಿಸಿಟ್ಟೆ. ಗುಡ್ ಗುಡ್. ನಾಳೆಯಿಂದ ನಮಗೆ ಇಲ್ಲಿ ಸ್ವಲ್ಪ ಸುತ್ತಾಡೋ ಕೆಲಸವಿದೆ, ನನ್ನ ಜೊತೆಯೇ ಇರಿ. ಖಂಡಿತ ಸಾರ್, ಊಟ ಟೇಬಲ್ ಮೇಲೆ ರೆಡಿ ಇದೆ,

ಮತ್ತೆ ಏನೇ ಬೇಕಿದ್ದರೂ ನನ್ನ ಕರೆಯಿರಿ ಸಾರ್, ಸರಿ ನೀವಿನ್ನೂ ಹೊರಡಿ. ಎಂದೇಳಿ ಹಾಗೆ ಹಾಸಿಗೆಯ ಮೇಲೆ ಉರುಳಿಕೊಂಡ. ಗಂಟೆ ಹತ್ತಾಯಿತು, ಊಟ ಮಾಡಿ, ಎರಡು ಲೋಟ ಮದ್ಯ ಸೇವಿಸಿ ಮಲಗಿದ. ಬೆಳಗ್ಗೆ ಎಂಟಕ್ಕೆ ಎದ್ದು ಸ್ನಾನಕ್ಕೆ ಹೋಗಿ ಬರುವಾಗ, ಅದಾಗಲೇ ತಂದು ಮುಚ್ಚಿಟ್ಟಿದ್ದ ಉಪಾಹಾರವನ್ನು ಸೇವಿಸಿ, ಹೊರ ಬಂದ.

ಚಂದ್ರುವನ್ನು ಕರೆದು, ಅವರ ಕೈಗೆ ಹೆಣ್ಣಿನ ಮನೆಯ ವಿಳಾಸವನ್ನು ಕೊಟ್ಟು ಎಲ್ಲಿ ಬರುತ್ತೆ ಎಂದು ಕೇಳಿದಕ್ಕೆ.

ಸಾರ್ ಇದು ಇಲ್ಲಿಂದೆ ಸ್ವಲ್ಪ ದೂರವಿದೆ ,ಈ ಜಾಗ ಗೊತ್ತು ನನಗೆ, ಸರಿ ಬನ್ನಿ ಕಾರ್ನಲ್ಲಿ ಹೋಗಿ ಬಾರೋಣ,


ಇಲ್ಲ ಸಾರ್ ಅಲ್ಲಿಗೆ ಕಾರ್ ನಲ್ಲಿ ಹೋಗಕ್ಕೆ ಆಗಲ್ಲ, ರಸ್ತೆ ಸರಿ ಇಲ್ಲ ಬರೀ ಕಲ್ಲು ಮಣ್ಣಿನ ರಸ್ತೆ, ಬೈಕ್ ಅಥವಾ ಸೈಕಲ್ ನಲ್ಲಿ ಬೇಕಿದ್ರೆ ಹೋಗಬಹುದು, ಅದಿಲ್ಲಾಂದ್ರೆ ಕಾಲ್ನಡಿಗೆ ಅಷ್ಟೇ.


ಏನು ನಡ್ಕೊಂಡ್ ಹೋಗ್ಬೇಕಾ? ನಮ್ಮಪ್ಪ ಬಡ್ಡಿ ಮಗನಿಗೆ ಹಿಡ್ಕೊಂಡ್ ಬಡಿಬೇಕು ಇಲ್ಲಿ ನೋಡಿದ್ದಾರೆ ಹೋಗಿ ಹೋಗಿ, ಎಂದು ಮನಸಿನಲ್ಲಿಯೇ ಬೈದುಕೊಂಡು, ಸರಿ ಬನ್ನಿ ನಡ್ಕೊಂಡೆ ಹೋಗೋಣ , ಎಂದು ಇಬ್ಬರೂ ಹೆಜ್ಜೆ ಹಾಕ ತೊಡಗಿದರು,

ಹೋಗುತ್ತಾ ಇದ್ದ ಹಾಗೆ ಅತ್ತಿತ್ತ ಮರಗಳು ಬೆಳೆದು ಪೊದೆಯ ಹಾಗಿರುವ ನಿರ್ಜನ ಪ್ರದೇಶ ಎದುರಾಯಿತು,

ಇದೇನ್ರಿ ನಾವೇನು ಕಾಡಿಗೆ ಹೋಗ್ತಾ ಇದ್ದೀವಾ ಹೀಗಿದೆ? ಇಲ್ಲ ಸಾರ್ ಇನ್ನೂ ಸ್ವಲ್ಪ ದೂರದಲ್ಲಿ ನೀವು ಹೇಳಿದ ವಿಳಾಸವಿದೆ,

ಇಲ್ಲಿ ಜನಗಳು ಓಡಾಡೋದು ಕಡಿಮೆ ಹಾಗಾಗಿಯೇ ರಸ್ತೆ ನಿರ್ಮಿಸಿಲ್ಲಾ, ಯಾಕೆ? ಈ ಊರಿನಲ್ಲಿ ಜಾಸ್ತಿ ಜನರು ಇಲ್ವಾ?

ತಕ್ಕ ಮಟ್ಟಿಗೆ ಇದ್ದಾರೆ, ಆದ್ರೆ... ಏನ್ ಆದ್ರೆ, ಈ ಪ್ರದೇಶದಲ್ಲಿ ಪ್ರೇತಾತ್ಮಗಳ ಕಾಟ ಇದೆ ಸಾರ್

ಅದಕ್ಕೆ ಜನರು ಜಾಸ್ತಿ ಇತ್ತ ಓಡಾಡಲ್ಲ, ಸಂಜೆ ನಾಲಕ್ಕು ಗಂಟೆ ಆಗುತ್ತಾ ಇದ್ದಾಗಲೇ ಮನೆ ಸೇರಿ ಬಿಡುತ್ತಾರೆ, ಸುಮ್ನೆ ಕತ್ತಲಾದ ಮೇಲೆ ಯಾಕೆ ಅಂತ. ಏನು ದೆವ್ವಗಳ ಏನ್ರೀ android ಕಾಲದಲ್ಲಿ ಆತ್ಮಗಳ ಬಗ್ಗೆ ಹೇಳ್ತಾ ಇದ್ದೀರಾ?


ನಿಮಗೆ ಅನುಭವ ಆಗಿಲ್ಲಾ ಅದಕ್ಕೆ ನಾವು ಹೀಗೆ ಹೇಳುತ್ತಾ ಇದ್ದೀರಾ,

ನಮಗೆ ಆಗಿದೆ, ಆ ಭಯ ನಮಗಿದೆ, ಅದೂ ಅಲ್ಲದೆ ಈ ಪ್ರದೇಶದಲ್ಲಿ ವಿಕಾರವಾಗಿ ಸತ್ತು ಬಿದ್ದಿದ್ದ ಜನರನ್ನ ನಾನೇ ನೋಡಿದ್ದೀನಿ.

ಒಹ್, ಏನೋಪ ಹಳ್ಳಿ ಇನ್ನೂ ಮುಂದುವರಿದಿಲ್ಲಾ.. ಇಷ್ಟೆಲ್ಲಾ ಆಧುನಿಕತೆ ಬಂದರೂ ಸಹ, ಹಾಗೆ ಮುಂದೆ ನಡೆಯುತ್ತಾ ಇದ್ದ ಹಾಗೆ,

ಕಣ್ಣಿಗೆ ಸೀರೆಯನ್ನು ಸುತ್ತಿದ್ದ ಮರಗಳು ಕಂಡವು,

ಅದೇನ್ರೀ, ಚಂದ್ರು, ಎಂದು ಸೀದಾ ಆ ಮರಗಳ ಬಳಿಗೆ ಬಂದು ನಿಂತ,

ರೋಹನ್.. ಬೃತಾಕರದ ಮರಗಳು, ರೇಷ್ಮೆ ಸೀರೆಯನ್ನು ಸುತ್ತಿದ್ದರು,

ಮರಕ್ಕೆ ಹೊಡೆದ ಮೊಳೆಯಲ್ಲಿ, ಹೆಣ್ಣಿನ ಕೂದಲನ್ನು ಸುತ್ತಿದ್ದ ಕಣ್ಣಿಗೆ ಬಿತ್ತು. ಏನ್ರೀ ಇದೆಲ್ಲಾ ಚಂದ್ರು, ಇಷ್ಟು ದೊಡ್ಡ ಮರಕ್ಕೆ ಸೀರೆ ಸುತ್ತಿದ್ದಾರೆ, ಕೆಳಗೆ ಬಳೆಗಳ ಚೂರಿದೆ, ಮೊಳೆಯಲ್ಲಿ ಹುಡುಗಿಯ ಕೂದಲು ಸಿಲುಕಿದೇ? ಏನ್ ಇದೆಲ್ಲಾ ...


ಇದರ ಬಗ್ಗೆ ಇಲ್ಲಿ ಇನ್ನು ಮಾತಾಡೋದು ಬೇಡ ಸಾರ್, ಶುಭಕಾರ್ಯಕ್ಕೆ ಹೋಗುವಾಗ ಈ ಮಾತೆಲ್ಲಾ ಆಡೋದು ಒಳ್ಳೆಯದಲ್ಲ, ಇಲ್ಲಿರೋದು ಬೇಡ, ಬನ್ನಿ ಎಂದು ಕರೆದರೂ, ರೋಹನ್ ಗೆ ಆ ಸೀರೆ ಸುತ್ತಿದ ಮರದಲ್ಲಿ ಒಂದು ಮರ ಆಕರ್ಷಿಸುತ್ತಿದೆ, ಎನ್ನಿಸುವಂತೆ, ಭಾಸವಾಗಿ ಅದರತ್ತಾ ಹೆಜ್ಜೆ ಇಟ್ಟು, ಸೀರೆಯನ್ನು ಮುಟ್ಟಿಯೇ ಬಿಟ್ಟ!!. ಕ್ಷಣ ಮಾತ್ರದಲ್ಲಿ ಮರಕ್ಕೆ ಸುತ್ತಿದ್ದ ಸೀರೆ ಸುರುಳಿ ಬಿಚ್ಚಿಕೊಂಡು ಕೆಳಗೆ ಬಿತ್ತು, ಹಿಂದಿನಿಂದ ಓಡಿ ಬಂದ ಚಂದ್ರು, ಏನ್ ಸಾರ್ ನೀವು ಹೇಳಿದ ಮಾತೆ ಕೇಳಲ್ಲ, ಇಲ್ಲಿಗೆ ಬರಕ್ಕೆ ಜನರು ಹೆದರುವಾಗ, ನೀವು ಅದೆಲ್ಲಾ ಮುಟ್ಟಿ ಬೇರೆ ನೋಡ್ತೀರಿ... ಬನ್ನಿ ಹೋಗೋಣ ಎನ್ನುತ್ತಾ ಕೈ ಹಿಡಿದು ಎಳೆದುಕೊಂಡು ಹೊರಟ.... ಮುಂದೆ ಬಂದರೂ ಹಿಂದಿನ ಮಾತನ್ನು ಮತ್ತೆ ಮುಂದುವರಿಸಿದ....ರೋಹನ್... ಸಾರ್ ಬೇರೆ ಏನಾದ್ರೂ ಮಾತಾಡೋಣ, ಐದಾರು ವರ್ಷಗಳ ಹಿಂದೆ ನೀವು ಕಾಲೇಜ್ ನಲ್ಲಿ ಓದುವಾಗ, ಆಗಾಗ ಗೆಸ್ಟ್ ಹೌಸ್ ಗೆ ಬರ್ತಾ ಇದ್ರಲ್ಲ, ಆ ಇಬ್ಬರು ಫ್ರೆಂಡ್ಸ್ ಒಬ್ಬರ ಹೆಸರು ನೆನಪಿದೆ ಜಗನ್ ಇನ್ನೊಬ್ಬರ ಹೆಸರೂ... ಎಂದು ಮಾತು ಬದಲಾಯಿಸಿದರು ಚಂದ್ರು.....


ವಿಮಲ್. ಹಾ ಅದೇ, ಅವರೆಲ್ಲಾ ಹೇಗಿದ್ದಾರೆ ಸಾರ್,

ಅವರಿಗೇನು, ವಿಮಲ್ ಗೂ ಇನ್ನೂ ಮದ್ವೆ ಆಗಿಲ್ಲ ಬಡ್ಡಿ ಮಗ ಆ ಯೋಚನೇನೆ ಇಲ್ಲದೆ ಜಾಲಿಯಾಗಿದ್ದಾನೆ, ಅವನದೇ ಸ್ವಂತ ಬಿಸ್ನೆಸ್ ನೋಡ್ಕೊಂಡು. ಇನ್ನು ಜಗನ್ ಗೆ ಮದ್ವೆ ಆಗಿದೆ ಅದೂ ಲವ್ ಮಾಡಿದ ಹುಡುಗಿಯನ್ನೇ ಮದ್ವೆ ಆದ, ಇಬ್ಬರು ಮಕ್ಕಳು, ಮೊದಲನೆಯವಳ ಹೆಸರು ಸುಕೃತಿ, ಎರಡನೆಯದು ಮಗ ಅವನ ಹೆಸರು ಧೀರ್ಗ,

ಹೆಂಡತಿಗೆ ಮೂವತ್ತು ನಾಲತ್ತು ಸಾವಿರ ಸಂಬಳ ಈಗ ಒಂದೂವರೆ ವರ್ಷದ ಮಗು ಇದೆ ಅಂತ ಕೆಲಸಕ್ಕೆ ಹೋಗ್ತಾ ಇಲ್ಲಾ, ಇವನಿಗೂ ಒಳ್ಳೆಯ ಸಂಬಳ... ಸುಂದರ ಸಂಸಾರ.

ಇದೆಲ್ಲಾ ಹೇಳಕ್ಕೆ ನನಗೆ ಇಷ್ಟ ಇಲ್ಲಾ ಏನ್ ಮಾಡೋದು ಸಮಯ ಕಳೆಯಬೇಕು ಅಂತ ಹೇಳ್ಕೊಂಡ್ ನಡಿತಾ ಇದ್ದೀನಿ ಎಂದು, ತನ್ನೊಳಗಿನ ಅಸೂಯೆಯನ್ನು ಹೊರ ಹಾಕಿದ..


ಚಂದ್ರು ಎಲ್ಲವನ್ನೂ ಆಲಿಸುತ್ತಾ ತನ್ನ ಐದಾರಿ ವರ್ಷದ ಹಿಂದಿನ ಕೆಲಸದ ದಿನಗಳ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ ಸಾಗಿದ. ಮರದ ಹಿಂದಿನನಿಂದ ಅವರಿಬ್ಬರ ಗಮನಕ್ಕೂ ಬರದಂತೆ, ಒಂದು ಕೈ ಮರವನ್ನು ಹಿಡಿದಿತ್ತು. ರೋಹನ್ ವಾತಾವರಣದಲ್ಲಿ ಆದ ಬದಲಾವಣೆಯನ್ನು ಗಮನಿಸಿ ಅದೇನ್ ಎಂದು ಗ್ರಹಿಸುವ ಮುನ್ನವೇ,


ಚಂದ್ರು, ಸಾರ್ ಮೋಡಕವಿಯುತ್ತಿದೆ, ಫಾಸ್ಟ್ ಫಾಸ್ಟ್ ಆಗಿ ಹೆಜ್ಜೆ ಇಡಿ, ಬೇಗಾ ಮನೆ ಸೇರೋಣ, ಕತ್ತಲು ಆವರಿಸಿಕೊಂಡರೆ ಈ ಪ್ರದೇಶ ತನ್ನ ನೈಜ ಭಯಾನಕತೆಯನ್ನು ತೋರಿಸುತ್ತೆ. ಬಿರುಸಾಗಿಸಿದ ಹೆಜ್ಜೆಗಳು ತಲುಪಬೇಕಾದ ಮನೆಯ ಮುಂದೆ ಬಂದು ನಿಂತವು. ರೋಹನನ್ನೇ ಎದುರು ನೋಡುತ್ತಾ ಕಾಯುತ್ತಿದ್ದ ಹುಡುಗಿಯ ಅಪ್ಪ, ಬನ್ನಿ ಬನ್ನಿ ನೀರ್ ತಗೋಳಿ ಕಾಲ್ ತೊಳ್ಕೊಂಡು ಒಳಬನ್ನಿ ಎಂದು ಒಂದು ಜೆಂಬು ನೀರು ಕೊಟ್ಟು ಒಳಹೋದರು,

ಇಬ್ಬರು ತಮ್ಮ ಕಾಲುಗಳನ್ನು ತೊಳೆದುಕೊಂಡು, ಒಳ ಬಂದು ತಿರುಗುವ ಫ್ಯಾನ್ ಕೆಳಗಿದ್ದ ಖುರ್ಚಿಯ ಮೇಲೆ ಕುಳಿತರು,

ಆ ಬಿರು ಬಿಸಿಲಿನಲ್ಲಿ ನಡೆದು ಬಂದಿದ್ದು, ತಣ್ಣಗಿನ ಗಾಳಿಯಲ್ಲಿನ ಕೆಳಗೆ ಕೂರುವುದು ಸ್ವರ್ಗ ಎನ್ನಿಸುತ್ತಿತ್ತು.


ಪಾಪ ಕಾರ್ನಲ್ಲಿ ಓಡಾಡೋರು, ನಡ್ಕೊಂಡ್ ಅದೂ ಈ ಬಿಸಿಲಿನಲ್ಲಿ ಬಂದಿದ್ದು ತುಂಬಾ ಆಯಾಸ ಆಗಿರುತ್ತೆ, ತಗೋಳಿ ತಣ್ಣಗಿನ ಮಜ್ಜಿಗೆ ಕುಡಿಯಿರಿ ಎಂದು ಇಬ್ಬರಿಗೂ ಕೊಟ್ಟರು.


ರೋಹನ್ ಕುಡಿದು ಲೋಟ ಕೆಳಗಿಟ್ಟ.. ಹೆಣ್ಣು ರೂಮಿನಿಂದ ಹೊರ ಬಂದು ರೋಹನ್ ಮುಂದೆ ನಿಂತಳು,

ಕೆಳಗಿನಿಂದ ಮೇಲಿನವರೆಗೂ ನೋಡಿ, ಚೆನ್ನಾಗಿದ್ದಾಳೆ ಊರಿಗೆ ಕರ್ಕೊಂಡ್ ಹೋಗಿ ಸ್ಟೈಲಿಶ್ ಡ್ರೆಸ್ ಹಾಕಿಸಿದ್ರೆ, ಇನ್ನೂ ಮಾರ್ಡನ್ ಆಗಿ ಕಾಣ್ತಾಳೆ ಅಂತ ಮನದಲ್ಲಿ ಯೋಚಿಸುತ್ತಾ ಇದ್ದಾಗ. ಹೇಗಿದ್ದಾಳೆ ಹುಡುಗಿ ನಿಮಗೆ ಒಪ್ಪಿಗೆ ಆಯ್ತಾ?

ಎಂದು ಕೇಳಿದರು...ಹುಡುಗಿಯ ಅಮ್ಮ.. ಇಷ್ಟ ಆಯಿತು ಎಂದು ಮುಗುಳುನಗುತ್ತಾ ಹೇಳಿದ,

ಜೊತೆ ಬಂದ ಚಂದ್ರುವಿಗೂ ಆ ಮಾತು ಖುಷಿ ಕೊಟ್ಟಿತು. ಎಲ್ಲಿ ಕೆಲಸ ಏನ್ ಮಾಡ್ತಾ ಇರೋದು, ಈ ಊರು ಇಷ್ಟ ಆಯ್ತಾ,

ನಾವು ಬಡವರು, ನಮ್ಮ ಮನೆ ನಿಮಗೆ ಹಿಡಿಸಿತೋ ಏನೋ, ಹೀಗೆ ನಾನಾ ಮಾತುಗಳ ನಡುವೆ, ಸಮಯದ ಮುಳ್ಳು ಸಂಜೆ ನಾಲಕ್ಕು ತೋರಿಸಿತು, ಚಂದ್ರು ಒಮ್ಮೆ ಕೈಗಡಿಯಾರ ನೋಡಿಕೊಂಡು,

ರೋಹನ್ನ ಕಿವಿಯ ಪಕ್ಕ, ಸಾರ್ ಸಮಯ ನಾಲಕ್ಕು ಆಯಿತು , ಇನ್ನು ಹೊರಡೋಣ, ತುಂಬಾ ಲೇಟ್ ಆದ್ರೆ ಕಷ್ಟ ಆಗುತ್ತೆ. ಎಂದು ಪಿಸುಗುಟ್ಟಿದ.

ಸರಿ ಎಂದು ಅವನಿಗೆ ಉತ್ತರಿಸಿ, ಓಕೆ ಸಾರ್, ನಾವಿನ್ನೂ ಹೊರಡುತ್ತೇವೆ..

ಎಲ್ಲಿ ಮದ್ವೆ ಏನ್ ವಿಷಯ ಅಂತೆಲ್ಲಾ ಅಪ್ಪ ಮಾತಾಡ್ತಾರೆ, ಎಂದ. ಆಗಲಿ ಸಾರ್, ನೀವು ಒಪ್ಪಿದೆ ನಮಗೆಲ್ಲಾ ಬಹಳ ಖುಷಿ ಆಯಿತು. ಎಂದು ಮನೆಯ ಗೆಟ್ ನವರೆಗೂ ಬಂದು ಬೀಳ್ಕೊಟ್ಟು ಕಳುಹಿಸಿದರು, ಹುಡುಗಿಯ ಹೆತ್ತವರು...

ಅವರಿಗೆ ಕೈ ಮುಗಿದು ಇಬ್ಬರೂ ಹೊರಟರು... ಇಷ್ಟು ವರ್ಷಗಳ ಬಳಿಕ ಬದುಕು ಒಂದು ಹಂತಕ್ಕೆ ಬಂದಿತಲ್ಲ

ಎನ್ನುವ ಭಾವನೆ ಅವನ ಮುಖವನ್ನು ನಗುವನಿಂದ ತುಂಬಿಸಿತ್ತು. ಹಾಗೆ ಬರುತ್ತಾ ಮತ್ತೊಮ್ಮೆ ಎದುರಾಯಿತು ಆ ನಿರ್ಜನ,

ಪ್ರದೇಶ..... ಮೌನವಾಗಿ ಬರುತ್ತಿದ್ದ ಚಂದ್ರುವನ್ನು ಮಾತಿಗೆಳೆದ, ಅಲ್ಲಾರೀ ಇಲ್ಲಿ ಆತ್ಮಗಳ ಅಲೆದಾಟ ಇದೆ ಅಂತೀರಲ್ಲ,

ಇಲ್ಲೇನು ಅವುಗಳಿಗೆ ಅಪಾರ್ಟ್‘ಮೆಂಟ್ ಕಟ್ಟಿಸಿಕೊಟ್ಟಿದ್ದಾರ?. ಸಾರ್, ದಯವಿಟ್ಟು ಮೆಲ್ಲಗೆ ಮಾತಾಡಿ, ಇಲ್ಲಿದ್ದುಕೊಂಡು ಅವುಗಳ ಬಗ್ಗೆ ಹಗುರವಾಗಿ ಮಾತಾಡೋದು. ಅಪಾಯವನ್ನು ನಾವೇ ಮೈ ಮೇಲೆ ಎದುಕೊಂಡ ಹಾಗೆ. ಆಮೇಲೆ ಏನ್ ಆಗುತ್ತೆ ಅಂತ ಹೇಳಕ್ಕೆ ಆಗಲ್ಲಾ, ಎಂದು ಎಚ್ಚರಿಸಿದ. ಹಹಹಹ್ಹ ಏನ್ರೀ ದೆವ್ವಕಿಂತ ನೀವು ಕೊಡುವ buildup ಕೇಳಿ

ಭಯ ಅಗ್ತಾ ಇದೆ, ಸರಿ ಇರ್ಲಿ ಇಲ್ಲಿಯಾಕೆ ಅವುಗಳು ಇದ್ದಾವೆ ಹೇಳಿ? ಸಾರ್, ಇದು ನಮ್ಮೂರ ಹಾಗೂ ಈಗ ಹೋದ ಊರ ನಡುವೆ ಇರುವ ಪ್ರದೇಶ, ಅಂದ್ರೆ ಒಂದು ರೀತಿ ಊರಾಚೆ ಅನ್ನಬಹುದು ಕಾರಣ ಈಗ ನಾವು ಹೋಗಿದ್ದ ಊರಿನ ಮುಂದೆ ಇರೋದು ಬರೀ ಬೆಟ್ಟಗಳೇ ಹಾಗಾಗಿ ಇದೆ ಅವರಿಗೂ ಊರಾಚೆ,

ಸತ್ತ ಮುತ್ತಲಿನಲ್ಲಿ ಎಲ್ಲಿಯಾದರೂ ಆತ್ಮಗಳು ಕಾಟಕೊಡಲು ಶುರು ಮಾಡಿದ್ರೆ ಹಾಗೂ ಮದ್ವೆಯಾಗದೆ ಸತ್ತ ಹೆಣ್ಣು/ಗಂಡಿನ ಆತ್ಮಗಳು ನೂರಾರು ಆಸೆಗಳಿಂದ ಅಲೆಯುತ್ತಾ ಇರುತ್ತೆ, ರಾತ್ರಿಯಲ್ಲಿ ಚೀರಾಡುತ್ತಾ ಇರುತ್ತವೆ, ಹೆಣ್ಣಿನ ಆತ್ಮ ಆದ್ರೆ ಕೈಗೆ ಸಿಗುವ ಸುಂದರ ಯುವಕರನ್ನ ಬಿಡಲ್ಲ. ಗಂಡಿನ ಆತ್ಮ ಆದ್ರೆ ಯುವತಿಯರನ್ನ ಬಿಡಲ್ಲ.

ಅವರನ್ನು ಆವರಿಸಿಕೊಂಡು ಬಿಡುತ್ತವೆ, ಅಂತಹ ವೇಳೆಯಲ್ಲಿ ಅವುಗಳನ್ನು ಹಿಡಿದು ಅಷ್ಟದಿಗ್ಬಂಧನ ಹಾಕಿ, ಇಲ್ಲಿಗೆ ಬಂದು ಅತ್ತಿತ್ತ ಇದೆ ನೋಡಿ ಮರ ಅದಕ್ಕೆ ಮೊಳೆ ಹೊಡೆದು ,ಇಲ್ಲೇ ಬಿಟ್ಟು ಹೋಗುತ್ತಾರೆ,

ಅವುಗಳು ರಾತ್ರಿಯ ವೇಳೆಯಲ್ಲಿ ಅಳೋದು, ಕೂಗೋದು,

ಕಣ್ಣಿಗೆ ಕಾಣಿಸಿಕೊಳ್ಳುವುದು ಮಾಡುತ್ತವೆ, ಕೆಲವರನ್ನು ಕೊಂದೂ ಇವೆ,

ಅದಕ್ಕೆ ಈ ರಸ್ತೆಯಲ್ಲಿ ನಾಲಕ್ಕರ ಒಳಗೆಯೇ ಜನ ಹೆದರಿ ಮನೆ ಸೇರಿ ಬಿಡುತ್ತಾರೆ, ಮತ್ತೆ ಅವರು ಇಲ್ಲಿ ಓಡಾಡೋದು, ಬೆಳಗ್ಗೆಯೇ,

ಆಮೇಲೆ ಇನ್ನೊಂದು ಸಾರ್, ಈ ರಸ್ತೆಯಲ್ಲಿ ಬರುವಾಗ ಯಾವ ಸದ್ದಾದರೂ ಯಾರೋ ಕೊಗಿದಂತ ಭಾಸವಾದರೂ ನಾವು ಹಿಂತಿರುಗಿ ನೋಡಬಾರದು,

ನೋಡಿದ್ರೆ?.

ನೋಡಿದ್ರೆ, ಅವರ ಸಮಯ ಕೆಟ್ಟಿದ್ರೆ ಖಂಡಿತ ಅವರ ಜೀವಕ್ಕೆ ಅಪಾಯ, ಇಲ್ಲದಿದ್ದರೆ ಜ್ವರ ಬಂದೋ ಹುಷಾರ್ ತಪ್ಪಿಯೋ ಮಲಗುತ್ತಾರೆ, ಕೆಲವರು ಹಾಗೆ ಮಲಗಿ ಮತ್ತೆ ಸಹಜವಾಗಿಯೇ ಇಲ್ಲಾ

ಹಾಗೆ ಹುಚ್ಚರಾಗಿ ಬಟ್ಟೆ ಹರ್ಕೊಂಡು ಬೆತ್ತಲಾಗಿ ತಿರುಗಿದ್ದೂ ಇದೆ, ಅಲ್ಲಿಯವರೆಗೂ ತಮಾಷೆ ಮಾಡುತ್ತಿದ್ದ ರೋಹನ್ ಒಂದೊಂದೇ ವಿಷಯಗಳನ್ನು ಕೇಳುತ್ತಾ ಇದ್ದ ಹಾಗೆ ಹಿಂದಿದ್ದ ಗಂಭೀರತೆ ಅರ್ಥವಾಗಿ,

ಮೌನವಾಗಿ ಯೋಚಿಸುತ್ತಾ ಬರುತ್ತಿದ್ದ, ಎಂತಹ ಕಡೆ ಹೆಣ್ಣು ನೋಡಿದ್ದಾನೆ ನಮ್ಮಪ್ಪ, ಸರಿ ಮದ್ವೆ ಅದಮೇಲೆ ನಾವೇನ್ ಇಲ್ಲಾ ಇರ್ತೀವಿ, ಊರಲ್ಲಿ ತಾನೇ ಸೆಟಲ್ ಆಗೋದು, ಎಂದು ಸಮಾಧಾನ ಪಟ್ಟುಕೊಂಡು, ಹೆಜ್ಜೆ ಹಾಕಿದ ಮನೆ ಬಂತು,

ಇಬ್ಬರೂ ಮನೆ ಸೇರಿದರು. ಮಾರನೆಯ ದಿನ ಎದ್ದು ಖುಷಿಯಾಗಿ, ತನ್ನ ತೋಟ, ಊರು

ಎಲ್ಲವನ್ನೂ ಸುತ್ತಾಡುತ್ತಾ, ಸಂತೋಷವಾಗಿದ್ದ, ಎರಡು ದಿನಗಳು ಕಳೆದ ಮೇಲೆ ತಂದೆಯಿಂದ ಕರೆ ಬಂತು,

ಸಮಯ ಮಧ್ಯಾಹ್ನ: 12ರ ವೇಳೆ.

ಹಲೋ ಅಪ್ಪಾ....ನಿನ್ನ ಫೋನ್ ಗೆ ವೈಟ್ ಮಾಡ್ತಾ ಇದ್ದೆ, ಏನ್ ಅಂದ್ರು,? ಮದ್ವೆ ಎಲ್ಲಪ್ಪ? ಇಲ್ಲೋ? ನಮ್ಮೂರಲ್ಲೋ?

ಬಿಲ್ಲಿಂದ ಹೊರಟ ಬಾಣದಂತೆ ಬಂದ ಪ್ರಶ್ನೆಗಳಿಗೆ ಅವರ ಉತ್ತರ ಮೌನವಾಗಿತ್ತು.

ವೈ ಡ್ಯಾಡ್, ಏನೂ ಹೇಳ್ತಾ ಇಲ್ಲಾ? ಹೇಳಿ ಏನ್ ಅಂದ್ರು. ಬೇಜಾರ್ ಮಾಡ್ಕೋಬೇಡ ಕಣೋ, ಅವರಿಗೆ ಈ ಮದ್ವೆ ಇಷ್ಟ ಇಲ್ವಂತೆ. ಇದನ್ನು ಕೇಳುತ್ತಾ ಇದ್ದಂತೆ ಹೂವಂತೆ ಅರಳಿದ್ದ ಅವನ ಮುಖ ಬಾಡಿತು. ವಾಟ್, ಏನಪ್ಪಾ ಹೇಳ್ತಾ ಇದ್ದೀಯಾ ಅಷ್ಟೆಲ್ಲಾ ಚೆನ್ನಾಗಿ ಮಾತಾಡಿಸಿ, ಅವರಿಗೂ ನಮ್ಮ ಜೊತೆ ಸಂಬಂಧ ಮಾಡೋದು ಬಹಳ ಖುಷಿ ಇತ್ತಲ್ಲ.

ಹೌದು, ಕಣೋ, ನಾನು ಹೆಣ್ಣು ನೋಡಕ್ಕೆ ನನ್ನ ಮಗ ಬರ್ತಾನೆ ಅಂದಾಗಲೂ ಯಾವಾಗ ಬರ್ತಾರೆ, ಹೇಗೆ ಬರ್ತಾರೆ,

ಅಂತೆಲ್ಲಾ ಕೇಳ್ತಾ ಇದ್ರು, ಅವರಿಗೆ ಬಹಳ ಆಸಕ್ತಿ ಇತ್ತು, ಬೇಗಾ ಮದ್ವೆ ಆಗಿಲಿ ಅಂತಲೂ ಇದ್ರು, ಈಗ ನೋಡಿದ್ರೆ, ಹುಡುಗಿಯ ಸೋದರಮಾವ ಇದ್ದಾನೆ. ಅವನಿಗೆ ಕೊಡಬೇಕು ಅಂತ ಇದ್ದೀವಿ ಬೇಜಾರ್ ಮಾಡ್ಕೋಬೇಡಿ ಅಂತೇಳಿ ಹೆಚ್ಚೇನೂ ಮಾತಾಡದೆ ಫೋನ್ ಇಟ್ಟೆ ಬಿಟ್ರು, ನಾನೂ ಮತ್ತೆ ಕೇಳಿ ಸುಮ್ನೆ ಯಾಕೆ ಇಬ್ಬರಿಗೂ ಮುಜುಗರ ಅಂತ ಸುಮ್ನಾದೆ, ಆದರೆ ನನಗೆ ಗೊತ್ತಿರುವ ಪ್ರಕಾರ ಅವರ ಸೋದರಮಾವನಿಗೆ ಮದ್ವೆ ಆಗಿದೆ, ಇವರೇ ನೇರವಾಗಿ ಬೇಡ ಅಂದ್ರೆ ಯಾಕೆ ಏನು ಅಂತ ಕೇಳ್ತಾರೆ ಅಂತ ಹೀಗೆ ಸುಳ್ಳು ಹೇಳ್ತಾ ಇದ್ದಾರೆ ಅನ್ನಿಸುತ್ತೆ. ಅವನಲ್ಲಿ ಯಾವುದೇ ಮಾತುಗಳೇ ಇಲ್ಲದಿರುವುದರಿಂದ ಮೌನವಾಗಿತ್ತು ಅವನ ಮಾತು.. ಹಾಲೋ,ರೋಹನ್ ಹಾಲೋ, ಇದ್ದೀನಿ ಹೇಳಪ್ಪ ಎಂದ ಮೆಲ್ಲಗೆ.

ಲೋ ಬೇಜಾರ್ ಆಗ್ಬೇಡ ಕಣೋ, ಇದಕ್ಕಿಂತ ಒಳ್ಳೆಯ ಸುಂದರ ಹುಡುಗಿನ ನಾನ್ ನೋಡ್ತೀನಿ , ಏನ್ ಇವರೋಬ್ಬರೇನಾ ಹೆಣ್ಣು ಇಟ್ಟಿರೋದು, ನೀನ್ ನೊಂದ್ಕೋ ಬೇಡ, ಅಲ್ಲೇ ಒಂದು ನಾಲಕ್ಕು ದಿನ ಇದ್ದು ಬಾ ಊರಿಗೆ, ಹುಷಾರು ಕಣೋ, ಎಂದೇಳಿದವರಿಗೆ ಸರಿ ಪ ಎಂದೇಳಿ ಫೋನ್ ಇಟ್ಟು, ಕೋಣೆಯೊಳಗೆ ಹೋಗಿ, ಅಷ್ಟು ದೂರ ಉರಿಬಿಸಿಲಿನಲ್ಲಿ ನಡೆದುಕೊಂಡು ಹೋಗಿ ನೋಡಿದ್ದೀನಿ, ಅವರೂ ಚೆನ್ನಾಗಿ ಮಾತಾಡಿಸಿದ್ದಾರೆ, ಆದರೂ ಯಾಕೀ? ಬದಲಾವಣೆ?

ಬರೀ ಪ್ರಶ್ನೆಗಳೇ ಹುಟ್ಟುತ್ತಿತ್ತು, ಲೋಟಕ್ಕೆ ಮದ್ಯವನ್ನು ಹಾಕಿಕೊಂಡು ಕುಡಿದು ಮಲಗಿದ, ಇವರು ಕೊಟ್ಟೆ ಕೊಡುತ್ತಾರೆ, ಈ ಸಲ ನನ್ನ ಮದ್ವೆ ಆಗಿಯೇ ತೀರುತ್ತೆ ಎಂದು ಎಷ್ಟು ನಂಬಿದ್ದೆ, ಎಲ್ಲವೂ ನಿರಾಸೆಯಾಗಿಯೇ ಆಯಿತಲ್ಲ, ಎನ್ನುವ ಮಾತು ಮತ್ತೆ ಮತ್ತೆ ನೆನಯುತ್ತಾ ಇದ್ದ ಹಾಗೆ ಮನಸ್ಸು ರಣಗಂಗವಾಯಿತು. ಇರುಳಾಯಿತು, ಊಟವನ್ನೂ ಮಾಡಲಿಲ್ಲ, ಮದ್ಯದ ನಶೆಯಲ್ಲಿಯೇ ಮಲಗಿದ. ಮುಂಚಾನೆ ಆಯಿತು, ಎದ್ದು ಕುಳಿತ, ಊಟವಿಲ್ಲದೆ ಇದ್ದದ್ದು,

ಬಹಳ ಆಯಾಸವಾಗುತ್ತಿತ್ತು, ಚಂದ್ರು ಇಟ್ಟಿದ್ದ ನಾಲಕ್ಕು ಇಡ್ಲಿಯಲ್ಲಿ ಎರಡನ್ನು ತಿಂದು, ಮತ್ತೆ ಮದ್ಯವನ್ನು ಕುಡಿದು, ಕಿಟಕಿ ಪಕ್ಕ ಹಾಕಿದ್ದ ಖುರ್ಚಿಯಲ್ಲಿ ಕುಳಿತ.

ಸಮಯ: ಮಧ್ಯಾಹ್ನ ಒಂದು ಗಂಟೆ,

ಮದ್ಯದಲ್ಲಿ ಆ ಹೆಣ್ಣಿನ ತಂದೆಯ ಮೇಲೆ ಕೋಪ ನೆತ್ತಿಗೆ ಹತ್ತುತ್ತಿತ್ತು, ಅರ್ಧ ಬಾಟಲಿ ಕುಡಿದು, ಉಳಿದದನ್ನು ಜೇಬಿನಲ್ಲಿಟ್ಟುಕೊಂಡು, ಅವರನ್ನು ಮುಖಾಮುಖಿ ನೋಡಿ, ನನ್ನ ಯಾಕೆ ಬೇಡಾ ಅಂದಿದ್ದು,

ನನ್ನಲ್ಲಿ ಯಾವ ಕೊರತೆ ಇದೆ? ಹಣ ಅಂತಸ್ತಿನಲ್ಲಿ ನಾವೇನು ಕಡಿಮೆ ಇದ್ದೀವಿ ಎಂದು ಕೇಳಲೇ ಬೇಕು ಎಂದು ಹೊರಟೆ ಬಿಟ್ಟ, ಚಂದ್ರುವನ್ನೂ ಕರೆಯದೆ ಒಬ್ಬನೇ ಹೆಜ್ಜೆ ಹಾಕಿದ, ಮನೆ ಹತ್ರ ಬರುತ್ತಾ ಇದ್ದ ಹಾಗೆ ಉಳಿದಿದ್ದ ಬಾಟಲಿಯನ್ನು ಖಾಲಿ ಮಾಡಿ ಎಸೆದು ಅವರ ಮನೆಯ ಮುಂದೆ ನಿಂತು. ಯಾರೀ ಇದ್ದೀರಾ ಬನ್ರೀ ಹೊರಗೆ ದೊಡ್ಡ ಮನುಷ್ಯರೇ,

ಎಂದು ಜೋರಾಗಿ ಕೂಗಿದ. ಅವನ ಕಿರುಚಾಟ ಕೇಳಿ ಹೆಣ್ಣಿನ ಅಪ್ಪ ಹೊರ ಬಂದರು, ನೋಡಿ , ಇದು ಮರ್ಯಾದಸ್ತರು ಇರೋ ಜಾಗ ದಯವಿಟ್ಟು ಹೀಗೆ ಕುಡಿದು ಬಂದು ಗಲಾಟೆ ಮಾಡ್ಬೇಡಿ, ಏನ್ರೀ ನಮ್ನ ನೋಡಿದ್ರೆ ಮಾನ ಬಿಟ್ಟವರ ಹಾಗೆ ಕಾಣುತ್ತಾ? ನಮ್ಮ ಮನೆಯ ಕಾರ್ ಶೆಡ್’ಗಿಂತ ಚಿಕ್ಕದಾಗಿರೋ ನಿಮ್ಮ ಮನೆಗೆ ಹೆಣ್ಣು ನೋಡಕ್ಕೆ ಬಂದ್ನಲ್ಲ ನನ್ನ ಚಪ್ಪಲಿಯಲ್ಲಿ ಅದೂ ಕಿತ್ತು ಹೋದ ಚಪ್ಪಲಿಯಲ್ಲಿ ಹೊಡಿಬೇಕು. ಈಗ ಯಾಕೆ ನನ್ನ ಬೇಡ ಅಂದಿದ್ದು ನಿಜ ಹೇಳಿ?

ನಮ್ಮ ಸಂಬಂಧಿಕರೆ ಆದ ಸೋದರಮಾವ ತಮಗೆ ಹೆಣ್ಣು ಕೊಡಿ ಅಂದ್ರು ಅದಕ್ಕೆ.. ಹೇಯ್ ಸುಳ್ಳು ಹೇಳ್ಬೇಡ ದೊಡ್ಡ ಮನುಷ್ಯ ಅಂತಾನೂ ನೋಡಲ್ಲ, ಎಲ್ಲಿ ಯಾವನ್ ಅವನು ಅವನ ಮೂತಿ ನೋಡ್ಬೇಕು ಕರ್ಸು ಇಲ್ಲಿಗೆ ಈಗ?

ಈಗ ಅವರು ಊರಲ್ಲಿ ಇಲ್ಲಾ, ಬಂದ ಮೇಲೆ ಕರೆಸುವೆ ಆಗ ಬನ್ನಿ. ಹೇಯ್ ಏನೋ ನಿನ್ ಕರ್ಸೋದು, ಅಲ್ಲಿಯವರೆಗೂ ನಿನ್ನ ಮನೆಯ ಮುಂದೆಯೇ ಇರ್ತೀನಿ, ಅತರ ಮದ್ವೆ ಆಗುವ ಹಾಗೆ ಯಾವ ಸೋದರಮಾವ ಇಲ್ಲಾ , ಇರೋನಿಗೆ ಈಗಾಗಲೇ ಮದ್ವೆ ಆಗಿದೆ ಅಂತಾನೂ ನನಗೆ ಗೊತ್ತು, ಅದು ನಿಜಾನಾ ಸುಳ್ಳಾ ನನಗೆ ತಿಳಿಬೇಕು,

ಸುಳ್ಳು ಆದ್ರೆ ನಾನು ನಿನ್ನ ಪಾಲಿಗೆ ಬಹಳ ಕೆಟ್ಟವನು ಅಗ್ಬೇಕಾಗುತ್ತೆ. ಏನೇನ್ ಹೇಳಿದರೂ ರೋಹನ್ ಒಂದು ಇಂಚೂ ಅಲುಗಾಡಲಿಲ್ಲ, ನನಗೆ ನಿಜಾ ಗೊತ್ತಾಗಬೇಕು ಅಷ್ಟೇ ಎನ್ನುವುದನ್ನು ಬಿಟ್ಟರೆ ಬೇರೆ ಯಾವ ಮಾತೂ ಅವನಿಂದ ಬರುತ್ತಲೇ ಇರಲಿಲ್ಲಾ, ಸರಿ ಹೇಳ್ತೀನಿ ಬನ್ನಿ, ಹಿತ್ತಲಿನ ಕಡೆ ಹೋಗೋಣ, ಬೇಡಾ ಇಲ್ಲೇ ಹೇಳು,

ಬನ್ನಿ ದಯವಿಟ್ಟು ಇಲ್ಲಿ ಬೇಡ ಎಂದು, ಅವನ ಕೈ ಹಿಡಿದು ಮೇಲೆತ್ತಿ ಕರೆದುಕೊಂಡು ಹೋದರು.


ಹೇಳ್ರೀ ಏನ್ರೀ ಕಡಿಮೆ ಆಗಿದೆ ನನಗೆ,? ನಮಗೆ ಎಷ್ಟು ಕಡೆ ಮನೆ ಇದೆ ಅಂತ ಗೊತ್ತಾ ನಿಮಗೆ? ನಿಮಗಿಂತ ನಾವೇನ್ ಅಂತಸ್ತಿನಲ್ಲಿ ಕಡಿಮೆ ಹೇಳ್ರೀ? ಅದನ್ನೇ ಮತ್ತೆ ಮತ್ತೆ ಹೇಳುತ್ತಾ ಇದ್ದ, ಅವರಿಂದ ತಡೆಯಲಾಗದೆ. ಹಣ ಇದ್ದ ಮಾತ್ರವೇ ಹೋಗೋ ಉಸಿರನ್ನ ನಿಲ್ಲಿಸಕ್ಕೆ ಆಗುತ್ತಾ? ಏನ್ ಹೇಳ್ತಾ ಇದ್ದೀರಾ?. ನಾನು ನೇರವಾಗಿ ವಿಷಯಕ್ಕೆ ಬರ್ತೀನಿ, ಇನ್ನು ಕೆಲವೇ ತಿಂಗಳಲ್ಲಿ ಸಾಯುವವನಿಗೆ ಯಾವ ತಂದೆ ತಾನೇ ಹೆಣ್ಣು ಕೊಡುತ್ತಾರೆ ಹೇಳಿ? ಹಣ ಅಸ್ತಿ ಇಟ್ಕೊಂಡ್ ಏನ್ ಮಾಡೋದು ಗಂಡಾನೆ ಇಲ್ಲ ಅಂದ ಮೇಲೆ?. ನಿರೀಕ್ಷೆಯೇ ಮಾಡಿರದ ಅಂತಹ ಮಾತುಗಳನ್ನು ಕೇಳಿ ಅವನ ಅರ್ಧ ನಶೆ ಇಳಿಯಿತು, ಸುಧಾರಿಸಿಕೊಂಡು. ವಾಟ್ ಯು ಮೀನ್?

ಏನು ನಾನ್ ಸಾಯ್ತೀನಾ? ಏನೇನೋ ಹೇಳಬೇಡಿ ಕಾರಣ ಕೊಡಲೇ ಬೇಕು ಅಂತ, ಬನ್ನಿ ಈಗಲೇ ನೀವ್ ಹೇಳುವ ಆಸ್ಪತ್ರೆಗೆ ಹೋಗೋಣ, ಟೆಸ್ಟ್ ಮಾಡಿಸೋಣ ನನಗೆ ಸಾಯುವಂತಹ ಯಾವ ದೊಡ್ಡ ರೋಗವೂ ಇಲ್ಲ ಅಂತ ನಿರೂಪಿಸುತ್ತೇನೆ,

ಸಾಯುವುದಕ್ಕೆ ರೋಗ ಬರಲೇ ಬೇಕು ಅಂತ ಏನಿಲ್ಲಾ...

**************

(ಮುಂದುವರಿಯುವುದು................)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.