ಮಳೆಯಲಿ ಜೊತೆಯಲಿ

ಅವತ್ತು ಆಫೀಸ್ ಮುಗ್ಸಿ, ಒಂದೇಸಮನೆ ಸುರೀತೀರೋ ಮಳೆಗೆ ಶಾಪ ಹಾಕ್ತಾ, ಒಳಗೊಳಗೇ ಖುಷಿಪಡ್ತಾ ಎಟಿಎಂ ಕಡೆ ಹೊರಟೆ... ಒಂದು ಕಡೆ ಚಂಡಿ ಮಳೆ ಮತ್ತೊಂದ್ ಕಡೆ ಫುಲ್ ಸ್ಪೀಡ್ ಆಗಿ ಬರ್ತಿರೋ ವೆಹಿಕಲ್ಸ್. ನಿಜ ಹೇಳ್ಬೇಕಂದ್ರೆ, ಮೊದ್ಲಿಂದಾನು ನಂಗೆ ರೋಡ್ ಕ್ರಾಸ್ ಮಾಡೋದು ಅಂದ್ರೆ ಏನೋ ಭಯ. ಹಾಗೋ ಹೀಗೋ ಒಂದು ರೋಡ್ ಕ್ರಾಸ್ ಮಾಡಿ ಡಿವೈಡರ್ ಮೇಲೆ ನಿಂತೆ. ಆದ್ರೆ ಇನ್ನೊಂದು ಬದಿಗೆ ಹೋಗಕ್ಕೆ ಆಗ್ತಾನೆ ಇಲ್ಲ, ಸ್ವಲ್ಪನೂ ಪುರುಸೊತ್ತು ಇಲ್ದಿರೋ ಹಾಗೆ ಗಾಡಿಗಳು ಬರ್ತಾನೆ ಇದ್ವು. ಅಷ್ಟುದ್ದ ರೋಡ್ಅಲ್ಲಿ ನಾನು ಒಬ್ಳೇ ಡಿವೈಡರ್ ಮೇಲೆ ನಿಂತಿದ್ದರಿಂದ್ಲೋ ಏನೋ ಎಲ್ಲರೂ ನನ್ನೇ ನೋಡ್ತಿದ್ದಾರೇನೋ ಅನ್ನಿಸ್ತಿತ್ತು. ಅಷ್ಟ್ರಲ್ಲಿ ಯಾರೋ ಬಂದು ಪಕ್ಕ ನಿಂತ ಹಾಗಾಯ್ತು, ತಿರುಗಿ ನೋಡಿದ್ರೆ ಅವನು!

ಕೊಡೆನು ಹಿಡ್ಕೊಳ್ದೇ ಹಾಗೆ ನಿಂತಿದ್ದ ಆ ಹುಡ್ಗ. ಅವನ ಕೂದಲ ತುದಿಯಿಂದ ಜಿನುಗುತ್ತಾ ಸಾಗಿ, ಕಣ್ಣ ರೆಪ್ಪೆಯಲ್ಲಿ ಸಾಲುಗಟ್ಟಿದ್ದ ಮಳೆಹನಿಗಳು, ಕುರುಚಲು ಗಡ್ಡ.. ಸೀರೀಯಸ್ ಲುಕ್.. ಎಲ್ಲೋ ನೋಡಿದೀನಿ ಅನ್ನಿಸಿದ್ದಕ್ಕೋ ಏನೋ, ಸ್ವಲ್ಪ ಜಾಸ್ತಿನೇ ಹೊತ್ತು ನಾನು ಅವನನ್ನ ನೋಡಿದ್ದೆ! ಅವನು ನನ್ನೇ ದಿಟ್ಟಿಸಿ ನೋಡಿದ್ದ!! ತಕ್ಷಣ ರೋಡ್ ಕಡೆಗೆ ಕಣ್ಣು ಹಾಯಿಸಿ, ಸುಮ್ಮನೆ ನಿಂತೆ. ಒಂದು ಕ್ಷಣ ನನ್ನ ತಲೇಲಿ ಏನೇನೋ ಓಡಕ್ಕೆ ಶುರುವಾಯ್ತು... ಈಗ ಅವನು ರೋಡ್ ಕ್ರಾಸ್ ಮಾಡಿ ನಂಗೆ ಮಾಡಕ್ಕಾಗ್ಲಿಲ್ಲ ಅಂದ್ರೆ ಮರ್ಯಾದೆ ಹೋಗ್‌ಬಿಡತ್ತೆ, ಆಗ ಅವ್ನು ನನ್ನ ಎಂಥ ಚೈಲ್ಡ್ ಇವ್ಳು ಅನ್ಕೋಬಹುದು... ಹೀಗೆ ಏನೇನೋ...

ಅಷ್ಟ್ರಲ್ಲಿ ಅವ್ನು ರೋಡ್ಗೆ ಇಳಿದೆಬಿಟ್ಟ, ಗಾಡಿಗೆ ಅಡ್ಡಲಾಗಿ ಕೈ ತೋರ್ಸಿ ನನ್ನ ಕಡೆಗೆ ತಿರುಗಿ ನೋಡಿದ, ನಾನು ಅವನ ಹಿಂದೇನೆ ರೋಡ್ ಕ್ರಾಸ್ ಮಾಡ್ದೆ. ನಂಗೆ ಫರ್ಸ್ಟ್ ಟೈಮ್ ನನ್ನ ಫ್ಯೂಚರ್ ಹುಡ್ಗ ಹೇಗಿರ್ಬೇಕು ಅಂತ ಒಂದು ಕ್ಲಿಯರ್ ಇಮೇಜ್ ಸಿಕ್ಕಿದ್ ಫೀಲ್. ರೋಡ್ ಕ್ರಾಸ್ ಮಾಡಿ, ನಾನು ಸೀದಾ ಎಟಿಎಂ ಒಳಗೆ ಹೋದೆ. ಅವ್ನನ್ನ ಮತ್ತೆ ನೋಡೋ ಧೈರ್ಯ ಬರ್ಲಿಲ್ಲ. ನನ್ನ ಎದೆಬಡಿತ ನನ್ನ ಪಕ್ಕದವ್ರಿಗೂ ಕೇಳೊವಷ್ಟು ಜೋರಾಗಿತ್ತು...

ಸ್ವಲ್ಪ ಸುಧಾರಿಸ್ಕೊಂಡು, ದುಡ್ಡು ಡ್ರಾ ಮಾಡಿ ಹಿಂದೆ ತಿರುಗಿದ್ರೆ ಅದೇ ಹುಡುಗ ಬಾಗಿಲಲ್ಲಿ ನಿಂತಿದಾನೆ. ಆಗ್ಲೇ ಸೈಡಿಂದ ನೋಡಿದ್ದೆ ಅವ್ನನ್ನ, ಈಗ ಅವನ ಮುಖ ಸರಿಯಾಗಿ ಕಂಡಿತ್ತು. ತೀಕ್ಷ್ಣವಾದ ಕಣ್ಣು, ಕುತೂಹಲಭರಿತ ನೋಟ, ಒಂದು ಪ್ರಬುದ್ಧ ಮಗು ಅನ್ಸಿದ್ದ ಅವನು. ಎಷ್ಟೇ ಚೆನಾಗಿರೋ ಹುಡುಗ್ರನ್ನ ನೋಡಿದ್ರೂ.... ಇಲ್ಲ, ಇವ್ನಲ್ಲ ಅನ್ಸೋದು. ಆದ್ರೆ ಈ ಸಿಂಪಲ್ ಹುಡ್ಗ ಒಮ್ಮೆಲೆ ಏನೋ ಜಾದೂ ಮಾಡ್ಬಿಟ್ಟಿದ್ದ. ಏನಿದು ಏನೇನೋ ಹುಚ್ಚುಚ್ಚಾಗಿ ಅನ್ನಿಸ್ತಿದ್ಯಲ್ಲ, ಇದೆಲ್ಲ ತುಂಬಾ ಅತಿಯಾಯ್ತು, ಫಿಲ್ಮೀ ಆಗಿ ಆಡೋದ್ ನಿಲ್ಸು ಅಂತ ನನಗೆ ನಾನೇ ಬೈಕೊಂಡು ತುಂಬಾ ನಾರ್ಮಲ್ ಆಗಿ ನನ್ಪಾಡಿಗ್ ನಾನು ಹೊರಗ್ ಬಂದ್ಬಿಟ್ಟೆ...

ಸ್ವಲ್ಪ ದೂರ ಬಂದಿದ್ದೆ, ಸ್ಪೀಡ್ ಆಗಿ ಒಂದು ಓಪನ್ ಜೀಪ್ ಬಂದು ಪಕ್ಕ ನಿಲ್ತು. ನೋಡಿದ್ರೆ ಅದೇ ಹುಡ್ಗ, ಅವನ ಕೈಲಿ ನನ್ ಆಫೀಸ್ ಐಡಿ. ರೋಡ್ ಕ್ರಾಸ್ ಮಾಡೋವಾಗ ಐಡಿ ಕಾರ್ಡ್ ಕೈ ಜಾರಿ ಬಿದ್ದಿದೆ, ಅದು ಈ ಹೀರೋಗೆ ಸಿಕ್ಕಿದೆ. ಓ ಮೈ ಗಾಡ್ ಇಡೀ ಮಡಿಕೇರಿಲಿ ಎಷ್ಟು ಜನ ಇದಾರೆ, ಎಷ್ಟೊಂದ್ ಜನ ಆ ರೋಡ್ ಅಲ್ಲಿ ಓಡಾಡ್ತಾರೆ, ನನ್ ಐಡಿ ಕಾರ್ಡ್ ಇವ್ನಿಗೆ ಸಿಗ್ಬೇಕಾ... ದೇವ್ರೇ ನೀನು ಕೂಡ ತುಂಬಾನೇ ಫಿಲ್ಮೀ.

ಅವನು ಮತ್ತೆ ನನ್ನ ಮುಂದೆ ನಿಂತಿದ್ದ . ಮತ್ತೆ ಕೈ ಕಾಲು ನಡುಕ, ಡವ ಡವ ಶುರು... ಮಾತೆ ಬರ್ತಿಲ್ಲ...

ಅವನು ಐಡಿ ಕೊಟ್ಟು.... ಮೀರಾ, ನಾನು ಧ್ರುವ ಅಂದ. ಧ್ರುವ, ಒಳ್ಳೆ ಹೆಸ್ರು ಅಂತ ಹೇಳ್ಬೇಕು ಅನ್ನಿಸಿದ್ರೂ, ಥ್ಯಾಂಕ್ಸ್ ಹೇಳಿ ಸುಮ್ಮನಾದೆ. ಅಷ್ಟರಲ್ಲಿ ಅವನು, ನಿಮ್ಮನ್ನ ಮ್ಯೂಸಿಕ್ ಸ್ಕೂಲ್ ಹತ್ರ ನೋಡ್ತಿರ್ತೀನಿ ಅಂದಾಗ ನಂಗೆ ಸಣ್ಣದಾಗಿ 'ಹಾರ್ಟ್' ಅಟ್ಯಾಕ್ ಆದಂಥ ಅನುಭವ. ಮೂರೊತ್ತು ಬಾಯಿ ಬಡ್ಕೋಳೊ ನಾನು ಅವತ್ತು ಮಾತ್ರ ಮ್ಯೂಟ್ ಮಹಾಲಕ್ಷ್ಮಿ ಆಗಿಬಿಟ್ಟಿದ್ದೆ. ಅವನ ಮಾತು ಮುಂದುವರೆದೇ ಇತ್ತು, ಅದೇ ಸೀರಿಯಸ್ ಲುಕ್ ಜೊತೆಗೆ! ನಮ್ ಲೈಫ್ಅಲ್ಲಿ ತುಂಬಾ ಜನ ಬರ್ತಾರೆ, ಹೋಗ್ತಾರೆ. ಕೆಲವ್ರು ಬರೋದಕ್ಕೆ ಕಾರಣ ಗೊತ್ತಿರಲ್ಲ ನಾವೇ ಹುಡ್ಕೋಬೇಕಾಗತ್ತೆ. ನೀವು ನಂಗೆ ಸಿಕ್ಕಿರೋದಕ್ಕೂ ಏನೋ ಕಾರಣ ಇದೆ ಅನ್ನಿಸ್ತಿದೆ, ಅದಿಕ್ಕೆ ಉತ್ತರ ಸಿಕ್ಕಿದ್ ದಿನ ಮತ್ತೆ ಸಿಗ್ತೀನಿ. ನಿಮಗೂ ಹಾಗೆ ಅನ್ನಿಸಿದ್ರೆ, ನೀವು ಉತ್ತರ ಹುಡ್ಕಕ್ಕೆ ಟ್ರೈ ಮಾಡಿ, ನಿಮ್ ಹೆಸ್ರು ಚೆಂದ ಇದೆ, ನೀವು ಕೂಡ... ಬೈ.

ನೋಡ್ತಾ ನೋಡ್ತಾನೇ ಜೀಪ್ ಮರೆಯಾಗಿಹೋಯ್ತು, ಯಾವುದೇ ಬಿಲ್ದಪ್'ಗಳ ಹಂಗಿಲ್ಲದ, ಆ ಸೀದಾ ಸಾದಾ ಹುಡ್ಗ ಮಾತ್ರ ಹಾಗೆ ಉಳಿದುಬಿಟ್ಟಿದ್ದ ...

ಧ್ರುವ, ನನ್ನ ಕಾಡ್ತಾ ಇರೋ ಆ ಹುಡ್ಗ. ಬೇರೆ ಹುಡ್ಗರ ಥರ ಫೇಸ್ಬುಕ್ ಅಲ್ಲಿದಿರಾ, ವ್ಹಾಟ್ಸ್ಯಾಪ್ ನಂಬರ್ ಕೊಡಿ ಏನು ಕೇಳ್ದೆ, ಅನ್ನಿಸಿದ್ದನ್ನ ನೇರವಾಗಿ ಹೇಳಿದ. ಅವತ್ತು ನಂಗೆ ಏನು ಮಾತೆ ಹೊರಡಲಿಲ್ಲ, ಅವನು ಮಾತ್ರ ನನ್ನ ಕಣ್ಣಲ್ಲೇ ಕಣ್ಣಿರಿಸಿ, ಮಾತಲ್ಲೇ ಮನಸ್ಸು ಮುಟ್ಟಿದ್ದ. ಯಾವುದೇ ಬಿಲ್ದಪ್ ಗಳ ಹಂಗಿಲ್ಲದ ಸೀದಾ ಸಾದಾ ಹುಡ್ಗ.

ಅವನು ನಿಜವಾಗ್ಲೂ ಇದ್ದಾನೋ ಅಥ್ವಾ ಇದು ಬರೀ ನನ್ನ ಕಲ್ಪನೇನೋ ಗೊತ್ತಿಲ್ಲ...?!! ಆದ್ರೆ ಒಂದಲ್ಲ ಒಂದಿನ ಅವನು ಬರ್ತಾನೆ, ಆಗ ಈ ನನ್ನ ಹುಚ್ಚು ಕಲ್ಪನೆಗಳಿಗೂ ಜೀವ ಬರತ್ತೆ!

ಅಲ್ಲಿಯವರೆಗೂ ಕಾಯ್ತಾನೇ ಇರ್ತೀನಿ......

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.