ಆತ್ಮ (ಭಾಗ 2)

ನೋಡಿ ಸುತ್ತಿಬಳಸಿ ಮಾತಾಡಬೇಡಿ ಅದೇನ್ ಅಂತ ನೇರವಾಗಿ ವಿಷಯಕ್ಕೆ ಬನ್ನಿ... ಸರಿ ನಂಗೂ ಅದೇ ಇಷ್ಟ,

ನಮ್ಮ ಊರಿನ ಜನರು ತಮ್ಮತಮ್ಮ ಶುಭಕಾರ್ಯಗಳನ್ನು ಮಾಡುವ ಮುನ್ನ, ನಮ್ಮೂರಿನ ಒಳ್ಳೆಯದಕ್ಕಾಗಿ ಹಲವಾರು ವರ್ಷಗಳ ಕಾಲ ತಪ್ಪಿಸಿದ್ದು ಕ್ಷುದ್ರ ದೇವತೆಗಳ ಆರಾಧನೆ ಮಾಡುವ ಮಾಂತ್ರಿಕ ಯಲ್ಲಾಲ ಅನ್ನೋರ ಬಳಿಯೇ ನಾವು ಕೇಳಿ ನಡೆಯೋದು, ನಮ್ಮ ಪಾಲಿಗೆ ಅವರೇ ದೇವರು, ಹಿಂದೆ ನಡೆದಿದ್ದು ಮುಂದೆ ನಡೆಯೋದು ಎಲ್ಲವನ್ನೂ ನಿಕರವಾಗಿ ಹೇಳುತ್ತಾರೆ, ಅವರ ಮಾತನ್ನು ಮೀರಿ ನಾವು ಎಂದೆಂದಿಗೂ ನಡೆಯುವವರಲ್ಲಾ, ನೀವು ಬಂದು ಹೋದ ಮೇಲೆ ನಿಮ್ಮ ಫೋಟೋವನ್ನು ಅವರಿಗೆ ತೋರಿಸಿದೆ, ಅವರು ಕೈಗೆ ತಗೊಂಡ ಮರುಕ್ಷಣ ದೂರಕ್ಕೆ ಎಸೆದು ಬಿಟ್ಟರು, ನಿನ್ನ ಮಗಳಿಗೆ ಅಲ್ಪಆಯುಸ್ಸಿ ಯಾಕೆ ಬೇಕು? ಇವನ ಜೀವ ಇನ್ನೂ ಕೆಲವೇ ತಿಂಗಳಷ್ಟೇ ಇರೋದು ಈಗಾಗಲೇ ಸಾವಿನ ದಿನಗಳ ಎಣಿಕೆ ಶುರುವಾಗಿದೆ...

ಎಂದರು ನನಗೂ ಇದನ್ನು ಕೇಳಿ ಸಿಡಿಲು ಬಡಿದಂತೆ ಆಯ್ತು, ಅವರ ಮಾತಿನ ಮೇಲೆ ನಂಬಿಕೆ ಇಟ್ಟು ವಾಪಾಸ್ ಬಂದೆ,

ಆಮೇಲೆ ನಿಮ್ಮ ತಂದೆಗೆ ನಾಜೂಕಾಗಿ ಹೇಳಿದೆ ಬೇಡ ಎಂದು, ಆದರೂ ಎಲ್ಲವನ್ನೂ ಹೇಳುವ ಹಾಗೆ ನೀವು ಮಾಡಿದ್ರಿ, ಅದಕ್ಕೆ ಬೇರೆ ದಾರಿ ಕಾಣದೆ ಈ ಸತ್ಯವನ್ನು ಹೇಳಿದೆ. ಅದನ್ನು ಕೇಳಿ ಮತ್ತಷ್ಟು ಸಿಡಿಮಿಡಿಗೊಂಡ ರೋಹನ್.

ಏನ್ ಕಾಗಜ್ಜಿ ಗುಬಚ್ಚಿ ಕಥೆ ಹೇಳ್ತಾ ಇದ್ದೀರಾ?

ನೋಡಿ ನೀವು ಪ್ಯಾಟೆ ಮಂದಿ, ಹೆಚ್ಚಿಗೆ ಓದಿರೋರು ನಿಮಗೆ ಇದರಲ್ಲಿ ನಂಬಿಕೆ ಇಲ್ಲದಿರಬಹುದು, ಆದರೆ ನಮಗಿದೆ, ಒಂದು ವೇಳೆ ಮೂರು ತಿಂಗಳು ಕಳೆದೂ ನೀವು ಬದುಕಿದ್ದರೆ, ಬನ್ನಿ ನಾನೇ ಮುಂದೆ ನಿಂತು ನಿಮ್ಮ ಕಾಲ್ ತೊಳೆದು ಕನ್ಯಾದಾನ ಮಾಡಿಕೊಡ್ತೀನಿ. ಎನ್ನುವ ಅವರ ಮುಖದಲ್ಲಿ ದೃಡತೆ ಇತ್ತು, ಅವನಲ್ಲಿ ಆ ಸವಾಲ್ ಎಸೆದಂತಹ ಮಾತಿಗೆ, ಮರುಮಾತು ಇಲ್ಲದೆ, ಕೇಳಲು ಮನದೊಳಗೆ ಯಾವ ಪ್ರಶ್ನೆಗಳೂ ಉಳಿದಿಲ್ಲಾ, ಏನನ್ನೂ ಹೇಳದೆ ಅವನು ಅಲ್ಲಿಂದ ಹೊರಟ. ದಾರಿಯುದ್ದಕ್ಕೂ ಅವನ ತಲೆಯಲ್ಲಿ ಆ ಮಾತುಗಳೇ, ಧ್ವನಿಸುರುಳಿಯಂತೆ, ಮತ್ತೆ ಮತ್ತೆ ಮರುಕಳಿಸುತ್ತಿತ್ತು, ತಲೆ ಸಿಡಿಯುವಷ್ಟು. ತನ್ನ ಹೆಚ್ಚೆಯ ಸದ್ದು ಮಾತ್ರವೇ ಕೇಳುವ ನೀರವ ಪ್ರದೇಶ ಎದುರಾಯಿತು. ಹೋಗುವಾಗ ತಲೆಯೊಳಗೆ ನಾನಾ ಗೊಂದಲಗಳು ತುಂಬಿ ಹೋಗಿತ್ತು, ಮನಸ್ಸು ಆಕ್ರೋಶದಿಂದ ಸದ್ದುಗಳ ಸಂತೆಯಂತೆ ಇತ್ತು, ಹಾಗಾಗಿ ಯಾವುದೂ ಗಮನಕ್ಕೆ ಬಂದಿರಲಿಲ್ಲಾ, ನಶೆಯೂ ಏರಿತ್ತು, ಈಗ ಪ್ರಶ್ನೆಗಳೊಂದಿಗೆ ನಶೆಯೂ ಇಳಿದಿದೆ, ಸುತ್ತ ಮುತ್ತ ನೋಡಿದರೆ ದೃಷ್ಟಿ ಏಟುಕುವ ದೂರದವರೆಗೂ ಯಾರೂ ಇಲ್ಲಾ, ನಡೆಗಿಯನ್ನು ವೇಗವಾಗಿಸಿದ, ಬಲಗಡೆ ಒಂದಕ್ಕೊಂದು ಅಂಟಿಕೊಂಡ ಹಾಗೆ ಬೆಳೆದು ನಿಂತಿದ್ದ ಮರಗಳನ್ನು ನೋಡುತ್ತಾ ಬಂದ, ಯಾವುದೋ ಅಸ್ಪಷ್ಟ ಕಪ್ಪಾದ ಆಕೃತಿ ಮರದ ಎಲೆಗಳ ಹಿಂದೆ ರೆಂಬೆಯ ಮೇಲೆ ಕುಳಿತಿರುವ ಹಾಗೆ ಕಾಣಿಸಿತಿತ್ತು, ಮತ್ತಷ್ಟು ಹೆಜ್ಜೆಯನ್ನು ಬಿರುಸಾಗಿಸಿ ನಡೆದ, ಆ ಆಕೃತಿ ಮರದಿಂದ ಮರಕ್ಕೆ ಜಿಗಿಯುತ್ತಾ ಬರುತ್ತಿತ್ತು, ಎಲೆಗಳು ಎಬ್ಬಿಸುವ ಆ ಸದ್ದುಗಳೂ ಆ ನಿಶ್ಯಬ್ದ ಪ್ರದೇಶದಲ್ಲಿ ಬಾರಿ ಸದ್ದಿನಂತೆ ಕೇಳಿಸುತ್ತಿತ್ತು, ಗಮನವನ್ನು ಅತ್ತ ಹರಿಸದೆ, ಮುಂದೆ ನೋಡುತ್ತಾ ನಡೆಯುತ್ತಿದ್ದ, ಹಿಂದೆ ಯಾರದೋ ಹೆಜ್ಜೆಯ ಸದ್ದು ಕೇಳತೊಡಗಿತು, ಹಿಂತಿರುಗಿ ನೋಡೋಣವೆಂದರೆ, ಚಂದ್ರು ಯಾವುದೇ ಕಾರಣಕ್ಕೂ ಯಾವ ಸದ್ದಿಗೂ ಹಿಂದೆ ತಿರುಗಿ ನೋಡಬಾರದು ಎಂದು ಎಚ್ಚರಿಸಿದ್ದು ನೆನಪಾಯಿತು, ನಡೆಯುತ್ತಾ ಇದ್ದ ಹಾಗೆ ಆ ಹೆಜ್ಜೆಯ ಸದ್ದು ತನ್ನ ಹತ್ತಿರ ಹತ್ತಿರ ಬರುವ ಹಾಗೆ ಸದ್ದು ಜೋರಾಯಿತು, ಇನ್ನೇನೋ ಯಾರೋ ತನ್ನ ಹಿಂದೆ ಬಂದೇ ಬಿಟ್ಟರು ಎನ್ನುವಂತೆ ಕೇಳಿಸಿದ ಸದ್ದಿಗೆ ಹೆದರಿ ಹಿಂತಿರುಗಿ ನೋಡಿದ, ಯಾರೂ ಇಲ್ಲಾ...........

ಆ ಪ್ರದೇಶದ ನಿಜವಾದ ಭಯಾನಕತೆಯ ಅನುಭವ ಆಗಲೇ ಅವನಿಗೆ ತಿಳಿದಿದ್ದು, ಚಂದ್ರು ಹೇಳಿದ್ದು ಸತ್ಯ ಇಲ್ಲೇನೋ ಅಮಾನುಷ ಶಕ್ತಿಗಳು ಇರುವ ಕುರುಹುಗಳ ಸೂಚನೆಗೆ ಸಿಗುತ್ತಿದೆ ಅನ್ನಿಸಿತು, ತಡಮಾಡದೆ, ತನ್ನ ಮನೆಯತ್ತ ಓಡತೊಡಗಿದ, ಹೇಗೋ ಎದುರಿಸಿರು ಬಿಡುತ್ತಾ ಬಂದು ಕೋಣೆಯನ್ನು ಸೇರಿದ...

ರಾತ್ರಿ ಎಂಟಾಯಿತು, ಚಂದ್ರು ಊಟವನ್ನು ತಂದ, ಯಾಕೋ ರೋಹನ್ ಮೊದಲಿನಂತೆ ಉಲ್ಲಾಸದಿಂದ ಇಲ್ಲದೆ, ಮೌನವಾಗಿರುವುದು ಅವನ ಗಮನಕ್ಕೆ ಬಂದಿತು, ಅವನನ್ನು ಮಾತನಾಡಿಸುವ ಯತ್ನ ಮಾಡಲು ಮುಂದಾದ ಆದರೆ, ರೋಹನ್ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಅದಾಗಲೇ ಕುಡಿದು ಕುಳಿತಿದ್ದ ಹಾಗಾಗಿ ಬೇಡ ನಾಳೆ ಮಾತನಾಡಿಸೋಣ ಎಂದು ಬಾಗಿಲು ಹಾಕಿಕೊಂಡ ಹೋದ,

ಊಟ ಮಾಡಲು ಮುಂದಾದನಾದರೂ ಊಟ ಸೇರುತ್ತಿರಲಿಲ್ಲ ತಟ್ಟೆಯಲ್ಲಿಯೇ ಕೈತೊಳೆದು, ಮದ್ಯವನ್ನು ಕಂಠಪೂರ್ತಿ ಕುಡಿದ ಮಲಗಿದ, ಸಮಯ ಮಧ್ಯ ರಾತ್ರಿ ಎರಡು, ಕೋಣೆಯೊಳಗೆ ಗೋಡೆಗಡಿಯಾರದ ಸದ್ದನ್ನು ಬಿಟ್ಟು ಬೇರೇನೂ ಕೇಳಿಸದಂತ ನೀರವ, ಬಾಗಿಲು ತೆರೆದುಕೊಂಡಿತು, ದೂರದಲ್ಲಿ ಯಾವುದೋ ಒಂದು ಆಕೃತಿ ಅವನನ್ನೇ ಕೈ ಬೀಸಿ ಕರೆಯುತ್ತಿತ್ತು.. ಮುಖವೆಲ್ಲಾ ಬೆವತ ಹಾಗೆ ಆ ಕೆಟ್ಟ ಕನಸಿಗೆ ಹೆದರಿ ಎದ್ದು ಕುಳಿತ ರೋಹನ್. ಒಮ್ಮೆ ಬಾಗಿಲಿನ ಕಡೆ ಕಣ್ಣಾಡಿಸಿದ, ಹಾಕಿದ ಬಾಗಿಲು ಹಾಕಿದ ಹಾಗೆಯೇ ಇತ್ತು. ಹೇಗೋ ಆ ರಾತ್ರಿಯನ್ನು ಕಳೆದ, ಬೆಳಕಾಯಿತು. ತನ್ನ ನಿತ್ಯ ಕರ್ಮಗಳನ್ನು ಮುಗಿಸಿ, ಉಪಹಾರ ಸೇವಿಸಿ. ಚಂದ್ರುವನ್ನು ಕರೆದುಕೊಂಡು, ಹೆಣ್ಣಿನ ಮನೆ ಕಡೆ ಹೊರಟ.


ಹಾಗೆ ಸ್ವಲ್ಪ ಮುಂದೆ ಹೋಗುತ್ತಾ ಇದ್ದ ಹಾಗೆ ಚಂದ್ರುವನ್ನು ಮಾತಿಗೆಳೆದ, ಚಂದ್ರು ನೀವು ‘ಯಲ್ಲಾಲ’ ಅನ್ನೋ ಹೆಸರು ಕೇಳಿದ್ದೀರಾ?

ಕೇಳಿದ್ದೀನಿ ಸಾರ್, ಅವರು ಇಲ್ಲಿ ದೊಡ್ಡ ಮಾಂತ್ರಿಕ, ಇಲ್ಲಿನ ಜನರು ತಮ್ಮಲ್ಲಿ ಯಾವುದೇ ಕಷ್ಟ-ಸುಖವೆಂದರೂ ಅವರ ಬಳಿಗೆ ಹೋಗೆ ಹೋಗುತ್ತಾರೆ, ನನ್ನ ಸ್ನೇಹಿತ ಒಬ್ಬ ಇದೆ ಊರಿನವನು ಅವನು ಹೇಳಿ ಅವರ ಬಗ್ಗೆ ಗೊತ್ತು ನನಗೆ. ಯಾಕೆ ಸಾರ್ ಅವರ ಬಗ್ಗೆ ಕೇಳ್ತಾ ಇದ್ದೀರಾ?

ಅದೇ, ನನ್ನ ಮದ್ವೆ ಯಾಕೋ ಮುಂದೂಡ್ತಾ ಇದೆ ಅದಕ್ಕೆ ಏನಾದರೂ ಪರಿಹಾರ ಕೇಳೋಣ ಅಂತ.

ಅವನ ಆ ಮಾತುಗಳಲ್ಲೇ ಈ ಸಂಬಂಧವೂ ಮುರಿದು ಬಿದ್ದಿದೆ, ಎಂದು ಅರ್ಥೈಸಿಕೊಂಡ ಕೇಳಿ ನೋಯಿಸುವುದು ಬೇಡವೆಂದು, ಸುಮ್ಮನಾದ ಚಂದ್ರು. ಕೇಳಿ ಸಾರ್, ಖಂಡಿತ ಪರಿಹಾರ ಕೊಡ್ತಾರೆ ಅವರ ಬಳಿ ಹೋಗಿ ಎಷ್ಟೋ ಜನರಿಗೆ ಒಳ್ಳೆಯದು ಆಗಿದೆ ಅಂತ ಕೇಳಿದ್ದೀನಿ.

ಹೀಗೆ ಹೆಜ್ಜೆ ಹಾಕುತ್ತಾ ಬರುತ್ತಾ ಇದ್ದ ಹಾಗೆ. ಹೆಣ್ಣಿನ ಮನೆ ಬಂದಿತು,

ಮನೆಯ ಬಾಗಿಲ ಬಳಿ ನಿಂತು. ಸಾರ್, ಸಾರ್ ಎಂದು ಚಂದ್ರು ಕೂಗಿದರು, ಹೆಣ್ಣಿನ ತಂದೆ ಹೊರ ಬಂದು ಇಬ್ಬರನ್ನೂ ನೋಡಿ ಮತ್ತೇನಾದ್ರೂ ಜಗಳ ಆಡಕ್ಕೆ ಬಂದ್ರೆನೋ ಎಂದು ಯೋಚಿಸುವಾಗಲೇ, ಅವರ ಹತ್ತಿರ ಬಂದ ರೋಹನ್, ಸಾರ್ ನಾವು ಯಾವುದೇ ಜಗಳವಾಡಲು ಬಂದಿಲ್ಲಾ ನಿಮ್ಮ ಹತ್ರ ಸ್ವಲ್ಪ ಮಾತಾಡಬೇಕು ಸ್ವಲ್ಪ ಬನ್ನಿ ಎಂದು ಹಿತ್ತಲಿನತ್ತ ಕರೆದೊಯ್ದ.

ಸಾರ್, ಆ ಭವಿಷ್ಯಕಾರರನ್ನು ನಾನು ನೋಡಬೇಕು, ಅವರು ಹೇಗೆ ಹೇಳಿದ್ರು ಮತ್ತು ಇದಕ್ಕೇನಾದರೂ ಪರಿಹಾರ ಇದೆಯೇ ಎಂದು ಕೇಳೋಣ ಅಂತ ಇದ್ದೀನಿ, ದಯವಿಟ್ಟು..ಹೇಳಿ ಪ್ಲೀಸ್ ಎಂದು ವಿನಂತಿಸಿಕೊಂಡ. ಒಂದು ಜೀವವನ್ನು ಉಳಿಸುವುದು ಪುಣ್ಯದ ಕೆಲಸವೇ, ಎಂದು ಮನದಲ್ಲೇ ಯೋಚಿಸಿ. ಸರಿ ಬನ್ನಿ, ಆದ್ರೆ ನಾನು ಅಲ್ಲೇ ಇರಲ್ಲ ನಿಮಗೆ ಅವರನ್ನು ಭೇಟಿ ಮಾಡಿಸಿ ನಾ ಹೊರಟು ಬಿಡುತ್ತೇನೆ. ಎಂದು ಕರೆದುಕೊಂಡು ಹೊರಟರು,

ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಒಂದೆರೆಡು ಎಕರೆ ಪ್ರದೇಶದಲ್ಲಿದ್ದ ಒಂದೇ ಒಂದು ಮನೆ, ಮನೆಯ ಸುತ್ತಲೂ ಕುಳಿತುಕೊಳ್ಳುವುದಕ್ಕೆ ಜಾಗವಿದೆ, ಒಳ್ಳೆಯ ಜಾತಿ ಮರಗಳನ್ನು ಅಲೆತ್ತರಕ್ಕೆ ಬೆಳಸಿದ್ದಾರೆ.

ಚಂದ್ರುವನ್ನು ಹೊರಗೆಯೇ ನಿಲ್ಲಿಸಿ, ರೋಹನ ಜೊತೆ ಒಳ ಹೋದರು.

ಆದರೆ ಸೀದಾ ಯಲ್ಲಾಲರ ಬಳಿ ಕರೆದು ಹೋಗದೆ ಮನೆಯ ವರಾಂಡದಲ್ಲಿಯೇ ನಿಲ್ಲಿಸಿ, ಅವರು ಪೂಜೆಮನೆಗೆ ಹೋಗಿ.

ಕಳೆದ ಸಲ ಫೋಟೋದಲ್ಲಿ ತೋರಿಸಿದವರು ನಿಮ್ಮನ್ನು ಕಾಣಬೇಕು ಎಂದು ಬಂದಿದ್ದಾರೆ. ನೀವು ಅಪ್ಪಣೆ ಕೊಟ್ಟರೆ ಅವರನ್ನು ಕಳುಹಿಸುತ್ತೇನೆ. ಅವನನ್ನು ಕಳುಹಿಸು ಎನ್ನುವ ಹಾಗೆ ಕೈ ಸನ್ನೆ ಮಾಡಿದರು ಯಲ್ಲಾಲ. ಅವರು ಹೊರ ಬಂದು ರೋಹನ್ ಗೆ ಒಳಹೋಗಲು ಹೇಳಿದರು. ಅವರಿಗೆ ಕೈ ಮುಗಿದು ಥ್ಯಾಂಕ್ಸ್ ಹೇಳಿ. ಅವರ ಕೋಣೆಯತ್ತ ಹೆಜ್ಜೆ ಹಾಕಿದ. ಹಿಂದೆಂದೂ ಮಾಂತ್ರಿಕರ ಮನೆಯನ್ನು ನೋಡಿರದ ಅವನಿಗೆ ಅಲ್ಲಿನ ವಾತಾವರಣ ಹೊಸದಾಗಿತ್ತು, ಅಲ್ಲಲ್ಲಿ ಇಟ್ಟ ತಲೆಬುರುಡೆ, ಮಾಟಮಾಡಿಸಲು ಬಳಸುವ ಸಣ್ಣಸಣ್ಣ ಕಪ್ಪು ಗೊಂಬೆಗಳು. ಎಲ್ಲವನ್ನೂ ನೋಡುತ್ತಾ ಅವರ ಕೋಣೆಯೊಳಗೆ ಬಂದು ನಿಂತ. ಹೋಮ ಮಾಡುವ ಕಟ್ಟೆಯೊಳಗೆ ಉರಿಯುವ ಬೆಂಕಿಯ ಜ್ವಾಲೆಯಲ್ಲಿ ಅವರ ಮುಖ ಕಾಣಿಸುತ್ತಿತ್ತು, ಅದೇ ಮಾಂತ್ರಿಕನ ವೇಷಭೂಷಣ, ದೊಡ್ಡದಾದ ಕುಂಕುಮ ಇರುವ ಹಣೆ, ಕೊರಳಿಗೆ ನಾನಾ ಮಣಿಸರಗಳು, ಕೆಂಪು ಅಂಗಿ, ಬಿಳಿ ಗಡ್ಡ, ಎಲ್ಲವನ್ನು ಗಮನಿಸುತ್ತಾ ಇರುವಾಗ ಅವರ ಕಣ್ಣು ತೆರೆಯಿತು, ಕೆಳಗೆ ಕೂರು ಎಂದು ಕಣ್ಣಲ್ಲಿಯೇ ಹೇಳಿದರು. ಹೇಳು ಏನಾಗಬೇಕು ನನ್ನಿಂದ? ಎಂದು ಕೇಳುವ ಅವರ ಗಡಸು ಧ್ವನಿ. ನೀವು ನನಗೆ ಇನ್ನು ಕೆಲವೇ ದಿನಗಳಲ್ಲಿ ಸಾವು ಬರುತ್ತೆ ಅಂತ ಹೇಳಿದರಂತೆ? ಹೌದೂ......... ಅದು ನಿಮಗೆ ಹೇಗೆ ತಿಳೀತು? ಅಂತ ಹೇಳ್ತೀರಾ?

ಅದೆಲ್ಲಾ ಹೇಳಕ್ಕೆ ಆಗಲ್ಲ ಸತ್ಯ ಅನ್ನೋದು ಕೆಲವರಿಗೆ ಅಮೃತ ಕೆಲವರಿಗೆ ವಿಷ. ನೀವು ಸುಳ್ಳು ಹೇಳ್ತಾ ಇದ್ದೀರಾ ಅಂತ ನನಗನ್ನಿಸುತ್ತೆ. ಅನ್ಕೋ.....ಎಂದರು ಉದಾಸಿನವಾಗಿ. ಅಂದುಕೊಳ್ಳುವುದೇನು ನಿಜಾನೆ. ಸುಳ್ಳು ಹೇಳಿ ಕಾಸು ಮಾಡಬೇಕು ಅಂತ ಇದ್ದೀರಾ? ಎಷ್ಟು ಬೇಕು ಹೇಳಿ ಕೊಡ್ತೀನಿ ಅವರ ಮುಂದೆ ನೀವು ಹೇಳಿದ್ದು ಸುಳ್ಳು ಅಂತ ಹೇಳಿ...

ಹೇಯ್ ಯಾರ ಮುಂದೆ ಮಾತಾಡ್ತಾ ಇದ್ದೀಯಾ ಗೊತ್ತಾ. ಸುಮ್ನೆ ಹೋಗು..... ಎಂದು ಗಂಭೀರವಾದ ದನಿಯಲ್ಲಿ ಹೇಳಿದರು. ಮತ್ತೆ ಹೇಳಿ ನಾನು ಸಾಯೋದು ನಿಜವೇನಾ?. ಹೌದು, ನಿನ್ನ ಮನಸ್ಸೇ ಕೊಡುತ್ತೆ ನೀನು ಸಾಯುವ ಸೂಚನೆ,

ನಿನ್ನ ಸಾವು ನಿನಗೆ ಕಾಣುತ್ತೆ ಹೋಗು.. ಮುಟ್ಟ ಬಾರದಿತ್ತು ಮುಟ್ಟಿ ಬಿಟ್ಟೆ!! ಇನ್ನು ಅದರ ಆಟ ಆರಂಭ!!! ಇಷ್ಟು ದಿನಗಳ ಕಾಲ ಹಿಂದೆ ಇದ್ದ ಸಾವು, ನಿನ್ನ ಮುಂದೆ ಬರುತ್ತೆ!!!

ಒಂದು ವೇಳೆ ನೀವು ಹೇಳುವ ತಿಂಗಳೊಳಗೆ ನಾನು ಸಾಯದಿದ್ದರೆ?

ನೀನು ತೋರಿಸೋ ಬೀದಿಯಲ್ಲಿ ಬೆತ್ತಲೆಯಾಗಿ ನಿಲ್ತೀನಿ, ನನ್ನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚು ನಗ್ತಾ ಸಾಯಿತೀನಿ. ನಾನೇ ಬರೆದು ಕೊಡ್ತೀನಿ. ಅವನಿಗೆ ಆ ಮಾತುಗಳಿಗೆ ಏನ್ ಹೇಳಬೇಕು ಎಂದು ತಿಳಿಯಲಿಲ್ಲಾ, ಎದ್ದು ಹೊರ ಹೋಗಿ, ಚಂದ್ರುವನ್ನು ಕರೆದುಕೊಂಡು ನಡೆದ, ಸಪ್ಪೆಯಾಗಿ ಮುಖವನ್ನು ಇಟ್ಟುಕೊಂಡು ಬರುತ್ತಿದ್ದ ರೋಹನನ್ನು ನೋಡಿ, ಯಾಕೆ ಸಾರ್ ಒಂತರ ಇದ್ದೀರಾ?.

ನಿಜವನ್ನು ಹೇಳಿದ್ರೆ ಅಪ್ಪನಿಗೆ ತಿಳಿಸುತ್ತಾರೆ ಬೇಡಾ ಎಂದು ಮನದಲ್ಲೇ ಯೋಚಿಸಿ. ಏನಿಲ್ಲಾ ಮದ್ವೆ ಇನ್ನೂ ಕೆಲವು ವರ್ಷ ಮುಂದೋಗುತ್ತೆ ಅಂದ್ರು, ಅದೇ ಯೋಚನೆ ಮಾಡ್ತಾ ಬರ್ತಾ ಇದ್ದೀನಿ. ಚಿಂತೆ ಬಿಡಿ ಸಾರ್ ಖಂಡಿತ ಏನಾದರೂ ಪರಿಹಾರ ಇದ್ದೆ ಇರುತ್ತೆ. ಇಬ್ಬರೂ ಮನೆ ಸೇರಿದರು ರೋಹನ್ ತನ್ನ ಕೋಣೆಯ ಸೇರಿಕೊಂಡ. ದಿನಗಳು ಕಳೆಯುತ್ತಿತ್ತು, ಅವನು ಸಂಪೂರ್ಣ ಕುಗ್ಗಿಹೋದ. ಮದುವೆಗಾಗಿ ನೋಡುವ ಸಂಬಂಧ ಮತ್ತೆ ಮತ್ತೆ ಮುರಿದು ಬೀಳುವುದು. ತನ್ನ ಸಾವು ಹತ್ತಿರವಾಗಿದೆ ಎಂದು ಹೇಳಿದ್ದು ಎಲ್ಲವನ್ನೂ ಅವನನ್ನು ಇಲ್ಲದಂತೆ ಹಿಂಸಿಸುತ್ತಿತ್ತು. ತಂದೆ ಊರಿನತ್ತ ಬಾ ಅಂದರೂ ಅವನು ಕೇಳುತ್ತಿರಲಿಲ್ಲ. ದಿನವೂ ಒಬ್ಬನೇ ಕೋಣೆಯೊಳಗೆ ಕುಡಿಯುತ್ತಾ ಕಾಲಕಳೆಯುತ್ತಿದ್ದ. ಯಾವುದೋ ಒಂದು ಕಪ್ಪನೆಯ ಆಕೃತಿ ಆಗಾಗ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಎರಡು ತಿಂಗಳು ಉರುಳಿತು.

ತನ್ನ ಬದುಕು ಹೀಗಾಯಿತಲ್ಲ, ಮದ್ವೆ ಮನೆ ಮಕ್ಕಳು ಸಂಸಾರ ಅಂತ ಎಲ್ಲಾ ಕನಸುಗಳು ಮಣ್ಣಾಯಿತಲ್ಲ ಎನ್ನುವ ನೋವು ಅವನ ತಲೆಯನ್ನು ಕಡೆಯುತ್ತಿತ್ತು... ಹೀಗೆ ದಿನಗಳು ಉರುಳಿತು,

ಒಬ್ಬನೇ ಕೋಣೆಯೊಳಗೆ ಸೇರಿಕೊಂಡು ಕುಡಿದು ಕುಡಿದು ಒಂದು ರೀತಿಯ ಖಿನ್ನತೆಗೆ ಒಳಗಾದ, ಕನಸಿನಲ್ಲಿ ಕಾಣಿಸಿಕೊಳ್ಳುವ ಕಪ್ಪಾದ ಆಕೃತಿಯ ಮುಖವನ್ನು ಕಾಣಲು ಯತ್ನಿಸಿದ ಆದರೆ ಅದು ಅಸ್ಪಷ್ಟವಾಗಿತ್ತು. ನನ್ನ ಹಾಗೆ ಮದ್ವೆ ಆಗದೆ ಇದ್ದರೂ ಜೀವನವನ್ನು ಸಂತೋಷವಾಗಿ ಅನುಭವಿಸುವ ಆನಂದವಾಗಿರುವ ವಿಮಲ್, ಎರಡು ಮುದ್ದಾದ ಮಕ್ಕಳು,ಲವ್ ಮಾಡಿ ಕೈ ಹಿಡಿದ ಮಡದಿ, ಇನೇನು ಬೇಡಾ ಎನ್ನುವಂತಹ ಜಗನ್ನ ಸುಂದರ ಸಂಸಾರದ ಚಿತ್ರಣ ಕಣ್ಣ ಮುಂದೆ ಹಾದು ಹೋಗುತ್ತಿತ್ತು, ಅವರೊಂದಿಗೆ ತನ್ನನ್ನು ಹೋಲಿಸಿಕೊಂಡ, ಹಣ ಅಂತಸ್ತು ಎಲ್ಲವೂ ಇದೆ, ಆದ್ರೆ ನನ್ನೀ ಬದುಕು ಮಾತ್ರವೇಕೆ ಹೀಗಾಯಿತು? ಬರೀ ಖಾಲಿ ಪುಟವವಾಗಿಯೇ ಉಳಿದಿದೆ,

ಮತ್ತೆ ಮತ್ತೆ ಜಗನ್ನ ಸುಂದರ ಸಂಸಾರದಂತೆ ನನ್ನದು ಯಾಕಿಲ್ಲಾ? ಎನ್ನುವ ಪ್ರಶ್ನೆಯೇ ಅಲೆಯನ್ನು ಬಂದು ಬುದ್ಧಿಗೆ ಬಡಿಯುತ್ತಿತ್ತು,

ಏನೋ ನೆನಪಿಸಿಕೊಂಡವನಂತೆ ಚಕ್ಕನೆ ಎದ್ದು ಕುಳಿತ ಸಮಯ ರಾತ್ರಿ ಹನ್ನೆರೆಡೂವರೆ. ತನ್ನ ಬ್ಯಾಗ್ ನಲ್ಲಿದ್ದ ಮಡಿಲು ಗಣಕವನ್ನು ತೆಗೆದು ಆನ್ ಮಾಡಿ. ಅದರಲ್ಲಿದ್ದ ವಿಮಲ್, ಹಾಗೂ ಎರಡು ಮಕ್ಕಳೊಂದಿಗೆ ಜಗನ್ ಅವನ ಹೆಂಡತಿ ಇರುವ ಚಿತ್ರವನ್ನು ಪೆನ್ ಡ್ರೈವ್ ತೆಗೆದು ಅದರೊಳಗೆ ಇಳಿಸಿಕೊಂಡ. ಬೆಳಗ್ಗೆದ್ದು ಚಂದ್ರುವಿಗೆ ಕರೆಮಾಡಿ ಬರಹೇಳಿದ, ಹೇಳಿ ಸಾರ್ ಎಂದು ಎದುರು ನಿಂತವನ ಕೈಗೆ. ತಗೊಳ್ಳಿ ಇದರಲ್ಲಿ ಎರಡು ಫೋಟೋ ಇದೆ ಅದನ್ನ ಪ್ರಿಂಟ್ ಹಾಕೊಂಡು ತನ್ನಿ, ಎನ್ನುತ್ತಾ ಪೆನ್’ಡ್ರೈವ್ ಕೈಗಿಟ್ಟ.

ಆಯಿತು ಸಾರ್, ಇಲ್ಲೆಲ್ಲೂ ಇಲ್ಲಾ ಸಿಟಿಗೆ ಹೋಗಬೇಕು, ನಾನು ಈಗಲೇ ಹೋಗಿ ತರುತ್ತೇನೆ, ಎಂದೇಳಿ ಬೈಕ್ ತೆಗೆದುಕೊಂಡು ಹೊರಟ.

ಮೂರು ಗಂಟೆಗಳ ನಂತರ ಚಂದ್ರು ಬಂದು ಎರಡು ಫೋಟೋಗಳನ್ನೂ ಕೊಟ್ಟ. ಅದನ್ನು ತೆಗೆದುಕೊಂಡು, ಸರಿ ಬನ್ನಿ ಸ್ವಲ್ಪ ಕೆಲಸ ಇದೆ ಹೋಗಿ ಬರೋಣ ಎಂದು ಕರೆದುಕೊಂಡು ಹೊರಟ. ಎಲ್ಲಿಗೆ ಎಂದು ಕೇಳುವುದು ಅಪಶಕುನವಾಗುತ್ತದೆ ಎಂದು ಕೇಳದೆಯೇ, ಜೊತೆ ಸಾಗಿದ ಚಂದ್ರು.

ಇಬ್ಬರೂ ಯಲ್ಲಾಲನ ಮನೆಯ ಮುಂದೆ ಬಂದು ನಿಂತರು, ನೀವು ಇಲ್ಲೇ ಇರಿ ಎನ್ನುತ್ತಾ ರೋಹನ್ ಮಾತ್ರ ಒಳಹೋದ. ಹೋದವನು ಅರ್ಧಗಂಟೆ ಆದರೂ ಬರಲಿಲ್ಲಾ, ಅದೂ ಅಲ್ಲದೆ ಸ್ನೇಹಿತರ ಚಿತ್ರಗಳನ್ನು ಯಾಕೆ ಈ ಮಾಂತ್ರಿಕನ ಬಳಿತೆಗೆದುಕೊಂಡು ಹೋದರು. ಎಂದು ಯೋಚಿಸುತ್ತಾ, ಚಂದ್ರು ನಿಂತಿದ್ದರು, ಸರಿ ಮನೆಯ ಹಿಂದೆ ಸುತ್ತಾಡಿ ಬರೋಣ ಎಂದು ಒಂದೊಂದೇ ಹೆಜ್ಜೆ ಇಡುವಾಗ, ಹಿಂದೆ ಒಂದು ಕಿಟಕಿಯಲ್ಲಿನ ಸಣ್ಣ ಸಂದಿ ಕಂಡಿತು ಕುತೂಹಲ ತಡೆಯಲಾಗದೆ ಅದರಲ್ಲಿ ಮೆಲ್ಲನೆ ಒಂದು ಕಣ್ಣಿನಲ್ಲಿ ಇಣುಕಿನೋಡಿದರು. ಅಲ್ಲಿ, ಯಲ್ಲಾಲ, ಆಗದು ಎನ್ನುವ ಹಾಗೆ ತಲೆಯಾಡಿಸುತ್ತಾ ಇದ್ದರು. ರೋಹನ್ ಕೈ ಮುಗಿದು ಕೇಳಿಕೊಳ್ಳುತ್ತಿದ್ದ, ಮಾತುಗಳ ಸದ್ದು ಜೋರಾಗಿರದ ಕಾರಣ ಏನೂ ಕೇಳಿಸುತ್ತಾ ಇರಲಿಲ್ಲಾ. ರೋಹನ್ ಆ ಫೋಟೋಗಳನ್ನು ತೋರಿಸಿ ತೋರಿಸಿ ಏನೋ ಹೇಳುತ್ತಿದ್ದ. ಸಾಧ್ಯವಿಲ್ಲ ಎನ್ನುವ ಹಾಗೆ ಬಲವಾಗಿ ಕೈಯಾಡಿಸುತ್ತಾ ಇದ್ದರು, ಹೀಗೆ ಸಾಗಿದ ಇಬ್ಬರ ಮಾತುಕತೆ. ಕೊನೆಗೆ ಆ ಯಲ್ಲಾಲ ಒಪ್ಪಿದರು ಎನ್ನುವಂತೆ ಕಾಣುತ್ತದೇ ರೋಹನನ್ನು ಕೂರು ಎಂದು ಕೈ ತೋರಿಸಿದರು. ಅವನು ಕೈ ಮುಗಿಯುತ್ತಲೇ ಕೂತ. ಆ ಮಾಂತ್ರಿಕ ಎರಡು ಮಡಿಕೆಗಳನ್ನು ಮುಂದಿಟ್ಟು ಏನೋ ಹೇಳಿದರು. ರೋಹನ್ ಕೂಡಲೇ ತನ್ನ ಬಳಿ ಇದ್ದ ಎರಡು ಫೋಟೋವನ್ನು ಒಂದೊಂದರಲ್ಲಿ ಹಾಕಿದ. ಆದಾದ ಬಳಿಕ ಎರಡು ಹಣದ ಕಂತೆಗಳನ್ನು ಜೇಬಿನಿಂದ ತೆಗೆದು ಮಾಂತ್ರಿಕನ ಮುಂದಿಟ್ಟ. ಯಲ್ಲಾಲ, ಹೋಗು ಎಂದು ಕೈ ತೋರಿಸಿದ ಅವನು ಕೈ ಮುಗಿದು ಎದ್ದ. ಚಂದ್ರು ಅಲ್ಲಿಂದ ಓಡಿ ಬಂದು ಏನೂ ತಿಳಿಯದವಂತೆ ಮೊದಲು ನಿಂತಿದ್ದ ಜಾಗದಲ್ಲಿ ಬಂದು ನಿಂತುಕೊಂಡ.

ಎರಡು ನಿಮಿಷಗಳ ನಂತರ ಹೊರ ಬಂದ ರೋಹನ್ ಬನ್ನಿ ಹೋಗೋಣ ಎಂದೇಳಿ ಹೊರಟೆ ಬಿಟ್ಟ. ಅವನ ಜೊತೆಯೇ ಬರುತ್ತಿದ್ದಾಗ ಮೌನವಾಗಿದ್ದ ರೋಹನನ್ನು, ಕೇಳೋದೋ ಬೇಡವೋ ಎನ್ನುವ ಅನುಮಾನದಲ್ಲೇ ಕೇಳಿದ. ಯಾಕ್ ಸಾರ್ ಆ ಫೋಟೊಗಳನ್ನ ಇವರ ಹತ್ರ ತೋರಿಸಕ್ಕೆ ತಂದಿದ್ದು?. ಅದನ್ನು ಕೇಳುತ್ತಾ ಇದ್ದ ಹಾಗೆ ರೋಹನ್ ಸಿಡಿಮಿಡಿಗೊಂಡು.

ಅದೆಲ್ಲಾ ನಿಮಗೆ ಬೇಡದ ವಿಷಯ, ಎಂದ ಮುಖಕ್ಕೆ ಹೊಡೆದ ಹಾಗೆ.

sorry ಸಾರ್, ಎನ್ನುವ ಚಂದ್ರುವಿನ ಮುಖ ಹಿಂದೆಂದೂ ಹೀಗೆ ವರ್ತಿಸದ ಅವನ ವರ್ತನೆಯನ್ನು ಕಂಡು ಸಣ್ಣದಾಗಿತ್ತು.

ಒಂದು ವಾರದ ನಂತರ..

ರಾತ್ರಿ ಒಂದು ಗಂಟೆ... ಜಗನ್’ನೊಂದಿಗೆ ಮಲಗಿದ್ದ ವರ್ಷ ನಿದ್ದೆಗೆ ಜಾರಿದ್ದಳು, ಅವಳ ಕಿವಿಗೆ ಯಾರೋ ನೋವಿನಿಂದ ಒದ್ದಾಡುವ ದನಿ ಆಗೊಮ್ಮೆ ಹೀಗೊಮ್ಮೆ ಕೇಳಿಸುತ್ತಿತ್ತು........ನಿದ್ರೆಯ ನದಿಯೊಳಗೆ ಮುಳುಗಿರುವ ಅವಳನ್ನು ಅದು ಮುಟ್ಟದೆಯೇ ಕಿವಿಯನ್ನು ತಟ್ಟಿ ತಟ್ಟಿ ಎಬ್ಬಿಸುತ್ತಿತ್ತು........

************

(ಮುಂದುವರಿಯುವುದು....)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.