ಕಾರ್ಮೋಡ...ಬಿದಿರು ಬೆತ್ತದ ಆ ಪುಟ್ಟ ತೊಟ್ಟಿಲಲಿ ನಾ ಮೊದಲ ಮಗ್ಗಲು ಹೊರಳಿಸಿದಾಗ, ಆ ಪುಟ್ಟ ಮೊಣಕಾಲನ್ನ ನೆಲದಮೇಲೂರಿ ಮೊದಲು ಅಂಬೆಗಾಲಿಕ್ಕಿದಾಗ ನನ್ನ ಹೆತ್ತವಳು ಅದೆಷ್ಟು ಸಂತೋಷಪಟ್ಟಿರಬಹುದೇನೋ..??? ಜೀವನದ ಮಜಲುಗಳೇ ಹಾಗೆ, ಮುದವನ್ನ ನೀಡುತ್ತೆ. ಬಾಲ್ಯ, ಹರೆಯ, ಯೌವನ ಇನ್ನು ಮುಂದೆ ಗ್ರಹಸ್ಥ, ಆಯಸ್ಸು ಉಳಿದಿದ್ರೆ ವ್ರಧ್ಧಾಪ್ಯ. ಜೀವನದ ಪ್ರತಿ ಕ್ಷಣವೂ ನಮಗೆ ಎಷ್ಟು ಅಪರಿಚಿತವೋ ಅಷ್ಟೇ ಅನಿವಾರ್ಯ ಕೂಡ. ಬಾಲ್ಯದ ಮುಗ್ಧತೆಯ ಎಸಳು ಕಳಚಿ ಹರೆಯದ ತಿಳಿ ಬಿಸಿಲಿಗೆ ಮೈಯೊಡ್ಡಿದಾಗ, ಬೀಗಿದ್ದೆ. ಜಗತ್ತನ್ನ ನೋಡುವ ದೃಷ್ಟಿ ಬದಲಾಗಿತ್ತು. ಗಂಡು ಹೆಣ್ಣಿನ ಭೇದವನ್ನ ಅರಿತಿದ್ದೆ. ಶಾಲೆಯಲ್ಲಿನ ಸುಂದರ ಹುಡುಗಿಯೋಬ್ಬಳನ್ನು ನನ್ನ ಭವಿಷ್ಯದ ಪ್ರೇಯಸಿಯಾಗಿ ಕಲ್ಪಿಸಿದ್ದೆ. ಆದರೆ ಮನಸ್ಸು ಮಾಗಿರಲಿಲ್ಲ. ಹುಡುಗಾಟದ ಬುದ್ಧಿ ಬಿಟ್ಟುಹೋಗಲು ತಯಾರಿರಲಿಲ್ಲ, ಫ್ರೌಢತೆಯ ಛಾಯೆ ಆವರಿಸಲು ಸ್ಥಳಾವಕಾಶವಿರಲಿಲ್ಲ. ಬಾಲ್ಯದ ಮೈಗಳ್ಳತನ ಬಿಡುವ ಮನಸ್ಸಿರಲಿಲ್ಲ, ಹರೆಯದ ಜವಾಬ್ದಾರಿ ಹೊರುವ ಅನಿವಾರ್ಯತೆ ಇರಲಿಲ್ಲ. ಇವೆಲ್ಲರ ನಡುವೆ ಸಂಬಂಧಗಳ ಅರ್ಥಾನ್ವೇಷಣೆ. ಈ ಎಲ್ಲ ಗೊಂದಲಗಳ ಫಲಿತಾಂಶವೇ ಯವೌನ.

ಸ್ಥೂಲ ಭವಿಷ್ಯದ ನೆರಳಿಗಾಗಿ ಹುಡುಕಾಟ, ಪ್ರೇಮ ಸಲ್ಲಾಪಗಳ ಹರಿದಾಟ, ವಕ್ತಿತ್ವ ರೂಪಣೆಗೆ ಪರೆದಾಟ, ಫಲಿತಾಂಶ !!!? ಕೊನೆಗೆ ದೇವರಾಟ. ಜೀವನಕ್ಕೆ ಆದರ್ಶಗಳ ಹಂಗಿಲ್ಲ, ಜವಾಬ್ದಾರಿಗಳ ಅಟ್ಟಣೆಯಿಲ್ಲ, ಗುರಿಯಂಬ ಮಹದಾಸೆಯಿಲ್ಲ. ಆದರೆ ಜೀವನ ಬಂಡಿ ನಿಂತಿಲ್ಲ. ಪಯಣ, ಪಯಣದಲ್ಲೊಂದು ಪಯಣ. ನನ್ನ ಜೀವನದ ೨೧ ನೇ ಮೈಲಿನಲ್ಲಿ ಆರಂಭವಾದ ಒಂದು ಸುಂದರ ಪಯಣದ ದುರಂತ ಕಥೆಯಿದು. ಪ್ರೀತಿ, ಸ್ನೇಹ ಸಂಬಂಧಗಳಲ್ಲಿ ಎಲ್ಲಿಲ್ಲದ ಆಸಕ್ತಿ, ಆದರೆ ಅದರ ಮೌಲ್ಯಗಳನ್ನ ತಿಳಿಯುವಷ್ಟು ಪುರುಸೊತ್ತಿಲ್ಲ. ಈ ವಯಸ್ಸೇ ಹಾಗೆ!! ಎಷ್ಟು ಬೇಗ ಹೊಸ ಸಂಭಂದಗಳಲ್ಲಿ ತೊಡಗಿಕೊಳ್ಳುತ್ತೆವೆಯೋ ಅಷ್ಟೇ ಬೇಗೆ ಅಲ್ಲಿಂದ ಜಾರಿ ಹೊರಬಂದಿರುತ್ತಿವಿ. s m s ನಲ್ಲಿ ಪ್ರೇಮ ನಿವೇದನೆ, ಮೊಬೈಲ್ ಸಂಭಾಷಣೆಯಲ್ಲಿ ಸ್ವಲ್ಪ ಪ್ರಣಯದಾಟ, ಆಮೇಲೆ ಮೇಲ್ ಬಾಕ್ಸ್ ನಲ್ಲಿ break up ಸಂದೇಶ. ಒಂದು ಸಂಬಂಧದ ಋಣ ತೀರಿತು, ಈಗ ಇನ್ನೊಂದರ ನಿರೀಕ್ಷೆಯಲ್ಲಿ. ಇದು ನಿತ್ಯ ಜೀವನ ಕ್ರಮ. ಈ ಕ್ರಮಕ್ಕೆ ನಾನೇನೂ ಹೊರತಾಗಿರಲಿಲ್ಲ. ಆದರೆ ಅಷ್ಟೊಂದು ಅನುರಕ್ತನೂ ಆಗಿರಲಿಲ್ಲ.

ನನಗೊಂದು ಕಿರಿದಾಸೆಯಿತ್ತು. ಒಬ್ಬ ಹುಡುಗ ಹುಡುಗಿ ಎಂದಿಗೂ ಕೇವಲ ಸ್ನೇಹಿತರಾಗಿರಲಾರರು ಎಂಬ ಮಾತೊಂದಿದೆ. ಈ ಮಾತನ್ನ ಸಾಧ್ಯ ಎಂದು ಸಾಧಿಸುವ ಕಿರುದಾಸೆ; ಪ್ರಯತ್ನವೂ ನಡೆದಿದೆ, ಆದರೆ ಮೊದಲ ಪ್ರಯತ್ನದಲ್ಲೇ ಗೆದ್ದು ಸೋತಿದ್ದೆ . ನನ್ನ ಬಾಲ್ಯದ ಗೆಳತಿಯ ಜೊತೆಗಿದ್ದ ಸ್ನೇಹ ಅರಿವಿಗೆ ಬಾರದಂತೆ ಪ್ರೇಮವಾಗಿ ಬದಲಾಗಿತ್ತು. ಒಂದು ಸುಂದರ ಹುಡುಗಿಯ, ಅದರಲ್ಲೂ ಬಾಲ್ಯದ ಗೆಳತಿಯ ಪ್ರೇಮ ನಿವೇದನೆಯ ಎದುರಿಗೆ ನನ್ನ ಆದರ್ಶಗಳೆಲ್ಲ ಗಾಳಿಯಲ್ಲಿ ತೂರಿಹೋಗಿದ್ದವು. ಮೊದಲ ಪ್ರೇಮಾನುಭವ, ತುಂಬಾ ಸೊಗಸಾಗಿತ್ತು. ಎಷ್ಟೆಂದರೂ ಮೊದಲ ಪ್ರೀತಿಯಲ್ಲವೇ!..?? ಯಾವುದೋ ಒಂದು ಬೆಳದಿಂಗಳ ರಾತ್ರಿಯ ತಿಳಿ ಬೆಳಕನ್ನ ಹೀರಿ, ನಾನು ಚಂದ್ರನಿಗೇನು ಕಮ್ಮಿ ಎಂಬಂತೆ ಮಿರುಗುತ್ತಿದ್ದ ಅವಳ ಗಲ್ಲಕ್ಕೆ ಕದ್ದು ಕೊಟ್ಟ ಒಂದು ಮುತ್ತು, ನನ್ನ ಸನಿಹವನ್ನ ಬಯಸಿ ನನ್ನಿನಂದ ದೂರ ಓಡುವಾಗ ಅವಳ ಕೂದಲನ್ನ ಹಿಡಿದೆಳೆದು, ನನ್ನ ತಕ್ಕೆಯಲಿ ಬಂಧಿಸಿದ ಭಾವ, ಎಲ್ಲವೂ ಬರಿ ನೆನೆಪು ಈಗ. ಬೆಳದಿಂಗಳಿಲ್ಲದ ರಾತ್ರಿಯಲ್ಲಿ ಬಾವಿಯಲ್ಲಿ ಚಂದ್ರನ ಬಿಂಬವ ಕಂಡ ಭಾಸ.

ಗೆಳತಿ ಪ್ರೇಯಸಿಯಾಗಿ ಬಂದಾಗ ಪರಿಶುದ್ಧ ಸ್ನೇಹವೆಂಬ ಮಾತು ರುಚಿಸುವುದಿಲ್ಲ. ಪ್ರಣಯಕ್ಕೆ ಪ್ರೇಯಸಿ, ಆದರೆ ಗೆಳೆತನಕ್ಕೆ ಗೆಳತಿಯಿರಲಿಲ್ಲ. ಸಂಬಂಧಗಳ ಜಟಿಲತೆಯನ್ನ ಅರಿಯದ ಮನ ಹೊಸ ಸ್ನೇಹಾನ್ವೇಷಣೆಯ ಹೊಸ್ತಿಲಲ್ಲಿತ್ತು. ಹೊಸ್ತಿಲು ದಾಟುವ ಮೊದಲೇ ಒಂದು ಅಪರಿಚಿತ ವ್ಯಕ್ತಿತ್ವ ನನ್ನನ್ನ ಗೆಳೆಯಾ ಎಂದು ಕರೆದಿತ್ತು. ಸ್ನೇಹವೇ ಹಾಗಲ್ಲವೇ?? ಅಪರಿಚಿತರು ಪರಿಚಿತರಾಗುವ ಮಧುರ ಭಾಂದವ್ಯ. ಸ್ನೇಹಕ್ಕೆ ನಿರೀಕ್ಷೆಗಳ ನೆಪವಿಲ್ಲ, ಆದರೆ ನೀರಿಕ್ಷೆಗಳಿಲ್ಲದೆ ಪ್ರೇಮಕ್ಕೆ ಅಸ್ತಿತ್ವವೇ ಇಲ್ಲ. ಇವೆಲ್ಲದರ ನಡುವೆ ಎರಡು ವರ್ಷಗಳಲ್ಲಿ ನನ್ನ ಸ್ನೇಹ ಸಂಬಂಧ ಎಷ್ಟು ಮಾಗಿತ್ತೋ ಅಷ್ಟೇ ಅಸ್ತಿರತೆ ಪ್ರೇಮದಲ್ಲಿ. ನನ್ನ ಜೀವನದ ಬೆಳದಿಂಗಳು ಕಾರ್ಮೋಡದ ಸೆಲೆಗೆ ಸಿಲಿಕಿತ್ತು. ಬಹುಶಃ ಅವಳಿಗೆ ಚಂದ್ರನ ಬೆಳದಿಂಗಳಿಗಿಂತ ಬೇರೊಂದು ತಾರೆಯ ಹೊಳಪು ಹಿತವೆನಿಸಿರಬೇಕು!!!? ಆದರೆ ಸ್ನೇಹಿತೆಯ ಸ್ನೇಹದ ಅಮಲು ಎಲ್ಲವನ್ನ ಮರಿಸಿಬಿಡುತ್ತಿತ್ತು. ಜೀವಕ್ಕೆ ಜೀವಕೊಡುವ ಗೆಳತಿ, ಎಂದಾದರು ಸೋತು ನಾನತ್ತರೆ ಅವಳ ಕಣ್ಣಲ್ಲಿ ನೀರು, ಗೆದ್ದು ಸಂಭ್ರಮಿಸಿದರೆ ಮತ್ತೆ ಅವಳ ಕಣ್ಣಲ್ಲೇ ನೀರು. ನನ್ನ ಜೀವನದಲ್ಲಿ ಹೆಣ್ಣನ್ನ ಮೊದಲು ನೋಡಿದಾಗ ತಾಯಿಯಾಗಿ ಕಂಡಳು, ನಂತರ ಪ್ರೇಯಸಿಯಾಗಿ ಕಂಡಳು, ಈಗ ಒಬ್ಬ ಅಪ್ರತಿಮ ಗೆಳತಿಯಾಗಿ ಕಾಣುತ್ತಿದ್ದಾಳೆ.

ಜೀವನ ಸುಖವಾಗಿದ್ದಾಗ ಬಿಸಿಲ ಬೇಗೆಯೂ ಬೆಳದಿಂಗಳ ಮುದ ನೀಡುತ್ತೆ. ನನ್ನ ಜೀವನ ಸುಖವಾಗಿತ್ತು. ಆದರೆ ಬಯಸಿದ್ದೆಲ್ಲ ದೂರ ಹೋಗಲಾರದಷ್ಟು ಹತ್ತಿರದಲ್ಲಿದೆ ಎನ್ನುವಷ್ಟರಲ್ಲಿ ದೂರ ಸರಿದಾಗಿತ್ತು. ದೂರದಲ್ಲೆಲ್ಲೋ ಗುಡುಗಿನ ಸದ್ದು ಕಾರ್ಮೋಡಗಳ ಬರುವಿಕೆಯನ್ನ ಸಾರಿ ಹೇಳುವಂತಿತ್ತು. ನನ್ನ ಮೊಬೈಲ್ inbox ನಲ್ಲಿನ ಸಂದೇಶವನ್ನ ಬೆಳಗಿನಿಂದ ಸಾವಿರಬಾರಿ ಓದಿದ್ದೆ. ಆದರೂ ಅದನ್ನು ನನ್ನ ಬಳಿ ಸ್ವಿಕರಿಸಲಾಗುತ್ತಿರಲಿಲ್ಲ. ನನ್ನ ಪ್ರೇಯಸಿಯ ಕೊನೆಯ ಸಂದೇಶವದು. ಅಳಲು ಮನಸ್ಸಿರಲಿಲ್ಲ, ಆದರೆ ಕಣ್ಣಿರು ಕೇಳುತ್ತಿರಲಿಲ್ಲ. ಆಗ ನೆನಪಾದದ್ದು ನನ್ನ ಗೆಳತಿ. ಸ್ನೇಹಿತರೇ ಹಾಗೆ ಸಂತೋಷಕ್ಕಿಂತ ದುಃಖದ ಮಡುವಿನಲ್ಲೇ ನೆನಪಾಗುವುದು ಹೆಚ್ಚು. ಆದರೆ ಆ ದಿನದ ಕಣ್ಣಿರು ಇನ್ನು ಸ್ವಲ್ಪ ಬಾಕಿ ಇದ್ದಂತಿತ್ತು. ನನ್ನ ಜೀವನದ ಎಲ್ಲಕ್ಕಿಂತ ಆಘಾತಕರ ಸುದ್ದಿ ನನ್ನನ್ನು ಸಿಡಿಲಿನಂತೆ ಬಂದು ಹೊಡೆದಿತ್ತು. ಅವಳೊಬ್ಬ ವೆಶ್ಯೆಯಂತೆ!!? ನಾನೊಬ್ಬ ವೇಶ್ಯೆಯ ಸ್ನೇಹಿತನೇ??? ನನ್ನ ಪ್ರಾಣ ಸ್ನೇಹಿತೆ ಕನಸಲ್ಲೂ ಅಷ್ಟೊಂದು ನೀಚಮಟ್ಟಕ್ಕೆ ಇಳಿಯುವುದನ್ನ ಕಲ್ಪಿಸಲಾರೆ.. ಆದರೆ ವಾಸ್ತವ ಕ್ರೂರಿ, ಅದು ಕನಸಿನಷ್ಟು ಸುಂದರವಲ್ಲ. ಈ ಎರಡು ವರ್ಷಗಳಲ್ಲಿ ಅವಳು ಒಬ್ಬ ವೆಶ್ಯೆಯೆಂದು ನನ್ನ ಅನುಭವಕ್ಕೆ ಎಂದೂ ಬರಲಿಲ್ಲ. ನನ್ನ ಜಗತ್ತಲ್ಲಿ ಅವಳು ವೆಶ್ಯೆಯಾಗಿರಲಿಲ್ಲ. ಸ್ನೇಹಸಾಗರದಲ್ಲಿ ಎಷ್ಟು ಮುಳುಗಿದ್ದೆನೆಂದರೆ ಇಂದು ವಾಸ್ತವಕ್ಕೆ ಬರಲು ಮನಸಿರಲಿಲ್ಲ. ತಾಯಿ, ಪ್ರೇಯಸಿ, ಗೆಳತಿಯಾಗಿ ಕಂಡಿದ್ದ ಹೆಣ್ಣು ಇಂದು ಹೆಣ್ಣಿನ ಕೆಟ್ಟದೊಂದು ರೂಪವಾದ ವೆಶ್ಯೆಯಾಗಿ ಕಾಣುತ್ತಿದ್ದಳು. ಕಂಠಪೂರ್ತಿ ಕುಡಿದು ಅವಳ ಎದುರಿಗೆ ಬಂದು ನಿಂತಿದ್ದೆ. ನನ್ನ ಮುಂದೆ ನಿಂತಿದ್ದವಳು ನನಗೆ ನನ್ನ ಗೆಳತಿಯಾಗಿ ಕಾಣುತ್ತಿರಲಿಲ್ಲ. ಯಾವುದೋ ಹಸಿ ಹಾಸಿಗೆಗೆ ನೆಪವಾಗಿ, ಯಾರದ್ದೋ ಹುಸಿ ದಾಹ ತೀರುವ ಮಾಂಸದ ಮುದ್ದೆಯಾಗಿ ಕಾಣುತ್ತಿದ್ದಳು. ಕಿರು ಮಂದಹಾಸದ ಅವಳ ಮುಖದಲ್ಲಿ ನೂರೊಂದು ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದೆ. ಕೆನ್ನೆಯ ಮೇಲೊಂದು ಭಾರಿಸಿ ಪ್ರತಿಕಾರವಲ್ಲದ ಪ್ರತಿಕಾರವನ್ನ ತೀರಿಸಿಕೊಳ್ಳುವ ಬಯಕೆ, ಇದರ ಜೊತೆ ಪ್ರೇಯಸಿಯ ಅಗಲುವಿಕೆ, ಎಲ್ಲೆವೂ ಸೇರಿ ನನ್ನ ಅಸ್ತಿತ್ವವನ್ನ ಕೆದಕುತ್ತಿತ್ತು. ಕುಡಿದ ಅಮಲು, ಪ್ರೇಯಸಿಯ ತಿರಸ್ಕಾರ, ಮೂಳೆಯಿಲ್ಲದ ಚರ್ಮದ ತುಂಡನ್ನ ಕೆಟ್ಟದಾಗಿ ಹೊರಲಾಡಿಸಿಬಿಡ್ತು. ಯಾವುದೋ ನೋಟುಗಳಿಗೆ ಸೆರಗು ಹಾಸುವ ಹೆಣ್ಣು ಮುಂದಿದ್ದಾಗ, ನಾನು ಗಂಡಸು ಎಂಬ ಭಾವ ಭಾರವಾಗಿ ನಿಂತಿತ್ತು. ನನ್ನ ಮುಂದೆ ನಿಂತಿದ್ದ ವೇಶ್ಯೆಯ ಬಳಿ ಅವಳ ಒಂದು ರಾತ್ರಿಯ ಬೆಲೆಯನ್ನ ಕೇಳಿಬಿಟ್ಟೆ! ಆ ರಾತ್ರಿ ನನ್ನನ್ನ ಅವಳ ಗಿರಾಕಿಯಾಗಿ ಮನೆ ಸೇರಿಸೆಂದೆ. ಉತ್ತರವಾಗಿ ಸಿಕ್ಕವು ನಾಲ್ಕು ಕಣ್ಣ ಹನಿ ನೀರುಗಳು. ಸ್ನೇಹವು ಕಾಮಗ್ನಿಯ ಜ್ವಾಲೆಗೆ ಕೊನೆಯಾಗಿತ್ತು. ಕತ್ತೆಲೆಯ ರಾತ್ರಿ, ನಡು ರಸ್ತೆಯಲ್ಲಿ ಕುಡಿದು ಬಿದ್ದಿದ್ದೆ. ಆಕಾಶದಲ್ಲಿ ಕಾರ್ಮೋಡಗಳು ಆರ್ಭಟಿಸುತ್ತಿದ್ದವು. ಕತ್ತಲೆಯ ತೀವ್ರತೆ ನನ್ನನ್ನ ಆತ್ಮಾವಲೋಕನಕ್ಕೆ ತಳ್ಳಿತ್ತು. ಪ್ರೆಯಸಿಯಿಂದೊಂದೆಯಲ್ಲದೆ ಒಬ್ಬ ವೆಶ್ಯೆಯಿಂದಲೂ ತಿರಸ್ಕ್ರತನಾದೇನೆ? ಇದು ನನ್ನ ಮೂಲವನ್ನ ಕೆದಕಿದಂತಿತ್ತು. ಆದರೆ ನಾನು ಒಬ್ಬ ವೆಶ್ಯೆಯಿಂದ ತಿರಸ್ಕ್ರತನಾಗಿರಲಿಲ್ಲ, ಒಬ್ಬ ಗೆಳತಿಯಿಂದ ಆಗಿದ್ದೆ. ನನ್ನ ಅವಳ ಸ್ನೇಹ ಹೆಣ್ಣು ಗಂಡು ಎಂಬ ಸಂಬಂಧವನ್ನ ಮೀರಿದ್ದು. ಯಾವ ಸಂಧರ್ಭ ಅವಳನ್ನ ಈ ಪಾಪ ಕೂಪಕ್ಕೆ ತಳ್ಳಿತ್ತೋ ಅರಿಯೆ, ಆದರೆ ಅವಳಿಗೂ ಒಂದು ಮನಸ್ಸೆಂಬುದೊಂದೆಂದಿದೆ ಎಂದು ನನಗೇಕೆ ತೋಚಲಿಲ್ಲ?? ಎರಡು ವರುಷದ ಗೆಳತಿ ಎರಡು ನಿಮಿಷದಲ್ಲಿ ಮಾಂಸದ ಮುದ್ದೆಯಾದಳೇ?? ನಾನು ತಪ್ಪು ಮಾಡಿದ್ದೆ. ಜಗತ್ತಿಗೆ ಅವಳು ವೆಶ್ಯೇಯಾದರೇನು? ನನಗೆ ಅವಳು ಗೆಳತಿ, ಅವಳ ದೇಹ ಅಶುದ್ಧವಾದರೇನು?, ಅವಳ ಆತ್ಮ ಪರಿಶುದ್ಧ. ಗೆಳೆತನಕ್ಕೆ ದೇಹದ ಎಲ್ಲೆಯೇಕೆ?? ಪ್ರಾಯಶ್ಚಿತವೆಂಬ ಕೂಪಕ್ಕೆ ಬೀಳುವ ಮೊದಲು ಕ್ಷಮೆಯಂಬ ಆಯ್ಕೆಗೆ ಶರಣಾಗಿ ಅವಳ ಮೆನೆಕಡೆ ಮತ್ತೆ ತಿರುಗಿದೆ. ಆದರೆ ವಿಧಿಯಾಟ ಬೇರೆಯೇ ಇತ್ತು. ನನ್ನ ಬಳಿ ಕ್ಷಮೆಯಂಬ ಆಯ್ಕೆಯೂ ಉಳಿದಿರಲಿಲ್ಲ. ನೇಣಿನ ಕುಣಿಕೆಯಲ್ಲಿ ಸಿಲುಕಿ ಸಾವನ್ನ ಸಂಭ್ರಮಿಸಿದ ಆ ದೇಹ ಸ್ತಬ್ಧವಾಗಿ ವಿರಮಿಸುತ್ತಿತ್ತು.

"ಎಂದಾದರೊಂದು ದಿನ ಇಡಿ ಜಗತ್ತು ತನ್ನ ಎಲ್ಲ ಪಾಪವನ್ನ ನನ್ನ ಮೇಲೆ ಹೊರಿಸಿ ಛೇಡಿಸುವಾಗ ನೀ ಬಂದು ಆರೈಸುವೆ ಎಂದುಕೊಂಡಿದ್ದೆ, ಆದರೆ ಆರೈಸುವವನೆ ಬಂದು ಪಾಪದಲ್ಲಿ ಪಾಲು ಕೇಳಿದಾಗ ಬದುಕಿರಲು ಕಾರಣಗಳು ಸಿಗಲಿಲ್ಲ. ಪ್ರಪಂಚದಲ್ಲಿದ್ದ ಒಬ್ಬನೇ ಒಬ್ಬ ಗೆಳೆಯನಿಗೂ ನನ್ನಲ್ಲೊಂದು ಮನಸೆಂಬ ವಸ್ತುವಿದೆ ಎಂದು ತಿಳಿಯಲಿಲ್ಲ, ಎದೆಯಲ್ಲೊಂದು ಪುಟ್ಟ ಜೀವ, ಭಾವನೆಗೆ ಸ್ಪಂದಿಸುವ ಒಂದು ಮುಷ್ಠಿಗಾತ್ರದ ಹೃದಯ ಕ್ಷಣ ಕ್ಷಣಕ್ಕೂ ಅದರ ಅಸ್ತಿತ್ವವನ್ನ ಡಬ ಡಬ ಎಂದು ಅನಾವರಿಸುತ್ತಿದೆ ಎಂದು ತಿಳಿಯಲೇ ಇಲ್ಲ."

ಬಹುಶಃ ಆ ಕ್ಷಣದಲ್ಲಿ ಅವಳಿಗಿದ್ದ ಆಯ್ಕೆ ಒಂದು ಕುಣಿಕೆಯ, ಎರಡು ಮಾರಿನ ಹಗ್ಗವೇ ಇರಬೇಕು. ಬೆಳದಿಂಗಳಾಗಿ ಬಂದ್ಲು ಬಿಸಿಗಾಳಿಯಾಗಿ ಹೊರಟು ಹೋದ್ಲು. ಕಾರ್ಮೋಡದ ನೆರಳಿನಲ್ಲಿ ಒಂಟಿಯಾಗಿ ಉಳಿದುಬಿಟ್ಟೆ................................!!!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.