"ಎಲ್ಲರಂತೆ ಅಲ್ಲ ನನ್ನಪ್ಪ"

"ನನ್ನ ಅಪ್ಪ ಎಲ್ಲರಂತೆ ಅಲ್ಲಾ, ನಾನು ಚಿಕ್ಕವನಾಗಿದ್ದಾಗ ನನ್ನ ಅಪ್ಪ ತುಂಬಾ ಬೈಯತ್ತಿದ್ದರು. ಆಗ ನನಗೆ ತುಂಬಾ ಕೋಪ ಬರತ್ತಿತ್ತು.! ಅವತ್ತು ಅಪ್ಪ ಯಾಕೆ ಅಷ್ಟೊಂದು ಬೈಯತ್ತಿದ್ದ ಅಂತ ಇವತ್ತು ನನಗೆ ಚೆನ್ನಾಗಿ ಅರ್ಥವಾಗಿದೆ. ನನ್ನ ಅಪ್ಪ ತುಂಬಾ ಸೌಮ್ಯ ಸ್ವಭಾವದ ವ್ಯಕ್ತಿ. ಊರಿಗೆ ಬೇಕಾದ ವ್ಯಕ್ತಿ. ಇಡೀ ಊರಿಗೆ ಚಿರಪರಿಚಿತ. ಮಾತ್ರವಲ್ಲ, ನಮ್ಮ ಅಪ್ಪನ ಕಷ್ಟ - ಸಮಸ್ಯೆ ಏನು ಎಂಬುವುದು ಊರಿನ ಪ್ರತಿಯಬ್ಬರಿಗೂ ಗೊತ್ತು! ಇದ್ದ ಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಮಾಡಿ, 20-30 ಮೇಕೆ, ಕುರಿಗಳನ್ನು ಸಾಕಿ-ಸಲಹುತ್ತಾ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ನಾವು 4 ಜನ ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡುಮಕ್ಕಳು. ನಮ್ಮ ಅಪ್ಪನಿಗೆ ನಾವು ಎಲ್ಲರೂ ಚೆನ್ನಾಗಿ ವಿದ್ಯೆ ಕಲಿತು, ದೊಡ್ಡ 'ಆಫೀಸರ್'ಗಳು ಆಗಬೇಕು ಅನ್ನುವುದು ಅವನ ಮಹದಾಸೆ ಆಗಿತ್ತು. ಆಗಾಗಿ ನಾವು ಯಾರೇ ಒಂದು ಚಿಕ್ಕ ತಪ್ಪು ಮಾಡಿದರು ತುಂಬಾ ಬುದ್ಧಿವಾದ ಹೇಳತ್ತಿದ್ದ, ಅಷ್ಟೇ ಬೈಯತ್ತಿದ್ದ."!!

"ನಮ್ಮ ಸಂಸಾರದಲ್ಲಿ ಸದಾ ಸಮಸ್ಯೆ ತುಂಬಿ-ತುಳುಕುತ್ತಿತ್ತು. ಪದೇ- ಪದೇ ಎಂಬಂತೆ ತಾಯಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಳು. ಅದರಲ್ಲೂ ವಯಸ್ಸಿಗೆ ಬರುತ್ತಿದ್ದ ಅಕ್ಕ- ತಂಗಿ ಹಾಗೂ ನನಗೆ ಮತ್ತು ನನ್ನ ತಮ್ಮನಿಗೆ ಎಲ್ಲರಿಗೂ ಜೀವನಾಧಾರ ಅಂದರೆ ಅದು ಅಪ್ಪ ಸಂಪಾದಿಸಿದ ಮೇಕೆಗಳು ಮಾತ್ರ. ತುಂಬಾ ಸಮಸ್ಯೆ ಬಂತು ಅಂದರೆ ಒಂದು ಮೇಕೆಯನ್ನು ಮಾರಿ, ಬಂದ ದುಡ್ಡಿನಲ್ಲಿ ಎಲ್ಲವನ್ನೂ ಸರಿದೂಗಿಸುತ್ತಿದ್ದ. ನಮ್ಮ ಸ್ಕೂಲ್ ಫೀಜು, ಬಟ್ಟೆ-ಬರೆ, ಊಟ, ಹಬ್ಬ-ಹರಿದಿನದ ಖರ್ಚು ಎಲ್ಲದಕ್ಕೂ ಮೂಲಾಧಾರವೇ ಅಪ್ಪನ ಮೇಕೆಗಳು. ಈ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿತ್ತು. ತನಗೆ ಎಷ್ಟೇ ಕಷ್ಷವಿದ್ದರೂ ನಮಗೆ ತೋರಿಸಿಕೊಳ್ಳುತ್ತಿರಲಿಲ್ಲಾ.!! ಚೆನ್ನಾಗಿ ಓದಕೊಳ್ಳಿ, ನಮ್ಮ ತರಹ ಆಗಬೇಡಿ ಅನ್ನುತ್ತಿದ್ದ. ಖರ್ಚು ಬೆಟ್ಟದಷ್ಟು, ಗಳಿಕೆ ಹುತ್ತದಷ್ಟು ಎಂಬಂತಾಗಿತ್ತು.!! ಸಂಸಾರದ ನೌಕೆಯನ್ನು ಮುನ್ನಡಿಸುವುದು ಅವರಿಗೆ ತುಂಬಾ ಪ್ರಯಾಸದ ವಿಷಯವಾಗಿತ್ತು. ಯಾಕೋ ಏನೋ ಗೊತ್ತಿಲ್ಲಾ..?? ನಮ್ಮ ಅಕ್ಕನಿಗೆ ಅಪ್ಪನ ಕಷ್ಟ ಮನವರಿಕೆ ಆಗಿತ್ತು ಅಂತ ಕಾಣಿಸುತ್ತೆ..?? ಅವಳು ಶಾಲೆ ಬಿಟ್ಟು ಊರಲ್ಲಿ ಕೂಲಿ - ಕೆಲಸಕ್ಕೆ ಹೋಗತ್ತಿದ್ದಳು. ಮೊದಲಿನಿಂದಲೂ ತಂಗಿಗೆ ಶಾಲೆಯಲ್ಲಿ ಆಸಕ್ತಿ ಇರಲಿಲ್ಲಾ..?? ಈಗಿನ ಪರಿಸ್ಥಿತಿಯಲ್ಲಿ ಎಲ್ಲರೂ ಚೆನ್ನಾಗಿ ಶಾಲೆ ಕಲಿಯೋದು ಆಗಲ್ಲಾ ಅಣ್ಣ, ನೀನು, ತಮ್ಮ ಚೆನ್ನಾಗಿ ಕಲಿರೀ ಎಂದಾಗ ಅವಳ ವಯಸ್ಸು 13.."!!

"ನಾನು ಮೊದಲಿನಿಂದಲೂ ಶಾಲೆಯಲ್ಲಿ ಸ್ವಲ್ಪ ಜಾಣ. ಎಲ್ಲರೂ ನಮ್ಮ ಅಪ್ಪನಿಗೆ ನಿನ್ನ ಮಗನಿಗೆ ಮುಂದೆ ಯಾವುದಾದರೂ ಒಳ್ಳೆ ನೌಕರಿ ಸಿಗುತ್ತೆ ಅಂತ ಹೇಳಿದರೆ ಅಪ್ಪನಿಗೆ ಎಲ್ಲೂ ಕಾಣದ ಖುಷಿ, ಸಂತೋಷ, ಆನಂದ, ತೃಪ್ತಿ, ಸಾರ್ಥಕತೆ ಅವನ ಮುಖದಲ್ಲಿ ಎದ್ದು ಕಾಣತಿತ್ತು. ಇದೇ ತರಹ ಸ್ವಲ್ಪ ದಿನ ಮುಂದುವರಿಯಿತು. ನಾನು ಹೈಸ್ಕೂಲ್ಗೆ ಬಂದೆ, ಅಲ್ಲಿ ಒಂದು ವರ್ಷ ಚೆನ್ನಾಗಿ ಕಲಿತೆ. ಆಮೇಲೆ ಅದು ಏನೋ ಗೊತ್ತಿಲ್ಲ..?? ಸಂಗದೋಷ ಅಥವಾ ವಯಸ್ಸಿನ ಕಾರಣದಿಂದಲೋ ನಾನು ತುಂಬಾ ಅಲೆಮಾರಿಯಾದೆ. ಮುಂದೊಂದು ದಿನ ನಮ್ಮ ಸಂಸಾರದ ಕತ್ತಲನ್ನು ಆರಿಸುವ ನಂದಾದೀಪ ಅಂತ ಯಾರನ್ನಾ ನಮ್ಮ ಅಪ್ಪ ಭಾವಿಸಿಕೊಂಡಿದ್ದನೋ.?? ಅವನು, ನಾನು ಮನೆಯಲ್ಲಿ ಯಾವಾಗಲೂ ಗಲಾಟೆ, ಎದುರು-ಎದುರು ಮಾತನಾಡುವುದು, ಊರಿನಲ್ಲಿ ಜಗಳ ಮಾಡೋದು ಮಾಡುತ್ತಿದ್ದೆ. ಇಂದೋ-ನಾಳೆಯೋ ಸರಿಯಾಗುತ್ತೆ ಅಂತ ತಿಳಿದುಕೊಂಡಿದ್ದ ನಮ್ಮಪ್ಪಾ ಅದು ತುಂಬಾ ದಿನಾ ಮುಂದುವರಿದಾಗ ಜೀವಂತ ಶವವಾಗಿ ಬಿಟ್ಟಿದ್ದ. ಯಾಕೆಂದರೆ ಇಷ್ಟು ವರ್ಷ ಕತ್ತೆ ತರಹ ಹಗಲು-ರಾತ್ರಿ ದುಡಿದೆ. ಆದರೆ ನನಗೆ ಆ ದುಡಿಮೆ ಯಾವತ್ತೂ ಬೇಸರ ತರಿಸಿಲ್ಲಾ..?? ಆದರೆ ನನ್ನ ಮಗನ ಹುಚ್ಚಾಟ ನೋಡಿ ನನಗೆ ತುಂಬಾ ಬೇಸರವಾಗಿದೆ ಅಂತ ಆತ್ಮೀಯರ ಹತ್ತಿರ ಹೇಳಕೊಳ್ಳತ್ತಿದ್ದ ಅಂತೆ"..??

"ನನ್ನ ಹುಚ್ಚಾಟದಿಂದ ಮನೆಯಲ್ಲಿ ಯಾವಾಗಲೂ ನೀರವ ಮೌನ ಇರುತ್ತಿತ್ತು. ತಮ್ಮನಿಗೆ ಏನು ಅರಿಯದ ವಯಸ್ಸು. ನಮ್ಮಪ್ಪ ಯಾವತ್ತೂ ಊರಿನ ಜನರ ಜೊತೆ ತುಂಬಾ ಹೊತ್ತು ಕುಳಿತಕೊಂಡು ಮಾತನಾಡಿದವನಲ್ಲಾ, ಒಂದು ರೂಪಾಯಿಗೂ ಲೆಕ್ಕ ಹಾಕುವ ವ್ಯಕ್ತಿ. ಊರಿನ ಜನ ನಮ್ಮಪ್ಪನನ್ನು ಎಷ್ಟೊಂದು ಆರಾಧಿಸುತ್ತಿದ್ದರು ಅಂದರೆ ಎಲ್ಲರೂ ಹೇಳುತ್ತಿದ್ದರು "ಎಲ್ಲರಂತೆ ಅಲ್ಲಾ ನಿಮ್ಮಪ್ಪ!" ಆ ಮಾತು ನನ್ನ ಕಿವಿಯಲ್ಲಿ ಪ್ರತಿಧ್ವನಿಸುತಿತ್ತು. ಒಂದು ದಿನ ನಮ್ಮ ಕುಟುಂಬದ ಹೀನಾಯದ ಪರಿಸ್ಥಿತಿ ನೋಡಿ, ಯಾವತ್ತೂ ಕುಡಿಯಲಾರದೆ ಇರುವ ನಮ್ಮ ಅಪ್ಪ, ಅವತ್ತು ಕುಡಿದು ಬಂದ. ಬಂದವನೇ ನೇರವಾಗಿ ನನ್ನ ಹತ್ತಿರ ಬಂದ. "ನೋಡಪ್ಪ ನಿನ್ನ ಕೈಮುಗಿತಿನಿ, ನೀನು ಈ ತರಹ ಮಾಡಬೇಡ, ಕೂಲಿಯಿಂದ ಜೀವನ ಸಾಗಿಸಿದ್ದರೂ, ಮರ್ಯಾದೆಯಿಂದ ಬದುಕ್ತಿದೀವಿ, ಇವತ್ತಿಗೂ ಊರಲ್ಲಿ ನಿಮ್ಮಪ್ಪನಿಗೆ ಒಳ್ಳೆ ಹೆಸರಿದೆ! ಬೇರೆ ಯಾರು ಚೆನ್ನಾಗಿ ಶಾಲೆ ಕಲಿಯಲಿಲ್ಲಾ... ನೀನಾದರೂ ಚೆನ್ನಾಗಿ ಶಾಲೆ ಕಲಿತಿಯಾ ಅಂದುಕೊಂಡ್ರೆ ನೀನು ಈ ತರಹ ಆದೆ! ಪರವಾಗಿಲ್ಲ. ನಾನು ಎಲ್ಲರನ್ನು ದುಡಿದು ಸಾಕತ್ತೀನಿ... but yavattu ಊರಲ್ಲಿ ಇಂಥವನ ಮಗ ಈ ತರಹ ಮಾಡತ್ತಾನೆ ಅನ್ನಬಾರದು..!! ಒಂದು ವೇಳೆ ಇದೆ ತರಹ ಆದರೆ ನಾನೇ ಏನಾದರೂ ಮಾಡಿಕೊಳ್ತೀನಿ" ಅಂತ ಹೇಳಿ ಊಟ ಮಾಡದೆ ಮಲಗಿದ. ಅವತ್ತಿನ ನಮ್ಮ ಅಪ್ಪನ ದಯನೀಯ ಅವಸ್ಥೆ ನೋಡಿ ನನ್ನ ಮನಸ್ಸು ಕರಗಿತ್ತು, ಮರುಗಿತ್ತು.!! ಎಲ್ಲವನ್ನೂ ಮೂಕಪ್ರಾಣಿಯಂತೆ ನೋಡುತ್ತಾ ಹಾಸಿಗೆಯಲ್ಲಿ ಸಂಕಟ ಪಡುತ್ತಿದ್ದ ತಾಯಿ, ನನ್ನ ಬದಲಾವಣೆಗಾಗಿ ಪರಿತಪಿಸುತ್ತಿದ್ದ ಅಕ್ಕ-ತಂಗಿ..!!

"ಅವತ್ತು ರಾತ್ರಿಯೆಲ್ಲ ನಮ್ಮ ಮನೆಯ ಬಗ್ಗೆ ವಿಚಾರ ಮಾಡಿದಾಗ 'ಅಯ್ಯೋ' ಅನ್ನಿಸಿತ್ತು. ಅವತ್ತು ರಾತ್ರಿ ತುಂಬಾ ಹೊತ್ತು ಚಿಕ್ಕ ಮಗುವಿನಂತೆ ಅತ್ತುಬಿಟ್ಟೆ.!! ಅವತ್ತೇ ಅಚಲ ನಿರ್ಧಾರ ಮಾಡಿದೆ. ಈ ನಮ್ಮ ಸಮಸ್ಯೆಗಳಿಗೆ ನಾನೇ ತೆರೆ ಎಳಿಯಬೇಕು. ಈ ಎಲ್ಲಾ ಕಷ್ಟಗಳಿಂದ ಮುಕ್ತಿ ಪಡಿಯಬೇಕು ಅಂತ ಅಂದುಕೊಂಡು ಚೆನ್ನಾಗಿ ಓದೋಕೆ ಪ್ರಾರಂಭಿಸಿದೆ. ಆಗ ತಾನೆ ನಾನು p.u.cಗೆ ಬಂದಿದ್ದೆ. ಮೊದಮೊದಲು ಓದೋಕೆ ತುಂಬಾ ಬೇಜಾರಾಗತ್ತಿತ್ತು! ಅದು ಆಮೇಲೆ ಅಭ್ಯಾಸವಾಗಿ ಓದುವುದೇ ನನ್ನ ಪ್ರಪಂಚವಾಗಿ ಬಿಟ್ಟತ್ತು. ಅದರ ಮಧ್ಯೆ ಬಡತನ ಬೇತಾಳನಂತೆ ಕಾಡುತ್ತಿತ್ತು. ಎಲ್ಲಾ ಮೇಕೆಗಳನ್ನಾ ಮಾರಿ, ಅಕ್ಕನ ಮದುವೆ ಮಾಡಲಾಯಿತು. ಆಮೇಲೆ ಅಪ್ಪ ಕೂಲಿ ಕೆಲಸಕ್ಕೆ ಹೋಗಿ ಸಂಸಾರ ನಿಭಾಯಿಸುತ್ತಿದ್ದ. ಹೀಗೆ ಕಷ್ಟದಲ್ಲಿಯೇ ದಿನಗಳು ಕಳೆದವು. ಅದಾಗಲೇ ನನ್ನ 2nd p.u.c.ಫಲಿತಾಂಶ ಬಂತು. ಆ ಫಲಿತಾಂಶ ನೋಡಿ ನನ್ನಿಂದ ದುಃಖ ನಿಯಂತ್ರಿಸಿಕೊಳ್ಳಲು ಆಗಲೇ ಇಲ್ಲಾ. ಮತ್ತೆ ಮಗುವಿನ ತರಹ ಅತ್ತು ಬಿಟ್ಟೆ. ಯಾಕ ಗೊತ್ತಾ..?? ನನ್ನ ಫಲಿತಾಂಶ 91.33. ಇದು ಸಂತೋಷದ ಕಣ್ಣೀರು, ಶ್ರಮಕ್ಕೆ ತಕ್ಕ ಪ್ರತಿಫಲದ ಕಣ್ಣೀರು, ಅಪ್ಪನ ಇಷ್ಟು ವರ್ಷದ ದೀರ್ಘ ತಪಸ್ಸಿಗೆ ಸಿಕ್ಕ ಉಡುಗೊರೆಗಾಗಿ ಕಣ್ಣೀರು!! ಮನೆಯಲ್ಲಿ ಹಬ್ಬದ ವಾತಾವರಣ. ಮೊದಲ ಬಾರಿ ಅಪ್ಪನ ಮುಖದ ಗೆರೆಗಳ ಮಧ್ಯೆ ನಗು ಎದ್ದು ಕಾಣುತ್ತಿತ್ತು. ಊರಿನಲ್ಲಿ ಎಲ್ಲಾ ಕಡೆ ನನ್ನ ಬಗ್ಗೆ ಮಾತು. ಅಪ್ಪನಿಗೆ ಅವತ್ತು ನನ್ನ ಹತ್ತಿರ ಏನೋ ಹೇಳಬೇಕು ಅಂತ ಗಂಟಲಿನಿಂದ ಅಸ್ಪಷ್ಟವಾಗಿ ಹೊರಟ ಶಬ್ದಗಳು, ಧಾರಾಳವಾಗಿ ಹೇಳಲಾಗದೇ ವಿಫಲವಾಗಿ ಕೆಮ್ಮಾಗಿ ಬದಲಾಗಿ ಗಾಳಿಯಲಿ ಲೀನವಾದವು. ನನ್ನ puc ಮುಗಿದ ಸ್ಪಲ್ಪ ದಿನಗಳಲ್ಲಿ ಶರವೇಗದಲ್ಲಿ ನನಗೆ ಕೆಲಸ ಕೂಡಾ ಸಿಕ್ತು. ಕೆಲಸ ಸಿಕ್ಕಿ 2 ವರ್ಷದ ಮೇಲಾಯಿತು. ನನಗೆ ಇವತ್ತಿಗೂ ಆಶ್ಚರ್ಯ ಆಗೋದು ನನ್ನ ಬದುಕು ಹೇಗೆ ಬದಲಾಯಿತ್ತು!! ಎಂಬುದು. ಇವತ್ತು ನಾನು ಏನು ಆಗದ್ದಿನೋ ಅದಕ್ಕೆ ಕಾರಣ ನಮ್ಮಪ್ಪ. ಮುಂದೆ ಏನು ಆಗತ್ತೀನೊ ಅದಕ್ಕೂ ಕಾರಣ ನಮ್ಮಪ್ಪಾ! ಈಗ ಸ್ವಲ್ಪ ಮಟ್ಟಿಗೆ ಮನೆ ಪರಿಸ್ಥಿತಿ ಸುಧಾರಿಸಿದೆ. ತಂಗಿಯ ಮದುವೆ ಆಯಿತು. ಒಂದು ಮನೆಕಟ್ಟಿ, ಅಪ್ಪ-ಅಮ್ಮನ್ನಾ ಚೆನ್ನಾಗಿ ನೋಡಿಕೊಳ್ಳಬೇಕು. ಇವತ್ತಿಗೂ ನಮ್ಮ ಅಪ್ಪ ಮೊದಲಿನಂತೆ ಕೆಲಸ ಮಾಡತ್ತಾರೆ. ಈವಾಗಲೂ ಜನ ಹೇಳೋದು "ಎಲ್ಲರಂತೆ ಅಲ್ಲಾ ನಿಮ್ಮ ಅಪ್ಪ!" ನಿಜವಾಗಿಯೂ ಅದು ಸತ್ಯ. ಇಷ್ಟು ದಿನ ಎಲ್ಲರೂ ಹೇಳತ್ತಿದ್ದರೂ ಈ ಕ್ಷಣ ನಾನು ಹೇಳತ್ತಿದ್ದೀನಿ "ಎಲ್ಲರಂತೆ ಅಲ್ಲಾ, ನಮ್ಮಪ್ಪ!" ನಿಜವಾಗಿಯೂ ನಾನು ಪುಣ್ಯವಂತ! ನಿನ್ನಂತಹ ತಂದೆಯನ್ನು ಪಡೆದಿದ್ದಕ್ಕೆ ನಾನು ತುಂಬಾ ಖುಷಿ ಪಡತ್ತೀನಿ, ಹೆಮ್ಮಪಡ್ತೀನಿ. ಆ ದೇವರಿಗೆ ಧನ್ಯವಾದಗಳನ್ನು ಅರ್ಪಿಸ್ತೀನಿ"..!!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.