ಗಡಂಗಿಗೆ ಹೋಗಿ ಎಣ್ಣೆ ಹಾಕಿ ಮನೆಗೆ ಬಂದ ಸಣ್ಣಯ್ಯನಿಗೆ ಕುಡಿದ ನಶೆ ಇಳಿದಿದ್ದಲ್ಲದೇ ಮೈಯೆಲ್ಲಾ ಗಡ ಗಡ ನಡುಕದ ಜತೆಗೆ ವಿಪರೀತ ಜ್ವರ. ಹೆಂಡತಿ ಜಯಮ್ಮ ಏನು ಮಾಡಲೂ ತೋಚದೆ ಅವನ ಹಣೆಯ ಮೇಲೆ ತಣ್ಣೀರ ಬಟ್ಟೆ ಹಾಕುತ್ತಾ, ಅದು ಒಣಗಿದ ಮೇಲೆ ಮತ್ತೆ ಮತ್ತೆ ಒದ್ದೆ ಮಾಡುತ್ತಾ, "ಇದೇನಾಯ್ತೋ ಸಿವ್ನೇ" ಎಂದು ಗರಬಡಿದವಳಂತೆ ಕೂತಿದ್ದಳು. ಚಿಕ್ಕ ಚಿಕ್ಕ ಮಕ್ಕಳಾದ ಅನಂದ, ಸರೋಜರು ಒಮ್ಮೆ ಅಪ್ಪನನ್ನು ಮತ್ತೊಮ್ಮೆ ಅಮ್ಮನನ್ನು ನೋಡುತ್ತಾ ಏನೂ ತಿಳಿಯದೇ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದವು. ಸಣ್ಣಯ್ಯಾ ಎಚ್ಚರ ತಿಳಿದಾಗೊಮ್ಮೆ "ಅಯ್ಯಪ್ಪೋ... ಬೆಂಕಿ... ಬೆಂಕಿ...ದೆಯ್ಯ... ದೆಯ್ಯಾ... ಮೋಹಿನಿ ದೆಯ್ಯಾ ನನ್ನುನ್ನ ಅಮಿಕ್ಕತೀತೆ.... ಯಾರಾದ್ರು ಬನ್ರಪ್ಪೋ.... ಬಿಡುಸ್ರಪ್ಪೋ..." ಎಂದು ಕೂಗಿ ಮತ್ತೆ ಅರೆಪ್ರಜ್ಞೆಗೆ ಜಾರುತ್ತಿದ್ದ.

ಜಯಮ್ಮನಿಗೆ ತನ್ನ ಗಂಡ ಕುಡಿಯೋದು ಗೊತ್ತಿದ್ದರೂ ಏನೂ ಮಾಡುವ ಹಾಗಿರಲಿಲ್ಲ. ಇವಳು ಕಾಸು ಕೊಡದೆ ಸತಾಯಿಸಿದರೆ, ಹಾಲು ಹಾಕೋ ಮನೆಗಳಲ್ಲಿ ಅಡ್ವಾನ್ಸ್ ಆಗಿ ದುಡ್ಡು ಇಸಿದುಕೊಂಡು ಕುಡಿದು ಬರುತ್ತಿದ್ದ. "ಅಮ್ಮಾರೇ, ನನ್ ಗಂಡುನ್ ತಾವ ದುಡ್ಡು ಕೊಡ್ಬ್ಯಾಡ್ರಿ. ಕುಡ್ದು ಬತ್ತಾನೆ ನನ್ ಗಂಡ" ಅಂತ ತಾನು ಹಾಲು ಕೊಡುತ್ತಿದ್ದ ಮನೆಗಳಲ್ಲಿ ಅವಳು ಹೇಳಿರುತ್ತಿದರೂ "ನನ್ ಹೆಡ್ತೀನೇ ಹೇಳಿ ಕಳ್ಸವ್ಳೆ. ಮಗೀಗೆ ಔಸ್ದೀಗೆ, ಹಸೀಗೆ ಹುಲ್ಲಿಗೆ ಬೇಕಂತೆ" ಎಂದು ಒಂದೊಂದು ಸಲ ಒಂದೊಂದು ಕಾರಣ ಹೇಳಿ ಹಣ ಪಡೆಯುತ್ತಿದ್ದ. ತಾನಂತೂ ಒಂದು ಕಾಸೂ ಸಂಪಾದಿಸುವುದಿಲ್ಲವೆಂದು ಶಪತ ತೊಟ್ಟವನಂತೆ ಕುಡಿತ ನಿದ್ದೆ ಕಾಡು ಹರಟೆಗಳಲ್ಲೇ ಕಾಲ ಕಳೆಯುತ್ತಿದ್ದ. "ಒಸಿ ಕೆರೆ ತಾವ್ಕೆ ಹೋಗಿ ದನೀನಾದ್ರೂ ಮೆಯ್ಸ್ಕಂಡು ಬರಾಕ್ಕಾಕ್ಕಿಲ್ವಾ" ಎಂದು ಇವಳು ಹೇಳಿದ್ದನ್ನು ಕಿವಿಯ ಮೇಲೆ ಹಾಕಿಕೊಳ್ಳುತ್ತಲೇ ಇರಲಿಲ್ಲ ಅವನು. ಹಟ್ಟಿಯ ಕಸ ಬಾಚುವುದು, ಹಸುಗಳ ಹಾಲು ಹಿಂಡುವುದು, ಅವುಗಳನ್ನು ಮೇಯಿಸಿಕೊಂಡು ಬರುವುದನ್ನೂ ಜಯಮ್ಮನೇ ಮಾಡಬೇಕಿತ್ತು. ಮನೆಯ ಮಾಮೂಲಿ ಕೆಲಸ, ಅಡುಗೆ, ಮಕ್ಕಳ ಯೋಗಕ್ಷೇಮ, ವರ್ತನೆಯ ಮನೆಗಳಿಗೆ ಹಾಲು ಕೊಟ್ಟು ಬರುವುದೂ... ಇವು ಇದ್ದಿದ್ದೇ. "ಅಲ್ಲಾ ಜಯಮ್ಮಾ, ನಿಂಗೆ ಬೇಜಾರಾಗಲ್ವೇ? ಇಷ್ಟೆಲ್ಲಾ ತಾಪತ್ರಯ ಇದ್ರೂ ಯಾವಾಗ್ಲೂ ನಗ್ತಾ ಇರ‍್ತೀಯಲ್ಲಾ" ಎಂದು ನಾನೊಮ್ಮೆ ಕೇಳಿದರೆ "ಅವುನ್ನೆಲ್ಲಾ ತಲೆಗಾಕ್ಕಂಡು ಕೂತ್ರೆ, ತಲೆ ಕೆಟ್ಟೋಯ್ತದೆ. ಆವಾಗ ಇನ್ನೂ ಬೇಸ್ರ ಆಗಾಕಿಲ್ವಾ?" ಎಂದು ನನ್ನನ್ನೇ ಪ್ರಶ್ನಿಸಿದ್ದಳವಳು. ಒಂದು ರೀತಿಯಲ್ಲಿ ಅವಳದು ಅನುಭವ ಜನ್ಯ ವೇದಾಂತ! ಈಗ ಆ ವೇದಾಂತವೂ ಅವಳ ನೆರವಿಗೆ ಬರುವಂತಿರಲಿಲ್ಲ.

ಆಸ್ಪತ್ರೆಗೆ ಹೋಗಬೇಕಾದ್ರೂ ಬೆಳಗಾಗಲೇಬೇಕು. ಬೆಳಿಗ್ಗೆಯವರೆಗೆ ಹೀಗೇ ಬಿಟ್ರೆ ಏನಾದ್ರೂ ಅನಾಹುತ ಆದೀತು, ಇನ್ನು ತಡ ಮಾಡುವುದು ಬೇಡ ಎಂದು ಆನಂದನನ್ನು ಕರೆದು "ನಿಮ್ ದೊಡ್ಡಪ್ಪುನ್ನ ಕರ‍್ಕಂಬಾ" ಎಂದು ಪಕ್ಕದ ಹಟ್ಟಿಗೆ ಓಡಿಸಿದಳು. ಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದ ಸಣ್ಣಯ್ಯನ ಅಣ್ಣ ನರಸಯ್ಯ ಕೂಡಲೇ ಓಡಿಬಂದ. ಅವನ ಜತೆಗೇ ಬಂದ ಅವನ ಹೆಂಡತಿ ರಾಮಕ್ಕ ಮಕ್ಕಳನ್ನು ತನ್ನ ಬಳಿ ಕೂರಿಸಿಕೊಂಡು, ಓರಗಿತ್ತಿಗೂ ಧೈರ್ಯ ಹೇಳಿದಳು. ಅಷ್ಟರಲ್ಲಿ, ಸ್ನೇಹಿತರ ಸಂಗಡ ಹರಟೆ ಹೊಡೆಯಲು ಹೋಗಿದ್ದ, ನರಸಯ್ಯನ ಮಗ ರಮೇಶನೂ ಬಂದ. ಕಾಲೇಜಿಗೆ ಹೋಗುತ್ತಿದ್ದ ಅವನು ತಮ್ಮ ಊರಿನ ಕೆಲವು ಯುವಕರನ್ನು ಸೇರಿಸಿಕೊಂಡು ಹಳ್ಳಿಯ ಜನರ ಮೌಢ್ಯ ನಿವಾರಣೆ, ಸ್ವಚ್ಛತೆ, ಶಿಕ್ಷಣ ಇವುಗಳ ಕುರಿತು ಅರಿವು ಮೂಡಿಸಲು ಓಡಾಡುತ್ತಿದ್ದ. ತನ್ನ ಅಪ್ಪನ ಕುಡಿತ ಬಿಡಿಸಲು ಯಶಸ್ವಿಯಾಗಿದ್ದ ಅವನು ಚಿಕ್ಕಪ್ಪನ ಕುಡಿತದ ಚಟವನ್ನು ಬಿಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿ ಸೋತುಹೋಗಿದ್ದ.

ನರಸಯ್ಯನೂ ರಮೇಶನೂ ಸೇರಿ ಸಣ್ಣಯ್ಯನನ್ನು ಎತ್ತಿ ಕೂರಿಸಿ, ಮುಖಕ್ಕೆ ನೀರು ಎರಚಿ ಪ್ರಜ್ಞೆ ಬರಿಸಲು ನೋಡಿದರು. "ಚಿಕ್ಕಮ್ಮಾ, ಮಜ್ಗೆ ಇದ್ಯಾ?" ಎಂದು ಕೇಳಿ ಅವಳು ಕೊಟ್ಟ ಮಜ್ಜಿಗೆಯನ್ನು ಚಿಕ್ಕಪ್ಪನಿಗೆ ಸ್ವಲ್ಪ ಕುಡಿಸಿದ ರಮೇಶ. ಉಳಿದಿದ್ದ ಸ್ವಲ್ಪ ನಶೆಯೂ ಇಳಿದುಹೋಯಿತು ಸಣ್ಣಯ್ಯನಿಗೆ. ಆದರೆ ಅವನ ಮೈ ಈಗಲೂ ಸುಡುತ್ತಿತ್ತು. ಗಡಗಡ ನಡುಗುವುದೂ ನಿಲ್ಲಲಿಲ್ಲ. "ಯಾಕಿಂಗಾತು? ಎನ್ ಕಂಡ್ ಹೆದ್ರಿಕಂಡ ಇವ್ನು?" ಎಂಬ ಭಾವನ ಪ್ರಶ್ನೆಗೆ "ಗೊತ್ತಿಲ್ರ‍, ದಿನಾ ಬಂದಂಗೇ ಕುಡ್ದ್ ಬಂದ್ರಾ, ಬರಾವಾಗ್ಲೇ ‘ಅಯ್ಯೋ... ಬೆಂಕಿ... ಬೆಂಕಿ... ದೆಯ್ಯಾ... ದೆಯ್ಯಾ... ’ ಅಂತಿದ್ದೋರು ಬಾಗ್ಲಾಗೇ ಬಿದ್ರು. ಒಳಿಕ್ಕೆ ಕರ್ಕಂಬಂದು ಮನಗಿಸ್ದೆ. ಮಯ್ಯೆಲ್ಲಾ ಸುಡ್ತಿತ್ರಾ" ಎಂದಳು ಜಯಮ್ಮ. "ಆ ತಾಯವ್ವನ್ ಕೆರೆ ಏರಿ ಮ್ಯಾಲ್ ಬಂದವ್ನೆ ಅನ್ನಿಸ್ತೀತೆ. ದೂರಾದ್ರೂ ಸಮ ರೋಡ್ನಾಗ್ ಬರಾದಲ್ವಾ? ಕೆರೆ ತಾವ ಏನೋ ನೋಡವ್ನೆ" ನರಸಯ್ಯ ತನ್ನ ಅನುಮಾನ ವ್ಯಕ್ತಪಡಿಸಿದ. ಅಲ್ಲಿ ಕೊಳ್ಳಿದೆವ್ವ ತಿರುಗಾಡುತ್ತೆ ಅನ್ನೋದನ್ನು ಅವನೂ ಕೇಳಿದ್ದ. ಊರಿನ ಬಹಳ ಮಂದಿ ಅಲ್ಲಿ ಕೊಳ್ಳಿದೆವ್ವವನ್ನು ಕಂಡಿದ್ದೇವೆಂದು ಹೇಳುತ್ತಿದ್ದರು. ಕತ್ತಲಾದ ಮೇಲೆ ಯಾರೂ ಆ ದಾರಿಯಾಗಿ ಓಡಾಡುತ್ತಿರಲಿಲ್ಲ. ಕುಡಿದ ನಶೆಯಲ್ಲಿದ್ದ ಸಣ್ಣಯ್ಯ ಭಂಡ ದೈರ್ಯದಿಂದ ಆ ಹಾದಿಯಲ್ಲಿ ಬಂದಿದ್ದನೋ ಅಥವಾ ಅವನಿಗೆ ತಾನು ಆ ದಾರಿಯಾಗಿ ಹೋಗುತ್ತಿದ್ದೇನೆಂಬ ಅರಿವೂ ಇರಲಿಲ್ಲವೋ, ಯಾರಿಗೆ ಗೊತ್ತು? ರಮೇಶನಿಗೆ ದೆವ್ವ ಭೂತಗಳಲ್ಲಿ ನಂಬಿಕೆ ಇರಲಿಲ್ಲ. ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಅವನು ಇಂತಹ ಸಂಗತಿಗಳನ್ನು ನಂಬಲೂ ಬಾರದಲ್ಲವೇ?

"ಕಾಂಪೌಡ್ರನ್ನ ಕರ್ಕಂಬರ‍್ತೀನಿ. ಒಂದು ಇಂಜಕ್ಷನ್ ಕೊಟ್ರೆ ಚಿಕ್ಕಪ್ಪಂಗೆ ಜ್ವರ ಇಳಿಯುತ್ತೆ. ಬೆಳಿಗ್ಗೆ ಆಸ್ಪತ್ರೆಗೆ ಕರ್ಕಂಡು ಹೋದ್ರಾಯ್ತು" ಎಂದು ರಮೇಶ ಹೊರಗೆ ಹೋದ. ಆಸ್ಪತ್ರೆಯ ಪಕ್ಕದಲ್ಲೇ ಕ್ವಾರ್ಟರ್ಸ್ನಲ್ಲಿ ವಾಸವಿದ್ದ ಕಾಂಪೌಂಡರ್ ಶಿವಪ್ಪನಿಗೆ ವಿಷಯವನ್ನೆಲ್ಲಾ ಹೇಳಿ ತನ್ನ ಚಿಕ್ಕಪ್ಪನ ಮನೆಗೆ ಹೋಗಿ ನೋಡುವಂತೆ ಕೇಳಿಕೊಂಡ ರಮೇಶ. ಅಲ್ಲಿಂದ ಅವನು ಹೋಗಿದ್ದು ತನ್ನ ನಾಲ್ಕಾರು ಸ್ನೇಹಿತರ ಮನೆಗಳಿಗೆ. ಒಟ್ಟು ಆರು ಜನ ಹುಡುಗರು ಟಾರ್ಚು, ಧೈರ್ಯಕ್ಕಿರಲಿ ಎಂದು ಕತ್ತಿಗಳನ್ನು ತೆಗೆದುಕೊಂಡು ತಾಯವ್ವನ ಕೆರೆಯ ಕಡೆಗೆ ಹೋದರು. ಕೆರೆಯ ದಂಡೆಯ ಮೇಲೆ ನಡೆಯುತ್ತಾ ಸ್ವಲ್ಪ ದೂರ ಹೋಗುವಷ್ಟರಲ್ಲಿ ತಗ್ಗಿನಲ್ಲಿ ಹೊಗೆಯಾಡುತ್ತಿದ್ದ ಬೆಂಕಿ ಕಣ್ಣಿಗೆ ಬಿತ್ತು. ಗಾಳಿ ಬೀಸಿದಾಗ ಬಗ್ಗೆಂದು ಜೋರಾಗಿ ಹೊತ್ತಿ ಉರಿಯುತ್ತಾ ಉಳಿದಂತೆ ಹೊಗೆಯಾಡುತ್ತಾ ಇತ್ತದು. ರಮೇಶ ಕೆಳಗಿಳಿದು ಸೂಕ್ಷ್ಮವಾಗಿ ನೋಡಿದಾಗ ಯಾವುದೋ ಅನಿಲದ ವಾಸನೆ ಬರುತ್ತಿತ್ತು. ಅದು ಮೀಥೇನ್ ಎನ್ನುವುದನ್ನು ಅವನು ಊಹಿಸಿದ. ಜೌಗು ಪ್ರದೇಶಗಳಲ್ಲಿ ಕಸಕಡ್ಡಿಗಳು ಕೊಳೆತಾಗ ಅನಿಲ ಉತ್ಪಾದನೆಯಾಗುತ್ತದೆ ಎನ್ನುವುದನ್ನು ಅವನು ತಿಳಿದುಕೊಂಡಿದ್ದು ಈಗ ಸಹಾಯಕ್ಕೆ ಬಂತು. ತನ್ನ ಚಿಕ್ಕಪ್ಪ ಬೀಡಿ ಎಳೆಯುತ್ತಿದ್ದವನು ಅದನ್ನು ಎಸೆದಾಗ ಬೆಂಕಿ ಹೊತ್ತಿಕೊಂಡಿದೆಯೆಂಬುದು ಅವನಿಗೆ ಹೊಳೆಯಿತು. ಹಾಗೆಯೇ ಸುತ್ತಾ ಕಣ್ಣಾಡಿಸುತ್ತಿರುವಾಗ ಪಕ್ಕದ ಗಿಡವೊಂದರ ಮೇಲೆ ಯಾರೋ ಹಳೆಯ ಪಂಚೆಯೊಂದನ್ನು ಬಿಸಾಡಿದ್ದರು. ಗಾಳಿಗೆ ಹಾರಾಡುತ್ತಾ ವಿಚಿತ್ರ ಆಕೃತಿ ಪಡೆದುಕೊಳ್ಳುತ್ತಿದ್ದ ಅದೂ ಸಹಾ ಚಿಕ್ಕಪ್ಪನ ಭಯ ಹೆಚ್ಚಿಸಲು ಕಾರಣ ಎಂಬುದು ಅವನಿಗೆ ಅರ್ಥವಾಯಿತು. ಆ ಎಲ್ಲಾ ದೃಶ್ಯಗಳನ್ನೂ ತನ್ನ ಮೊಬೈಲಿನಲ್ಲಿ ಫೋಟೋ ತೆಗೆದುಕೊಂಡ ರಮೇಶ.

ಯುವಕರ ಗುಂಪು ರಮೇಶನ ಚಿಕ್ಕಪ್ಪನ ಮನೆಗೆ ಬಂತು. ಅಕ್ಕಪಕ್ಕದ ಮನೆಗಳವರು, ಹತ್ತಿರದ ಬೀದಿಗಳ ಒಂದಷ್ಟು ಜನ ಅಲ್ಲಿ ಜಮಾಯಿಸಿದ್ದರು. ಶಿವಪ್ಪ ಕೊಟ್ಟ ಇಂಜೆಕ್ಷನ್‍ನಿಂದ ಸಣ್ಣಯ್ಯನ ಜ್ವರ ಕಡಿಮೆಯಾಗಿ, ಅದುರುವಿಕೆ ಸ್ವಲ್ಪ ನಿಂತಿತ್ತು. ರಗ್ಗೊಂದನ್ನು ಹೊದ್ದು ಕೂತಿದ್ದ. ರಮೇಶ ಅಲ್ಲಿದ್ದ ಜನರನ್ನೆಲ್ಲಾ ಕೂರಿಸಿಕೊಂಡು ತಾನು ಕಂಡುಕೊಂಡದ್ದನ್ನೆಲ್ಲಾ ಹೇಳಿದ. ಸಣ್ಣಯ್ಯನಿಗೆ "ಚಿಕ್ಕಪ್ಪಾ, ಕೆರೆ ಏರಿ ಮೇಲೆ ಬರೋವಾಗ ನೀವು ಬೀಡಿ ಸೇದಿ ಎಸೆದ್ರಾ?" ಎಂದು ಕೇಳಿದ. ಅವನು "ಹೂ ಕಣ್ ಮಗಾ" ಅಂದಾಗ ಮೊಬೈಲಿನಲ್ಲಿದ್ದ ಫೋಟೋಗಳನ್ನು ತೋರಿಸಿ "ನೋಡಿ ನಿಮ್ ಕೊಳ್ಳೀ ದೆವ್ವಾ, ಮೋಹಿನಿ ದೆವ್ವಾ’ ಎಂದ ನಗುತ್ತಾ. ಸಣ್ಣಯ್ಯನಿಗೆ ತಾನೆಂತಹ ಪುಕ್ಕಲ ಎನ್ನಿಸಿ ನಗು ಬಂತು. ಈ ಎಲ್ಲಾ ಹಗರಣಕ್ಕೆ ತನ್ನ ಕುಡಿತದ ಚಟವೇ ಕಾರಣ ಎಂದವನಿಗೆ ನಾಚಿಕೆಯಾಯಿತು. "ಇನ್ ಮ್ಯಾಕೆ ನಾ ಕುಡಿಯಾಕಿಲ್ಲಾ, ನಮ್ ತಾಯಾಣೆ" ಎಂದು ನುಡಿದು ತಲೆತಗ್ಗಿಸಿಕೊಂಡ.


***************************kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.