ಕಂಬನಿ


ಮುಸ್ಸಂಜೆಯ ಈ ಮೂರುಸೆಲ್‍'ಗಳ ಬ್ಯಾಟರಿಯ ಬೆಳಕಿನಲ್ಲಿ ಮನದ ತುಂಬಾ ನೋವು ಇಟ್ಟುಕೊಂಡ ನಾನು ಹೇಳಹೊರಟಿರುವುದು ನನ್ನ ಪ್ರೀತಿಯ ಅಕ್ಕನ ಅಕ್ಕರೆಯ ಕಥೆಯನ್ನು.

ನನ್ನ ಎಲ್ಲಾ ಗೆಳೆಯರ ಹಾಗೂ ಸಂಬಂಧಿಕರಂತೆ ನನ್ನದೂ ಒಂದು ಸ್ಮಾರ್ಟ್‍ಫೋನ್ ಇತ್ತು. ಗೆಳೆಯರ ಸಹಾಯದಿಂದ ಕ್ರಿಯೇಟ್ ಮಾಡಿದ ಆ ಫೇಸ್‍ಬುಕ್‍'ಗೆ ನಾನು ನನ್ನದೊಂದು ಮೆಚ್ಚುಗೆಯನ್ನು ಹೇಳಲೇಬೇಕು. ಏನಪ್ಪಾ ಇವನು ಏನೇನೋ ಮಾತಾಡ್ತಾನೆ ಅಂತಾನೆ ಅಂತಿರಬಹುದು ನೀವು, ನಿಜ ಅವತ್ತೊಂದಿನ ಫ್ರೆಂಡ್ಸ್'ಗಳನ್ನು ಸರ್ಚ್‍ಮಾಡುತ್ತಿದ್ದ ನಾನು ವಿಭಿನ್ನ ಪ್ರೊಫೈಲ್ ಹೊಂದಿದ್ದ ಒಂದು ಹುಡುಗಿಗೆ ರಿಕ್ವೆಸ್ಟ್ ಕಳುಹಿಸಿದೆ. ಅವಳು ನನ್ನ ರಿಕ್ವೆಸ್ಟ್ ಒಪ್ಪಿದಳು. ದಿನೇ ದಿನೇ ಚಾಟ್ ಮಾಡ್ತಾ ತುಂಬಾ ಹತ್ತಿರವಾದೆವು. ಅವಳು ನನಗಿಂತ 3 ವರ್ಷದೊಡ್ಡವಳು. ನನ್ನನ್ನು ಪ್ರೀತಿಯಿಂದ ತಮ್ಮ ತಮ್ಮ ಎಂದು ಕರೆಯುತ್ತಿದ್ದಳು. ನಾನು ಸಹ ಅಕ್ಕರೆಯಿಂದ ಸೋನು ಅಕ್ಕ ಎಂದು ಕರೆಯುತ್ತಿದ್ದೆ. ಎಷ್ಟೋಸಾರಿ ಮನಸ್ಸಿಗೆ ಬೇಜಾರಾದಾಗ ತುಂಬಾ ನೋವಾದಾಗ ಅಕ್ಕನೊಂದಿಗೆ ಮಾತಾಡುತ್ತಿದ್ದೆ, ಯಾಕೆಂದರೆ ನನಗೆ ಅಕ್ಕ ಇರಲಿಲ್ಲ, ತಾಯಿಯನ್ನು ನನ್ನೊಡನೆ ಇರಲು ಆ ದೇವರು ಬಿಡಲಿಲ್ಲ. ಆ ಅಕ್ಕನೂ ನನಗೆ ತುಂಬಾ ಪ್ರೀತಿ ತೋರಿಸುತ್ತಿದ್ದಳು. ಏನೇ ಮಾಡಿದರೂ ಅಕ್ಕನ ಅಭಿಪ್ರಾಯ ಕೇಳಿಯೇ ಮುಂದುವರಿಯುತ್ತಿದ್ದೆ. ಫೋನಿನಲ್ಲಿ ಅಕ್ಕನ ಧ್ವನಿ ಕೇಳಿದರೆ ಸಾಕು ಎಲ್ಲಾ ದು:ಖಗಳು ಮರೆಯಾಗುತ್ತಿದ್ದವು. ಅಕ್ಕನ ಊರು ಬಾಗಲಕೋಟೆ. ಬಾಗಲಕೋಟೆಯ ಜನಾ ತುಂಬಾ ಒಳ್ಳೆಯವರು. ಒಮ್ಮೆ ಮನಸ್ಸಿಗೆ ಹಚ್ಚಿಕೊಂಡ್ರೆ ಯಾರ್ನೂ ಬಿಟ್ಟುಕೊಡೊಲ್ಲ. ಕಷ್ಟದಲ್ಲಿರುವವರಿಗೆ ತುಂಬಾ ಹೆಲ್ಪ್ ಮಾಡ್ತಾರೆ ಅಂತಿದ್ಲು, ಅದಕ್ಕೆ ನಾನು ಹೌದು ಅಕ್ಕ ನಿಜ ಎಂದೆ. ಅದಕ್ಕೆ ನಿನಗೆ ಹೇಗೆ ಗೊತ್ತು? ಅಂತ ಕೇಳಿದಳು. ನಿನ್ನೊಡಿದ್ರೆ ಗೊತ್ತಾಗಲ್ವಾ ಅಕ್ಕಾ ಅಂತಿದ್ದೆ, ಹೀಗೆ ಅಕ್ಕ ನಂಗೆ ತುಂಬಾ ಇಷ್ಟವಾಗಿದ್ರು ಬಂಗಾರದ ಹಾಗೆ ಸಿಕ್ಕ ಅಕ್ಕನಿಗೆ ಸೋನು ಅಕ್ಕ ಅಂತ ಕರಿತಿದ್ದೆ ಅವಳ ನಿಜ ಹೆಸರು ಸೋನಾಕ್ಷಿ.

ಹೀಗೆ ದಿನಕ್ಕೊಮ್ಮೆಯಾದರೂ ತಮ್ಮನೊಂದಿಗೆ ಮಾತನಾಡುತ್ತಿದ್ದ ಅಕ್ಕ ಮೂರು ದಿನವಾದರೂ ಕಾಲ್ ಮಾಡಲಿಲ್ಲ, ನಾನು ಕಾಲ್ ಮಾಡಿದರೆ ಮೊಬೈಲ್ ಸ್ವಿಚ್ಚಾಫ್, ಫೇಸ್‍ಬುಕ್ಕಿನಲ್ಲಿಯೂ ಇಲ್ಲ! ನನಗೂ ಪರೀಕ್ಷೆ ಹತ್ತಿರವಿದ್ದುದರಿಂದ ಹೋಗ್ಲಿಬಿಡು ಪರೀಕ್ಷೆ ಮುಗಿದ ಮೇಲೆ ಕಾಲ್ ಮಾಡಬಹುದು ಎಂದುಕೊಂಡು ಸುಮ್ಮನಾದೆ, ಪರೀಕ್ಷೆ ಮುಗಿದು ಒಂದುವಾರವಾದರೂ ಏನೂ ಪ್ರತಿಕ್ರಿಯೆ ಇಲ್ಲ! ಹೋಗ್ಲಿಬಿಡು ಅಕ್ಕನಿಗೆನಾದ್ರೂ ಎಕ್ಸಾಮೋ, ಕೆಲಸಾನೋ ಇರಬಹುದು ಎಂದು ಸುಮ್ಮನಾದೆ.

ಹೀಗೆ ಒಂದು ತಿಂಗಳು ಕಳೆದ ಮೇಲೆ ನಾನು, ಅನಿಲ, ಹುಸೇನಿ, ಮೆಹಬೂಬ, ಶರೀಫ ಬಾದಾಮಿ ಪಟ್ಟದಕಲ್ಲಿಗೆ ಎರಡುದಿನದ ಟೂರ್ ಹೋಗಿದ್ವಿ, ಅನಿಲ ಹೇಳಿದ ಲೇ ನಿಮ್ಮ ಅಕ್ಕ ಬಾಗಲಕೋಟೇಲಿ ಅದಾರ ಅಂದ್ಯಲ್ಲ ಹೋಗಿಬರೋಣವೇ ಎಂದ. ನನಗೂ ಖುಷಿಯಾಯ್ತು... ಇಷ್ಟು ದಿನವಾದರೂ ಅಕ್ಕನ ಮುಖವನ್ನು ನೇರವಾಗಿ ನೋಡದ ನನಗೆ ಒಳ್ಳೆಯ ಅವಕಾಶ ಎಂದುಕೊಂಡು ಹೊರಟೆವು. ಅವಳ ಮೊಬೈಲ್ ಸ್ವಿಚ್ಚಾಫ್, ಫೇಸ್‍ಬುಕ್‍'ನಲ್ಲೂ ಇಲ್ಲ. ಅವಳ ಡಿಗ್ರಿಕಾಲೇಜಿನ ಅಡ್ರೆಸ್ ಗೊತ್ತಿದ್ದರಿಂದ ನೇರವಾಗಿ ಅಕ್ಕನ ಕಾಲೇಜಿಗೆ ಹೋದ್ವಿ, ಅದು ಮಟಮಟ ಮಧ್ಯಾಹ್ನ! ಎಲ್ಲರೂ ಕಾಲೇಜು ಮುಗಿಸ್ಕೊಂಡು ಹೊರಟಿದ್ರು, ಅಲ್ಲಿಯೇ ಹೋಗುತ್ತಿದ್ದ ಹೆಣ್ಣುಮಕ್ಕಳ ಗುಂಪನ್ನು ನಿಲ್ಲಿಸಿ ನಾ ಮಾತನಾಡಿದೆ.

"ಅಕ್ಕಾ... ಸೋನಾಕ್ಷಿ ಅಂತ ಬಿಎಸ್ಸಿ ಮೂರನೆಯ ಸೆಮಿಸ್ಟರ್ ಓದ್ತಾರಲ್ಲ ಗೊತ್ತ?" ಅಂದೆ. ಅವರು ಯಾವುದೋ ಕಾಡುಪ್ರಾಣಿಗಳನ್ನು ನೋಡುವಂತೆ ನಮ್ಮನ್ನು ದಿಟ್ಟಿಸಿ ನೋಡತೊಡಗಿದರು. ಮತ್ತೆ ನಾನೇ ಮಾತನಾಡಿದೆ, ಅಕ್ಕ ನಿಮ್ಮನ್ನೆ ಮಾತನಾಡಿಸುತ್ತಿರೋದು ಎಂದೆ.

ಅದಕ್ಕೆ ಆ ಅಕ್ಕ ನಮ್ಮ ಕಡೆ ತಿರುಗಿ "ನಿಮ್ದು ಕೊಪ್ಪಳನಾ?" ಎಂದ್ಲು. "ಹೌದು" ಎಂದೆ. ನಾನು ಸೋನಾಳ ಕ್ಲೋಸ್ ಫ್ರೆಂಡ್ ಅಂದ್ಲು. ಅದಕ್ಕೆ ನಾನು ಹೌದಾ; "ಅಕ್ಕ ಸೋನಕ್ಕ ಎಲ್ಲಿ?" ಎಂದೆ. ಅವಳ ಕಣ್ಣಲ್ಲಿ ನೀರು ತುಂಬಿದವು. ಮತ್ತೆ ನಾನೇ ಹೇಳಕ್ಕ ಎಲ್ಲಿ ಎಂದೆ, "ಸಾರಿ, ಸೋನಾ ಹೋಗಿಬಿಟ್ಲು ಅಪ್ಪಿ"ಅಂದ್ಲು.

ಅದಕ್ಕೆ ನಾನು "ಏನ್ ಹೇಳತಿದ್ದೀಯಾ ಅಕ್ಕ ಅರ್ಥ ಆಗ್ತಿಲ್ಲ" ಎಂದೆ. "ಮೊನ್ನೆ ರಾಕಿ ಹಬ್ಬದ ಹಿಂದಿನ ದಿನ ನಿನಗೆ ರಾಕಿಯನ್ನು ಪೋಸ್ಟ್ ಮಾಡೋಕಂತ ಹೊರಗಡೆ ಹೋದಾಗ ವೇಗವಾಗಿ ಬಂದ ಲಾರಿ ಗುದ್ದಿಕೊಂಡು ಹೋಯ್ತು" ಎಂದು ಕರ್ಚಿಫ್‍ನಿಂದ ಕಣ್ಣೊರಿಸಿಕೊಂಡಳು. ನನಗೆ ಸಿಡಿಲು ಬಡಿದಂತಾಯ್ತು. ಮಾತು ಹೊರಡದಾದವು.

"ಅಪ್ಪಿ ನನ್ನ ಜೊತೆ ಬಾ" ಎಂದು ಹೇಳಿದಳು, ಆವಕ್ಕ. ಏನೂ ತಿಳಿಯದ ಸ್ಥಿತಿಯಲ್ಲಿದ್ದ ನಾನು ಸುಮ್ಮನೆ ಆ ಅಕ್ಕನನ್ನು ಹಿಂಬಾಲಿಸಿದೆ. ಅವರ ರೂಮ್‍'ಗೆ ಕರೆದುಕೊಂಡು ಹೋದ್ಲು. ಅಪ್ಪಿ, ನಾನು ಸೋನು ಇಬ್ರು ತುಂಬಾ ಕ್ಲೋಸ್ ಫ್ರೆಂಡ್ಸ್, ಒಂದೇ ರೂಮ್‍'ನಲ್ಲಿದ್ವಿ. ಅವಳ ಡೈರಿ ಓದಿದಾಗ ನಿನ್ನ ಬಗ್ಗೆ ಗೊತ್ತಾಯ್ತು, ಅವಳು ಕೊನೆದಿನ ನನ್ನ ಮುದ್ದು ತಮ್ಮನಿಗೆ ರಾಕಿ ಪೋಸ್ಟ್ ಮಾಡೋಕೆಂತ ಹೇಳಿ ಹೋದೋಳು ಬರಲೇ ಇಲ್ಲ, ಅವಳ ಮೊಬೈಲು ಎಲ್ಲಿ ಕಳಿತೋ ಗೊತ್ತಾಗಲಿಲ್ಲ. ಕೈಯಲ್ಲಿ ಹಿಡಿದಿದ್ದ ನವಿಲುಗರಿಯ ರಾಕಿಯೊಂದೆ ಉಳಿದಿತ್ತು ಎಂದಳು.

ಪಾಪಿ ದೇವರು ಸರಿಯಿಲ್ಲ, ಎಲ್ಲರನ್ನು ಕಸಿದುಕೊಂಡ ದೇವರು ಕೊನೆಗೆ ಅಕ್ಕನನ್ನು ಕಸಿದುಕೊಂಡು ಪರದೇಶಿಯನ್ನಾಗಿ ಮಾಡಿದ, “ಕಂಬನಿಹಾಕಲು ನನ್ನೀ ಜೀವ ಯಾಕೋ ಉಳಿಸಿದ” ಎಂಬ ಸಾಲು ನನಗೂ ನಿಜವಾಯಿತು.kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.