ಅನುರಾಗ ಪಲ್ಲವಿ -13

ಪಲ್ಲವಿಯ ಜೊತೆ ಮಾತನಾಡಿ ಮನೆಗೆ ಬಂದ ಅನುರಾಗ್, ಅಪ್ಪ ಅಮ್ಮ ಪಲ್ಲವಿಯನ್ನು ಮದುವೆಯಾಗು ಎಂದಾಗ, ಓಕೆ ಎಂದು ಹೇಳಿದ ಅನುರಾಗ್ ಗೆ 'ಪಲ್ಲವಿ ನನ್ನನ್ನು ಒಪ್ಪುತ್ತಾಳೋ ಇಲ್ಲವೋ' ಅನ್ನೋ ಯೋಚನೆ ಶುರುವಾಯಿತು,

ಹಾಗಾಗಿ ಅಪ್ಪ ಅಮ್ಮನಲ್ಲಿ ಒಂದು ವಾರ ಟೈಮ್ ಕೇಳಿದ್ದ, ಪಲ್ಲವಿಗೆ ತನ್ನ ಬಗ್ಗೆ ಇರುವ ಅಭಿಪ್ರಾಯ ತಿಳಿಯಬೇಕಾಗಿತ್ತು, ಹಾಗಾಗಿ ಮರುದಿನ ಪಲ್ಲವಿಯಲ್ಲಿ ವಿಷಯ ತಿಳಿಸಿ, ಅವಳ ಅಭಿಪ್ರಾಯ ಏನು ಅಂತ ತಿಳಿಯಬೇಕೆಂದು ನಿರ್ಧಾರ ಮಾಡಿ ಮಲಗಿದ, ಕಣ್ಣು ತುಂಬಾ ಪಲ್ಲವಿಯ ಮುದ್ದಾದ ಮುಖವೇ ತುಂಬಿಕೊಂಡಿತ್ತು...

ಬೆಳಿಗ್ಗೆ ಎದ್ದ ಅನುರಾಗ್, ಖುಷಿಖುಷಿಯಾಗಿ ಆಫೀಸ್ ಗೆ ಹೋಗಲೆಂದು ರೆಡಿಯಾಗುತ್ತಿರುವಾಗ, ಪಲ್ಲವಿಯಿಂದ ಕಾಲ್ ಬರುತ್ತದೆ, ಖುಷಿಯಾಗಿ ರಿಸೀವ್ ಮಾಡಿದ ಅನುರಾಗ್ ''ಹೇಳಿ ಪಲ್ಲವಿ'' ಎಂದಾಗ,

ಆ ಕಡೆಯಿಂದ ಪಲ್ಲವಿಯ ಅಮ್ಮ ಲಕ್ಷ್ಮಮ್ಮ ಜೋರಾಗಿ ಅಳುತ್ತ, ''ಪಲ್ಲವಿಗೆ ಆಕ್ಸಿಡೆಂಟ್ ಆಗಿದೆ'' ಎಂದು ಹೇಳಿದಾಗ, ಅನುರಾಗ್ ದಿಗಿಲಿನಿಂದ ''ಏನಾಗಿದೆ ಪಲ್ಲವಿಗೆ, ಎಲ್ಲಿದ್ದಾಳೆ ಈವಾಗ...??'' ಎಂದು ಕೇಳಿದಾಗ, ಹಾಸ್ಪಿಟಲ್ ಹೆಸರನ್ನು ಹೇಳಿ, ಕಾಲ್ ಕಟ್ ಮಾಡುತ್ತಾರೆ ಲಕ್ಷ್ಮಮ್ಮ,

ವಿಷಯ ತಿಳಿದ ಅನುರಾಗ್ ಕುಸಿದು ಬಿದ್ದಿದ್ದ, ಕುಸಿದು ಬಿದ್ದ ಮಗನನ್ನು ನೋಡಿ, ಒಳಗಿದ್ದ ಸುಜಾತಾರವರು ಓಡಿ ಬಂದು, ಅನುರಾಗ್ ನನ್ನು ಎಬ್ಬಿಸಿ ನೀರನ್ನು ಕೊಟ್ಟು ಸಮಾಧಾನಿಸಿ ಏನಾಯ್ತು ಎಂದು ವಿಚಾರಿಸಿದಾಗ, ಅಮ್ಮನಿಗೆ ಪಲ್ಲವಿಗೆ ಆಕ್ಸಿಡೆಂಟ್ ಆಗಿರುವ ವಿಷಯವನ್ನು ತಿಳಿಸುತ್ತಾನೆ, ವಿಷಯ ತಿಳಿದ ಸುಜಾತಾರವರು ಕೂಡ ಗರಬಡಿದಂತೆ ನಿಂತುಬಿಡುತ್ತಾರೆ,

ಅನುರಾಗ್ ಅಮ್ಮನನ್ನು ಸಮಾಧಾನ ಮಾಡಿ, ತಾನು ಧೈರ್ಯ ತಗೊಂಡು, ಅಮ್ಮನನ್ನು ಕರೆದುಕೊಂಡು ಹಾಸ್ಪಿಟಲ್ಗೆ ಹೋಗುತ್ತಾನೆ,

ಹಾಸ್ಪಿಟಲ್ಗೆ ಬಂದ ಅನುರಾಗ್, ನೇರವಾಗಿ ಪಲ್ಲವಿ ಇದ್ದ ವಾರ್ಡ್ ಗೆ ಹೋದಾಗ, ಅಲ್ಲಿ ಲಕ್ಷ್ಮಮ್ಮ ಅಳುತ್ತ ಕುಳಿತಿರುವುದು ಕಾಣಿಸಿತು, ಅವರ ಬಳಿಗೆ ಹೋದ ಅನುರಾಗ್ ಮತ್ತು ಸುಜಾತಾ ಲಕ್ಷ್ಮಮ್ಮ ನನ್ನು ಸಮಾಧಾನ ಮಾಡುತ್ತ, ಪಲ್ಲವಿ ಎಲ್ಲಿ ಎಂದು ಕೇಳಿದಾಗ, ಲಕ್ಷ್ಮಮ್ಮ ಐ ಸಿ ಯು ಕಡೆ ಕೈ ತೋರಿಸುತ್ತ ಜೋರಾಗಿ ಅಳತೊಡಗಿದರು,

ಐ ಸಿ ಯು ವಾರ್ಡ್ ನತ್ತ ಬಂದ ಅವರಿಬ್ಬರಿಗೂ, ಅಲ್ಲಿ ಸ್ತಬ್ಧವಾಗಿ ಮಲಗಿದ್ದ ಪಲ್ಲವಿಯನ್ನು ನೋಡಿ ದುಃಖವಾಗುತ್ತದೆ, ಸುಜಾತಾರವರು ಅಳಲು ಶುರುಮಾಡುತ್ತಾರೆ, ಅನುರಾಗ್ ಬಂದ ಕಣ್ಣೀರನ್ನು ಒರೆಸಿಕೊಂಡು ಸುದರ್ಶನ್ ಗೆ ವಿಷಯವನ್ನು ತಿಳಿಸುತ್ತಾನೆ, ಅಷ್ಟರಲ್ಲಿ ಕಾಲೇಜ್ ಗೆ ಹೋಗಿದ್ದ ಪಲ್ಲವಿಯ ತಂಗಿಯರಾದ ಪವಿತ್ರ ಪಂಚಮಿ ಕೂಡ ಬರುತ್ತಾರೆ, ಅವರಿಗೂ ಪಲ್ಲವಿ ಮಲಗಿದ್ದ ಸ್ಥಿತಿಯನ್ನು ನೋಡಿ ಜೋರಾಗಿ ಅಳು ಬರುತ್ತದೆ,

ಪಲ್ಲವಿಯನ್ನು ಹಾಸ್ಪಿಟಲ್ಗೆ ಸೇರಿಸಿದ ಅದೇ ಊರಿನವರಾದ ಗಂಗಾಧರ್ ಅಲ್ಲೇ ನಿಂತಿದ್ದರು, ಅವರಲ್ಲಿ ಇದೆಲ್ಲ ಹೇಗಾಯ್ತು ಎಂದು ಅನುರಾಗ್ ವಿಚಾರಿಸುತ್ತಾನೆ,

''ಪಲ್ಲವಿ ಆಫೀಸ್ ಗೆ ಹೋಗುತ್ತಿದ್ದಳು, ತುಂಬಾ ನಿಧಾನವಾಗಿಯೇ ಕಾರನ್ನು ಓಡಿಸುತ್ತಿದ್ದಳು, ಆದರೆ ಹಿಂದಿಂದ ಜೋರಾಗಿ ಬಂದ ಲಾರಿ, ಡ್ರೈವರ್ ನ ಕಂಟ್ರೋಲ್ ಗೆ ಸಿಗದೆ ಪಲ್ಲವಿಯ ಕಾರಿಗೆ ಗುದ್ದಿತು, ಇದ್ದಕಿದ್ದಂತೆ ಗುದ್ದಿದ ರಭಸಕ್ಕೆ ಪಲ್ಲವಿಯ ನಿಯಂತ್ರಣ ತಪ್ಪಿತು, ಕಾರ್ ಮುಂದೆ ಹೋಗುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆಯಿತು, ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂದಿನ ಭಾಗಗಳು ನುಚ್ಚುನೂರಾಗಿದೆ, ಕಾರಿನ ಗ್ಲಾಸ್ ಪಲ್ಲವಿಯ ತಲೆಗೆ ಚುಚ್ಚಿವೆ, ಹಾಗಾಗಿ ತುಂಬಾ ಬ್ಲಡ್ ಹೋಗಿದೆ ಸರ್'' ಎಂದು ಆಕ್ಸಿಡೆಂಟ್ ಆದ ರೀತಿಯನ್ನು ಹೇಳುತ್ತಾರೆ ಗಂಗಾಧರ್,

ಅವರು ಹೇಳಿದ ರೀತಿಯನ್ನು ಕೇಳಿ ಅನುರಾಗ್ ಮೈ ಒಮ್ಮೆಲೇ ನಡುಗಿತು,

ಸ್ವಲ್ಪ ಹೊತ್ತಿಗೆ ಅಲ್ಲಿಗೆ ಬಂದ ಸುದರ್ಶನ್ ಪಲ್ಲವಿಯನ್ನು ನೋಡಿ, ಅನುರಾಗ್ ನನ್ನು ಕರೆದುಕೊಂಡು ನೇರವಾಗಿ ಡಾಕ್ಟರ್ ಇದ್ದಲ್ಲಿಗೆ ಬರುತ್ತಾರೆ, ಸುದರ್ಶನ್ ನನ್ನು ನೋಡಿದ ಡಾಕ್ಟರ್ ನವೀನ್ ''ಹಾಯ್ ಡಾಕ್ಟರ್, ನೀವೆನಿಲ್ಲಿ'' ಎಂದು ಕೇಳುತ್ತ, ಕುಳಿತುಕೊಳ್ಳಲು ಹೇಳುತ್ತಾರೆ,

ಸುದರ್ಶನ್ ರವರು ಮೊದಲು ಹಾಸ್ಪಿಟಲೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ಅವರ ಜೊತೆಗಿದ್ದವರೇ ಈ ಡಾಕ್ಟರ್ ನವೀನ್ , ''ಒಹೋ ನವೀನ್, ನಾನು ಪಲ್ಲವಿಯನ್ನು ನೋಡಲೆಂದು ಬಂದೆ, ಹೇಗಿದೆ ಅವಳ ಕಂಡಿಶನ್?'' ಎಂದು ವಿಚಾರಿಸಿದಾಗ,

''ಪಲ್ಲವಿ ಪರಿಸ್ಥಿತಿ ತುಂಬಾ ಕ್ರಿಟಿಕಲ್ ಆಗಿದೆ, ಬ್ಲಡ್ ತುಂಬಾ ಹೋಗಿರೋದ್ರಿಂದ, ಏನು ಹೇಳೋದಿಕ್ಕಾಗ್ತಿಲ್ಲ ಡಾಕ್ಟರ್ '' ಎಂದು ಹೇಳಿದಾಗ, ಅನುರಾಗ್ ಅವರ ಕೈ ಹಿಡಿದುಕೊಂಡು ''ಪಲ್ಲವಿಯನ್ನು ಹೇಗಾದರೂ ಮಾಡಿ ಕಾಪಾಡಿ ಸರ್, ಪ್ಲೀಸ್'' ಎಂದು ಹೇಳಿ ಕೈ ಮುಗಿದಾಗ, ''ನನ್ನ ಕೈಲಿ ಏನಿಲ್ಲ ಅನುರಾಗ್, ನಾನು ನನ್ನ ಕೈಲಾದ ಪ್ರಯತ್ನವನ್ನು ಮಾಡುತ್ತೇನೆ, ಆಮೇಲೆ ಎಲ್ಲ ದೇವರಿಚ್ಛೆ, ಆ ದೇವರು ಮನಸ್ಸು ಮಾಡಿದರೆ ಪಲ್ಲವಿ ನಾರ್ಮಲ್ ಆಗೋ ಚಾನ್ಸ್ ಇದೆ, ದೇವರನ್ನು ಬೆಡಿಕೊಳ್ಳಿ, ನನ್ನಿಂದ ಬೇರೇನೂ ಹೇಳೋದಿಕ್ಕಾಗಲ್ಲ '' ಎಂದು ಡಾಕ್ಟರ್ ನವೀನ್ ಹೇಳಿದಾಗ,

ಸುದರ್ಶನ್ ಕಡೆಗೊಮ್ಮೆ ನೋಡಿದ ಅನುರಾಗ್, ಅಲ್ಲಿಂದ ಹೊರ ಬರುತ್ತಾನೆ, ಅವನಿಗೆ ಡಾಕ್ಟರ್ ನವೀನ್ ಹೇಳಿದ 'ದೇವರು ಮನಸ್ಸು ಮಾಡಿದರೆ ಪಲ್ಲವಿ ನಾರ್ಮಲ್ ಆಗೋ ಚಾನ್ಸ್ ಇದೆ ' ಅನ್ನೋ ಮಾತು ಕಿವಿಯಲ್ಲಿ ಮಾರ್ದನಿಸುತಿತ್ತು,

ಅನುರಾಗ್ ಯಾರಿಗೂ ಹೇಳದೆ, ಅಲ್ಲಿಂದ ನೇರವಾಗಿ ೨೦ ಕಿಲೋಮೀಟರ್ ದೂರದಲ್ಲಿದ್ದ, ಅವನ ಇಷ್ಟದ ದೇವರಾದ ಶಿವನ ದೇವಸ್ಥಾನಕ್ಕೆ ಬರುತ್ತಾನೆ, ಮೊದಲೆಲ್ಲ ಅಲ್ಲಿಗೆ ವಾರಕ್ಕೊಮ್ಮೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದ, ದೇವಸ್ಥಾನಕ್ಕೆ ಬಂದ ಅನುರಾಗ್ ನನ್ನು ನೋಡಿ ಅಲ್ಲಿ ಪೂಜೆ ಮಾಡುವ ಅರ್ಚಕರಿಗೆ ಆಶ್ಚರ್ಯವಾಗುತ್ತದೆ,

ಅವರು ನಗುತ್ತಲೇ ಅನುರಾಗ್ ನನ್ನು '' ತುಂಬಾ ವರ್ಷಗಳ ಬಳಿಕ ಬರುತ್ತಿದ್ದಿರಲ್ಲ, ಚೆನ್ನಾಗಿದ್ದೀರಾ?'' ಎಂದು ವಿಚಾರಿಸಿದಾಗ, ಅನುರಾಗ್ ಅವರಲ್ಲಿ ವಿಷಯವನ್ನು ತಿಳಿಸಿ, ಪಲ್ಲವಿಯ ಹೆಸರಲ್ಲಿ ಪೂಜೆ ಮಾಡಲು ಹೇಳುತ್ತಾನೆ, ಅವನ ಮನಸ್ಸು ವಿಲವಿಲನೆ ಒದ್ದಾಡುತಿತ್ತು, ಪಲ್ಲವಿಗೋಸ್ಕರ ದೇವರಲ್ಲಿ ಮನಸಾರೆ ಬೇಡಿಕೊಂಡು ಅಳುತಿದ್ದ,

ಅವನು ಅಳುತ್ತಿರುವುದನ್ನು ನೋಡಿದ ಅರ್ಚಕರು ''ಹೆದರಬೇಡಿ, ಪಲ್ಲವಿಗೆ ಏನು ಆಗುವುದಿಲ್ಲ, ಬೇಗ ಹುಷಾರಾಗ್ತಾಳೆ, ದೇವರಿಗೆ ಬಿಲ್ವಪತ್ರೆಯ ಪೂಜೆಯನ್ನು ಮಾಡಿದ್ದೇನೆ, ಎಲ್ಲ ಸರಿಯಾಗುತ್ತೆ, ಪಲ್ಲವಿ ಹುಷಾರಾದ ಮೇಲೆ ಇಲ್ಲಿಗೆ ಕರೆದುಕೊಂಡು ಬನ್ನಿ'' ಎಂದು ಹೇಳಿದಾಗ, ಅನುರಾಗ್ ಮನಸ್ಸಿಗೆ ಸ್ವಲ್ಪ ಸಮಾಧಾನವಾಗುತ್ತದೆ,

ಆದರೂ ಅವನು ದೇವರಲ್ಲಿ ಬೇಡಿಕೊಳ್ಳುತ್ತಲೇ ನಿಂತಿದ್ದ,

'ನಾನು ಈಗಾಗಲೇ ತುಂಬಾ ನೊಂದಿದ್ದೇನೆ, ನನ್ನ ಪ್ರೀತಿಯನ್ನು ನೀವೇ ಕಿತ್ಕೊಂದ್ರಿ ಅಂತ ನಿಮ್ಮನ್ನು ದ್ವೇಷಿಸಿದೆ, ಹಾಗಾಗಿ ನಿಮ್ಮನ್ನು ನೋಡಲು ಕೂಡ ಬರಲಿಲ್ಲ ನಾನು, ಆದರೆ ಇವಾಗ ನನ್ನ ಮನಸಲ್ಲಿ ಪಲ್ಲವಿಯ ಬಗ್ಗೆ ಮತ್ತೆ ಪ್ರೀತಿ ಮೂಡಿದೆ, ಅವಳನ್ನು ಮದುವೆಯಾಗಬೇಕೆಂಬ ಆಶೆಯನ್ನು ಇಟ್ಟುಕೊಂಡಿದ್ದೇನೆ, ನನ್ನ ಮನಸ್ಸಿನಲ್ಲಿರುವ ಈ ಆಶೆಯನ್ನೂ ಕೂಡ ಚಿವುಟಿ ಹಾಕಬೇಡಿ ತಂದೆ, ಪದೇಪದೇ ನಂಗೆ ನೋವು ಕೊಡಬೇಡಿಪ್ಪ, ನೋವು ತಡ್ಕೊಳ್ಳುವ ಶಕ್ತಿ ಕೂಡ ನಂಗಿಲ್ಲ, ಪಲ್ಲವಿಯನ್ನು ಕಾಪಾಡಿ ತಂದೆ, ನಿಮ್ಮನ್ನೇ ನಂಬಿದ್ದೀನಿ, ಅವಳನ್ನು ನಿಮ್ಮಲ್ಲಿಗೆ ಕರೆದುಕೊಂಡು ಬಂದು ಪೂಜೆ ಮಾಡಿಸುತ್ತೇನೆ, ಪಲ್ಲವಿಯನ್ನು ನನ್ನಿಂದ ದೂರ ಮಾಡಬೇಡಿ' ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಲೇ ಇದ್ದ ಅನುರಾಗ್,

ಅನುರಾಗ್ ಗೆ ಪಲ್ಲವಿಯನ್ನು ಬಿಟ್ಟು ಬದುಕುವುದು ಕಷ್ಟವೆನಿಸಿತು, ಅವನಿಗರಿವಿಲ್ಲದೇನೇ ಅವಳಿಗಾಗಿ ಡ್ರಿಂಕ್ಸ್ ಮಾಡುವುದನ್ನು ಕೂಡ ಬಿಟ್ಟಿದ್ದ, ಇವಾಗ ಅವಳಿಗೋಸ್ಕರ ದೇವಸ್ಥಾನಕ್ಕೂ ಬಂದಿದ್ದ,

ಅನುರಾಗ್ ಹಾಸ್ಪಿಟಲಲ್ಲಿ ಇಲ್ಲದಿರುವುದನ್ನು ಗಮನಿಸಿದ ಸುದರ್ಶನ್, ದೇವಸ್ಥಾನಕ್ಕೆ ಹೋಗಿರಬಹುದೆಂದು ಊಹಿಸಿಕೊಳ್ಳುತ್ತಾರೆ, ಡಾಕ್ಟರ್ ನವೀನ್ ಜೊತೆ ಸುದರ್ಶನ್ ಕೂಡ, ಪಲ್ಲವಿಯನ್ನು ಚೆಕಪ್ ಮಾಡಲು ಒಳಗಡೆ ಹೋಗುತ್ತಾರೆ, ಅವರಿಬ್ಬರಿಗೂ ಕೈ ಮುಗಿಯುತ್ತ ಲಕ್ಷ್ಮಮ್ಮ ''ಬುದ್ದಿ ನಿಮ್ಮ ಕಾಲಿಗೆ ಬೀಳ್ತೀನಿ, ನನ್ನ ಮಗಳನ್ನು ಉಳಿಸಿಕೊಡಿ, ಅವಲಿಲ್ಲಾಂದ್ರೆ ನಾವ್ಯಾರು ಬದುಕಿರೋದಿಲ್ಲ'' ಎಂದು ಅಳುತ್ತಲೇ ಹೇಳುತ್ತಿದ್ದರು,

ಅವರನ್ನು ಸಮಾಧಾನ ಮಾಡಿದ ಅವರಿಬ್ಬರೂ ಪಲ್ಲವಿಯ ವಾರ್ಡ್ ಒಳಗಡೆ ಹೋಗುತ್ತಾರೆ, ಅಲ್ಲಿದ್ದ ನರ್ಸ್ ಡಾಕ್ಟರ್ ಬಂದಿದ್ದನ್ನು ಗಮನಿಸಿ ಎದ್ದು ನಿಲ್ಲುತ್ತಾರೆ, ಅವಳನ್ನು ಪರೀಕ್ಷಿಸಿದ ನವೀನ್ ಸುದರ್ಶನ್ ಕಡೆ ತಿರುಗಿ ''ಕಂಡೀಶನ್ ಹಾಗೆ ಇದೆ, ಏನು ಬದಲಾವಣೆ ಕಾಣಿಸ್ತಿಲ್ಲ, ಬ್ಲಡ್ ಕೊಡುತ್ತಲೇ ಇದ್ದೇವೆ, ನೀವು ಬೇಕಾದ್ರೆ ನೋಡಿ ಸುದರ್ಶನ್'' ಎಂದು ಹೇಳಿದಾಗ,

ಸುದರ್ಶನ್ ಪಲ್ಲವಿಯನ್ನು ಚೆಕಪ್ ಮಾಡುತ್ತಾರೆ, ಅವರಿಗೂ ಅವಳ ಕಂಡೀಶನ್ ತಿಳಿಯುತ್ತದೆ, ಹಾಗಾಗಿ ತುಂಬಾ ನೋವಿನಿಂದಲೇ ನವೀನ್ ನ ಮುಖವನ್ನು ನೋಡಿದ ಸುದರ್ಶನ್ ಅಲ್ಲಿಂದ ಹೊರಗಡೆ ಬರುತ್ತಾರೆ,

ಡಾಕ್ಟರ್ ಏನು ಹೇಳುವರೆಂದು ಕಾಯುತ್ತಿದ್ದ ಸುಜಾತಾ ಮತ್ತು ಪಲ್ಲವಿಯ ಮನೆಯವರು, ಹೊರಗೆ ಬಂದ ಡಾಕ್ಟರ್ ಏನು ಹೇಳದೆ ಹೋದಾಗ, ಪಲ್ಲವಿ ಬದುಕುತ್ತಾಳೆ ಎಂಬ ಆಶಾಭಾವನೆಯನ್ನು ಇಟ್ಟಿದ್ದ ಎಲ್ಲರಲ್ಲಿಯೂ ನಿರಾಸೆಯ ಭಾವ ಮನೆ ಮಾಡಿತು, ಅದರೊಡನೆ ಪಲ್ಲವಿಯ ಅಮ್ಮನ ಅಳು ಮುಗಿಲುಮುಟ್ಟುವಂತಿತ್ತು, ಅವರನ್ನು ಸಮಾಧಾನ ಮಾಡಲಾಗದೆ ಸುಜಾತಾರವರು ಅಲ್ಲಿಂದ ನೇರವಾಗಿ ಡಾಕ್ಟರ್ ಇದ್ದಲ್ಲಿಗೆ ಹೋಗಿ, ಸುದರ್ಶನ್ ಮತ್ತು ನವೀನ್ ಕಡೆ ನೋಡುತ್ತಾ ''ನೀವು ಏನು ಹೇಳದೆ ಹೀಗೆ ಬಂದರೆ ಹೇಗೆ?, ಅವರಿಗೇನಾದರೂ ಸಮಾಧಾನದ ಮಾತನ್ನಾದ್ರೂ ಹೇಳಬೇಕಲ್ವಾ'' ಎಂದು ಕೇಳಿದಾಗ,

ಸುದರ್ಶನ್ ಪಲ್ಲವಿಯ ಕಂಡೀಶನ್ ಬಗ್ಗೆ ಸುಜಾತರಲ್ಲಿ ಹೇಳುತ್ತಾರೆ, ಆದರೂ ಕೂಡ ಧೈರ್ಯವನ್ನು ಕಳೆದುಕೊಳ್ಳದ ಸುಜಾತಾ ''ಪಲ್ಲವಿ ಹುಷಾರಾಗ್ತಾಳೆ, ಆ ದೇವರು ಅವಳ ಜೊತೆಗಿದ್ದಾರೆ, ನೀವು ಮೊದಲು ಹೋಗಿ ಅವಳ ಮನೆಯವರನ್ನು ಸಮಾಧಾನ ಮಾಡಿ'', ಎಂದು ಹೇಳಿದಾಗ, ಪ್ರಶ್ನಾರ್ಥಕವಾಗಿ ಅವಳ ಮುಖವನ್ನು ನೋಡಿದ ಅವರಿಬ್ಬರೂ, ಅಲ್ಲಿಂದ ಪಲ್ಲವಿಯ ಅಮ್ಮನ ಬಳಿ ಬಂದು ಅಳುತಿದ್ದ ಅವರಿಗೆ ''ಪಲ್ಲವಿ ಹುಷಾರಾಗ್ತಾಳೆ, ದೇವರಿದ್ದಾರಮ್ಮ, ಅಳಬೇಡಿ'' ಎಂದು ಸಮಾಧಾನ ಮಾಡಿ ಅಲ್ಲಿಂದ ಹೋಗುತ್ತಾರೆ,

ಡಾಕ್ಟರ್ ಹೇಳಿದ ಸಮಾಧಾನದ ಮಾತು ಬರಿ ಮಾತೆಂದು ಲಕ್ಷ್ಮಮ್ಮನಿಗೆ ಗೊತ್ತಾಗಿತ್ತು, ಅವರು ಏನೂ ಹೇಳದೆ ಮೌನವಾಗಿಬಿಟ್ಟರು,

ದೇವಸ್ಥಾನದಲ್ಲಿ ಎಲ್ಲಾ ಪೂಜೆಯನ್ನು ಮುಗಿಸಿದ ಅನುರಾಗ್ ಹೊರಡಲೆಂದು ಕಾರಿನ ಹತ್ತಿರ ಬಂದಾಗ, ಪೂಜೆ ಮಾಡಿದ ಅರ್ಚಕರು ಅವನನ್ನು ಕರೆದು ನಿಲ್ಲಲು ಹೇಳುತ್ತಾರೆ, ಅವರ ಮಾತಿಗೆ ಅಲ್ಲೇ ನಿಂತ ಅನುರಾಗ್ ಕೈಗೆ ವಿಭೂತಿಯೊಂದರ ಕಟ್ಟನ್ನು ಕೊಡುತ್ತ '' ಇದನ್ನು ಪಲ್ಲವಿಯ ಹಣೆಗೆ ಹಚ್ಚಿ, ಸ್ವಲ್ಪ ಬಾಯಿಗೆ ಹಾಕಿ, ಎಲ್ಲಾ ಒಳ್ಳೆಯದ್ದಾಗುತ್ತದೆ, ಬೇಗ ಹುಷಾರಾಗುತ್ತಾರೆ'' ಎಂದು ಹೇಳಿ ಅಲ್ಲಿಂದ ಹೋಗುತ್ತಾರೆ,

ಅಷ್ಟರವರೆಗೆ ದೇವರನ್ನು ದ್ವೇಷಿಸುತ್ತಿದ್ದ ಅನುರಾಗ್, ಪುನಃ ದೇವರ ಮೇಲೆ ನಂಬಿಕೆಯನಿಟ್ಟು, ಪಲ್ಲವಿಗೋಸ್ಕರ ಅಲ್ಲಿಗೆ ಬಂದಿದ್ದ, ಈವಾಗ ಪೂಜೆ ಮಾಡಿದ ಅರ್ಚಕರೇ ಎಲ್ಲ ಒಳ್ಳೆಯದ್ದಾಗುತ್ತೆ ಅಂತ ಹೇಳಿ ವಿಭೂತಿಯನ್ನು ಅವನ ಕೈಗೆ ಕೊಟ್ಟಿದ್ದರು, ನಂಬಿಕೆಯಿಂದ ಅವರು ಕೊಟ್ಟ ವಿಭೂತಿಯ ಕಟ್ಟನ್ನು ಭದ್ರವಾಗಿಟ್ಟುಕೊಂಡು ಅಲ್ಲಿಂದ ಹೊರಡುತ್ತಾನೆ ಅನುರಾಗ್,

ಆಸ್ಪತ್ರೆಗೆ ಬಂದ ಅನುರಾಗ್ ಪಲ್ಲವಿಯ ಕಂಡೀಶನ್ ತಿಳಿಯಲೆಂದು ಡಾಕ್ಟರ್ ಹತ್ತಿರ ಹೋಗುತ್ತಾನೆ, ಅವನು ಹೋಗುತ್ತಿದ್ದಾಗ ಡಾಕ್ಟರ್ ನವೀನ್ ಸುದರ್ಶನ್ ನಲ್ಲಿ '' ಟ್ರೀಟ್ಮೆಂಟ್ ಹಾಗೆ ಕಂಟಿನ್ಯೂ ಮಾಡೋಣ, ೪೮ ಗಂಟೆಗಳವರೆಗೆ ಕಾಯೋಣ, ಪ್ರಜ್ಞೆ ಬಂದರೂ ಬರಬಹುದು'' ಎಂದು ಹೇಳುತ್ತಿದ್ದರು, ಅವರ ಮಾತನ್ನು ಕೇಳುತ್ತ ಒಳಗಡೆ ಬಂದ ಅನುರಾಗ್ ''ನಾನು ಪಲ್ಲವಿಯನ್ನು ನೋಡಬೇಕು'' ಎಂದಾಗ, ''ಯಾಕೆ ?, ಅವಳ ಕಂಡೀಶನ್ ಹಾಗೆ ಇದೆ, ಹೊರಗಿಂದ ನೋಡು ಅನು'' ಎಂದು ಸುದರ್ಶನ್ ಹೇಳಿದಾಗ ''ಇಲ್ಲ ಡ್ಯಾಡ್, ನಾನು ಈವಾಗ್ಲೇ ಅವಳ ಹತ್ತಿರ ಹೋಗಿ ನೋಡ್ಬೇಕು'' ಎಂದು ಹಠಕ್ಕೆ ಬಿದ್ದವನಂತೆ ಹೇಳಿದಾಗ,

ಸುದರ್ಶನ್ ನವೀನ್ ಕಡೆ ನೋಡಿದಾಗ, ನವೀನ್ ಕರೆದುಕೊಂಡು ಹೋಗಿ ಎಂದು ಕಣ್ಸನ್ನೆಯಲ್ಲೇ ಹೇಳುತ್ತಾರೆ, ಸುದರ್ಶನ್ ಅನುರಾಗ್ ನನ್ನು ಕರೆದುಕೊಂಡು ಪಲ್ಲವಿಯಿದ್ದ ವಾರ್ಡನೊಳಗೆ ಹೋಗುತಿದ್ದ ಹಾಗೆ, ಸುಜಾತಾರವರು ಬಂದು ''ಎಲ್ಲೋಗಿದ್ದೆ ಅನು '' ಎಂದು ಕೇಳಿದಾಗ, ''ಒಳಗಡೆ ಹೋಗಿ ಬಂದು, ಎಲ್ಲ ಹೇಳುತ್ತೇನಮ್ಮ'' ಎಂದು ಹೇಳಿ, ಅತ್ತುಅತ್ತು ಸುಸ್ತಾಗಿ ಮಲಗಿದ್ದ ಪಲ್ಲವಿಯ ಅಮ್ಮನನ್ನು ನೋಡುತ್ತಾ, ಒಳಗಡೆ ಹೋಗುತ್ತಾನೆ,

ಒಳಗಡೆ ಬಂದ ಅನುರಾಗ್ ಪಲ್ಲವಿಯ ಸ್ಥಿತಿಯನ್ನು ನೋಡಿ ದುಃಖಿಸುತ್ತಾನೆ,

ಯಾವುದೇ ಪ್ರತಿಕ್ರಿಯೆ ಇಲ್ಲದೆ ಮಲಗಿದ್ದ ಪಲ್ಲವಿಯನ್ನು ನೋಡುತ್ತಾ, ತಾನು ತಂದಿದ್ದ ವಿಭೂತಿಯನ್ನು ತೆಗೆದು, ಅರ್ಚಕರು ಹೇಳಿದ ಹಾಗೆಯೆ ಪಲ್ಲವಿಯ ಹಣೆಗೆ ಹಚ್ಚಿ, ಬಾಯಿಗೆ ಹಾಕಿ, ಅವಳನ್ನೇ ನೋಡುತ್ತಾ ನಿಂತಿರುತ್ತಾನೆ,

ಇದನೆಲ್ಲಾ ನೋಡುತ್ತಿದ್ದ ಸುದರ್ಶನ್ ಗೆ ಒಂದು ಕಡೆ ಮಗನಿಗೆ ಪುನಃ ದೇವರ ಮೇಲೆ ನಂಬಿಕೆ ಬಂದಿರುವುದನ್ನು ನೋಡಿ ಸಂತೋಷವಾದರೂ, ಇನ್ನೊಂದು ಕಡೆ ಅನುರಾಗ್ ನನ್ನು ಮೊದಲಿನ ತರ ಮಾಡಿದ ಪಲ್ಲವಿಯ ಸ್ಥಿತಿಯನ್ನು ನೋಡಿ ದುಃಖವಾಗುತ್ತಿತ್ತು,

ಪಲ್ಲವಿಯನ್ನು ನೋಡುತ್ತ ನಿಂತಿದ್ದ ಅನುರಾಗ್ ನನ್ನು, ಅಲ್ಲೇ ಬಿಟ್ಟು ಸುದರ್ಶನ್ ಅಲ್ಲಿಂದ ಹೊರಗಡೆ ಹೋಗುತ್ತಾರೆ, ಅವರು ಹೋಗುವುದನ್ನೇ ಕಾಯುತ್ತಿದ್ದ ಅನುರಾಗ್,

ಪಲ್ಲವಿಯ ಬೆಡ್ ಹತ್ತಿರ ಕುಳಿತು, ನಿಸ್ತೇಜವಾಗಿ ಮಲಗಿದ್ದ ಪಲ್ಲವಿಯ ಕೈಯನ್ನು ಹಿಡಿದುಕೊಂಡು ''ಪಲ್ಲವಿ ಒಮ್ಮೆ ಕಣ್ಣು ತೆರೆದು ನೋಡು, ನಂಗೆ ನೀನು ಬೇಕು ಪಲ್ಲವಿ, ನನ್ನ ಬಿಟ್ಟು ಹೋಗಬೇಡ, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಪಲ್ಲವಿ, ನನ್ನ ಮನಸ್ಸಿನಲ್ಲಿದ್ದ ನೋವನ್ನು ಹೋಗಲಾಡಿಸಿದ ನೀನು, ಮತ್ತೆ ನನ್ನನ್ನು ಒಬ್ಬಂಟಿಯನ್ನಾಗಿ ಮಾಡಿ ನೋವನ್ನು ಕೊಡಬೇಡ, ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ '' ಎಂದು ಪಲ್ಲವಿಯಲ್ಲಿ ಹೇಳುತ್ತಾ ಅಳುತ್ತಿದ್ದ ಅನುರಾಗ್,

ಅನುರಾಗ್ ನ ಮನಸ್ಸಿನ ಮಾತು ಪಲ್ಲವಿಗೆ ಕೇಳಿಸುತ್ತಿರಲಿಲ್ಲ, ಹಾಗಾಗಿ ತನ್ನ ಪಕ್ಕದಲ್ಲಿ ಕುಳಿತುಕೊಂಡು ಅಳುತ್ತಿದ್ದ ಅನುರಾಗ್ ನನ್ನು, ಪಲ್ಲವಿಯಿಂದ ಸಮಾಧಾನ ಮಾಡಲಾಗಲಿಲ್ಲ,

************

(ಮುಂದುವರಿಯುವುದು.......)kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.