ಅಮ್ಮನನಗೆ ಆಗತಾನೇ ನನ್ನಮ್ಮನ ಪರಿಚಯವಾಗಿತ್ತು. ನನಗೆ ಅವಳ ಬಿಟ್ಟು ಅರೆಕ್ಷಣ ಕೂಡ ಇರುವುದು ಅಸಾಧ್ಯವಾಗಿತ್ತು. ನನ್ನಮ್ಮನ ಜೀವದ, ಜೀವನದ ಅವಿಭಾಜ್ಯ ಅಂಗವೇ ಆಗಿದ್ದೆ ನಾನು. ನನ್ನಮ್ಮನಿಗೆ ನನ್ನನ್ನು ಕಂಡರೆ ವಿಪರೀತ ಪ್ರೀತಿ, ವಾತ್ಸಲ್ಯ. ನನಗೂ ಅವಳಂದ್ರೆ ಜೀವ. ಅವಳಿಗೆ ನನ್ನ ಮೇಲೆ ಎಷ್ಟು ಕಾಳಜಿ ಅಂದ್ರೆ ಎಲ್ಲಿಗೆ ಹೋದ್ರೂ ನನ್ನನು ಜತೆಯಲ್ಲಿಯೇ ಕರೆದುಕೊಂಡು ಹೋಗ್ತಾ ಇದ್ಲು. ಅವಳು ನನ್ನಮ್ಮ, ನನ್ನನ್ನು ಕಂಡರೆ ಅವಳಿಗೆ ಪ್ರಾಣ ಅನ್ನುವುದನ್ನು ಬಿಟ್ಟರೆ ಅವಳ ಬಗ್ಗೆ ನನಗೆ ಹೆಚ್ಚೇನೂ ತಿಳಿದಿರಲಿಲ್ಲ. ಅತೀ ಕಡಿಮೆ ಅವಧಿಯಲ್ಲಿಯೇ ನಾವಿಬ್ಬರೂ ಜೀವಕ್ಕೆ ಜೀವವಾಗಿದ್ದೆವು. ಅವತ್ತೊಂದು ದಿನ ಇದ್ದಕ್ಕಿದ್ದಂತೆ ಯಾರೋ ದೊಡ್ಡ ದನಿಯಲ್ಲಿ ಕೂಗಿದಂತಾಗಿ ನನಗೆ ಒಮ್ಮೆಲೇ ಎಚ್ಚರವಾಯ್ತು! ನಾನು ಆಶ್ಚರ್ಯ, ಭಯದಿಂದ ಯಾರು ಅಂತ ನೋಡಿದೆ; ಅವರ್ಯಾರೋ ನನ್ನ ಕಡೆಯೇ ಕೈ ತೋರಿಸಿ ದೊಡ್ಡ ದನಿಯಲ್ಲಿ ಮಾತಾನಾಡುತ್ತಿದ್ದರು.

ನನ್ನಮ್ಮನಷ್ಟೇ ವಯಸ್ಸಾದ ವ್ಯಕ್ತಿ. ನೋಡಲಿಕ್ಕೆ ಲಕ್ಷಣವಾಗಿದ್ದಾರೆ. ಆದರೆ ಅವರ ಕೋಪ ಆ ವ್ಯಕ್ತಿತ್ವಕ್ಕೆ ಸರಿಹೊಂದುತಿರಲಿಲ್ಲ. ಅಮ್ಮ ಭಯದಿಂದ "ಅಮ್ಮಂಗೆ ಗೊತ್ತಾದ್ರೆ ನನ್ನ ಕೊಂದೆ ಬಿಡ್ತಾರೆ ಕಣೊ" ಎಂದು ಸಣ್ಣದನಿಯಲ್ಲಿ ಆ ವ್ಯಕ್ತಿಗೆ ಹೇಳಿದರು. ಅದಕ್ಕೆ ಆ ವ್ಯಕ್ತಿ "ಸುಮ್ನೆ ನಾ ಹೇಳ್ದಂಗೆ ಕೇಳು. ಅದನ್ನು ತೆಗೆಸಿಬಿಡು" ಅಂತ ಹೇಳಿದ್ರು. ನನ್ನಮ್ಮ "ಇಲ್ಲ. ಸಾಧ್ಯನೆ ಇಲ್ಲ. ನನ್ ಕೈಲಿ ಆಗಲ್ಲ" ಅಂತ ದುಃಖಮಿಶ್ರಿತ ಸಿಟ್ಟಿನಿಂದಲೇ ಹೇಳಿದ್ರು. ನನಗೆ ಏನೊಂದೂ ಅರ್ಥವಾಗಲಿಲ್ಲ. ನನ್ನಮ್ಮ "ನನ್ ಕೈಲಿ ಈ ಕೊಲೆ ಮಾಡೋಕೆ ಆಗಲ್ಲ. ಅರ್ಥ ಮಾಡ್ಕೊಳೊ..ಪ್ಲೀಸ್" ಅಂತ ಗದ್ಗತಿತರಾದರು. ನನ್ನಮ್ಮನ ಕಂಗಳಿಂದ ಜಾರಿದ ಕಣ್ಣೀರು ನನ್ನ ಮನಸ್ಸನ್ನು ತಾಕಿತು! ನನ್ನ ಕರುಳು ಚುರ್ ಎಂದಿತು! ನನ್ನ ಕಂಗಳು ತುಂಬಿ ಬಂದವು! ನನ್ನಮ್ಮ ಅಳುವುದನ್ನು ನನ್ನಿಂದ ನೋಡುವುದು ಕಷ್ಟವೆನಿಸಿತು. ಆ ವ್ಯಕ್ತಿ ಅಮ್ಮನ ಬಳಿ ಬಂದು "ನೋಡು. ಏನೋ ಕೆಟ್ಟ್ ಗಳಿಗೆ; ಹೀಗೆಲ್ಲ ಆಗೋಯ್ತು. ನನ್ ಪ್ರೆಂಡ್ ಒಬ್ಬ ಡಾಕ್ಟರ್ ಇದಾನೆ. ಅವನಿಗೆ ಹೇಳ್ತೀನಿ. ಎಲ್ಲೂ ವಿಷಯ ಲೀಕ್ ಆಗ್ದಂಗೆ ಅವ್ನು ಎಲ್ಲಾ ಮುಗಿಸಿಕೊಡ್ತಾನೆ. ನಾನ್ ಹೇಳ್ದಂಕೆ ಕೇಳಿದ್ರೆ ಈ ದರಿದ್ರನ ಸುಲಭವಾಗಿ ತೆಗೆಸಿಬಿಡಬಹುದು" ಅಂತ ಅಂದ್ರು. ಅಮ್ಮನ ಕಣ್ಣುಗಳು ಕೆಂಪಾದವು. ಆ ವ್ಯಕ್ತಿ "ಟೈಮ್ ತಗೊ. ಯೋಚ್ನೆ ಮಾಡು" ಅಂತ ಹೇಳಿದರು. ಅಮ್ಮ ಮರುಕ್ಷಣವೇ ಬಿಕ್ಕಳಿಸಿ ಅಳುತ್ತ ಅಲ್ಲಿಂದ ಹೊರಟುಬಂದಳು. ನಾನು ಆ ವ್ಯಕ್ತಿಯ ಕಡೆ ನೋಡಿದೆ. ಅವರು ನಿರಾಶರಾದಂತೆ ತೋರಿತು. ಅಮ್ಮ ಮನೆಗೆ ಹೋಗುವವರೆಗೂ ಅಳುತ್ತಲೇ ಇದ್ದರು. ನನ್ನ ಮನಸ್ಸು ವಿಚಲಿತವಾಯಿತು. ನನಗೆ ಏನೊಂದು ಅರ್ಥವಾಗುತ್ತಿರಲಿಲ್ಲ. ಅಮ್ಮ ಕೂಡ ಏನನ್ನೂ ಹೇಳುತ್ತಿಲ್ಲ.

ಮನೆಗೆ ಬಂದವರೆ ಅತ್ತು ಮಂಕಾಗಿದ್ದ ಮುಖವನ್ನು ತೊಳೆಯುವಂತೆ ಬಚ್ಚಲು ಮನೆಗೆ ಹೋದರು. ನಲ್ಲಿಯನ್ನು ತಿರುಗಿಸಿ ಮುಖಕ್ಕೆ ನೀರೆರಚಿಕೊಂಡು ಸುಮ್ಮನೆ ಕನ್ನಡಿಯೆದುರು ನಿಂತರು. ಮರುಕ್ಷಣವೇ 'ಪಟಾರ್' ಎಂದು ತಮ್ಮ ಕೆನ್ನೆಗೆ ತಾವೇ ಹೊಡೆದುಕೊಂಡರು. ನನಗೆ ನೋವನ್ನು ಸಹಿಸಿಕೊಳ್ಳಲಾಗಲಿಲ್ಲ. ಅಮ್ಮ ಮತ್ತೆ ಮತ್ತೆ ಕೆನ್ನೆಯು ಮೇಲೆ ಹೊಡೆದುಕೊಂಡಳು. ನನಗೆ ಸಹಿಸಲಾರದಷ್ಟು ನೋವಾಗುತ್ತಿತ್ತು. "ಅಮ್ಮ..." ಅಂತ ಜೋರಾಗಿ ಕೂಗಿಕೊಂಡರೂ ಅಮ್ಮ ನನ್ನೆಡೆಗೆ ಚೂರೂ ಲಕ್ಷ್ಯವನ್ನೇ ಕೊಡಲಿಲ್ಲ. ಇದ್ದಕ್ಕಿದ್ದಂತೆ ಅಮ್ಮ ಜೋರಾಗಿ ಅಳತೊಡಗಿದಳು! ನನಗೆ ಏನೊಂದು ಅರ್ಥವಾಗದೆ ಮನಸ್ಸು ತತ್ತರಿಸಿಹೋಯಿತು. ಅಮ್ಮ ತಡ ರಾತ್ರಿಯವರೆಗೂ ಬಚ್ಚಲಿನ ಗೋಡೆಗೆ ಒರಗಿಕೂತು ಒಂದೇ ಸಮನೆ ದುಃಖಿಸಿದಳು. ನನಗೆ ನಲ್ಲಿಯಲ್ಲಿ ಒಂದೇಸಮನೆ ನೀರು ಸುರಿಯುತ್ತಿರುವ ಶಬ್ದವನ್ನು ಬಿಟ್ಟರೆ ಬೇರೇನೂ ತಿಳಿಯುತ್ತಿರಲಿಲ್ಲ. ನಾನು ಹಾಗೆಯೇ ನಿದ್ರೆ ಹೋದೆ. ಬೆಳಿಗ್ಗೆ ಫೋನು ರಿಂಗಾದಾಗಲೇ ನನಗೆ ಎಚ್ಚರವಾಗಿದ್ದು. ಅಮ್ಮ ಕಣ್ಣೀರನ್ನು ಒರೆಸಿಕೊಂಡು ಫೋನನ್ನು ತೆಗೆದುಕೊಂಡಳು. "ಹೇಗಿದೀಯೇ? ಕೆಲ್ಸಕ್ಕಿನ್ನೂ ಹೋಗಲ್ವೇನೆ? ನೀನು ಬಂದಿದ್ರೆ ಎಷ್ಟ್ ಚೆನ್ನಾಗಿತ್ತು ಮದ್ವೆಗೆ. ಎಲ್ರೂ ನಿನ್ನ ಕೇಳೋರೆ. ಹ್ಞಾ. ನಿಮ್ಮಪ್ಪನ ಹಳೆಸಂಬಂಧಿಕರೊಬ್ರು ಸಿಕ್ಕಿದ್ರು. ಅವ್ರ್ ಕಡೆ ಯಾವ್ದೋ ಒಳ್ಳೆ ಸಂಬಂಧ ಇದ್ಯಂತೆ. ಯಾವ್ದಕ್ಕೂ ಪೋನ್ ಮಾಡಿ ಹೇಳ್ತೀನಿ ಅಂತ ಹೇಳಿದಾರೆ" ಫೋನಿನಲ್ಲಿ ಯಾರೋ ವಯಸ್ಸಾದವರೊಬ್ಬರು ಮಾತನಾಡಿದರು.

ಅಮ್ಮ ಏನೂ ಮಾತನಾಡದ್ದನ್ನು ನೋಡಿ "ಯಾಕೆ, ಹುಷಾರಿಲ್ವೆನೆ?!" ಅಂದ್ರು. ಅದಕ್ಕೆ ಅಮ್ಮ "ಇಲ್ಲಮ್ಮ. ಹುಷಾರಿದೀನಿ" ಅಂದ್ಲು. "ಸರಿ. ನಾವು ಇನ್ನೊಂದೆರ್ಡ್ ದಿನ್ದಲ್ಲಿ ಬರ್ತೀವಿ. ಹುಷಾರು" ಆಂದ್ರು. ಅಮ್ಮ "ಸರಿ" ಅಂತಷ್ಟೆ ಉತ್ತರಿಸಿ ಫೋನನ್ನು ಕಟ್ ಮಾಡಿ ಮಂಚದ ಮೇಲೆ ಮಲಗಿ ಪ್ಯಾನನ್ನೇ ದಿಟ್ಟಿಸತೊಡಗಿದರು. ಅಮ್ಮನಿಗೆ ಮತ್ತೆ ಅಳುವಷ್ಟು ಶಕ್ತಿಯೂ ಇರಲಿಲ್ಲ. ನಿಮಿಷವೂ ಕಳೆದಿರಲಿಲ್ಲ. ಫೋನು ಮತ್ತೆ ರಿಂಗಾಯಿತು. ಅಮ್ಮ ಫೋನನ್ನು ಆಫ಼್ ಮಾಡಿ ಗೋಡೆಗೆ ಎಸೆದಳು. ಫೋನು ಚೂರು ಚೂರಾಯಿತು. ಅಮ್ಮನ ಮನಸ್ಸಿನಂತೆ! ನನಗೆ ವಿಪರೀತ ಹಸಿವಾಗಿತ್ತು. ಅಮ್ಮ ನಿನ್ನೆಯಿಂದ ಏನನ್ನೂ ತಿಂದಿರಲಿಲ್ಲ. ಅಮ್ಮ ಹಾಗೆಯೇ ಕಣ್ಣು ಮುಚ್ಚಿದಳು. ಅದಾಗಲೇ ಸಂಜೆಯಾಗಿತ್ತು. ಅಮ್ಮ ಎದ್ದು ಊಟ ಮಾಡಿ ಬಾಲ್ಕನಿಯಲ್ಲಿ ಹೋಗಿ ನಿಂತಳು. ತಣ್ಣನೆ ಗಾಳಿಯು ಮುಖಕ್ಕೆ ರಾಚುತ್ತಿತ್ತು. ಮನೆಯ ಛಾವಣಿಗೆ ಗೂಡು ಕಟ್ಟಿದ್ದ ಗುಬ್ಬಚ್ಚಿ ತನ್ನ ಮರಿಗಳೊಡನೆ ಆಟವಾಡುತಲಿತ್ತು. ಮನಯೆ ಎದುರಿನ ರಸ್ತೆಯಲ್ಲಿ ಬಿಕ್ಷುಕಿಯೊಬ್ಬಳು ಕಂಕುಳಲ್ಲಿ ತನ್ನ ಎಳೆಯ ಶಿಶುವನ್ನು ಹಿಡಿದು ಸೂರ್ಯ ಮುಳುಗುವ ದಿಕ್ಕಿನೆಡೆಗೆ ಹೆಜ್ಜೆ ಹಾಕಿದಳು.

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.