ನೀನಿರಲು ಜೊತೆಯಲ್ಲಿ -6

ಕ್ಷಣಮಾತ್ರದಲ್ಲಿ ಅರ್ಪಿತಾ ಧನುಷ್ ಕಂಪನಿಯ ಹೊಸ ಡೈರೆಕ್ಟರ್ ಆದದ್ದು ಎಲ್ಲರಿಗೂ ತಿಳಿದು ಒಂದೆರಡು ದಿನದೊಳಗೆ ಕಂಪನಿ ಬೋರ್ಡ್ ಮೀಟಿಂಗ್ ಕರೆದಿದ್ದರು. ಅವರೆಲ್ಲರೆದುರು ರಂಗನಾಥ್ ಅರ್ಪಿತಾಳನ್ನು ಧನುಷ್ ಪತ್ನಿ ಎಂದು ಒಪ್ಪಿಸುವುದರಲ್ಲಿ ಸಫಲರಾಗಿದ್ದರು. ನಂತರ ಅರ್ಪಿತಾನಿಗೆ ಧನುಷ್ ಮತ್ತವಳ ಸಂಬಂಧದ ಬಗ್ಗೆ ಪ್ರಶ್ನೆಗಳ ಸುರಿಮಳೆಯೇ ಸುರಿದಿತ್ತು, ಆದರೆ ಅರ್ಪಿತಾ ಒಂದುಚೂರು ಗಾಬರಿಗೊಳ್ಳದೇ ಎಲ್ಲವನ್ನೂ ನಾಜೂಕಾಗಿ ಸಂಭಾಳಿಸಿದ್ದಳು. ಇನ್ನು ಅವಳಲ್ಲಿ ಕಂಪನಿಯ ಬಗ್ಗೆ ಏನೇ ಕೇಳಿದರು, ಸಲೀಸಾಗಿ ಉತ್ತರ ನೀಡುತ್ತಿದ್ದಳು. ಕಂಪನಿಯ ಬಗ್ಗೆ ಅವಳಾಡಿದ ಮಾತು, ಅವಳ ಧೈರ್ಯವನ್ನು ನೋಡಿ ರಂಗನಾಥ್ ಮತ್ತು ಸಿದ್ದಾರ್ಥ್ ಜೊತೆಗೆ ಬೋರ್ಡ್ ಮೆಂಬರ್ಸಿಗೆ ಶಾಕ್ ಆಗಿತ್ತು. ಮೀಟಿಂಗ್ ಎಲ್ಲಾ ಮುಗಿದ ಮೇಲೆ ಎಲ್ಲರೂ ಧನುಷ್ ಕಂಪನಿಯ ಹೊಸ ಡೈರೆಕ್ಟರ್ ಆಗಿ ಅರ್ಪಿತಾ ಮುಂದುವರೆಯುತ್ತಾಳೆ ಅಂತ ನಿರ್ಧರಿಸಿದರು.

ಬೋರ್ಡ್ ಮೆಂಬರ್ಸ್ ಎಲ್ಲಾ ಅರ್ಪಿತಾನಿಗೆ ವಿಶ್ ಮಾಡಿ ಹೋಗುತ್ತಿದ್ದರು. ಎಲ್ಲಾ ಮುಗಿದ ಮೇಲೆ ರಂಗನಾಥ್ ಅರ್ಪಿತಾ ಕ್ಯಾಬಿನಿಗೆ ಬಂದು ''ವಾಟ್ ಆ ಚಾರ್ಮ್ ಮಿಸ್ಸೆಸ್ ಅರ್ಪಿತಾ ಧನುಷ್. ಎಲ್ಲಾ ಕಳೆದುಕೊಳ್ಳುತ್ತೇವೆ ಅಂತ ತುಂಬಾ ಹೆದರಿದ್ದೆ. ಆದರೆ ನಿನ್ನ ಮಾತು, ನಿನ್ನ ಧೈರ್ಯ ಧನುಷ್ ಕಟ್ಟಿದ ಈ ಕಂಪನಿಯನ್ನು ಉಳಿಸಿತು. ನಿನಗೆ ಹೇಗೆ ಧನ್ಯವಾದ ಹೇಳಬೇಕು ಅಂತ ಗೊತ್ತಾಗುತ್ತಿಲ್ಲ'' ಅಂದಾಗ ಸಿದ್ದಾರ್ಥ್ ''ಅಂಕಲ್ ಹೀಗೆ'' ಅಂದು ಅರ್ಪಿತಾ ಮುಂದೆ ಇದ್ದ ಟೇಬಲ್ ಮೇಲೆ ಕೇಕನ್ನು ಇಟ್ಟು ''ಅರ್ಪಿತಾ ಲೆಟ್ಸ್ ಸೆಲೆಬ್ರೆಟ್'' ಅಂದು ಮೂವರು ಒಟ್ಟಿಗೆ ಕೇಕ್ ಕಟ್ ಮಾಡೋಣ ಅಂದು ಕೇಕ್ ಕಟ್ ಮಾಡಿ ಅರ್ಪಿತಾನಿಗೆ ತಿನ್ನಿಸಿದರು.

ಸಂಜೆ ಸಿದ್ದಾರ್ಥ್ ಮತ್ತು ಅರ್ಪಿತಾ ಮನೆಗೆ ಬರುವುದರೊಳಗೆ ಮನೆಯವರಿಗೆ ಕಂಪನಿಯಲ್ಲಿ ನಡೆದ ಎಲ್ಲಾ ವಿಷಯ ತಿಳಿದು ಎಲ್ಲಾ ಖುಷಿಯಿಂದ ಅವರಿಬ್ಬರಿಗಾಗಿ ಕಾಯುತ್ತಿದ್ದರು. ಅರ್ಪಿತಾ ಬಂದ ಕೂಡಲೇ ಅನುಸೂಯಾ ಅವಳನ್ನು ಗಟ್ಟಿಯಾಗಿ ತಬ್ಬಿ ಹಿಡಿದು ''ಧನುಷ್ ನಿನ್ನಿಂದ ದೂರ ಇದ್ದರೂ ಅವನು ನಿನ್ನ ಮೇಲೆ ಇಟ್ಟಿದ್ದ ಪ್ರೀತಿಯನ್ನು ನೋಡಿದಾಗ, ನಿನ್ನ ಪ್ರೀತಿಯಲ್ಲಿ ನನ್ನ ಮಗ ಹುಚ್ಚನಾಗಿದ್ದಾನೆ ಅಂತ ಎಣಿಸಿದ್ದೆ. ಆದರೆ ಇವತ್ತು ನಿನ್ನನ್ನು, ನೀನು ತೆಗೆದುಕೊಂಡ ನಿರ್ಧಾರವನ್ನು ನೋಡಿದ ಮೇಲೆ ನನ್ನ ಮಗನ ಮೇಲೆ, ನಿಮ್ಮ ಪ್ರೀತಿ ಮೇಲೆ ಹೆಮ್ಮೆ ಅನಿಸುತ್ತಿದೆ. ದೇವರಿಗೆ ನೀವಿಬ್ಬರು ಜೊತೆಗಿರುವುದು ಇಷ್ಟ ಇಲ್ಲ ಅನಿಸುತ್ತೆ, ಅದಕ್ಕೆ ಯಾವಾಗಲೂ ನಿನ್ನಿಂದ ಅವನನ್ನು, ಅವನಿಂದ ನಿನ್ನನ್ನು ದೂರ ಮಾಡುತ್ತಾ ಇರುತ್ತಾನೆ'' ಅಂದಾಗ ಅರ್ಪಿತಾ ಅನುಸೂಯನ ಕಣ್ಣೀರು ಒರೆಸಿ ''ಅಮ್ಮ, ಧನುಷ್ ಇಲ್ಲಿ ಇಲ್ಲದಿರಬಹುದು ಆದರೆ ಆತನ ನೆನಪು ನಮ್ಮ ಜೊತೆಗೆ ಯಾವಾಗಲೂ ಇರುತ್ತದೆ'' ಅಂದು ಸ್ವಲ್ಪ ಹೊತ್ತು ಅವರೆಲ್ಲರ ಜೊತೆಗೆ ಕುಳಿತು ತನ್ನ ರೂಮಿನತ್ತ ಹೊರಟಳು.

ರೂಮಿಗೆ ಬಂದ ಅರ್ಪಿತಾನಿಗೆ ಜೋರಾಗಿ ಅಳಬೇಕನಿಸಿತು. ಆಫೀಸಿನಿಂದ ಹಿಡಿದು ಮನೆಯ ತನಕ ಎಲ್ಲರಲ್ಲಿ ಧನುಷ್ ಬಗ್ಗೆಯೇ ಮಾತು ಯಾಕೋ ಅವಳಿಗೆ ಧನುಷ್ ತನ್ನ ಜೊತೆಗಿಲ್ಲ ಅನ್ನುವುದನ್ನು ನಂಬಲಾಗುತ್ತಿರಲಿಲ್ಲ. ತಕ್ಷಣ ಅವಳ ಫೋನ್ ರಿಂಗಣಿಸಿದಾಗ ಅಪ್ಪ ಫೋನ್ ಮಾಡಿದ್ದರು. ಅವರಲ್ಲಿ ಅರ್ಪಿತಾ ಕಂಪನಿಯಲ್ಲಿ ನಡೆದ ವಿಷಯ ಹೇಳಿದಾಗ ತುಂಬಾ ಖುಷಿಪಟ್ಟರು. ಅಮ್ಮನ ಜೊತೆಗೆ ಸ್ವಲ್ಪ ಮಾತನಾಡಿ ಫೋನಿಟ್ಟಳು. ಅಲ್ಲಿಗೆ ಬಂದ ಧನ್ಯಾ ಅರ್ಪಿತಾ ಪಕ್ಕ ಕುಳಿತು ''ಅತ್ತಿಗೆ ಸಾರೀ, ಅಣ್ಣ ನಿಮ್ಮ ಬಗ್ಗೆ ಹೇಳುವಾಗ ಎಲ್ಲಾ ಸುಳ್ಳು ಕಥೆ ಕಟ್ಟಿ ಹೇಳುತ್ತಾನೆ, ಅವನೇಳಿದ ಹಾಗಿರುವ ಹುಡುಗಿಯರು ಸಿನೆಮಾ, ಕಥೆ, ಕಾದಂಬರಿಗಳಲ್ಲಿ ಮಾತ್ರ ಇರುವುದು ಅಂತ ಎಣಿಸಿದ್ದೆ. ಆದರೆ ನಿಮ್ಮ ಸರಳ ಗುಣ, ಅಣ್ಣ ಸತ್ತಿದ್ದರೂ ನಿಮ್ಮ ಜೀವನದ ಬಗ್ಗೆ ಯೋಚಿಸದೇ ಅವನ ಫ್ಯಾಮಿಲಿ ಮತ್ತು ಅವನ ಕಂಪನಿಯನ್ನು ಉಳಿಸಲು ಇಲ್ಲಿ ತನಕ ಬಂದದ್ದು. ನಿಮಗೆ ಯಾವ ರೀತಿ ಧನ್ಯವಾದ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ಒಬ್ಬಳು ಏಂಜಲ್ ಬಂದು ನಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡುತ್ತಾಳೆ ಅಂತ ಸ್ಟೋರಿ ಬುಕ್ಸ್ ಮತ್ತು ಫೇರಿ ಟೇಲ್ಸ್ ಅಲ್ಲಿ ಓದಿದ್ದೆ. ಈಗ ನಿಜ ಜೀವನದಲ್ಲಿಯೂ ಎಂಜಲ್ ಇರುತ್ತಾರೆ ಅಂತ ನಿಮ್ಮನ್ನು ನೋಡಿದ ಮೇಲೆ ತಿಳಿಯಿತು. ನಿಮ್ಮ ಬಗ್ಗೆ ತಪ್ಪು ಭಾವನೆಗಳನ್ನು ಇಟ್ಟುಕೊಂಡಿದ್ದಕ್ಕೆ ರಿಯಲಿ ಸಾರೀ ಅತ್ತಿಗೆ'' ಅಂದು ಕಣ್ಣೀರೊರೆಸುತ್ತಾ ಅರ್ಪಿತಾಳನ್ನು ಗಟ್ಟಿಯಾಗಿ ತಬ್ಬಿ ಹಿಡಿದು ಅತ್ತಳು.

ಅರ್ಪಿತಾ ಧನ್ಯಾಳನ್ನು ಸಮಾಧಾನಿಸಿ ''ಧನ್ಯಾ ಹಾಗೇನಿಲ್ಲ. ಸಾರೀ ಯಾಕೆ'' ಅಂದಳು. ಧನ್ಯಾ ಆತುರದಲ್ಲಿ ''ಅಣ್ಣನ ಒಂದು ಸೀಕ್ರೆಟ್ ರೂಮಿದೆ ಬನ್ನಿ ತೋರಿಸುತ್ತೇನೆ'' ಅಂದು ಅಲ್ಲೇ ಪಕ್ಕದಲ್ಲಿಯೇ ಇದ್ದ ಧನುಷ್ ಕಬೋರ್ಡನ್ನು ಸರಿಸಿದಾಗ ಅದರ ಹಿಂದೆ ಚಿಕ್ಕ ರೂಮು ಅದರಲ್ಲಿ ಅರ್ಪಿತಾ ಮತ್ತು ಧನುಷಿನ ಸಾವಿರಾರು ಫೋಟೋಗಳು, ಅದನ್ನು ನೋಡಿದ ಅರ್ಪಿತಾನಿಗೆ ಎಸ್ಟೇಟಿನಲ್ಲಿದ್ದ ರೂಮಿನ ನೆನಪಾಯಿತು. ಇಡೀ ರೂಮನ್ನು ಧನುಷ್ ಚಿಕ್ಕ ಚಿಕ್ಕ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ. ಒಂದು ಕ್ಷಣ ಅರ್ಪಿತಾ ಆ ರೂಮಿನ ಅಲಂಕಾರ ಮತ್ತವರ ಫೋಟೋಗಳನ್ನು ನೋಡುತ್ತಾ ಕಳೆದು ಹೋಗಿದ್ದಳು. ಅವಳ ಪಕ್ಕ ಬಂದ ಧನ್ಯಾ ''ಅತ್ತಿಗೆ, ಇಲ್ಲಿ ಬನ್ನಿ'' ಅಂದು ಅಲ್ಲೇ ಇದ್ದ ಚಿಕ್ಕ ಕಬೋರ್ಡನ್ನು ತೆರೆದು ''ಇದರಲ್ಲಿ ಅಣ್ಣ ಮೂರು ವರ್ಷದಿಂದ ನಿಮಗಂತ ತೆಗೆದುಕೊಂಡ ಗಿಫ್ಟ್ಸ್, ಬರ್ತ್ ಡೇ ಗ್ರೀಟಿಂಗ್ಸ್ ಇನ್ನೂ ಏನೋನೋ ಇದೆ ನೀವೇ ನೋಡಿ'' ಅಂದು ಧನ್ಯಾ ಅಲ್ಲಿಂದ ಹೊರಟಳು. ಅರ್ಪಿತಾ ಖುಷಿಯಿಂದ ಧನುಷ್ ತನಗಾಗಿ ಕೊಂಡ ಸೀರೆ, ಮೂರು ವರ್ಷದಿಂದ ಬರೆದ ಕಾಗದಗಳು, ಗ್ರೀಟಿಂಗ್ಸ್ ಎಲ್ಲಾ ನೋಡಿದಾಗ ಅವಳ ಕಣ್ಣಲ್ಲಿ ಕಣ್ಣೀರಿತ್ತು. ಅಲ್ಲೇ ಇದ್ದ ಧನುಷ್ ಫೋಟೋದ ಪಕ್ಕ ಬಂದ ಅರ್ಪಿತಾ ''ನನ್ನಿಂದ ತುಂಬಾ ದೊಡ್ಡ ತಪ್ಪಾಯ್ತು ಕಣೋ, ಆವತ್ತು ಬೈಕ್ ಆಕ್ಸಿಡೆಂಟ್ ಆದ ದಿವಸ ನಿನ್ನ ಪ್ರೀತಿಯನ್ನು ನನ್ನಲ್ಲಿ ಹೇಳಿಕೊಂಡರೂ ನನ್ನ ಸಿಟ್ಟು, ಹಠದಿಂದಾಗಿ ನಿನ್ನನ್ನು, ನಿನ್ನ ಪ್ರೀತಿಯನ್ನು ನಿರಾಕರಿಸಿದೆ. ದೊಡ್ಡ ಪಾಪಿ ಕಣೋ ನಾನು. ಆ ದಿವಸ ನಿನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದರೆ ಇವತ್ತು ನಾವಿಬ್ಬರು ಜೊತೆಯಲ್ಲಿ ಖುಷಿಯಾಗಿರುತ್ತಿದ್ದೆವು'' ಅಂದು ಆ ಫೋಟೋವನ್ನು ಕೈಯಲ್ಲಿ ಹಿಡಿದು ಜೋರಾಗಿ ಅತ್ತಳು.

ಹೀಗೆ ಮೂರು ತಿಂಗಳಲ್ಲಿ ಅರ್ಪಿತಾ ಕಂಪನಿಯ ಎಲ್ಲಾ ವ್ಯವಹಾರದಲ್ಲಿ ಒಂದು ತಪ್ಪಿಲ್ಲದೇ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು ರಂಗನಾಥ್ ಮತ್ತು ಸಿದ್ದಾರ್ಥ್ ಅಭಿಪ್ರಾಯ ಕೇಳುತ್ತಿದ್ದಳು. ದಿನ ಕಳೆದಂತೆ ಕಂಪನಿ ನಾರ್ಮಲ್ ಸ್ಥಿತಿಗೆ ಬಂದಿತ್ತು, ಅದರ ಜೊತೆಗೆ ಧನುಷ್ ಪ್ಯಾರಿಸಿನ ಕಂಪನಿಯ ಜೊತೆ ಮುಗಿಸಿದ್ದ ಡೀಲ್ ಪ್ರಕಾರ ಅವರು ಧನುಷ್ ಕಂಪನಿಯನ್ನು ಸಂಪರ್ಕಿಸಿ ಪ್ರೊಜೆಕ್ಟನ್ನು ಶುರುಮಾಡುವಂತೆ ಹೇಳಿ ಪ್ರೋಜೆಕ್ಟಿನ ಅರ್ಧಂಶ ಹಣವನ್ನು ಕಂಪನಿಯ ಅಕೌಂಟಿಗೆ ಹಾಕಿದ್ದರು. ಇದರಿಂದ ಕಂಪೆನಿಯಾ ಎಲ್ಲಾ ಸಿಬ್ಬಂದಿಗಳಿಂದ ಹಿಡಿದು ಬೋರ್ಡ್ ಡೈರೆಕ್ಟರ್ ಎಲ್ಲರಿಗೂ ತುಂಬಾ ಖುಷಿಯಾಗಿತ್ತು. ಜೊತೆಗೆ ಅವರೆಲ್ಲರೂ ಅರ್ಪಿತಾನನ್ನು ಹೊಗಳಿ ಕೊಂಡಾಡುತ್ತಿದ್ದರು.

ಒಂದು ದಿನ ಹೀಗೆ ಅರ್ಪಿತಾ ಸಿದ್ದಾರ್ಥ್ ಆಫೀಸಿನಿಂದ ಮನೆಗೆ ಬರುವಾಗ ಅರ್ಪಿತಾ ಅಪ್ಪ ಅಮ್ಮ ಮನೆಯಲ್ಲಿದ್ದರು. ಅಪ್ಪ ಅಮ್ಮನನ್ನು ನೋಡಿದ ಅರ್ಪಿತಾನಿಗೆ ಮೊದಲು ಖುಷಿಯಾದರೆ ಅವರು ಹೇಳದೆ ಕೇಳದೆ ಬಂದದ್ದು ನೋಡಿ ಗಾಬರಿಯಾಗಿತ್ತು. ಓಡಿ ಬಂದು ಅಪ್ಪ ಅಮ್ಮನನ್ನು ತಬ್ಬಿ ಹಿಡಿದ ಅವಳು ಅವರ ಜೊತೆಗೆ ಹರಟಿ ನಂತರ ಅವಳ ರೂಮಿಗೆ ಕರೆದುಕೊಂಡು ಬಂದಳು. ರೂಮಿಗೆ ಬಂದ ತಕ್ಷಣ ರಾಮಚಂದ್ರ ''ಅಪ್ಪು, ಏನಿದು ಕೊರಳಲ್ಲಿ ಮಾಂಗಲ್ಯ, ಮತ್ತೆ ಆ ಹಣೆಯಲ್ಲಿ ಕುಂಕುಮ?'' ಅಂದು ಕುಂಕುಮವನ್ನು ಅಳಿಸಲು ಅರ್ಪಿತಾ ಸನಿಹ ಬಂದಾಗ ಅವಳು ಹೆದರಿ ಹಿಂದೆ ಸರಿದಳು. ರಾಮಚಂದ್ರ ಸಿಟ್ಟಲ್ಲಿ ''ನಡೀ ಹಾಸನಕ್ಕೆ ಹೊರೋಡೋಣ, ಕಂಪನಿ ಈಗ ತುಂಬಾ ಎತ್ತರಕ್ಕೆ ಬೆಳೆದಿದೆ. ನೀನು ಬಂದ ಕರ್ತವ್ಯ ಮುಗಿದು ಆವಾಗಲೇ ಎರಡು ಮೂರು ತಿಂಗಳಾಗಿದೆ'' ಅಂದಾಗ ಅರ್ಪಿತಾನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಅವರ ಮಾತುಗಳನ್ನು ಬಾಗಿಲಲ್ಲೇ ನಿಂತು ಕೇಳುತ್ತಿದ್ದ ಸಿದ್ದಾರ್ಥ ಹೆದರಿ, 'ಹೌದು ರಾಮಚಂದ್ರ ಅಂಕಲ್ ಬಳಿ ಒಂದು ತಿಂಗಳು ಸಮಯ ಕೇಳಿ ಅರ್ಪಿತಾನನ್ನು ನಾನು ಇಲ್ಲಿಗೆ ಕರೆದುಕೊಂಡು ಬಂದದ್ದು ಅನ್ನುವುದನ್ನು ನಾನು ಮರೆತೇ ಹೋಗಿದ್ದೆ' ಅಂತ ಮನಸ್ಸಿನಲ್ಲಿಯೇ ಯೋಚಿಸಿ ಅಲ್ಲಿಂದ ಹೊರಟನು.

ರಾತ್ರಿ ಸಿದ್ದಾರ್ಥ್ ಅಪ್ಪ ಅಮ್ಮ, ಅರ್ಪಿತಾ ಅಪ್ಪ, ಅಮ್ಮ ಜೊತೆಗೆ ಅನುಸೂಯಾ, ಧನ್ಯಾ ಎಲ್ಲಾ ಸೇರಿ ಊಟ ಮಾಡುತ್ತಿರುವಾಗ ರಾಮಚಂದ್ರ ''ಅನುಸೂಯ ಮೇಡಮ್ ಮತ್ತು ಸಿದ್ದಾರ್ಥ್, ನೀವು ಅರ್ಪಿತಾನನ್ನು ಮನೆ ಮಗಳಂತೆ ನೋಡಿಕೊಂಡಿರಿ, ನಿಮಗೆ ಹೇಗೆ ಧನ್ಯವಾದ ಹೇಳಬೇಕೆಂದು ತಿಳಿಯುತ್ತಿಲ್ಲ. ನನಗನಿಸುತ್ತೆ ಅರ್ಪಿತಾ ಇಲ್ಲಿಗೆ ಬಂದ ಕೆಲಸ ಮುಗಿದಿದೆ. ನಾಳೆ ನಮ್ಮ ಜೊತೆಗೆ ಅವಳನ್ನೂ ಕರೆದುಕೊಂಡು ಹೋಗುತ್ತೇವೆ'' ಅಂದಾಗ ಅಲ್ಲಿದ್ದ ಎಲ್ಲರಿಗೂ ಶಾಕ್ ಆಗಿತ್ತು. ಅರ್ಪಿತಾ ''ಅಪ್ಪ, ಸಡನ್ ಆಗಿ ಹಾಸನಕ್ಕೆ? ಈಗಷ್ಟೇ ಕಂಪನಿಯ ಹೊಣೆಯನ್ನು ಹೊತ್ತಿದ್ದೇನೆ ನಾನು, ಅರ್ಧಕ್ಕೆ ಕಂಪನಿ ಬಿಟ್ಟು ಬರುವುದು ಅಂದರೆ ಇಷ್ಟು ದಿನ ಪಟ್ಟ ಕಷ್ಟ ಎಲ್ಲಾ ವೇಸ್ಟ್ ಆಗುತ್ತೆ ಅಪ್ಪ. ಸ್ವಲ್ಪ ದಿನ ಟೈಮ್ ಕೊಡಿ ನನ್ನ ಕರ್ತವ್ಯ ಮುಗಿದ ಮೇಲೆ ನಾನೇ ಬರುತ್ತೇನೆ'' ಅಂದಾಗ ರಾಮಚಂದ್ರ ಸಿಟ್ಟಲ್ಲಿ ''ಆಗೋಲ್ಲ ಅಪ್ಪು, ನೀನೇನು ಮಾಡುತ್ತಿಯೋ ನನಗೆ ಗೊತ್ತಿಲ್ಲ, ನಾಳೆ ಬೆಳಿಗ್ಗೆ ನಮ್ಮ ಜೊತೆಗೆ ನೀನು ಬರುತ್ತಿದ್ದೀಯಾ ಅಷ್ಟೇ'' ಅಂದು ಅರ್ಧ ಊಟ ಮುಗಿಸಿ ಅಲ್ಲಿಂದ ಎದ್ದರು.

ರಾಮಚಂದ್ರ ಆಡಿದ ಮಾತಿನಿಂದ ಎಲ್ಲಾ ಬೇಸರಗೊಂಡಿದ್ದರು. ಶೇಖರ್ ತನ್ನ ಗೆಳೆಯನನ್ನು ಹುಡುಕಿಕೊಂಡು ಬಂದಾಗ ರಾಮಚಂದ್ರ ಹೊರಗಡೆ ಸಿಟೌಟಿನಲ್ಲಿ ಕುಳಿತ್ತಿದ್ದನ್ನು ನೋಡಿ ಅಲ್ಲಿಗೆ ಬಂದು ಅವನನ್ನು ಸಮಾಧಾನಿಸಿ. ''ತಮ್ಮ ಮಕ್ಕಳು ತಮಗಾಗಿ ಕಷ್ಟ ಪಡುತ್ತಿಲ್ಲ ಕಣೋ, ಧನುಷ್ ಕಂಪನಿಯನ್ನು ನಂಬಿಕೊಂಡು ಬದುಕುತ್ತಿರುವ ನೂರಾರು ಕುಟುಂಬಗಳಿವೆ. ಜೊತೆಗೆ ಅವನ ಟ್ರಸ್ಟಿಯಿಂದ ಬಡ ಮಕ್ಕಳಿಗಾಗಿ ನಡೆಸುತ್ತಿರುವ ಎಷ್ಟೋ ಶಾಲೆ ಕಾಲೇಜುಗಳಿವೆ. ಈಗ ನೀನು ಅರ್ಪಿತಾನನ್ನು ಇಲ್ಲಿಂದ ಕರೆದುಕೊಂಡು ಹೋದರೆ ಇವರೆಲ್ಲರ ಗತಿ ಏನಾಗಬೇಕು ಹೇಳು? ಅರ್ಪಿತಾ ಬಂದ ಮೇಲೆ ಕಂಪನಿಯ ಬೆಳವಣಿಗೆ ನೋಡಿದ್ಯಾ? ಧನುಷ್ ಸಾವಿನ ನಂತರ ತಮ್ಮ ಲಾಭಕ್ಕಾಗಿ ಅದೆಷ್ಟೋ ಕಂಪನಿಯವರು ಧನುಷ್ ಕಂಪನಿಯನ್ನು ಒಡೆಯಲು ನೋಡಿದರು. ಆದರೆ ತಮ್ಮ ಮಕ್ಕಳು ಎಲ್ಲರನ್ನು ಧೈರ್ಯದಿಂದ ಎದುರಿಸಿದ್ದಾರೆ. ರಾಮಚಂದ್ರ ನಿನಗೆ ಧನುಷ್ ಮತ್ತವನ ಫ್ಯಾಮಿಲಿ ಬಗ್ಗೆ ಒಂದು ವಿಷಯ ಹೇಳಬೇಕು ಕಣೋ. ಸಿದ್ಧಾರ್ಥ್ ಧನುಷ್ ಕಂಪನಿಯನ್ನು ಸೇರಿ ಒಂದು ವರ್ಷ ಆದ ಮೇಲೆ ಧನುಷ್ ಅಪ್ಪ ತೀರಿಕೊಂಡರು. ಬ್ಯುಸಿನೆಸ್ ಬಗ್ಗೆ ಏನು ಗೊತ್ತಿರದ ಹುಡುಗ ಧನುಷ್ ನಂತರ ಸಿದ್ದಾರ್ಥ್ ಮತ್ತು ರಂಗನಾಥ್ ಜೊತೆಯಾಗಿ ಕಂಪನಿಯನ್ನು ಉಳಿಸಿದ್ದು ಒಂದು ಮಿರಾಕಲ್ ಅನ್ನಬಹುದು. ಆವಾಗಲೇ ನನಗೆ ಹಾರ್ಟ್ ಪ್ರಾಬ್ಲಮ್ ಶುರುವಾಗಿತ್ತು. ಸಿದ್ದಾರ್ಥ್ ಧನುಷ್ ಬಳಿ ಏನೂ ಹೇಳದೆ ಕಂಪನಿಯಲ್ಲಿ ಸಾಲ ಮಾಡಿ ನನ್ನನ್ನು ಚೆನ್ನೈನ ಒಂದು ಆಸ್ಪತ್ರೆಗೆ ಸೇರಿಸಿದ್ದ. ಅಪ್ಪನನ್ನು ಉಳಿಸಿಕೊಳ್ಳಬೇಕೆಂದು ನನ್ನ ಮಗ ಮನೆಯಿಂದ ಹಿಡಿದು ಎಲ್ಲವನ್ನು ಅಡವಿಟ್ಟಿದ್ದ ಆದರೆ ನಾನು ದಿನ ಕಳೆದಂತೆ ಸಾವಿಗೆ ಹತ್ತಿರವಾಗುತ್ತಿದ್ದೆ. ಆ ಕ್ಷಣದಲ್ಲಿ ನನ್ನನ್ನು ಬದುಕಿಸಿದವನು ಧನುಷ್. ಅವನಿಗೆ ನನ್ನ ಆರೋಗ್ಯದ ಬಗ್ಗೆ ಹೇಗೆ ತಿಳಿಯಿತೋ ಗೊತ್ತಿಲ್ಲ. ಅವತ್ತು ಅವನು ನನ್ನನ್ನು ಬದುಕಿಸಿರದಿದ್ದರೆ ಇವತ್ತು ನನ್ನ ಹೆಂಡತಿ ಮತ್ತು ಮಗನ ಸ್ಥಿತಿ ಊಹಿಸಲು ಹೆದರಿಕೆಯಾಗುತ್ತದೆ. ಇದೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದರೆ ನಿನ್ನ ಮಗಳು ತಪ್ಪು ಮಾಡುತ್ತಿಲ್ಲ ಕಣೋ. ಅವಳೇ ಖುದ್ದಾಗಿ ಬಂದು ತಾನು ಪ್ರೀತಿಸಿದವನ ಕಂಪನಿ ಮತ್ತು ಫ್ಯಾಮಿಲಿಯನ್ನು ಸಂಭಾಳಿಸಿದ್ದಾಳೆ ಅಂದರೆ ಯೋಚಿಸು ಧನುಷ್ ಎಷ್ಟು ಒಳ್ಳೆಯವನಾಗಿರಬೇಕು, ಜೊತೆಗೆ ಅಪ್ಪು ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾಳೆ. ಸ್ವಲ್ಪ ಸಮಯ ಎಲ್ಲಾ ಸರಿಯಾಗುತ್ತೆ'' ಅಂದು ಗೆಳೆಯನ ಹೆಗಲ ಮೇಲೆ ಕೈಯಿಟ್ಟು ಕುಳಿತರು. ಶೇಖರ್ ಮಾತಿನಿಂದ ರಾಮಚಂದ್ರ ಸಿಟ್ಟು ಕಡಿಮೆಯಾಗಿತ್ತು. ಮರುದಿವಸ ಅವರು ಹಾಸನಕ್ಕೆ ಹೊರಡುವ ಮೊದಲು ಎಲ್ಲರೆದುರು ಅರ್ಪಿತಾಳ ಬಳಿಗೆ ಬಂದು ''ನಿನ್ನ ಆರೋಗ್ಯದ ಕಡೆಗೆ ಜೋಪಾನ, ತಿಂಗಳಲ್ಲಿ ಒಂದೆರಡು ದಿನ ಹಾಸನಕ್ಕೆ ಬಂದು ಹೋಗುತ್ತಾ ಇರು'' ಅಂದಾಗ ಅರ್ಪಿತಾ ಖುಷಿಯಿಂದ ಅಪ್ಪನನ್ನು ಗಟ್ಟಿಯಾಗಿ ತಬ್ಬಿಡಿದಳು.

ಆವಾಗಲೇ ಅರ್ಪಿತಾ ಬೆಂಗಳೂರಿಗೆ ಬಂದು ಏಳೆಂಟು ತಿಂಗಳು ಕಳೆದಿತ್ತು. ಸಿದ್ದಾರ್ಥ್ ಅಪ್ಪ ಅಮ್ಮ ಅವರ ಮನೆಗೆ ವಾಪಸ್ಸಾಗಿದ್ದರು. ಅರ್ಪಿತಾ, ಅನುಸೂಯ ಮತ್ತು ಧನ್ಯಾ ಜೊತೆಗೆ ಖುಷಿಯಾಗಿದ್ದಳು. ಹೀಗೆ ಒಂದು ದಿನ ರಂಗನಾಥ್ ಅವಳಲ್ಲಿ ತನ್ನ ಕ್ಯಾಬಿನಿಗೆ ಬರಲು ಹೇಳಿ ''ಅರ್ಪಿತಾ, ನಿನ್ನ ಬಗ್ಗೆ ಏನು ಯೋಚನೆ ಮಾಡಿದ್ದೀಯಾ?'' ಅಂದಾಗ ಅರ್ಪಿತಾ ನಕ್ಕು ''ಅಂಕಲ್, ನನ್ನ ಬಗ್ಗೆ ಏನು?'' ಅಂದಳು. ರಂಗನಾಥ್ ''ಅರ್ಪಿತಾ, ಧನುಷ್ ಕಂಪನಿ ಉಳಿಸಲು ನೀನು ಧನುಷ್ ಹೆಂಡತಿಯಾಗಿ ಇಲ್ಲಿಗೆ ಬಂದೆ, ಆದರೆ ಕಂಪನಿ ಉಳಿಸುವ ಬರದಲ್ಲಿ ನಿನ್ನ ಬಗ್ಗೆ ನಿನ್ನ ಭವಿಷ್ಯದ ಬಗ್ಗೆ ನಾವ್ಯಾರು ಏನನ್ನು ಯೋಚಿಸಲಿಲ್ಲ'' ಅಂದಾಗ ಅರ್ಪಿತಾ ''ಅಂಕಲ್, ನಾನು ಇಲ್ಲಿ ಖುಷಿಯಾಗಿದ್ದೇನೆ. ಇಬ್ಬಿಬ್ಬರು ಅಪ್ಪ ಅಮ್ಮನವರು, ಸ್ವಂತ ಮಗಳಿಗಿಂತ ಜಾಸ್ತಿಯಾಗಿ ಪ್ರೀತಿಸುವ ಅನುಸೂಯಾ ಆಂಟಿ ಇನ್ನೇನು ಬೇಕು ಜೀವನದಲ್ಲಿ? ಐ ಆಮ್ ಹ್ಯಾಪಿ ಅಂಕಲ್'' ಅಂದಳು. ಅದಕ್ಕೆ ರಂಗನಾಥ್ ''ಹಾಗಲ್ಲಮ್ಮಾ, ನಿನ್ನ ಮದುವೆಯ ಬಗ್ಗೆ?, ಮುಂದಿನ ಜೀವನದ ಬಗ್ಗೆ?" ಅಂದಾಗ ಅರ್ಪಿತಾ ಕತ್ತಲ್ಲಿದ್ದ ತಾಳಿಯನ್ನು ಕೈಯಲ್ಲಿ ಹಿಡಿದು ''ಅಂಕಲ್ ಮನಸ್ಸಿನ ಮದುವೆ ಧನುಷ್ ಜೊತೆಗೆ ಯಾವಾಗಲೋ ನಡೆದು ಹೋಗಿದೆ. ಅವನ ನೆನಪುಗಳೊಂದಿಗೆ ಖುಷಿಯಾಗಿದ್ದೇನೆ'' ಅಂದು ಸುಮ್ಮನಾದಳು.

ರಂಗನಾಥ್ ''ಅಲ್ಲಮ್ಮ, ಎಷ್ಟು ದಿನ ಅಂತ ಈ ತಾಳಿಯೊಂದಿಗೆ ಧನುಷ್ ಹೆಂಡತಿಯಾಗಿರ್ತೀಯಾ? ಧನುಷ್ ಕಂಪನಿಯನ್ನು ಉಳಿಸಲು ಇದು ನಾವಾಡಿದ ನಾಟಕ ಅಷ್ಟೇ ಆದರೆ ನೀನು?" ಅಂದಾಗ ''ಅಂಕಲ್ ಲೆಟ್ ಇಟ್ ಬಿ, ಹೇಳಿದ್ನಲ್ಲಾ ಐ ಆಮ್ ಹ್ಯಾಪಿ'' ಅಂದ ಅರ್ಪಿತಾ ಅಲ್ಲಿಂದ ಎದ್ದು ಹೊರಗೆಬರಬೇಕು ಅನ್ನುವಾಗ ಕ್ಯಾಬಿನ್ ಬಾಗಿಲ ಬಳಿ ಅವರ ಕಂಪನಿಯ ಅಕೌಂಟ್ ಹೆಡ್ ನಾರಾಯಣ್ ನಿಂತಿದ್ದರು. ಅವರನ್ನು ನೋಡಿದ ಅರ್ಪಿತಾನಿಗೆ ಇವರು ಯಾಕೆ ಇಲ್ಲಿ ಈ ಹೊತ್ತಿಗೆ ಅಂದು ಯೋಚಿಸುತ್ತಾ ತನ್ನ ಕ್ಯಾಬಿನಿಗೆ ಬಂದಳು. ಮರುದಿವಸ ಇಡೀ ಕಂಪನಿಯಲ್ಲಿ ಅರ್ಪಿತಾ ಧನುಷ್ ತಾಳಿ ಕಟ್ಟಿದ ಹುಡುಗಿ ಅಲ್ಲ, ಅವರಿಬ್ಬರ ಮದುವೆಯೇ ಆಗಲಿಲ್ಲ ಅನ್ನುವ ಮಾತುಗಳು. ಇದೆಲ್ಲಾ ಕೇಳಿದ ಸಿದ್ದಾರ್ಥ್, ರಂಗನಾಥ್ ಜೊತೆಗೆ ಅರ್ಪಿತಾಳಿಗೂ ಗಾಬರಿಯಾಗಿತ್ತು. ದಿನವಿಡೀ ಬೋರ್ಡ್ ಡೈರೆಕ್ಟರ್ಸ್ ಫೋನಿನ ಮೇಲೆ ಫೋನ್ ಅರ್ಪಿತಾ ಎಲ್ಲಾವುದಕ್ಕೂ ಉತ್ತರ ಕೊಟ್ಟು ಕೊಟ್ಟು ತುಂಬಾ ಸೋತಿದ್ದಳು.

ನಂತರದ ಒಂದೆರಡು ದಿನದಲ್ಲಿ ಸಡನ್ ಆಗಿ ಬೋರ್ಡ್ ಮೀಟಿಂಗ್ ಕರೆದು, ಅರ್ಪಿತಾ ಮತ್ತು ಧನುಷ್ ಮದುವೆಯ ಬಗ್ಗೆ ಎಲ್ಲರೆದುರು ಇಲ್ಲ ಸಲ್ಲದ ಮಾತುಗಳು, ಪುನಃ ಪುನಃ ಕೇಳಿದ ಪ್ರಶ್ನೆಗಳನ್ನೇ ಅರ್ಪಿತಾನಲ್ಲಿ ನೂರಾರು ಬಾರಿ ಕೇಳಿ ಅವಳ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಅರ್ಪಿತಾ ತನ್ನ ತಾಳ್ಮೆಯನ್ನು ಕಳೆದುಕೊಂಡು ಅವರೆಲ್ಲರ ಎದುರು ಜೋರಾಗಿ ''ಹೌದು ನಾನು ಧನುಷ್ ಮದುವೆಯಾಗಲಿಲ್ಲ. ನಾವಿಬ್ಬರು ಪ್ರೇಮಿಗಳು ಮಾತ್ರ. ಧನುಷ್ ಕಟ್ಟಿದ ಈ ಕಂಪನಿಯನ್ನು ಉಳಿಸಬೇಕಾಗಿತ್ತು. ಅದಕ್ಕೆ ಅವನ ಬಗ್ಗೆ ಎಲ್ಲಾ ಗೊತ್ತಿದ್ದ ನಾನು ಈ ನಿರ್ಧಾರ ತಗೊಂಡಿದ್ದು'' ಅಂದು ಅವಳ ಕುರ್ಚಿಯಲ್ಲಿ ಕುಸಿದು ಕುಳಿತು ಜೋರಾಗಿ ಅತ್ತಳು. ಅವಳ ಮಾತು ಕೇಳಿ ಎಲ್ಲರಿಗೂ ಶಾಕ್ ಆಗಿತ್ತು. ಯಾರೋ ಒಬ್ಬ ಅಪರಿಚಿತ ಹುಡುಗಿಯನ್ನು ಕರೆತಂದು ಧನುಷ್ ಪತ್ನಿ ಎಂದು ಪರಿಚಯಿಸಿ ಪೂರ್ತಿ ಕಂಪನಿಯ ಆಡಳಿತವನ್ನೇ ಅವಳ ಕೈಗಿಟ್ಟಿದ್ದೀರಿ, ಎಲ್ಲಾದರೂ ಅವಳು ನಾವು ಕೊಟ್ಟ ಅಧಿಕಾರವನ್ನು ದುರುಪಯೋಗ ಮಾಡಿದ್ದರೆ ಏನು ಮಾಡುತ್ತಿದ್ರಿ ಅಂತಾ ಎಲ್ಲಾ ಬೋರ್ಡ್ ಡೈರೆಕ್ಟರ್ಸ್ ಸಿದ್ದಾರ್ಥ್ ಮತ್ತು ರಂಗನಾಥ್ ಮೇಲೆ ಸಿಡಿದಿದ್ದರು. ಅದೇ ಕ್ಷಣದಲ್ಲಿ ಅವಳನ್ನು ಡೈರೆಕ್ಟರ್ ಪದವಿಯಿಂದ ಕೆಳಗಿಳಿಸಿದ ಕೆಲವು ಡೈರೆಕ್ಟರ್ಸ್ ಅವಳ ಮೇಲೆ ಫ್ರಾಡ್ ಕೇಸ್ ಹಾಕುವುದಾಗಿ ಬೆದರಿಸಿದ್ದರು. ಸಿದ್ದಾರ್ಥ್ ಮತ್ತು ರಂಗನಾಥ್ ಅರ್ಪಿತಾ ಪರವಾಗಿ ಎಷ್ಟು ಮಾತನಾಡಲೂ ಪ್ರಯತ್ನಿಸಿದರೂ ಅರ್ಪಿತಾನೇ ಖುದ್ದಾಗಿ ತಪ್ಪೊಪ್ಪಿಕೊಂಡ ಕಾರಣ ಅವರ ಮಾತನ್ನು ಯಾರು ಕೇಳಲು ತಯಾರಿರಲಿಲ್ಲ.

ಸಿದ್ದಾರ್ಥ್ ಯಾವುದು ನಡೆಯಬಾರದು ಅಂತ ಎಣಿಸಿದ್ದನೋ ಅದೇ ನಡೆದಿತ್ತು. ಅವನಿಗೆ ಇದೆಲ್ಲಾ ಅಕೌಂಟ್ ಹೆಡ್ ನಾರಾಯಣ್ ಮಾಡಿದ್ದು ಅಂತ ತಿಳಿಯಲು ಹೆಚ್ಚು ದಿನ ಬೇಕಾಗಿರಲಿಲ್ಲ. ಸಿದ್ದಾರ್ಥ್ ಅವನನ್ನು ಕೆಲಸದಿಂದ ತೆಗೆದು ಹಾಕಿದ್ದ. ಇದೆಲ್ಲಾ ಆದ ಮೇಲೆ ಅರ್ಪಿತಾ ತುಂಬಾ ಮೌನಿಯಾಗಿದ್ದಳು, ಮನೆಯಲ್ಲೇ ಇದ್ದ ಅವಳಲ್ಲಿ ಸಿದ್ದಾರ್ಥ್ ಆಫೀಸಿಗೆ ಬಾ ಅಂತ ಎಷ್ಟು ಕರೆದರೂ ಅವಳು ಬರುತ್ತಿರಲಿಲ್ಲ. ಅವಳ ಈ ಸ್ಥಿತಿ ನೋಡಿ ಸಿದ್ದಾರ್ಥ್ ಮತ್ತು ರಂಗಾನಾಥ್ ಜೊತೆಗೆ ಅನುಸೂಯಾ ಕೂಡಾ ತುಂಬಾ ಹೆದರಿದ್ದರು. ಸಿದ್ದಾರ್ಥ್ ಧೈರ್ಯ ಮಾಡಿಕೊಂಡು ಅರ್ಪಿತಾನಲ್ಲಿ ''ಅರ್ಪಿತಾ ಈ ಸಮಯದಲ್ಲಿ ನೀನೇ ಧೈರ್ಯ ಕಳೆದುಕೊಂಡರೆ ಹೇಗೆ?" ಅಂದಾಗ ಅರ್ಪಿತಾಳ ಮೌನವೇ ಅವನ ಪ್ರಶ್ನೆಗೆ ಉತ್ತರವಾಗಿತ್ತು. ರಂಗನಾಥ್ ಕೂಡಾ ಅರ್ಪಿತಾ ಬಳಿ ಮಾತನಾಡಿ ಸೊತ್ತಿದ್ದರು.

ಒಂದೆರಡು ದಿನದ ಮೇಲೆ ಅರ್ಪಿತಾ ಮನೆಯಲ್ಲೇ, ಅನುಸೂಯಾ ಮತ್ತು ಧನ್ಯಾ ಜೊತೆಗೆ ನ್ಯೂಸ್ ನೋಡುತ್ತಾ ಕುಳಿತಿದ್ದಳು. ತಕ್ಷಣ ಕಾಲಿಂಗ್ ಬೆಲ್ ಆದಾಗ ಧನ್ಯಾ ಬಾಗಿಲು ತೆರೆದು ಗಾಬರಿಯಿಂದ ಅಮ್ಮ ಅಂತ ಒಳಗೆ ಓಡಿ ಬಂದಳು. ಅವಳನ್ನು ನೋಡಿದ ಅರ್ಪಿತಾ ಮತ್ತು ಅನುಸೂಯಾ ಏನಾಯ್ತು ಅಂತ ಕೇಳಿದಾಗ ಅವರ ಎದುರು ನಾಲ್ಕೈದು ಜನ ಪೊಲೀಸ್ ನಿಂತಿದ್ದರು. ಧನ್ಯಾ ತನ್ನ ರೂಮಿಗೆ ಓಡಿ ಹೋಗಿ ಸಿದ್ದಾರ್ಥಿಗೆ ವಿಷಯ ತಿಳಿಸಿದಾಗ ಸಿದ್ದಾರ್ಥ್, ರಂಗನಾಥ್ ಜೊತೆಗೆ ಒಂದರ್ಧ ಗಂಟೆಯಲ್ಲಿ ಧನುಷ್ ಮನೆಗೆ ಬಂದನು. ಸಿದ್ದಾರ್ಥ್ ಪೋಲೀಸ್ ಇನ್ಸ್ಪೆಕ್ಟರಲ್ಲಿ ಏನು ವಿಷಯ ಅಂತ ಕೇಳಿದಾಗ, ಇನ್ಸ್ಪೆಕ್ಟರ್ ಒಂದು ಲೆಟರನ್ನು ಸಿದ್ದಾರ್ಥ್ ಮುಂದೆ ಹಿಡಿದು ''ಅರ್ಪಿತಾ ಮೇಲೆ ಅರೆಸ್ಟ್ ವಾರೆಂಟ್ ಇದೆ, ಮೋಸ ವಂಚನೆ ಕೇಸಿನಲ್ಲಿ ನಿಮ್ಮ ಕಂಪನಿಯ ಬೋರ್ಡ್ ಡೈರೆಕ್ಟರ್ಸ್ ಕೇಸ್ ಹಾಕಿದ್ದಾರೆ ಅರೆಸ್ಟ್ ಮಾಡಲು ಬಂದಿದ್ದೇವೆ'' ಅಂದಾಗ ಎಲ್ಲರಿಗೂ ಶಾಕ್ ಆಗಿತ್ತು. ಸಿದ್ದಾರ್ಥ್ ಸಿಟ್ಟಲ್ಲಿ ''ಇದು ಸಾಧ್ಯವಿಲ್ಲ ಸರ್, ಅರ್ಪಿತಾ ಧನುಷ್ ಮದುವೆ ವಿಷಯದ ಬಗ್ಗೆ ಅವತ್ತು ಕಂಪನಿಯಲ್ಲೇ ಎಲ್ಲಾ ಡೈರೆಕ್ಟರ್ಸ್ ಎದುರುಗಡೆ ಡಿಸೈಡ್ ಆಗಿದೆ ಸರ್, ಪುನಃ ಈ ಕಂಪ್ಲೇಂಟ್ ಎಲ್ಲಾ ಯಾಕೆ? ಹೇಗೆ ಸರ್? ಇದು ಸಾಧ್ಯವೇ ಇಲ್ಲ'' ಅಂದಾಗ ಇನ್ಸ್ಪೆಕ್ಟರ್ ''ಅದನ್ನೆಲ್ಲಾ ನೀವು ಕೋರ್ಟಿನಲ್ಲಿ ನೋಡಿಕೊಳ್ಳಿ'' ಅಂದರು. ಅವರ ಮಾತನ್ನೆಲ್ಲಾ ಕೇಳಿದ ಅರ್ಪಿತಾನಿಗೆ ಶಾಕ್ ಆಗಿತ್ತು. ರಂಗನಾಥ್ ಇನ್ಸ್ಪೆಕ್ಟರ್ ಬಳಿ ಎಷ್ಟು ಮಾತನಾಡಲು ಪ್ರಯತ್ನಿಸಿದರೂ ಇನ್ಸ್ಪೆಕ್ಟರ್ ಯಾರ ಮಾತನ್ನು ಕೇಳಲು ತಯಾರಿರಲಿಲ್ಲ, ಸ್ವಲ್ಪದರಲ್ಲೇ ಲೇಡಿಸ್ ಕಾನ್ಸ್ಟೇಬಲ್ ಅರ್ಪಿತಾಳನ್ನು ಪೊಲೀಸ್ ಸ್ಟೇಷನಿಗೆ ಕರೆದುಕೊಂಡು ಹೋಗುವಾಗ ಸಿದ್ದಾರ್ಥ್ ಮತ್ತು ರಂಗನಾಥ್ ಕೂಡಾ ಅರ್ಪಿತಾ ಜೊತೆಗೆ ಪೊಲೀಸ್ ಸ್ಟೇಷನಿಗೆ ಹೊರಟರು.

********

(-------ಮುಂದುವರೆಯುವುದು-------)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.