ಕಾಯುತ್ತಿದ್ದೇನೆ

ಹೆಂಡತಿ ಮತ್ತು ಮಗನ ಮಾತು ಕೇಳಿದ ಧಣಿಗಳು, ನಿಸ್ಸಾಹಾಯಕರಾಗಿ ತಮ್ಮ ತೊಡೆ ಸಂಧಿಯನ್ನು ಜೋರಾಗಿ ತುರಿಸುತ್ತಾರೆ. ಪರ ಪರ ಸದ್ದು ಹೇಸಿಗೆ ತರಿಸುತ್ತದೆ. ಅವರ ಹೆಂಡತಿ, ಚಿಕ್ಕ ಬಟ್ಟಲಲ್ಲಿ ಎಣ್ಣೆ ತರುತ್ತಾರೆ. ಧಣಿಗಳು ತಮ್ಮ ತಲೆ ಎಡ ಬದಿಗೆ ಬಗ್ಗಿಸಿ, ಎಣ್ಣೆ ಹಾಕಿಸಿಕೊಳ್ಳಲು ಹೆಂಡತಿಗೆ ಬಲ ಕಿವಿ ಒಡ್ಡುತ್ತಾರೆ. ನಿರಾಶನಾದ ನಾನು ಹೊರ ಬಂದು, ಜಗಲಿಯ ಮೇಲೆ ಕುಕ್ಕರಗಾಲಿನಲ್ಲಿ ಕುಳಿತುಕೊಳ್ಳುತ್ತೇನೆ, ತಲೆ ತುರಿಸುತ್ತೇನೆ.

ಅಂದು, ಮಗ ದನ ಮೇಯಿಸಲು ಹೋಗಿದ್ದ. ಧಣಿಗಳು, ಶಾಲೆಗೆ ಹೋಗಿಲ್ಲವೇ ಎಂದು ಗದರಿ ಆತನನ್ನು ಮನೆಗೆ ಕಳುಹಿಸಿದ್ದರು. ಬೈಲಿಗೆ ಬಂದಿದ್ದ ಅವರು, ನಮ್ಮ ಗುಡಿಸಲ ಬಳಿ ಬಂದು, ಮಗನನ್ನು ಶಾಲೆಗೆ ಏಕೆ ಕಳುಹಿಸಿಲ್ಲ ಎಂದು ನನ್ನ ಹೆಂಡತಿಗೂ ಬೈದಿದ್ದರು.

ಮಗ ಶಾಲೆಗೆ ಹೋದ. ನನ್ನ ಮಗ ಕಲಿಯುವುದರಲ್ಲಿ ಜಾಣ. ಬೇರೆ ಕೆಲಸದಲ್ಲೂ ಚುರುಕು. ಪಾಸಾಗುತ್ತಾ ಹೋದ. ಧಣಿಗಳ ಮಗ, ನನ್ನ ಮಗನಿಗಿಂತಲೂ ಒಂದು ತರಗತಿಯಲ್ಲಿ ಮೇಲಿದ್ದ. ಧಣಿಗಳು, ತಮ್ಮ ಮಗನ ಹಳೆಯ ಪುಸ್ತಕ ಕೊಡಿಸಿದರು. ಆತನ ಹಳೆಯ ಅಂಗಿ ಚಡ್ದಿ ಕೊಟ್ಟರು. ಅವರ ಪೋಕರಿ ಮಗ, ನನ್ನ ಮಗನಿಗೆ ಅವಮಾನ ಮಾಡಲಿಲ್ಲ. ಆ ದಡ್ಡ ಹುಡುಗನಿಗೆ ನನ್ನ ಮಗನ ಮೇಲೆ ಅಭಿಮಾನ. ಆತ ಚೆಂಡು ಆಡುವಾಗ, ದೂರದಲ್ಲಿ ಬಿದ್ದ ಚೆಂಡು ತರಲೋ, ಕುಟ್ಟಿ ದೊನ್ನೆ ಆಡುವಾಗ, ಗೊಬ್ಬರ ಮರದ ದಂಟಿನಿಂದ ಕುಟ್ಟಿ ದೊನ್ನೆ ತುಂಡು ಮಾಡಿಕೊಡುವುದೋ, ಕೊತ್ತಲಿಗೆಯ ಬ್ಯಾಟ್ ಮಾಡಿ ಕೊಡುವುದೋ ನನ್ನ ಮಗನ ಕೆಲಸ. ಹೀಗೆ ಸಾಗಿತ್ತು ಅವರ ಗೆಳೆತನ.

ನಾನು, ಧಣಿಗಳ ಹೊಲವನ್ನು ಗೇಣಿಗೆ ತೆಗೆದುಕೊಂಡು, ವರ್ಷ ವರ್ಷ ಗೇಣಿ ಕೊಡುತ್ತಾ, ಬೆಳೆದ ತರಕಾರಿ ಕೊಡುತ್ತಾ, ಅವರ ಹೊಲದಲ್ಲೂ ಉಳುತ್ತಾ ಇದ್ದೇನೆ. ಉಳಿದವರಂತೆ ನಾನು ಡಿಕ್ಲರೇಷನ್ ಕೊಡಲಿಲ್ಲ. ಧಣಿಗಳು ದೇವರ ಸಮಾನ. ನಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡುವವರು ಅವರು. ಅಂತಹ ಮನುಷ್ಯನ ವಿರುದ್ಧ ಹೋಗಲು ನನ್ನ ಮನಸ್ಸಿಗೆ ಬರಲಿಲ್ಲ. ನನ್ನ ಗುರ್ಕಾರ್ತಿ ಸಹ ಅಂತಹ ಕೆಲಸಕ್ಕೆ ಒಪ್ಪಲಿಕ್ಕಿಲ್ಲ. ನಮ್ಮಷ್ಟೇ, ನಮ್ಮ ಧಣಿಗಳಿಗೂ ನನ್ನ ಮಗನ ಬಗ್ಗೆ ಹೆಮ್ಮೆ. ತಮ್ಮ ಗೇಣಿದಾರನ ಮಗನೊಬ್ಬ ಕಲಿಯಲು ಜಾಣನೆಂದು ಅವರಿಗೂ ಆನಂದ.

ಧಣಿಗಳ ಮಗ ಪಿ.ಯು.ಸಿ.ಯಲ್ಲಿ ಫೇಲ್. ಧಣಿಗಳು, ನನ್ನ ಮುಂದೇನೇ ತಮ್ಮ ಮಗನಿಗೆ ಬೈದರು, “ಆಯನ ಮಗನ್ ತೂಲ. ಅವನಿಗೆ ಕಲಿಯಲು ಯಾವ ಸವಲತ್ತೂ ಇಲ್ಲ. ನಿನ್ನ ಹಳೆಯ ಪುಸ್ತಕ, ಚಿಮಣಿ ದೀಪದ ಕೆಳಗೆ ಓದಿ ಪಾಸಾಗುತ್ತಾನೆ. ಮೊನ್ನೆ ಮೊನ್ನೆಯವರೆಗೆ, ನಿನ್ನ ಹಳೆಯ ಅಂಗಿ ಚಡ್ಡಿ ಹಾಕಿಕೊಳ್ಳುತ್ತಿದ್ದ. ನೀನು? ನನ್ನ ಮರ್ಯಾದೆ ತೆಗೆದೆ. ಊರಲ್ಲಿ ನಾಲ್ಕು ಜನರ ಮುಂದೆ ಹೇಗೆ ಮುಖ ತೋರಿಸಲಿ………” ಕೆಲವು ದಿನಗಳ ನಂತರ ನನ್ನ ಮಗನ ಹತ್ತನೆಯ ತರಗತಿಯ ಫಲಿತಾಂಶ ಬಂತು. ನನ್ನ ಮಗ ಫಸ್ಟ್ ಕ್ಲಾಸ್ ಪಾಸಂತೆ. ಶಾಲೆಗೆ ಎರಡನೆಯವನಂತೆ.

"ಮುಂದೆ ಓದುವುದು ಬೇಡ. ಮುಂಬಾಯಿಗೆ ಹೋಗು. ಎಲ್ಲಿಯಾದರೂ ಹೋಟೇಲಿನಲ್ಲಿ ಕೆಲಸಕ್ಕೆ ಸೇರು. ಧಣಿಗಳಿಗೂ ಯಾರದರೂ ಪರಿಚಯದವರು ಅಲ್ಲಿ ಇದ್ದಾರು. ಅಲ್ಲಿ ರಾತ್ರಿ ಶಾಲೆ ಉಂಟಂತೆ. ಅಲ್ಲಿ ಕಲಿ." ಎಂದೆ. ಮಗನ ಮುಖ ಚಿಕ್ಕದಾಯಿತು. ಕಣ್ಣಲ್ಲಿ ನೀರು. ಆತ ದೂರ ಹೋದ. ನನಗೂ ಕೆಡುಕೆನಿಸಿತು. ಜಾಣ ಹುಡುಗನಿಗೆ ಕಲಿಸುವ ತಾಕತ್ತು ನನ್ನಲ್ಲಿ ಇಲ್ಲ. ಧಣಿಗಳಿಗೆ ಗೇಣಿ ಕೊಟ್ಟ ನಂತರ ನನ್ನಲ್ಲಿ ಉಳಿಯುವುದು ಮನೆ ಖರ್ಚಿಗೆ ಸಾಕು. ಪುಣ್ಯಕ್ಕೆ ಧಣಿಗಳು ರಗಳೆ ಮಾಡುವ ಜನ ಅಲ್ಲ.

ಹೆಂಡತಿ ಕರೆಯುತ್ತಾಳೆ. ಆತನ ಓದಿಗಾಗಿ ಏನಾದರೂ ಮಾಡಿ ಅನ್ನುತ್ತಾಳೆ. ನಾನಾದರೂ ಏನು ಮಾಡಿಯೇನು. ಅಡವು ಇಡುವ ಅಂದರೆ, ನನ್ನಲ್ಲಿ ನನ್ನದೆನ್ನುವ ಆಸ್ತಿ ಇಲ್ಲ. ಹೆಂಡತಿಯ ಕೊರಳಲ್ಲಿ ನೂಲಲ್ಲಿ ಸುರಿದ ತಾಳಿ ಬಿಟ್ಟರೆ ಒಡವೆಗಳಿಲ್ಲ. ಕೈಯಲ್ಲಿ ಮಣ್ಣಿನ ಬಳೆ. ನನ್ನ ಕಿವಿಯಲ್ಲೂ ಒಂಟಿ ಇಲ್ಲ. ಹೆಂಡತಿಯ ಕಿವಿಯಲ್ಲಿರುವುದು ಗಿಲೀಟಿನದು. ಪಕ್ಕದ ಊರು, ಮುಲ್ಕಿಯಲ್ಲಿ ಕಾಲೇಜು. ನಡೆದುಕೊಂಡು ಹೋಗಬಹುದು. ದೂರ ಹೆಚ್ಚಿಲ್ಲ. ಒಂದೆರೆಡು ಮೈಲಾದೀತು. ಮಳೆಗಾಲದಲ್ಲಿ ಬೊಲ್ಲ ಬರುವ ಭಯವಿಲ್ಲ, ಸಂಕ ಇದೆ. ಜಾಣ ಮಗನಿಗೆ ಓದಿಸುವ ಹಣೆ ಬರಹ ಆ ಬ್ರಮ್ಮ ನನ್ನ ಹಣೆಯಲ್ಲಿ ಬರೆದಿಲ್ಲ. ಹೆಂಡತಿ ಧಣಿಗಳಲ್ಲಿ ಹಣ ಕೇಳಿ ಅನ್ನುತ್ತಾಳೆ.

ಬೆಳಿಗ್ಗೆ ಎದ್ದು, ದೇವರಿಗೆ, ಭೂತಗಳಿಗೆ ಕೈ ಮುಗಿದು ಧಣಿಗಳ ಮನೆಗೆ ಹೋದೆ. ಚಾವಡಿಗೆ ಬರಲು ಧಣಿಗಳು ಕರೆಯುತ್ತಾರೆ. ಹೋದೆ. ಧಣಿಗಳು ಬಿಳಿ ಕೋಮನದಲ್ಲಿದ್ದರು. ಮೈಮೇಲೆ ಬೇರೆ ಬಟ್ಟೆ ಇರಲಿಲ್ಲ. ಅವರ ಮಗ ಅಪ್ಪನ ಬೆನ್ನಿಗೆ ಎಣ್ಣೆ ತಿಕ್ಕುತ್ತಿದ್ದ. ಬದಿಯಲ್ಲಿ ಕುಳಿತು, ಅವರ ಹೆಂಡತಿ ಧಣಿಗಳ ಕಾಲಿಗೆ ಎಣ್ಣೆ ಹಾಕಿ ತಿಕ್ಕುತ್ತಿದ್ದರು.

ನಾನು ನನ್ನ ಮಗ ಪಾಸಾದ ಸುದ್ದಿ ಪುನಹ ಹೇಳಿದೆ. ಆತನಿಗೆ ಕಾಲೇಜಿಗೆ ಹೋಗಲು ಮನಸ್ಸಿದೆ, ಆದರೆ ನನ್ನ ಬಳಿ ಹಣವಿಲ್ಲ ಅಂದೆ. “ನೀವು ಸಹಾಯ ಮಾಡಿದರೆ, ಆತ ಮುಂದೆ ಓದಿಯಾನು. ಕೆಲಸ ಮಾಡಿ ನಿಮ್ಮ ಋಣ ಸಂದಾಯ ಮಾಡುತ್ತಾನೆ.”

ಧಣಿಗಳು, ತಮ್ಮ ಮಗನಿಗೆ, “ತೂಲಂಬೆ….” ಅನ್ನುತ್ತ ಬಾಯಿ ತೆಗೆದರು. ಮಗನ ಮುಖ ಅವಮಾನದಿಂದ ಕಪ್ಪು ಕಪ್ಪು ಆಯಿತು. ಧಣಿಗಳು, “ಕೊಡುವ ಮಾರಾಯ. ಕಲಿಯುವ ಹುಡುಗರಿಗೆ ಸಹಾಯ ಮಾಡಲು ನನಗೂ ಸಂತೋಷ.” ಅಂದರು. ಅವರ ಮಗ, “ನನಗೆ ಟ್ಯೂಷನ್'ಗೆ ಸೇರಲು ಇದೆ. ಅದಕ್ಕೆ ಹಣ ಬೇಕು. ಇನ್ನು ನಾನು ಮತ್ತು ಅವನು ಒಂದೇ ಕ್ಲಾಸೇ?” ಅಂದ ಅಸೂಯೆಯಿಂದ. ಧಣಿಗಳು ಕಪ್ಪು ಕಪ್ಪಾದ ತಮ್ಮ ತೊಡೆ ಸಂಧಿಯನ್ನು ತುರಿಸಲು ತೊಡಗಿದರು. ಅವರ ಹೆಂಡತಿ, “ಎನ್ನ ಪಲಿ ಕಾಗದ ಬರೆತೊಲು, ಅಲೆನ ಕಡೀರ್ದ ಮಗಲೆಗ್ ಮದ್ಮೆಗೆ. ಅಲೆಗ್ ಒಂತೆ ದೊಡ್ಡು ಬೋಡುಗೆ”

(ನನ್ನ ಅಕ್ಕ ಕಾಗದ ಬರೆದಿದ್ದಾಳೆ. ಅವಳ ಮೊದಲ ಮಗಳಿಗೆ ಮದುವೆಯಂತೆ. ಅವಳಿಗೆ ಸ್ವಲ್ಪ ಹಣ ಬೇಕಂತೆ)

ನನಗೆ ಅರ್ಥವಾಗುತ್ತದೆ. ಹೆಂಡತಿ ಮತ್ತು ಮಗನ ಮಾತು ಕೇಳಿದ ಧಣಿಗಳು, ನಿಸ್ಸಾಹಾಯಕರಾಗಿ ತಮ್ಮ ತೊಡೆ ಸಂಧಿಯನ್ನು ಜೋರಾಗಿ ತುರಿಸುತ್ತಾರೆ. ಪರ ಪರ ಸದ್ದು ಹೇಸಿಗೆ ತರಿಸುತ್ತದೆ. ಅವರ ಹೆಂಡತಿ, ಚಿಕ್ಕ ಬಟ್ಟಲಲ್ಲಿ ಎಣ್ಣೆ ತರುತ್ತಾರೆ. ಧಣಿಗಳು ತಮ್ಮ ತಲೆ ಎಡ ಬದಿಗೆ ಬಗ್ಗಿಸಿ, ಎಣ್ಣೆ ಹಾಕಿಸಿಕೊಳ್ಳಲು ಹೆಂಡತಿಗೆ ಬಲ ಕಿವಿ ಒಡ್ಡುತ್ತಾರೆ. ನಿರಾಶನಾದ ನಾನು ಹೊರ ಬಂದು, ಜಗಲಿಯ ಮೇಲೆ ಕುಕ್ಕರಗಾಲಿನಲ್ಲಿ ಕುಳಿತುಕೊಳ್ಳುತ್ತೇನೆ, ತಲೆ ತುರಿಸುತ್ತೇನೆ.

ಧಣಿಗಳ ಉತ್ತರಕ್ಕಾಗಿ ಕಾಯುತ್ತಿದ್ದೇನೆ......

(ಕೊತ್ತಲಿಗೆ = ತೆಂಗಿನ ಗರಿಯ ಹಿಂಬಾಗ, ಆಯನ = ಅವನ, ತೂಲ = ನೋಡು, ಅಡವು = ಗಿರವಿ, ಬೊಲ್ಲ = ನೆರೆ, ಪ್ರವಾಹ, ಒಂಟಿ = ಗಂಡಸರ ಕಿವಿಯೋಲೆ, ಸಂಕ = ಸೇತುವೆ, ಬ್ರಮ್ಮ = ಬ್ರಹ್ಮ, ಕೋಮನ = ಲಂಗೋಟಿ, ತೂಲಂಬೆ = ನೋಡೆಲೋ)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.