ಪ್ರತೀಕಾರ -13

(ಹಿಂದಿನ ಸಂಚಿಕೆಯಿಂದ....)

ಆರಾಧನಾ ಆಫೀಸ್ ತಲುಪುವುದರೊಳಗೆ ಅರ್ಜುನ್ ಬಂದಿದ್ದ, ಅವನ ಸೀನಿಯರ್ ಅವನನ್ನು ಎಲ್ಲರಿಗೂ ಪರಿಚಯಿಸುತ್ತಿದ್ದರು, ಅವನು ಎಲ್ಲರೊಡನೆ ಕಲೆತು ನಗು ನಗುತ್ತ ಮಾತನಾಡುತ್ತಿದ್ದ, ಆರಾಧನಾ ಬಂದದ್ದು ಯಾರ ಗಮನಕ್ಕೂ ಬರಲಿಲ್ಲ, ಅರ್ಜುನ್ ಹಾಗೆ ಎಲ್ಲರ ಜೊತೆ ನಗುತ್ತ ಮಾತನಾಡುವುದು ಅವಳಿಗೇಕೋ ಸಹಿಸಲಾಗಲಿಲ್ಲ, ಜವಾನ ಬಂದು ವಿಶ್ ಮಾಡಿ ಅವಳ ಬ್ಯಾಗ್ ತೆಗೆದುಕೊಂಡಾಗಲೇ ಎಲ್ಲರಿಗೂ ಅವಳು ಬಂದದ್ದು ತಿಳಿಯಿತು, ತಡಬಡಿಸಿ ವಿಶ್ ಮಾಡಿ ತಮ್ಮ ತಮ್ಮ ಸೀಟಿಗೆ ಓಡಿ ಹೋಗಿ ಕುಳಿತರು. ಅರ್ಜುನ್ ಮಾತ್ರ ವಿಶ್ ಮಾಡಿ ಹಾಗೆ ನಿಂತಿದ್ದ, ಆರಾಧನಾ ಪ್ರತಿಕ್ರಿಯಿಸದೆ, ಅವನ ಸೀನಿಯರ್ನನ್ನು ಬರಲು ಹೇಳಿ ತನ್ನ ಕ್ಯಾಬಿನ್ಗೆ ಹೋಗಿ ಕುಳಿತಳು, ಒಳಗೆ ಬಂದ ಅರ್ಜುನನ ಟೀಮ್ ಲೀಡ್ ಲೋಕೇಶ್ ಆರಾಧನಾ ಕೋಪದಲ್ಲಿದ್ದದ್ದುಕಂಡು ವಿಚಲಿತನಾದ "ಏನ್ ಲೋಕೇಶ್ ಬೆಳಗ್ಗೆನೇ ಎಲ್ಲರೂ ಕೆಲಸ ಬಿಟ್ಟು ಹರಟೆ ಹೊಡೆಯೋದ ಈ ಮೊದಲು ಇಷ್ಟು ಅಶಿಸ್ತು ಯಾವತ್ತೂ ನೋಡಿರಲಿಲ್ಲ" ಎಂದಳು, " ಸಾರೀ ಮೇಡಂ, ಅದೂ ಅರ್ಜುನ್ನ ಟೀಮ್ಗೆ ಇಂಟ್ರೊಡ್ಯೂಸ್ ಮಾಡಿಸ್ತಿದ್ದೆ ಅಷ್ಟೇ" ಎಂದ, "ಅದಕ್ಕೆ ಸ್ಪೆಷಲ್ ಫಾರ್ಮಾಲಿಟಿಸ್ ಯಾಕೆ, ಎವ್ರಿ ಮಂತ್ ಎಂಡ್ ಫ್ರೆಷೆರ್ ವೆಲ್ಕಮ್ ನಡೆಯುತ್ತೆ ಅಲ್ವ ಆಗ ತಾನಾಗೇ ಇಂಟ್ರೊಡ್ಯೂಸ್ ಆಗುತ್ತೆ, ಹೀಗೆ ಕೆಲಸದ ಸಮಯದಲ್ಲಿ ಅಗತ್ಯವಿಲ್ಲ, ಓಕೆ ಕೀಪ್ ಕಾನ್ಸನ್ಟ್ರೇಟ್ ಆನ್ ಪ್ರಾಜೆಕ್ಟ್, ಆದಷ್ಟು ಬೇಗ ಕಂಪ್ಲೀಟ್ ಆಗ್ಬೇಕು, ನಿಮ್ಮ ಜೂನಿಯರ್ಗೆ ಆದಷ್ಟು ಕೆಲಸ ಹೇಳ್ಕೊಡಿ, ನೆಕ್ಸ್ಟ್ ಅಪ್ ಕಮಿಂಗ್ ಪ್ರಾಜೆಕ್ಟ್ ಬಗ್ಗೆ ನಾಳೆ ಮೀಟಿಂಗ್ ಇದೆ, ಅಷ್ಟರೊಳಗೆ ಈ ಪ್ರಾಜೆಕ್ಟ್ ಮುಗಿಸೋದರ ಬಗ್ಗೆ ಫೈನಲ್ ಪ್ಲಾನಿಂಗ್ ಕೊಡ್ಬೇಕು, ಹೋಲ್ ಟೀಮ್ ಕೂತು ಡಿಸೈಡ್ ಮಾಡಿ ಪ್ಲಾನ್ ರೆಡಿ ಮಾಡಿ" ಎಂದಳು, "ಓಕೇ ಮೇಡಂ ಆದಷ್ಟು ಬೇಗ ಕೊಡ್ತೇನೆ" ಎನ್ನುತ್ತಾ ಹೊರಟ ಲೋಕೇಶ್.

ಹೊರಗಡೆ ಅರ್ಜುನ್ ಆರಾಧನಾ ಏನೆಂದಾಳೋ ಏನೋ ತಿಳಿಯದೆ ಚಡಪಡಿಸುತ್ತಿದ್ದ, ತನ್ನ ಸೀನಿಯರ್ಗಾಗಿ ಕಾಯುತ್ತಿದ್ದ, ಲೋಕೇಶ್ ತುಂಬ ಸೀರಿಯಸ್ ಆಗಿದ್ದ, ಅರ್ಜುನ್ ಕರೆದು ಅವನಿಗೊಂದಿಷ್ಟು ಕೆಲಸ ಒಪ್ಪಿಸಿ "ಮೇಡಂ ತುಂಬ ಸ್ಟ್ರಿಕ್ಟ್ ತುಂಬಾ ಕೇರ್ಫುಲ್ ಆಗಿ ಕೆಲಸ ಮುಗಿಸು, ಬೆಳಗ್ಗೆ ರೀತಿ ಎಲ್ಲರತ್ರ ಹೆಚ್ಚು ಮಾತಾಡೋದು ಹರಟೆ ಹೊಡೆಯೋದು ಮಾಡಬೇಡ " ಎಂದ, ಅಂದು ಅರ್ಜುನ್ಗೆ ಕೊಟ್ಟ ಕೆಲಸ ಎಂದರೆ ಕಂಪನಿಯ ಬಗ್ಗೆ ಪೂರ್ತಿಯಾಗಿ ತಿಳಿದುಕೊಂಡು, ಪ್ರೊಜೆಕ್ಟ್ನ ಡೀಟೇಲ್ ಆಗಿ ಸ್ಟಡಿ ಮಾಡಿ ಸಂಜೆಯ ಒಳಗೆ ಒಂದು ರಿಪೋರ್ಟ್ ರೆಡಿ ಮಾಡಬೇಕಿತ್ತು, ಕಂಪ್ಯೂಟರ್ ಮುಂದೆ ಕುಳಿತವನಿಗೆ ಕಂಪನಿಯ ಅಚೀವ್ಮೆಂಟ್ಸ್ ನೋಡಿ ಅಚ್ಚರಿಯಾಗಿತ್ತು, ಕೇವಲ ಮೂರು ವರ್ಷದ ಹಿಂದೆ ಓಪನ್ ಆದ ಬ್ರಾಂಚ್ ಆಫೀಸ್ ಇಷ್ಟು ಬೇಗ ಇಷ್ಟು ದೊಡ್ಡ ಬೆಳೆಯಿತೆಂಬುದು ಅವನಿಗೆ ಅಚ್ಚರಿಯಾಗಿತ್ತು, ಇದರ ಬಗ್ಗೆ ಪಕ್ಕದಲ್ಲಿನ ಸಹೋದ್ಯೋಗಿಯ ಬಳಿ ವಿಚಾರಿಸಿದ, ಅವನು ಅವನಿಗೆ ಗೊತ್ತಿದ್ದಷ್ಟು ಹೇಳಿದ, ಹೈದೆರಾಬಾದಿನ ಹೆಡ್ ಆಫೀಸ್ ಈಚೆಗಷ್ಟೇ ಸ್ಪ್ಲಿಟ್ ಆಗಿ, ದೆಹಲಿಯ ಬ್ರಾಂಚ್ ಹೆಡ್ ಆಫೀಸ್ ಆಗಿರುವುದಾಗಿಯೂ ಅಲ್ಲಿ ಸೌರಭ್ ಎಂ.ಡಿ ಆಗಿರುವುದಾಗಿಯೂ, ಸೌರಭ್ ತಂದೆ ಸದ್ಯದ ಸಿ.ಈ.ಓ ಎಂದು ತಿಳಿಸಿದ, ಸೌರಭ್ ಯಾರೆಂದು ಕೇಳಿದಾಗ, ನನಗಷ್ಟು ಗೊತ್ತಿಲ್ಲ ಆದರೆ ಆರಾಧನಾ ಸೌರಭ್ ರಿಲೇಟಿವ್ಸ್ ಎಲ್ಲ ಬ್ರಾಂಚ್ಗಳನ್ನು ಇಬ್ಬರೂ ಸೇರಿ ಮ್ಯಾನೇಜ್ ಮಾಡ್ತಾರೆ ಎಂದು ಹೇಳಿದ. ಅಲ್ಲಿಗೆ ಅರ್ಜುನ್ಗೆ ಆರಾಧನಾಳ ಬುದ್ಧಿಶಕ್ತಿ ಮತ್ತು ಶ್ರಮದ ಅರಿವಾಯಿತು, ಜೊತೆಗೆ ಸೌರಭ್ ಯಾರಿರಬಹುದೆಂಬ ಸಣ್ಣ ಕುತೂಹಲ ಅವನಿಗೆ ತಿಳಿಯದೆ ಹುಟ್ಟಿತು, ಇಡೀ ದಿನ ಪ್ರಾಜೆಕ್ಟ್ ಬಗ್ಗೆ ಓದಿ ತನಗೆ ತಿಳಿದ ಮಟ್ಟಿಗೆ ರಿಪೋರ್ಟ್ ರೆಡಿ ಮಾಡಿಕೊಟ್ಟ, ಅಂದಿನ ದಿನ ಅಲ್ಲಿಗೆ ಮುಗಿಯಿತು, ತನ್ನ ರಿಪೋರ್ಟ್ ಬಗ್ಗೆ ಅವನಿಗೆ ಅಳುಕು ಇದ್ದೆ ಇತ್ತು, ಮಾರನೇ ದಿನ ಅದರ ಬಗ್ಗೆ ಲೋಕೇಶ್ನ ಕೇಳಿದಾಗ, ಅದೇನು ಅಷ್ಟು ಮುಖ್ಯವಲ್ಲ ಪ್ರಾಜೆಕ್ಟ್ ಬಗ್ಗೆ ನಿನಗೆ ತಿಳಿಯಬೇಕಾದ್ದರಿಂದ ಆ ಕೆಲಸ ಕೊಟ್ಟಿದ್ದು ಎಂದು ಹೇಳಿದಾಗ ಕೊಂಚ ನಿರಾಳವಾದ.

ಹೀಗೆ ದಿನಗಳು ಉರುಳುತ್ತಿದ್ದವು ಆರಾಧನಾ ಅರ್ಜುನ್ ಕೇವಲ ಬಾಸ್ ಮತ್ತು ವರ್ಕರ್ ಆಗೇ ಇದ್ದರು, ಹೇಳಬೇಕೆಂದರೆ ಇಬ್ಬರ ಮದ್ಯ ಸಂಬಂಧವೇ ಇರಲಿಲ್ಲ, ಅರ್ಜುನ್ ಟ್ರೈನಿ ಆದ್ದರಿಂದ ಅವಳಿಗೆ ಅವನ ಬಳಿ ಮಾತನಾಡುವ ಪ್ರಮೇಯವೇ ಇರುತ್ತಿರಲಿಲ್ಲ, ಆದರೆ ಒಬ್ಬರಿಗೊಬ್ಬರು ಎದುರು ಬದುರಾದಾಗ ಮಾತ್ರ ಇಬ್ಬರಲ್ಲೂ ಹೇಳತೀರದ ಭಾವ ಸಂಘರ್ಷಣೆ ನಡೆಯುತ್ತಿತ್ತು, ಅವನು ಏನನ್ನೋ ಹೇಳಬೇಕೆಂದು ಹಂಬಲಿಸಿದರೆ, ಇವಳು ಯಾವುದೋ ನೋಡಬಾರದ ವಸ್ತುವನ್ನು ನೋಡಿದಂತೆ ಕೋಪಗೊಳ್ಳುತ್ತಿದ್ದಳು.

ಅಂದು ಆರಾಧನಾ ಯಾವುದೋ ಮೀಟಿಂಗ್ ಇದ್ದದ್ದರಿಂದ ಹೊರಗೆ ಹೊರಟಿದ್ದಳು. ದಾರಿ ಮದ್ಯದ ಸಿಗ್ನಲ್ ಬಳಿ ಅಮ್ಮ ಮಗಳು ಇಬ್ಬರು ರಸ್ತೆ ದಾಟುತ್ತಿದ್ದರು. ಆ ತಾಯಿ ರಸ್ತೆ ಮದ್ಯೆ ಬಂದವರೇ ಆರಾಧನಾಳ ಕಾರಿನ ಮುಂದೆಯೇ ಕುಸಿದು ಬಿದ್ದರು. ಆ ಹುಡುಗಿ ಕಿರುಚುತ್ತಾ "ಅಮ್ಮ ಎದ್ದೇಳಮ್ಮ ಏನಾಯ್ತು ಯಾಕ್ ಹೀಗ್ ಬಿದ್ದೆ" ಎನ್ನುತ್ತಾ ಗಾಬರಿಯಾಗಿ ತಾಯಿಯನ್ನು ಎಬ್ಬಿಸಲು ಪ್ರಯತ್ನ ಪಡುತ್ತಿದ್ದಳು, ಸಿಗ್ನಲ್ ಬಿಡಲು ಕೇವಲ ೨೦ ಸೆಕೆಂಡ್ ಇತ್ತು, ಆರಾಧನಾ ಕಾರಿನಿಂದಿಳಿದು ಅವರಲ್ಲಿಗೆ ಓಡಿ ಬಂದು ಎಬ್ಬಿಸಲು ಪ್ರಯತ್ನ ಪಟ್ಟಳು, ಆದರೆ ಆಕೆ ಪ್ರಜ್ಞೆ ತಪ್ಪಿದ್ದರು, ತನ್ನ ಕಾರಿನಿಂದ ನೀರಿನ ಬಾಟಲಿ ತಂದು ಅವರ ಮುಖದ ಮೇಲೆ ಚಿಮುಕಿಸಿದಳು, ಆಕೆ ಕೊಂಚವೇ ಸ್ಮೃತಿಗೆ ಬಂದರು, ಸಿಗ್ನಲ್ ಬಿಟ್ಟೆ ಬಿಟ್ಟಿತು, ಆರಾಧನ ಆ ಹುಡುಗಿ ಇಬ್ಬರು ಸೇರಿ ಅವರನ್ನು ಕಾರಿನಲ್ಲಿ ಕೂರಿಸಿದರು, "ಕೂತ್ಕೋ ಇಲ್ಲೇ ಹತ್ತಿರದ ಆಸ್ಪತ್ರೆಗೆ ಹೋಗೋಣ" ಎಂದಳು ಆರಾಧನಾ, ಆ ಹುಡುಗಿ ಒಳಗೆ ಕುಳಿತಳು, ಅಲ್ಲೇ ಹತ್ತಿರವಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋದರು.

ಈ ಮಧ್ಯೆ ಆರಾಧನಾ ಆ ಹುಡುಗಿಯನ್ನು "ನಿನ್ನ ಹೆಸರೇನು? ಏನಾಯ್ತು ಇವರಿಗೆ ಹುಷಾರಿರಲಿಲ್ವ" ಕೇಳಿದಳು, "ಸುನೀತಾ ಅಂತ ಅಕ್ಕ, ಹಾಗೇನಿಲ್ಲ ಅಮ್ಮ ಹುಷಾರಾಗೆ ಇದ್ದರು, ಇಬ್ಬರು ಅಪ್ಪನ ರಿಪೋರ್ಟ್ಸ ತರೋಕೆ ಅಂತ ಆಸ್ಪತ್ರೆಗೆ ಹೋಗ್ತಿದ್ವಿ ಅಷ್ಟರಲ್ಲಿ ಹೀಗಾಯ್ತು" ಎಂದಳು. ಅಷ್ಟರಲ್ಲಿ ಆಸ್ಪತ್ರೆ ಬಂದದ್ದರಿಂದ ಇಬ್ಬರು ಅವರನ್ನು ಕರೆದುಕೊಂಡು ಒಳ ಹೋದರು, ಡಾಕ್ಟರ್ ಮೈಲ್ಡ್ ಹಾರ್ಟ್ ಅಟ್ಟ್ಯಾಕ್ ಆಗಿದೆ, ಶುಗರ್ ಕೂಡ ಇದೆ ಎಂದರು, ಸುನೀತಾ ಅಳಲು ಶುರು ಮಾಡಿದಳು, ಆರಾಧನಾ ಅವಳನ್ನು ಸಮಾಧಾನ ಮಾಡುತ್ತ ಡಾಕ್ಟರ್ ಕೊಟ್ಟ ಮೆಡಿಸಿನ್ ತಂದಳು, ಅಷ್ಟರಲ್ಲಿ ಅವರಿಗೆ ಪ್ರಜ್ಞೆ ಬಂದಿತ್ತು, ಡಾಕ್ಟರ್ ಕರೆದುಕೊಂಡು ಹೋಗಬಹುದು ಮಾತ್ರೆ ಔಷಧಿಗಳನ್ನು ಸಮಯಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿ ಕಳಿಸಿದರು,ಅಷ್ಟರಲ್ಲಿ ಸುನೀತಾ , "ಅಕ್ಕ ನಿಮ ಫೋನಿದ್ರೆ ನಮ್ಮಣ್ಣನಿಗೆ ಒಂದು ಕಾಲ್ ಮಾಡ್ಲಾ" ಎದು ಕೇಳಿದಳು ಸುನೀತಾ, ಆರಾಧನಾ ತನ್ನ ಮೊಬೈಲ್ ಕೊಟ್ಟಳು, ಫೋನ್ ರಿಂಗ್ ಆಗುತ್ತಲಿತ್ತು ಆ ಕಡೆಯಿಂದ ಯಾರು ಉತ್ತರಿಸಲಿಲ್ಲ, ಸುಮ್ಮನಾದಳು, ಆರಾಧನಾ ಅವರಿಬ್ಬರನ್ನು ತನ್ನ ಕಾರಿನಲ್ಲೇ ಅವರ ಮನೆಗೆ ಬಿಡುವುದಾಗಿ ಹೇಳಿದಳು, ಇಬ್ಬರು ಒಪ್ಪಿದರು, "ನಿನ್ನಿಂದ ತುಂಬಾ ಸಹಾಯ ಆಯ್ತಮ್ಮಾ ದೇವರ ಹಾಗೆ ಬಂದೆ, ಗೊತ್ತಿಲ್ಲ ಏನಾಯ್ತೋ ಇದ್ದಕ್ಕಿದ್ದ ಹಾಗೆ ಎದೆ ವಿಪರೀತ ನೋವು ಬಂತು ಮುಂದೇನಾಯ್ತು ಒಂದು ಗೊತ್ತಾಗಲಿಲ್ಲ" ಅಂದರು ಆಕೆ, ಅವರಿಗೆ ಹಾರ್ಟ್ ಅಟ್ಯಾಕ್ ಅಂತ ಗೊತ್ತಾದ್ರೆ ಗಾಬರಿ ಬೀಳಬಹುದೆಂದು "ಏನಿಲ್ಲ ಅಮ್ಮ ತಲೆ ಸುತ್ತು ಬಂದಿದೆ ಅಷ್ಟೇ ನೀವು ಸರಿಯಾಗಿ ಊಟ ಮಾಡಿರಲಿಲ್ಲ ಗ್ಯಾಸ್ಟ್ರಿಕ್ ಎಂದರು ಡಾಕ್ಟರ್, ಆ ಔಷದಿಗಳನ್ನೆಲ್ಲ ಸರಿಯಾಗಿ ತಗೊಳ್ಳಿ, ಚೆನ್ನಾಗಿ ಊಟ ಮಾಡಿ ಬೇಗ ಹುಷಾರಾಗ್ತೀರಾ" ಎಂದಳು ಆರಾಧನಾ, ಸುನೀತಾ ಅವಳ ಕಡೆ ಕೃತಜ್ಞತೆಯ ದೃಷ್ಟಿ ಬೀರಿದಳು, ಅವರ ಮನೆಯ ಮುಂದೆ ಅವರನ್ನು ಇಳಿಸಿದಳು, ಒಳಗೆ ಬರುವಂತೆ ಇಬ್ಬರು ಒತ್ತಾಯಿಸಿದರು, ಆದರೆ ತುರ್ತು ಮೀಟಿಂಗ್ ಇರುವುದರಿಂದ ಈಗಾಗಲೇ ತುಂಬ ಸಮಯ ಆಗಿದೆ ಮತ್ತೊಮ್ಮೆ ಬರುತ್ತೇನೆಂದು ಅವರನ್ನು ನಂಬಿಸಿದಳು ಆರಾಧನಾ, ಇಬ್ಬರು ಒಲ್ಲದ ಮನಸ್ಸಿನಿಂದ ಅವಳನ್ನು ಬೀಳ್ಕೊಟ್ಟರು.

ಸ್ವಲ್ಪ ಸಮಯದ ನಂತರ ಆರಾಧನಾಳ ಮೊಬೈಲ್ ರಿಂಗಾಯಿತು ಯಾವುದೊ ಅನ್ನೋನ್ ನಂಬರ್ ರಿಸೀವ್ ಮಾಡಿದಳು ಅತ್ತಲಿಂದ "ಹಲೋ ಈ ನಂಬರ್ನಿಂದ ಫೋನ್ ಬಂದಿತ್ತು ಸ್ವಲ್ಪ ಸಮಯದ ಮುಂಚೆ" ಎಂದರು, ಆರಾಧನಾಳಿಗೆ ಹೊಳೆಯಿತು "ನೀವು ಸುನೀತಾ ಅಣ್ಣನಾ?" "ಹೌದು ಹೇಳಿ ಏನಾಯ್ತು ಸುನಿತಾಗೆ"ಎಂದು ಗಾಬರಿಯಿಂದ ಕೇಳಿದ ಆ ವ್ಯಕ್ತಿ "ಇಲ್ಲ ಸುನಿತಾಗೆ ಏನು ಆಗಿಲ್ಲ, ನಿಮ್ಮ ತಾಯಿ ರಸ್ತೆ ಮದ್ಯೆ ಕುಸಿದು ಬಿದ್ದರು, ಅವರನ್ನು ನಾನೇ ಆಸ್ಪತ್ರೆಗೆ ಸೇರಿಸಿದ್ದೆ, ಮೈಲ್ಡ್ ಹಾರ್ಟ್ ಅಟ್ಯಾಕ್ ಅಂದ್ರು ಡಾಕ್ಟರ್, ನಿಮ್ಮ ತಂಗಿಯ ಬಳಿ ಎಲ್ಲ ಹೇಳಿದ್ದೇನೆ, ವಿಚಾರಿಸಿ"ಎಂದಳು "ನಿಮ್ಮಿಂದ ತುಂಬಾ ಉಪಕಾರ ಆಯ್ತು, ಥಾಂಕ್ ಯು ಸೊ ಮಚ್" "ಇಟ್ಸ್ ಓಕೇ ಅವರ ಬಗ್ಗೆ ಕೇರ್ ತಗೋಳಿ , ನಾನು ಸ್ವಲ್ಪ ಬ್ಯುಸಿ ಇದ್ದೇನೆ ಆಮೇಲೆ ಕಾಲ್ ಮಾಡ್ತೇನೆ" ಎನ್ನುತ್ತಾ ಫೋನ್ ಕಟ್ ಮಾಡಿದಳು ಆರಾಧನಾ. ಆ ದ್ವನಿ ಎಲ್ಲೊ ಕೇಳಿದಂತೆನಿಸಿತು ಅವಳಿಗೆ ....

***********

(ಮುಂದುವರಿಯುವುದು...)

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.