ಸೌಂದರ್ಯರಾಣಿ

ಇನ್ನೇನು ಗೋಕರ್ಣ ಸಮೀಪಿಸುವುದರಲ್ಲಿದ್ದ ನನ್ನ ಕಾರು 'ದಡ್-ದಡ್' ಎಂದು ಶಬ್ಧ ಮಾಡುತ್ತಾ ಕೆಟ್ಟು ನಿಂತಿತು. ಒಂದು ತಾಸಾದರೂ ಮುಗಿದಿರಲಿಲ್ಲ ನನ್ನ ಡ್ರೈವರಾದ ರಾಜುವಿನ ಕಾರು ರಿಪೇರಿ.ನನಗೋ ಒಳಗೆ ಕುಳಿತು-ಕುಳಿತು ಬೇಸರವಾಗಿ ಕೆಳಗಿಳಿದರೆ,ಅಲ್ಲಿಯೇ ಸುಳಿದಾಡುತ್ತಿದ್ದ ಪಡ್ಡೆಯ ಹುಡುಗರಿಗೆ ಅಚ್ಚರಿಯಾಗಿತ್ತು.ಅಷ್ಟೊತ್ತು ಸುಮ್ನೆ ಕುಳಿತು ಹರಟೆ ಹೊಡೆಯುತ್ತಿದ್ದವರು,ನನ್ನ ಕಂಡೊಡನೆ ಎದ್ನೋ-ಬಿದ್ನೋ ಎಂಬಂತೆ ಸಹಾಯಕ್ಕಾಗಿ ಓಡಿ ಬಂದರು.ರಾಜು ಅಂತವರನ್ನೆಲ್ಲಾ ಚೆನ್ನಾಗಿ ಬಲ್ಲವ, ಬಳಿಯೆಲ್ಲೂ ಸುಳಿಯಗೊಡಲಿಲ್ಲ. ಬಲಿಷ್ಠನಾಗಿದ್ದ ರಾಜುವಿಗೆ ಹೆದರಿ ಮತ್ತದೇ ಕಟ್ಟೆ ಮೇಲೆ ಹೋಗಿ ಕುಳಿತರೂ, ಸಿಟ್ಟಿನ ನೋಟವಿತ್ತಲೇ ಇತ್ತು. ರಿಪೇರಿಯಾದ ಕಾರು ಹೊರಟಾಗ ಅವರಲ್ಲೊಬ್ಬ ಪೊಗರಾಗಿ ಮಾತಾಡುತ್ತಿದ್ದ- 'ಲೋ! ಇವ್ರದ್ದೆಲಾ ಗೊತ್ತಿರುದೆಯಾ. ಬರೀ ಬಣ್ಣದ ಪಾತರಗಿತ್ತಿರು, ಅದೇಷ್ಟು ಜನರನ್ನೂ ಸೆರಗಲ್ಲಿಟ್ಕಂಡವ್ಳೇ ಯಾರಿಗ್ ಗೊತ್ತಾ? ನಮ್ಮುಂದಷ್ಟೆ ಮಡಿ-ಮಡಿ ಮಾಡುದು' ಅವನ ಮಾತು ಕೇಳಿ ಮೈಯೆಲ್ಲಾ ಉರಿದರೂ, ಸಧ್ಯ ರಾಜು ಕೇಳಿಸ್ಕೋಳ್ಲಿಲ್ಲ ಅಂತ ಸಮಾಧಾನ, ಇಲ್ಲಾಂದ್ರೆ ಮತ್ತೊಂದು ಮಾರಮಾರಿ ಆಗೋದ್ರಲ್ಲಿ ಸಂಶವಿರಲಿಲ್ಲ.. ಆದರೂ ಸುಳ್ಳಾಪಾದನೆಯಿಂದ ಬೆಚ್ಚಿದ್ದೆ, ಮನ ಪೆಚ್ಚಾಗಿತ್ತು. ಕಾರೋಡುತ್ತಲೇ ಇತ್ತು, ಮನವೂ ಹಿಂದಕ್ಕೋಡುವುದರಲ್ಲಿತ್ತು.. ಅಷ್ಟರಲ್ಲೇ ಮೊಬೈಲ್ ರಿಂಗಣಿಸತೊಡಗಿದ್ದರಿಂದ ಅದನ್ನೆತ್ತಿಕೊಂಡೆ ಒಲ್ಲದ ಮನಸ್ಸಿಂದ- 'ಡೈರೆಕ್ಟ್ರು ಭಾಳ ಸಿರಿಯಸ್ ಆಗವ್ರೇ ಕಣವ್ವ, ಲೇಟಾಗೋಗೈತೆ ಬೇಗ ಬನ್ರವ್ವ' ಅತ್ತಲಿಂದ ಮೇಕಪ್ ಮೆನ್ ಕಮ್ ಅಸಿಸ್ಟೆಂಟ್ ಆಗಿದ್ದ ಶಿವಪ್ಪ ಫೋನ್ ಮಾಡಿದ್ರು.. ತಲೆ ಚಿಟ-ಚಿಟ ಅನ್ನತೊಡಗಿತ್ತು..

ಮುಂಜಾವಿನ ಬಾಲರವಿ ತನ್ನಾಟ ಮುಗಿಸಿದ್ದ,ಮದ್ಯಾಹ್ನದ ಬಿಸಿಲು ನೆತ್ತಿಗೇರುವುದರಲ್ಲಿತ್ತು. ಸುಂದರವಾದ ಆ ಪರಿಸರದಲ್ಲಿ ಆ ಕ್ಷಣಕ್ಕೂ ಮೈಮರೆತಂತಾದ್ರೂ ಕಾರಿನಿಂದಿಳಿದು ತಟಪಟಾಂತ ಶೂಟಿಂಗ್ ಸ್ಥಳಕ್ಕೆ ಧಾವಿಸಿದ್ದೆ. ಡೈರೆಕ್ಟ್ರು ಕೋಪದಿಂದಿದ್ರೂ ತೋರಗೊಡದೆ ಅಂದಿನ ಸ್ಕ್ರೀಪ್ಟನ್ನು ಕೈಗಿತ್ತು ಬೇಗ ಬೇಗ ತಯಾರಾಗುವಂತೆ ಹೇಳಿ ಮತ್ತೊಂದೆಡೆ ಹೊರಟರು. ಮಹಾಬಲೇಶ್ವರ ದೇವಾಲಯದಲ್ಲೇ ಆರಂಭಿಸಿ, ಸಮುದ್ರದೆಡೆಗೆ ತೆರಳಿದ್ದೆವು.ಕಾಲಿಗೆ ಕಚಗುಳಿಯಿಕ್ಕೋ ಮುದ್ದಾದ ಅಲೆಗಳು, ಮೃದು ಮರಳು, ಶೂಟಿಂಗ್ ಸಲುವಾಗಿ ಸೇರಿದ್ದ ಮುಗ್ಧ ಜನ, ಮೆಲ್ಲ ಬೀಸುವ ತಂಗಾಳಿ ಎಲ್ಲವೂ ಹಿತವಾಗಿತ್ತು ನನಗೆ. ಆದರೆ ಆ ಕ್ಷಣಕ್ಕೆ ನಾನದನ್ನೆಲ್ಲಾ ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ, ಬೇಗ ಬೇಗ ನನ್ನ ಪಾತ್ರವನ್ನು ಸಿದ್ಧಪಡಿಸಿಕೊಂಡು ಕುಳಿತೆ.ಅದೊಂದು ಕಿರುಚಿತ್ರದ ಶೂಟಿಂಗ್ ನನ್ನದೇ ಮುಖ್ಯಪಾತ್ರ ಅದರಲ್ಲಿ, ಜೀವನದಲ್ಲಿ ಮನಶ್ಶಾಂತಿಯನ್ನರಸಿ ಗೋಕರ್ಣದ ಕಡಲತೀರಕ್ಕೆ ಬರುವ ಪಾತ್ರ ನನ್ನದು.ನಿಜ ಜೀವನದಲ್ಲೂ ನನಗೆ ಮನಶ್ಶಾಂತಿಯು ಬೇಕಿತ್ತು ನನಗೆ. ಎಲ್ಲವೂ ಇದ್ದು,ಏನೂ ಇಲ್ಲದಂತಹ ಪರಿಸ್ಥಿತಿ. ಹೀಗೇ ಮೈಮರೆತು ಯೋಚಿಸುತ್ತಲೇ ಇದ್ದ ನನಗೆ ಕಿವಿಗಡಚಿಕ್ಕುವ ಚಪ್ಪಾಳೆ ಎಚ್ಚರಿಸಿತು. 'ಎಂತ ಅದ್ಭುತ ಅಭಿನಯ', 'ಎಂತಹ ತನ್ಮಯತೆ' ಎಂದೂ ಅಭಿನಂದಿಸುವವರೇ. ನಕ್ಕೆ ವಿಷಾದದಿಂದ, ವಾಸ್ತವ ನನಗಷ್ಟೆ ಗೊತ್ತಿತ್ತು..

ಹೀಗೆ ಮಲೆನಾಡು-ಕರಾವಳಿಯಲ್ಲಿ ವಾರಗಟ್ಟಲೇ ಶೂಟಿಂಗ್ ಮುಗಿದು ಬೆಂಗಳೂರಿಗೆ ವಾಪಸ್ಸಾಗಿದ್ದೆವು.ವಿಪರೀತ ಸುಸ್ತಾಗಿದ್ದ ನಾನು ಮನೆಗೆ ಬಂದೊಡನೆ ಮಲಗಿಬಿಟ್ಟೆ.ನಿದ್ರೆಯಲ್ಲೇನೋ ಕನವರಿಕೆಗಳು,ವಿಚಿತ್ರ ಕನಸುಗಳಿಂದ ನರಳಿದ್ದೆ.ಮರುದಿನ ಎದ್ದಾಗ ಸ್ವಾಗಸಿದ್ದು ಅಮ್ಮನ ಅದೇ ಮಾಸದ ಮುಗುಳುನಗೆ.ನನ್ನಮ್ಮ ಮನೆಯನ್ನೇ ನೆಚ್ಚಿಕೊಂಡವರು,ಶೂಟಿಂಗ್ ಗೂ ಬರ್ತಿರಲಿಲ್ಲ,ಅಪ್ಪ ಎಂದಿನಂತೆ ದೇವರಕೋಣೆ ಹೊಕ್ಕು ಕುಳಿತರೇ ಆ ಭಗವಂತನಿಂದಲೂ ಕದಲಿಸಿಕ್ಕಾಗುವುದಿಲ್ಲ.ಹಾಗಾಗೀ ಶೂಟಿಂಗಾಗಿ ದೂರ-ದೂರ ಬರುತ್ತಿದ್ದುದು ಅಣ್ಣನೇ.ಕಾಫೀ ಕುಡಿದು ಮತ್ತೆ ಮಂಚದಲ್ಲಿ ಅಡ್ಡಾದೆ ನೆನೆಪು ಹಿಂದಕ್ಕೋಡಿತು..

ಬಣ್ಣದ ಬದುಕಿನ ಬಗ್ಗೆಯೇನೂ ಗೊತ್ತಿಲ್ಲದ ದಿನಗಳವು.ಜೀವನವೇ ಬಣ್ಣದ ಲೋಕ ಅಂದುಕೊಂಡಂತಿದ್ದ ಮುಗ್ಧೆ ನಾನು.ಅಪ್ಪ-ಅಮ್ಮ-ಅಣ್ಣ ಎಲ್ಲರ ಮುಚ್ಚಟೆ ಪ್ರೀತಿಯಲ್ಲಿ ಬೆಳೆದಿದ್ದ ಮರಿಗುಬ್ಬಿ ಬೇರೆ.ಅಪರಿಮಿತ ಅನ್ನೋಷ್ಟು ಸುಂದರಿಯಾಗಿದ್ದಕ್ಕೆ ಅಮ್ಮನಿಗೆ ಸದಾ ನನ್ನದೇ ಚಿಂತೆ,ಅದನ್ನಾ ನಾನು-ಅಪ್ಪ-ಅಣ್ಣ ಗೇಲಿ ಮಾಡಿ ನಗ್ತಿದ್ವಿ.ನಾ ಬೆಳೆದಂತೆ ಸೌಂದರ್ಯವೂ ವರ್ಧಿಸಿತ್ತು.ಕಾಲೇಜ್ ಶುರುವಾಗೋ ಮೊದಲೇ ಅಪಪೋಲಿಗಳ ಪ್ರೇಮಪತ್ರಗಳು ಮನೆ ತಲುಪಿ ರಾಡಿಯೆಬ್ಬಿಸಿದ್ದವು.ಅಮ್ಮನ ವಿರೋಧದ ನಡುವೆಯೂ ನಾನು ಅಭ್ಯಾಸ ಮುಂದುವರೆಸಿದ್ದೆ,ಅಪ್ಪ-ಅಣ್ಣರ ಪೂರ್ಣ ಬೆಂಬಲವಿತ್ತು,ನನಗಂತೂ ಭಯವೇ ಇರಲಿಲ್ಲ. ಅಮ್ಮನೆಣಿಸಿದಂತೆ ಆಯ್ತು,ನನ್ನನ್ನಾರಾಧಿಸುವವರ ಗುಂಪೇ ಆಗಿಬಿಟ್ಟಿತ್ತು,ಹೆದ್ರಿಕೆಯಾದ್ರೂ ಸುಮ್ನಿದ್ದೆ.ಅಣ್ಣನಿಗೆ ಗೊತ್ತಿದ್ರೂ ಅಮ್ಮನಿಗೆ ಹೆದರಿ ಮನೆಯಲ್ಲಿ ಹೇಳಲೇ ಇಲ್ಲ.ಯಾವಾಗಲೂ ಗೆಳತಿಯರ ಜೊತೆಯಲ್ಲೇ ಹೋಗಿ ಬರೋಳು,ಅದೊಂದು ದಿನ ಲೈಬ್ರರಿಯಿಂದ ಹೊರಟಾಗಲೇ ಸಂಜೆಯಾಗಿತ್ತು.'ಆಹಾ ಗುಲಾಬಿ ಹೂವೇ','ಮಲ್ಲಿಗೇ ದಂಡೇ'ಅನ್ನುತ್ತಾ ಹಿಂದೆ ನಾಲ್ಕಾರು ಪೋಲಿಗಳ ಗುಂಪು ಹಿಂಬಾಲಿಸುತ್ತಿದ್ದರು. ಕೇಳಿಸಿದರೂ ಕೇಳಿಸದಂತೆ ಪಟ-ಪಟನೇ ನಡೆಯುತ್ತಲಿದ್ದೆ, ಅವ್ರ ಮಾತಿಗೆ ಲಕ್ಷ್ಯ ಕೊಡದೆ ಓಡುವಂತೆ ನಡೆದಾಗ, ಅದರಲ್ಲೊಬ್ಬ ಮುಂದೆ ಬಂದ, ಅವ ಊರ ರಾಜಕಾರಣಿಯ ಮಗ. ಮುಂದೆ ಬಂದು ನನ್ನನ್ನಪ್ಪಿ ಮುದ್ದಾಡಲು ಮುಂದಾದಾಗ,ನನ್ನ ಬಿರುಸಾದ ಏಟಾಗಲೇ ಅವನ ಕೆನ್ನೆ ಸವರಿತ್ತು.ಓಡುತ್ತಲೇ ಮನೆ ಸೇರಿದ್ದೆ, ಮೈಮೇಲೆ ದುಪ್ಪಟ್ಟಾವಿರದದ್ದೂ ಗಮನವಿಲ್ಲದೇ.

ಮುಸುಕು ತೆಗೆಯದೇ ಸುಮ್ನೇ ಅಳುತ್ತಿದ್ದ ನನ್ನ ಕಂಡು ಅಮ್ಮನಿಗೇನೋ ಸಂಶಯ.ಅಮ್ಮನಿಂದ ವಿಷಯ ತಿಳಿದ ಅಪ್ಪ-ಅಣ್ಣ ಕ್ಷಣಕ್ಕೆ ಗಾಭರಿಗೊಂಡರೂ ಸಾವರಿಸಿಕೊಂಡರು ಎಲ್ಲರೂ ಅಮ್ಮನ ಬಿಟ್ಟು.ಮತ್ತೆರಡು ದಿನದಲ್ಲೇ ಊರಲ್ಲೆಲ್ಲಾ ಏನೇನೋ ಊಹಾಪೋಹಗಳು,ನನ್ನ ಬಗ್ಗೆಯೇ ಇಲ್ಲ ಸಲ್ಲದ್ದು ಹಬ್ಬಿತ್ತು.ಅದನ್ನೇ ನಂಬಿದ ನಮ್ಮ ನೆಂಟರಿಷ್ಟರೂ ದೂರಾದರು. ಪುಕ್ಕಲು ಅಮ್ಮ ಅದೇ ವರ್ಷ ನಮ್ಮೂರಿನಿಂದ ಬಲುದೂರ ಹೋಗುವ ಗಟ್ಟಿ ನಿರ್ಧಾರ ಮಾಡೇಬಿಟ್ಟರು,ಯಾರ ಮಾತಿಗೂ ಬಗ್ಗದೇ.ಅಪ್ಪನ ಕಾಂಪ್ಲೆಕ್ಸ್ ಮಾರಿದ್ದಾಯ್ತು,ಮನೆಯನ್ನೂ ಕೂಡ.ದೂರದ ಬೆಂಗಳೂರಿಗೆ ಬಂದುಬಿಟ್ಟೆವು ಎಲ್ಲಾ ಮರೆತಂತೆ,ಆದರೂ ಅಮ್ಮನ ಕೊರಗು ಕಳೆದಂತಿರಲಿಲ್ಲ.ಅದಕ್ಕೆ 'ಅಮ್ಮಾ!ನನ್ನಾ ಯಾರೂ ಸಾಕಬೇಕಿಲ್ಲಮ್ಮ.ನಾನು ಬೆಳೆದು ಸಾಧಿಸಿ ಆಡಿಕೊಂಡವರ ಬಾಯ್ಮುಚ್ಚುಸುತ್ತೆನೆ ನೋಡ್ತಿರು' ಅಂದಾಗ ಮನೆಯವರೆಲ್ಲಾ ಅಚ್ಚರಿಗೊಂಡರಾದರೂ ನಿರಾಳವಾದ್ರು.ಹೀಗೇ ಯಾರ ಪರಿಚಯವೂ ಇಲ್ಲದೇ ಎರಡು ದಿನ ಕಳೆಯಿತು.

ಒಂದುದಿನ ಅಮ್ಮನೊಡನೆ ಮಾರ್ಕೆಟ್ ಅಲ್ಲಿ ಸಿಕ್ಕ ಪರಿಚಯದ ಗೆಳತಿ ಸುಮಾ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಳು.. ಮನಸ್ಸಿಲ್ಲದ ಮನಸ್ಸಿಂದ ಅಮ್ಮನ ಒಪ್ಪಿಗೆ ಪಡೆದು, ಮೊದಲ ಧಾರಾವಾಹಿಯ ಆಯ್ಕೆಗೆ ಹೋದೆ, ಸುಲಭವಾಗಿ ಅಯ್ಕೆಯಾಗಿದ್ದೆ. ಮೊದಲಿನಿಂದಲೂ ಕಲೆಯೆಡೆಗೆ ಆಸಕ್ತಿಯಿದ್ದುದರಿಂದ ಸುಲಭವಾಗಿ ಹೊಂದಿಕೊಂಡೆ. ಬಲುಬೇಗ ಪ್ರಸಿದ್ಧಿ ಪಡೆದುಬಿಟ್ಟೆ. ನನಗೆಲ್ಲಿ ಕೆಟ್ಟ ಅನುಭವ ಆಗುವುದೆಂದು ಅನಿಸ್ತದೋ ಅಲ್ಲಿಂದ ಮುಲಾಜಿಲ್ಲದೇ ಹೊರಬೀಳುತ್ತಿದ್ದೆ.ಅದಕ್ಕೆ ಬಹುತೇಕ ಎಲ್ಲರೂ 'ಕೊಬ್ಬಿನವಳು' ಎಂದೇ ಹೆಸರಾಗಿದ್ದೆ. ಎಲ್ಲರಿಗೂ ನನ್ನ ಸ್ನೇಹ ಬೇಕಿತ್ತು, ನಾನೂ ಯಾರೊಟ್ಟಿಗೂ ದ್ವೇಷ ಕಟ್ಟಿಕೊಳ್ಳಲಿಲ್ಲ. ಎಂದಿಗೂ 'ಗಾಸಿಪ್' ಕಾಲಂ ನಲ್ಲಿ ನನ್ನ ಹೆಸರು ಬರದೇ ಇದ್ದುದ್ದೇ ನನ್ನ ಸೌಮ್ಯತನಕ್ಕೆ ಸಾಕ್ಷಿಯಾಗಿತ್ತು. ಆದರೂ ನಾನು 'ಸಿನಿಮಾದವಳು,ಶೀಲಕ್ಕೆ ಬೆಲೆಗೊತ್ತಿಲ್ಲದವಳು' ಅನ್ನೋ ಕಾರಣವೊಡ್ಡಿ ಜೀವದಂತೆ ಪ್ರೀತಿಸುತ್ತಿದ್ದ ಪ್ರಶಾಂತ್ ದೂರ ಸರಿದ. ನಾಗರೀಕನಾದರೂ ಆಡುವರ ಮಾತಿಗೆ ಬೆಲೆಕೊಟ್ಟು ಹೊರಟ ಅವನನ್ನು ಮನಸ್ಸಿಂದಲೇ ತೆಗೆದುಬಿಟ್ಟೆ. ಅದಾದ ಮೇಲೆ ಕೆಲದಿನಗಳು ಬರೀ ಶೂನ್ಯವಾಗಿದ್ದವು..

ಬೆಂಕಿಯಂತಿದ್ರೂ ಕೆಲಜನರು ಆಡೋ ಮಾತಿಗೆ ತುಂಬಾ ನೋವಾಗ್ತಿತ್ತು. ಕ್ರಮೇಣ 'ನಾಯಿ ಬೊಗಳಿದ್ರೆ ನನಗೇನು?' ಅಂದ್ಕೊಂಡು ಸುಮ್ನಾಗಿಬಿಟ್ಟಿದ್ದೆ. ಅವರ ಮಾತಿಗೆ ತಲೆಕೊಡದೆ,ಕಿವಿಕೊಡಗಿಕೊಂಡು ಬಂದ್ಬಿಡ್ತಿದ್ದೆ. ಕಿರುತೆರೆಯಲ್ಲಿ, ಹಿರಿತೆರೆಯಲ್ಲಿನ ನನ್ನ ಪ್ರಸಿದ್ಧಿ ಎಲ್ಲರ ಕಣ್ಣುರಿಸುವಂತಾಗಿತ್ತು. ದೂರವಾಗಿದ್ದ ನೆಂಟರೆಲ್ಲಾ ಏನೇನೋ ಕಾರಣ ಹೇಳಿ ಮತ್ತೆ ಬಳಿ ಬರತೊಡಗಿದ್ದರು. ನಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಲೂ ಇರಲಿಲ್ಲ, ಆದರೀಗ 'ಸಕ್ಕರೆಯಿದ್ದೆಡೆ ಇರುವೆ' ಎಂಬಂತೆ, ತಮ್ಮೆಲ್ಲಾ ನಾಚಿಕೆಬಿಟ್ಟು ಹಣಕ್ಕಾಗಿ ನಮ್ಮಲ್ಲಿಗೇ ಬಂದಿದ್ದರು. ಅವರೆಲ್ಲರ ಕೀಚಕಬುದ್ಧಿಗೆ ಅಸಹ್ಯಗೊಂಡು, ದೂರಸರಿದುಬಿಟ್ಟಿದ್ದೆ. ಅಂತವರಿಗಿಂತ 'ಅನಾಥ ಮಕ್ಕಳಿಗಾಗಿ' ನನ್ನ ಜೀವನ ಮುಡಿಪು ಅಂದಿದ್ದಕ್ಕೆ ಮೊದಲು ಎಲ್ಲರೂ ವಿರೋಧಿಸಿದರೂ,ನನ್ನ ಕಠಿಣ ನಿರ್ಧಾರಕ್ಕೆ ಅವರೊಪ್ಪಲೇ ಬೇಕಾಯ್ತು.'ಮದುವೆ'ಯ ಕನಸ ಹೆಣೆಯುತ್ತಿದ್ದ ಅಮ್ಮ ಒಂದೆರಡು ದಿನ ಕೊರಗಿದರೂ,ನನ್ನ ತೃಪ್ತಿಯಲ್ಲೇ ಸುಖ ಕಂಡರು.ಇತ್ತೀಚಿಗೆ ನನ್ನ 'ಅಮ್ಮ' ಅನಾಥಾಶ್ರಮದ ಕಟ್ಟಡದ ಕಾಮಗಾರಿ ಬಲುವೇಗದೀ ನಡೆದಿತ್ತು. ಸ್ವತಃ ಅಣ್ಣನೇ ಎಲ್ಲವನ್ನೂ ನೋಡಿಕೊಳ್ಳುವುದರಿಂದ,ನಾನತ್ತ ತಲೆ ಕೆಡಿಸಿಕೊಳ್ಳದೇ ನನ್ನ ಶೂಟಿಂಗನಲ್ಲೇ ಮುಳುಗಿದ್ದೆ.ಹೀಗೇ ಯೋಚನೆಯಲ್ಲೇ ಮುಳುಗಿದ್ದ ನನ್ನನ್ನು ಅತ್ತಿಗೆಯ ಮಾತು ಎಚ್ಚರಿಸಿತು-'ಪುಟ್ಟಿ! ಇವತ್ತು ಜಯನಗರ ಸೆಂಟ್ರಲ್ ಗೆ ಹೋಗೊಣ ಕಣೆ.ನಿನ್ನ ಹುಟ್ಟಿದ ಹಬ್ಬಾನೂ ಹತ್ರ ಬಂತು,ನನಗೂ ಸ್ವಲ್ಪ ಖರೀದಿಯಿದೆ.ಸಾಯಂಕಾಲ ನಾಲ್ಕಕ್ಕೆ ತಯಾರಾಗಿರು'ಎನ್ನುತ್ತಾ ಹೊರನಡೆದರು..

ಸಾಯಂಕಾಲದಷ್ಟೋತ್ತಿಗೆ ನಾನು-ಅತ್ತಿಗೆ ಖರೀದಿಗೆ ತೊಡಗಿದ್ದೆವು.ನಾನೊಂದು ತಿಳಿಬಣ್ಣದ ಚೂಡಿದಾರ ಕೈಯಲ್ಲಿ ಇಟ್ಕೊಂಡು ಇನ್ನೇನು ಅತ್ತಿಗೆ ಹತ್ರ ತಿರುಗುವುದರಲ್ಲಿ 'ಅದು ನಿನ್ಗೆ ಚೆನ್ನಾಗಿ ಕಾಣೋಲ್ಲ ಪುಟ್ಟಿ' ಧ್ವನಿಬಂದತ್ತ ತಿರುಗಿದೆ ,ಅತ್ತಿಗೆಯ ಹಿಂದೆ ನಿಂತಿದ್ದ ಪ್ರಶಾಂತ್.ಒಮ್ಮೆಲೇ ಅಚ್ಚರಿಗೊಂಡರೂ ನಂತರ ಸಾವರಿಸಿಕೊಂಡು 'ಓಹ್ ಪ್ರಶಾಂತ್!ಹೇಗಿದ್ದೀಯಾ?ಯಾವಾಗ ಬಂದಿದ್ದು ಊರಿಂದ?' ಎಂದೆ. ನಿರ್ವಿಕಾರವಾಗಿ ಬಂದ ನನ್ನೀ ಪ್ರಶ್ನೆಗೆ ಅವ ಸುಸ್ತಾದ.ಅವನು ಬಳಿಯಿದ್ದರೂ ಇಲ್ಲದಂತೆ ಪ್ರತಿಯೊಂದಕ್ಕೂ ಅತ್ತಿಗೆಯನ್ನ ಕೇಳುತ್ತಿದಾಗ,ನನ್ನ ನಿರ್ಲಕ್ಷ್ಯದ ಅರಿವಾಯಿತವನಿಗೆ.ಕಣ್ಣಲ್ಲೇ ಗದರಿಕೊಂಡ ಅತ್ತಿಗೆಯನ್ನೂ ಗಮನಿಸದೇ ನನ್ನದೇ ವರಸೆ ಮುಂದುವರೆಸಿದೆ.ನನ್ನನ್ನು 'ಡ್ರೆಸ್ಸಿಂಗ್ ರೂಮ್'ಗೆ ಎಳೆದೊಯ್ದ ಅತ್ತಿಗೆ 'ನೋಡೇ ಪುಟ್ಟೀ ಅವ್ನಿಗೆ ಮತ್ತೆ ನಿನ್ಮೇಲೆ ಆಸಕ್ತಿ ಬಂದಿರೋ ಹಾಗಿದೆ.ಸುಮ್ನೆ ಯಾಕೆ ಹೀಗಾಡ್ತಿ?ಅಂದಾಗ ,ನಾ ಕೆರಳಿಬಿಟ್ಟು ಅತ್ತಿಗೆನ ಸುಮ್ಮನಾಗಿಸಿದ್ದೆ.ಎಲ್ಲಾ ಖರೀದಿಸಿ ಹೊರಡುವಾಗ ಪ್ರಶಾಂತ್ ಮನೆತನಕ ಬಿಡುತ್ತೇನೆಂದರೂ ಕೇಳದೆ ನಾನೇ ಡ್ರೈವ್ ಮಾಡಿ ಬಂದೆ ಹುಚ್ಚುಸಾಹಸಿಯಂತೆ..

ಮನೆಗೆ ಬಂದವಳೇ ರೂಮಲ್ಲಿ ಮಲಗಿಬಿಟ್ಟೆ ಊಟ ಮಾಡದೆ.ಮನವೀಗ ಮಂಗನಂತೆ ಕುಣಿಯುತ್ತಲಿತ್ತು.ತಾಸುಗಳ ಕಾಲ ಡೋಲಾಯಮಾನವಾದ ಮನವನ್ನೊಂದು ಹಂತಕ್ಕೆ ತಂದುಕೊಂಡೆ.ಬಾಲ್ಯದ ಗೆಳೆತನ,ಬೆಳೆಯತೊಡಗಿದಾಗಿನ ಪ್ರೀತಿ ಚಿಗುರು,ಮಧುರ ಭಾವನಗಳೋಡನೆ ಆಡಿ ಇನ್ನಿಲ್ಲದಂತೆ ಗಾಯಮಾಡಿ ಹೊರಟವನಿಗೆ ಮತ್ತೆ ನನ್ನಲ್ಲಿ ಪ್ರವೇಶವಿಲ್ಲ ಎಂದೂ ಇಲ್ಲದ ಕಾಠಿಣ್ಯತೆ,ಗಾಂಭಿರ್ಯತೆಯಿಂದ ಮನಸ್ಸನ್ನು ಗಟ್ಟಿಮಾಡಿಕೊಂಡೆ.ಬಲುದಿನದ ನಂತರ ತಿಳಿಯಾದ ಮನದೊಡನೆ ನಿದ್ರಿಸಿದೆ.

ಮರುದಿನ ಬೆಳಗ್ಗೆ ಬೇಗನೇ ಎಬ್ಬಿಸಿದ ಅಮ್ಮ ಕೈಹಿಡಿದು ಹೊರಗಡೆ ಎಳೆದುಕೊಂಡು ಹೋದಳು, ಪ್ರಶ್ನೆಗೂ ಅವಕಾಶವನ್ನೀಯದೇ. ಹೊರಗಡೆ ಹಾಲ್ ಅಲ್ಲಿ ಅಪ್ಪ-ಅಣ್ಣ-ಅತ್ತಿಗೆ, ರಾಜು, ಮನೆಕೆಲಸದವರೆಲ್ಲಾ ಸಾಲಾಗಿ ನಿಂತು ನನ್ನ ಬರುವನ್ನೇ ಕಾಯುವಂತಿದ್ದರು. ಆ ಕ್ಷಣ ಗಾಭರಿಬಿದ್ದೆ. ಮನ ಏನೇನೋ ಕೇಡು ಶಂಕಿಸುತ್ತಿರುವಾಗಲೇ ಬಳಿ ಬಂದ ಅಣ್ಣ ಅಂದಿನ ದಿನಪತ್ರಿಕೆಯನ್ನು ಕೈಗೆ ಕೊಟ್ಟ. ಮೊದಲಪುಟದಲ್ಲೇ ನನಗೆ 'ಅತ್ಯುತ್ತಮ ನಟಿ' ಪ್ರಶಸ್ತಿ ದೊರೆತ ಸುದ್ದಿಯಿತ್ತು. ಎಲ್ಲರೂ ಅಭಿನಂದಿಸುವವರೇ, ಅದೇ ಆನಂದದಲ್ಲಿ ತೇಲ್ತಾ, ಮಧ್ಯಾಹ್ನದವರೆಗೂ ಬಿಡದೇ ಬಂದ ಕಥೆಗಳು ಎಲ್ಲರ ಹೊಗಳಿಕೆ ಕೇಳೀ ಕೇಳೀ ಉಬ್ಬಿಬಿಟ್ಟಿದ್ದೆ. ಬಾಲ್ಕನಿಯಲ್ಲಿ ಕುಳಿತು ಬೇರೆ ಬೇರೆ ಪತ್ರಿಕೆಯವರೂ ಹೊಗಳಿದೆ ಪರಿಯ ಓದಿ ಸುಖಿಸುತ್ತಿದ್ದೆ, 'ಸೌಂದರ್ಯ ರಾಣಿ, ಕಲಾರಾಧಕಿ, ಅಭಿನಯ ಶ್ರೇಷ್ಠ' ಅಂತೆಲ್ಲಾ ಹೊಗಳಿ ಅಟ್ಟಕ್ಕೇರಿಸಿದ್ದರು. ಇದೆಲ್ಲುದರ ನಡುವೆ 'ಪ್ರಶಾಂತ್' ಫೋನ್ ಮಾಡದೇ ಇದ್ದುದ ಕಂಡು ಅಚ್ಚರಿಯಾಗಿತ್ತು. ಬಹುಶಃ ಅವನ ಕಂಡೊಡನೆ ಮುಂಚಿನಂತೆ ಕುಣ್ಕೊಂಡು ಬರ್ತೀನಿ ಅಂದ್ಕೊಂಡಿದ್ನೇನೋ ಅಂತ ಮುಗುಳುನಗು ತೇಲಿಬಂತು.. ಆದರೂ ಆ ಸಾಯಂಕಾಲ ನನ್ನ ಅಣುಕಿಸುತಲ್ಲಿತ್ತು. 'ಸೌಂದರ್ಯರಾಣಿ'ಯೆಂಬ ಪಟ್ಟಕ್ಕೆ ನನ್ನಲ್ಲೊಂದು ವಿಷಾದದಲೆ ತೇಲಿ ಹೋಯ್ತು..


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.