1.

ಅದೊಂದು ಪುಟ್ಟ ಊರು, ಕೇವಲ ಇಪ್ಪತ್ತು ಮನೆಗಳಿವೆ. ಎಲ್ಲ ಹುಲ್ಲಿನ ಜೋಪಡಿಗಳು.ಆ ಊರಿನ ಹೆಸರು ಮಂಜಿನಕಾನು.ಹೆಸರಿಗೆ ತಕ್ಕಂತೆ ಇದೆ. ಸತ್ತಮುತ್ತಲು ದಟ್ಟಾರಣ್ಯ. ಊರಿಗೆ ಹೋಗಬೇಕೆಂದರೆ ಟಾರು ರಸ್ತೆಯಿಂದ ನಾಲಕು ಕಿಮೀ ಮಣ್ಣಿನ ಕೊರಕಲು ರಸ್ತೆಯಲ್ಲಿ ಸಾಗಬೇಕು.
ಓಡಾಡಿ ಅಭ್ಯಾಸ ಇರುವವರು ಮಾತ್ರ ಹುಡುಕಿಕೊಂಡುಈ ಊರಿಗೆ ಹೋಗಬಹುದು.ಅಲ್ಲಿ ಒಂದು ಊರಿದೆ ಎನ್ನು ವುದು ಗೊತ್ತಾಗದು. ಅಲ್ಲಿಗೆ ವಾಹನ ಗಳು ಹೋಗಬೇಕಾದರೆ ಸಹಾಸವನ್ನೆ ಮಾಡಬೇಕು.ಹೋಗುವ ದಾರಿಯ ಮಧ್ಯದಲ್ಲಿ ಒಂದು ಹಳ್ಳಹರಿಯುತ್ತದೆ.ನೆತ್ತರಹಳ್ಳ ಅಂತ ಎಲ್ಲರು ಕರೆಯುವುದು.ಹಾಗೆ ಕರೆಯಲು ಕಾರಣವು ಇದೆ. ಮಟಮಟ ಮಧ್ಯಾನ್ಹ ಆ ಹಳ್ಳವನ್ನು ದಾಟಿದರೆ ಅವರು ಅಲ್ಲೆ ರಕ್ತಕಾರಿ ಸಾಯುತ್ತಾರಂತೆ, ಹಾಗೊಂದು ಪ್ರತೀತಿ.ಹಾಗಾಗಿ ಅಮವಾಸ್ಯೆ,ಹುಣ್ಣಿಮೆ, ದಿನಗಳಲ್ಲಂತು ಯಾರು ಮಧ್ಯಾನ್ಹ ಆ ಹಳ್ಳದ ಕಡೆ ಸುಳಿಯುವುದಿಲ್ಲ, ಹೋದವರ್ಷ ದೂರದಿಂದ ಇದೆ ಊರಿಗೆ ಬಂದ ಅಥಿತಿ ಯೊಬ್ಬರು ತಿರುಗಿ ಹೋಗುವಾಗ ಹೆಣವಾಗಿ ಇದೇ ಹಳ್ಳದಲ್ಲಿ ತೆಲಾಡಿದ್ದನ್ನು ನೋಡಿದ ಮೇಲಂತು ಮತ್ತಷ್ಟು ನೆತ್ತರಹಳ್ಳ ದ ಸುದ್ದಿ ಸುತ್ತಮುತ್ತಲ ಹತ್ತು ಹಳ್ಳಿಗೆ ಪ್ರಸಿದ್ದಿಯಾಯಿತು. ನೆತ್ತರಹೊಳೆದಾಟಿ ಒಂದುವರೆ ಮೈಲು ದೂರ ಕ್ರಮಿಸಿದರೆ ಸಿಗುವುದೆ ಮಂಜಿನಕಾನು. ಊರಿನ ಹೊರಗಡೆ ವಿಷಾಲವಾದ ಬಯಲು ಪ್ರದೇಶವಿದೆ. ಹಚ್ಚಹಸಿರಿನಿಂದ ಕೂಡಿದ ಅಡಿಕೆ ತೆಂಗು ಬಾಳೆ ತೋಟಗಳು. ಊರಿನ್ನು ಸುತ್ತುವರಿದ ಸಾಲುಸಾಲು ಗುಡ್ಡ ಬೆಟ್ಟಗಳು. ಊರಮುಂದಿನ ಬಯಲಿಗೆ ಬರುತ್ತಿದ್ದಂತೆ ರಸ್ತೆಯ ಪಕ್ಕದಲ್ಲಿ ಒಂದು ದೊಡ್ಡ ಕಣಿಗಲೆಮರ ಕಾಣುತ್ತದೆ.ವರ್ಷ ಪೂರ್ತಿ ಅದರಲ್ಲಿ ಹೂವು ಬಿಡುತ್ತಲೆ ಇರುತ್ತದೆ. ಹಾಗಾಗಿ ಬೂತನ ಕಟ್ಟೆಗೆ ಯಾರು ಪೂಜೆ ಮಾಡದಿದ್ದರು ಹೂವಂತು ತಪ್ಪುವುದಿಲ್ಲ .ಅದರಬುಡದಲ್ಲಿ ಒಂದು ಪುಟ್ಟ ಗುಡಿ.ನೆಲದ ಮಟ್ಟಕ್ಕಿಂತ ನಾಲ್ಕು ಅಡಿ ಎತ್ತರದಲ್ಲಿ ಸುಮಾರು ಹತ್ತುಮೀಟರ್ ಅಗಲ, ಮೂವತ್ತು ಮೀಟರ್ ಉದ್ದದ ಕಟ್ಟೆ ಇದೆ. ಹಾಗಾಗಿ ಇದಕ್ಕೆ ಉದ್ದಾಕಟ್ಟೆ ಬಂಗಿಬೂತ ಅಂತ ಕರೆಯುತ್ತಾರೆ. ವರ್ಷಕ್ಕೆ ದೀಪಾವಳಿಯಂದು ಇದಕ್ಕೆ ಊರಿನವರೆಲ್ಲ ಸೇರಿ ವಿಷೇಷ ಪೂಜೆ ಮಾಡಿ ಹಣ್ಣುಕಾಯಿ ಒಡೆದು ಪ್ರಾರ್ಥನೆ ಮಾಡುತ್ತಾರೆ. ದೂರದ ಊರಿನಿಂದ ಬಂದ ಕೆಲವು ದಲಿತ ವರ್ಗದವರು ಬೂತದ ಹೆಸರಲ್ಲಿ ದೂರದಲ್ಲೆ ಕುರಿಕೋಳಿ ಬಲಿಕೊಟ್ಟು ಹೋಗುತ್ತಾರೆ.ಇಡಿ ಗ್ರಾಮವನ್ನು ರಕ್ಷಣೆ ಮಾಡುತ್ತದೆ ಎನ್ನುವ ನಂಬಿಕೆ ಅವರದ್ದು.

ಈ ಕಟ್ಟೆಯ ಎಡಗಡೆ ತುಸುದೂರದಲ್ಲಿ ಚಿಕ್ಕ ಗುಡ್ಡವಿದೆ. ಅದರ ತಪ್ಪಲಿನಲ್ಲಿ ಸ್ಮಶಾನ, ಯಾವಾಗಲೂ ಅಪರೂಪಕ್ಕೆ ,ಆ ಊರಿನಲ್ಲಿ ಸತ್ತವರನ್ನು ಅಲ್ಲಿ ತಂದು ಸುಡತ್ತಾರೆ. ಅಲ್ಲಿಯು ಒಂದು ಅಂತರಪಿಶಾಚಿ ರಾತ್ರಿ ಸಮಯದಲ್ಲಿ ವಿಕಾರವಾಗಿ ಕಿರುಚುತ್ತಂತೆ. ಎಡಹೊತ್ತಿನಲ್ಲಿ ಮಕ್ಕಳ್ಯಾದರು ಆಸ್ಥಳಕ್ಕೆ ಹೋದರೆ ಮೆಟ್ಟಕೊಳ್ಲುತ್ತದೆ, ಅಂತ ಹೇಳುತ್ತಿರುತ್ತಾರೆ , ಹಾಗೆ ಮಣ್ಣಿನ ರಸ್ತೆಯಲ್ಲಿ ಹತ್ತುಮಾರು ದೂರ ನಡೆದರೆ ಸಿಗುವದೆ ಎರಡು ಕಡೆ ಇರುವ ದೊಡ್ಡ ದೊಡ್ಡ ಅರಳಿಕಟ್ಟೆ ಅಲ್ಲಿ ಕುಳಿತು ನೋಡಿದರೆ ಊರಿನ ಹಿಂಬದಿಗೆ
ತುಂಬಾ ದೊಡ್ಡದಾದ ಅಷ್ಟೇ ಎತ್ತರ ವಾದ ಗುಡ್ಡವೊಂದು ರಾಕ್ಷಸನಂತೆ ಕಾಣುತ್ತದೆ. ಪ್ರತಿ ಅಮಾವಾಸೆಯಂದು ಆ ಗುಡ್ಡದ ಒಂದು ಜಾಗದಿಂದ ಬೆಳಕಿನ ಒಂದು ವಸ್ತು ಆಕಡೆ ಈಕಡೆ ಚಲಿಸುತ್ತದೆ, ಸುಮಾರು ಒಂದೆರಡು ಗಂಟೆ ಸುತ್ತಾಡಿದ ಮೇಲೆ ಕಾಣೆಯಾಗುತ್ತದೆ. ಊರಿನ ಹಿರಿಯರಿಗೆ ಇದು ಅನೇಕ ಬಾರಿ ಅನುಭವ ವಾಗಿದೆ. ಅವರೆಲ್ಲ ಅದು ಕೊಳ್ಳಿದೆವ್ವ, ಅದರ ನಡೆ ಇರುವ ಜಾಗದಲ್ಲಿ ಓಡಾಡುತ್ತಿರುತ್ತದೆ ,ಹಾಗೆ ಓಡಾಡುವಾಗ ಯಾರೆ ಸಿಗಲಿ
ಅವರ ಆಯಸ್ಸು "ಅಲ್ಲಿಗೆ ಮುಗಿಯಿತು" ಅಂತಲೇ, ಎಂದು ಮಾತಾಡಿಕೊಳ್ಲುತ್ತಾರೆ. ಹಾಗಾಗಿ ಆ ದಿನದಂದು ಯಾರು ರಾತ್ರಿ ಯಾದಮೇಲೆ ಹೊರಗಡೆ ತಿರುಗಾಟಕ್ಕೆ ಹೋಗುವುದಿಲ್ಲ, ಅದು ಬೆಂಕಿಯ ದೊಂದಿಯನ್ನು(ಕೊಳ್ಳಿ)ಹಿಡಿದು ಹತ್ತಾರು ಕಿಲೋಮೀಟರ್ವರೆಗು ರಾತ್ರಿ ಇಡಿ ಓಡಾಡುತ್ತಿರುತ್ತದೆ ಅನ್ನುತ್ತಾರೆ ಹಿರಿಯರು.

2.

ಹೆಬ್ಬಾವಿನಂತೆ ಮಲಗಿದ್ದ ಡಾಂಬರು ರಸ್ತೆಯಲ್ಲಿ ಬಸ್ಸು ಶರವೇಗದಲ್ಲಿ ರಸ್ತೆಯನ್ನು ಸೀಳಿಕೊಂಡು ಮನ್ನುಗ್ಗುತ್ತಿದೆ,
ಬಸ್ಸಿನ ಬೋರ್ ಎನ್ನುವ ಶಬ್ದ ಬಿಟ್ಟರೆ ಬೇರೆನು ಕೇಳುವುದಿಲ್ಲ. ಕಾರ್ತೀಕ ಒಮ್ಮೆ ವಾಚಿನ ಕಡೆ ದೃಷ್ಟಿ ಹರಿಸಿದ ಸಮಯ ರಾತ್ರೆ ಹನ್ನೊಂದು ಗಂಟೆ, ಅಂದರೆ ಇನ್ನು ಒಂದುವರೆ ತಾಸು ಪ್ರಯಾಣ, ಕಾರ್ತೀಕ ಕಿವಿಗೆ ಹಾಕಿದ ಇಯರ್ಪೊನ್ ತೆಗದು ಜೋಬಿಗೆ ತುರುಕಿದ. ಮೊಬೈಲನ್ನು
ಪ್ಯಾಂಟಿನ ಕಿಸೆಗೆ ತುರುಕಿ ವರಗಿದ ಅವನಿಗೆ ನಿದ್ದೆ ಎಳೆಯುತ್ತಿತ್ತು.

ಕಂಡಕ್ಟರ್ ಬಸ್ಸಿನ ಎಲ್ಲ ಲೈಟ್ ಆನ್ಮಾಡಿ, ಯಾರ್ರೀ
ಹುಲಿಕಲ್,ಹುಲಿಕಲ್ ಅಂತ ಕೂಗಿದ . ಕಾರ್ತೀಕ ನಿದ್ದೆಯ ಮಂಪರಿನಲ್ಲಿದ್ದವನು ದಡಕ್ಕನೆ ಎದ್ದ, .ಒಂದುಬಾರಿ ಕೈಕಾಲು ಮುರಿದು ಕಣ್ಣು ತಿಕ್ಕಿಕೊಂಡು ಬೂಟನ್ನುಹಾಕಿ ಲೇಸ್ಕಟ್ಟಿಕೊಂಡ, ಬ್ಯಾಗನ್ನು ಹೆಗಲಿಗೆ ಏರಿಸಿ ಬಸ್ಸಿನ ಮಂಬಾಗಕ್ಕೆ ಬಂದ, ಐದುನಿಮಿಷದಲ್ಲಿ ಹುಲಿಕಲ್ ಎನ್ನುವ
ಬೋರ್ಡಿನ ಎದುರು ನಿಧಾನ ವಾಗಿ ಬಸ್ಸು ಕವಲು ದಾರಿಯ ಹತ್ತಿರ ಬಂದು ನಿಂತಿತು.
ಕಾರ್ತೀಕ ಕಂಡಕ್ಟರನಿಗೆ ಒಂದು ತ್ಯಾಂಕ್ಸ ಹೇಳಿ ಕೆಳಗಿಳಿದ.
ಬಸ್ಸು ನಿಧಾನವಾಗಿ ಚಲಿಸಿ ತಿರುವಿನಲ್ಲಿ ಮರೆಯಾಯಿತು.
ಸುತ್ತಮುತ್ತ ಕಪ್ಪು ಕತ್ತಲು ಎನೊಂದು ಕಾಣಿಸದಾಯ್ತು ಕಾರ್ತೀಕನಿಗೆ, ಕಣ್ಣುಗಳು ಪರಿಸರಕ್ಕೆ ಹೊಂದಿಕೊಳ್ಲಲು ಸ್ವಲ್ಪ ಸಮಯವೆ ಬೇಕಾಯಿತು. ಆರಲು ಬೇಳಕಿನಲ್ಲಿ ಮಣ್ಣಿನ ರಸ್ತೆಯು ತೋರುತ್ತಿತ್ತು, ಹಾಗಾಗಿ ನಿಧಾನ ವಾಗಿ ಹೆಜ್ಜೆ ಹಾಕಿದ, ಅವನಿಗೇನು ಈ ದಾರಿ ಹೊಸದೇನಲ್ಲ ಚಿಕ್ಕವನಿರುವಾಗ ಶಾಲೆಗೆ ಪ್ರತಿದಿನ ಇದೇ ರಸ್ತೆಯಲ್ಲಿ ಓಡಾಡಿದವನು, ಕಾಡಿನ ಕಾಲುದಾರಿಯಲ್ಲಿ
ಮಳೆಗಾಲದಲ್ಲೂ ನೀರಿನಲ್ಲಿ ಆಟವಾಡುತ್ತ ದಿನವು ಹೋಗುತ್ತಿದ್ದ, ಅವನು ಅವನ ಊರಿನ ಸ್ನೇಹಿತರು ಓಡಾಡುವ ಕೊರಕಲು ರಸ್ತೆಯಲ್ಲಿ ಹರಿಯುವ ನೀರಿಗೆ ಆಣೆಕಟ್ಟು ಕಟ್ಟಿ ಅದಕ್ಕೆ ಉರಾಳಕಡ್ಡಿಯ ಪೈಪನ್ನು ಹಾಕಿ ತಮಗೆ ಬೇಕಾದ ದಿಕ್ಕಿಗೆ ನೀರನ್ನು ತಿರುಗಿಸಿ ಜೋಗಜಲಪಾತದಂತೆ ಬೀಳುವಾಗ ಆನಂದ ಹೇಳತೀರದು.ಡಿಗ್ರಿಮುಗಿಸಿ ಕೆಲಸಕ್ಕೆಬೆಂಗಳೂರು ಸೇರಿದ ಮೇಲೆ ವರ್ಷಕ್ಕೆ ಒಂದೆರಡುಬಾರಿ ಬರುವುದು ಅಪ್ಪ ಅಮ್ಮನ ಆರೋಗ್ಯವಿಚಾರಿಸಿಕೊಂಡು,ತೋಟಹೊಲಗದ್ದೆ ಸುತ್ತಾಡಿಕೊಂಡು ತಂಗಿಯ ಜೊತೆ ಕೀಟಲೆ ಮಾಡಿಕೊಂಡು
ಒಂದುವಾರಕ್ಕೆ ಮತ್ತೆ ಬೆಂಗಳೂರಿಗೆ ಹೊರಡುವಾಗ ಖಿನ್ನನಾಗುತ್ತಿದ್ದ. ಯಾರಿಗಾದರು ಅಷ್ಟೆ ತಾನೆ? ಊರು ಅಂದರೆ ಪಂಚಪ್ರಾಣ, ಎಲ್ಲೆಇರಲಿ ಹುಟ್ಟದ ಊರಿನ ಮರೆಯುವುದು ಕಷ್ಟ,ಅದರಲ್ಲು ಬಾಲ್ಯವನ್ನು ಕಳೆದ ಆ ಮಣ್ಣಿನ ಋಣ ತೀರಿಸಲು ಅಸಾದ್ಯ. ಹಾಗೆ ಊರಿನ ಕಣಕಣವನ್ನು ತುಂಬಿಕೊಂಡಿದ್ದ ಕಾರ್ತೀಕ. ಹಾಗಾಗಿ ನಾಲ್ಕು ದಿನ ರಜೆ ಸಿಕ್ಕಿದರೆ ಸಾಕು ಊರಿಗೆ ಬರುತ್ತಿದ್ದ, ಮಣ್ಣಿನ ರಸ್ತೆಯಲ್ಲಿ ಕಾರ್ತೀಕನ ಬೂಟಿನ ಶಬ್ದ ಬಿಟ್ಟರೆ ಮತ್ತೇನು ಕೇಳುವುದಿಲ್ಲ, ಕೀರ್ಕೀರ್ ಎಂದು ಚೀರುವ ಜೀರುಂಡೆಗಳು,
ದೂರದಲ್ಲಿ ಗುಮ್ಮ...ಗುಮ್ಮ....ಎನ್ನುವ ಗುಮ್ಮನಹಕ್ಕಿ ಯಸ್ವರ ಒಂದುರೀತಿ ಭಯಹುಟ್ಟಿಸುವಂತಿತ್ತು


3.

ಮಂಜಿನಕಾನಿನಿಂದ ಒಂದು ಕಿಲೋಮೀಟರ್ ದೂರದಲ್ಲಿ
ಸಣ್ಣಗುಡಿಸಲು ಹಾಕಿಕೊಂಡು ವಾಸಮಾಡುತ್ತಿದ್ದಾನೆ ಮರಳಶೆಟ್ಟಿ, ಅಜಾನಬಾಹು, ಅವನಿಗೀಗ ಎಂಭತ್ತು ವರುಷ ಆದರು ಕಷ್ಟುಮಸ್ತಾದ ಆಳು, ತಲೆತುಂಬಬೆಳ್ಳನೆಯ ಕೂದಲು. ಉದ್ದವಾಗಿ ಬಿಟ್ಟ ಗಡ್ಡ
ಯಾವಾಗಲು ಹೆಗಲ ಮೇಲೆ ಒಂದು ಕಂಬಳಿ ,ಅವನಿಗೆ ಹಗಲುರಾತ್ರಿಯ ಪರಿವೆಯೆ ಇಲ್ಲ .ಅಷ್ಟುದಟ್ವಾದಾದ ಕಾಡಿನಂಚಿನಲ್ಲಿ ಒಬ್ಬನೆ ಇರುತ್ತಾನೆ, ಅವನಿಗೊಬ್ಬ ಮಗಳಿದ್ದಾಳೆ, ಅಲ್ಲಿಂದ ಐದಾರು ಕಿಲೋ ಮೀಟರ್ ದೂರದಲ್ಲಿರುವ ಗ್ರಾಮದ ಯವಕನಿಗೆ ತನ್ನ ಮಗಳನ್ನು
ಮದುವೆ ಮಾಡಿ ಕೊಟ್ಟಿದ್ದ. ಬೆಸರವಾದಾಗಲೆಲ್ಲ ಅಲ್ಲಿಗೆ ಹೋಗಿ ಬರುತ್ತಾನೆ .ಮಗಳಮನೆಗಾಗಿ ಎನ್ನುವ ಒಂದೆ ಕಾರಣವಲ್ಲ. ಮರುಳಶೆಟ್ಟಗೆ ಕುಡಿಯಬೇಕೆನಿಸಿದಾಗಲೆಲ್ಲ ಹೆಗಲ ಮೇಲೆ ಕಂಬಳಿ ಹಾಕಿ ಹೊರಟುಬಿಡುತ್ತಾನೆ. ಹಾಗೆ ಹೊರಟವನು ಬರುವದು ನಡುರಾತ್ರಿಗೆ. ಅವನಿಗೆ ಯಾರಭಯವು ಇಲ್ಲ. ಒಂದು ಬೀಡಿಹಚ್ಚಿ ಹೊಗೆಬಿಡುತ್ತಾ ಹೊರಟನೆಂದರೆ ಮುಗಿಯಿತು. ಯಾಕೋ ಮರಳುಶೆಟ್ಟಿ ಮನೆಬಿಟ್ಟು ಎರಡುಮೂರುದಿನವಾದರು ಬಿಡಾರಕ್ಕೆ ಬಂದಿರಲಿಲ್ಲ ಮಗಳ ಮನೆಯಲ್ಲಿ ಏನೊ ತೊಂದರೆ ಇತ್ತೆಂದು ಕಾಣುತ್ತದೆ. ಎರಡುದಿನ ಉಳಿದು ಮೂರನೆದಿನ ರಾತ್ರಿ ಊಟಮಾಡಿ ಒಂದೆರಡು ಕ್ವಾರ್ಟರ್ ಏರಿಸಿ ಮನೆದಾರಿ ಹಿಡಿದ. ಚಳಿಗಾಲವಾದ್ದರಿಂದ ತುಂಬ ಚಳಿ ಇತ್ತು. ಕಂಬಳಿಯನ್ನು ಬಿಚ್ಚಿ ಮೈತುಂಬ ಹೊದ್ದುಕೊಂಡುಬಂದ. ಆದರು ಚಳಿ ತಡೆದುಕೊಳ್ಲ ಲಾಗುತ್ತಿಲ್ಲ. ಬೀಡಿಹಚ್ಚೋಣವೆಂದು ಜೇಬನ್ನು ತಡಕಾಡಿದ. ಬೆಂಕಿಪೊಟ್ಟಣ ಬಿಟ್ಟುಬಂದಿದ್ದ.ಮನದಲ್ಲೇ ಬೈದುಕೊಂಡ. ಹಾಗುಹೀಗು ಕತ್ತಲೆಯಲ್ಲಿ ಊರಿನಬಯಲಿನಲ್ಲಿ ಬರುತ್ತಿದ್ದಾಗ ಕಾಡಂಚಿನಲ್ಲಿ ಬೆಂಕಿ ಹಾಕಿರುವುದು ಕಂಡಿತು.
ಹತ್ತಿಬಂದು ನೋಡಿದ. ಯಾರುಕಾಣಲಿಲ್ಲ.ನಿಗಿನಿಗಿ ಕೆಂಡ ಉರಿಯುತ್ತಿತ್ತು ಹಾಗೆ ಕುಕ್ಕರಗಾಲಲ್ಲಿ ಕುಳಿತು ಚಳಿಕಾಯಿಸಿ
ಜೇಬಿನಲ್ಲಿದ್ದ ಬೀಡಿತೆಗೆದು ಹಚ್ಚಿ ಪುಸ್ಸ್ಂತ ಹೊಗೆಬಿಟ್ಟ.
ಮೈಯೆಲ್ಲ ಸ್ವಲಪ ಬೆಚ್ಚಗಾಯಿತು. ಹಾಗೆ ಕೈಕಾಲು ಕಾಸುತ್ತ ಕುಳಿತ ಮರಳುಶೆಟ್ಟಿ.

4.

ಮಂಜಿನಕಾನಿನಲ್ಲಿ ಒಂದು ಪುಟ್ಟ ಗಣಪತಿ ದೇವಸ್ಥಾನವಿದೆ. ಅಲ್ಲಿಯ ಪೂಜೆಗಾಗಿ ಹೊರಗಿನಿಂದ ಬಂದ ಬ್ರಾಹ್ಮಣ ದಂಪತಿಗಳಿದ್ದಾರೆ .ಭಕ್ತಿಯಿಂದ ಪೂಜೆಪುನಸ್ಕಾರ ಮಾಡುತ್ತಾರೆ. ಊರವರಿಗು ಅವರಮೇಲೆ ತುಂಬ ಗೌರವವಿದೆ.ದಂಪತಿಗಳಿಗೆ ಒಂದು ಪುಟ್ಟ ಮಗುವಿತ್ತು . ಇನ್ನು ಒಂದುವರೆ ವರುಷ ಚಿಕ್ಕ ಮಗು.
ದೆವಸ್ಥಾನದಲ್ಲಿ ಒಂದು ಪುಟ್ಟ ಕಾರ್ಯಕ್ರಮವಿತ್ತು. ಹತ್ತುಹದಿನೈದು ಜನಕ್ಕೆ ಅಡುಗೆ ಏರ್ಪಾಟುಮಾಡುತ್ತಿದ್ದರು
ಬಟ್ಟರ ಹೆಂಡತಿ ಜಾನಕಮ್ಮ . ಒಲೆಯಮೇಲಿದ್ದ ಕುದಿಯುವ ಸಾರಿನ ಪಾತ್ರೆಯನ್ನು ಕೆಳಗಿಳಿಸಿ ಮತ್ತೊಂದು ಬಾಣಲೆಗೆ ವಗ್ಗರಣೆ ಹಾಕುವ ತಯಾರಿಮಾಡುತ್ತಿದ್ದರು. ಈ ನಡುವೆ ತೆಂಗಿನಕಾಯಿ ಕಾಯಿ ತುರಿಯಲು ಕುಳಿತರು. ಅದೆ ಸಮಯಕ್ಕೆ ಮಗು ಆಡುತ್ತಾ ಅಲ್ಲಿಗೆ ಬಂದಿತು ..ಕಾಯಿತುರಿಯನ್ನು ನೋಡಿ ಮಗು ಕೈನೀಡಿ
ಅಮ್ಮಾ ಅಮ್ಮಾ ಎಂದಿತು. ಜಾನಕಮ್ಮ ಅದರ ಪುಟ್ಟ ಕೈಗಳಿಗೆ ಕಾಯಿತುರಿ ಇಟ್ಟರು. ಮಗು ಖುಷಿಯಿಂದ ಬಾಯಿಗೆ ಹಾಕುತ್ತಾ ಒಂದೊಂದೆ ಹೆಜ್ಜೆ ಹಿಂದೆ ಇಟ್ಟಿದ್ದೆ ತಡ ದಡಕ್ಕನೆ ಕುದಿಯುತ್ತಿದ್ದ ಸಾರಿನ ಪಾತ್ರೆಯಲ್ಲಿ ಬಿತ್ತು. ನೋಡುನೋಡುತ್ತಿದ್ದಂತೆ ಮಗುವಿನ ಚೀರಾಟ ಎಲ್ಲರನ್ನು ದಂಗುಬಡಿಸಿತು ತಾಯಿ ತಕ್ಷಣ ಎದ್ದುಬಂದು ಮಗುವನ್ನು ಎತ್ತಿಕೊಂಡಳು. ಅಷ್ಟರಲ್ಲಾಗಲೆ ಮಗುವಿನ ಮೈಕೈ ಬೆಂದುಹೋಗಿತ್ತು. ಅಲ್ಲಿದ್ದವರಿಗೆಲ್ಲಾ ಎನುಮಾಡುವುದೆಂದೆ ತೋಚಲಿಲ್ಲ. ಒಬ್ಬೊಬ್ಬರು ಒಂದೊಂದು ಔಷಧಿ ಯನ್ನು ಮಾಡಲು ಸಲಹೆ ಕೊಟ್ಟರು.
ಹತ್ತು ನಿಮಿಷಗಳ ಲ್ಲಿ ಮಗುವಿನ ಚರ್ಮ ಗಳು ಬೊಬ್ಬೆಬಂದು ಹಿರಚಿಕೊಂಡಿತು. ನೊಡುನೊಡುತ್ತಿದ್ದಂತೆ ಮಗು ಪ್ರಾಣಕಳೆದುಕೊಂಡಿತು. ದಂಪತಿಗಳ ದುಃಖಕ್ಕೆ ಪಾರವೆ ಇರಲಿಲ್ಲ. ದೇವಸ್ಥಾನದಲ್ಲಿ ನೆಡಯಬೇಕಾಗಿದ್ದ ಕಾರ್ಯ ವನ್ನು ಅಲ್ಲಿಗೆ ಬಿಟ್ಟು ಊರಿನವರೆಲ್ಲ ಸೇರಿ ಗಂಡಹೆಂಡತಿಗೆ ಸಮಾಧಾನ ಹೇಳಿ ಮಗುವಿನ ಕಳೇಬರಹವನ್ನು ತೆಗೆದುಕೊಂಡುಹೋಗಿ ಕಾಡಿನಂಚಿನಲ್ಲಿ
ದಫನ್ಮಾಡಿ ಬಂದರು. ಎಲ್ಲರ ಮುಖದಲ್ಲಿ ನೋವುಸಂಕಟ.
ಇಡಿ ಮಂಜಿನಕಾನು ಸಂಜೆಹೊತ್ತಿಗೆ ಸ್ಮಶಾನ ನೀರವತೆಯಿಂದ ಕೂಡಿತ್ತು. ಕತ್ತಲೆ ಸುತ್ತಲು ಆವರಿಸಿತು.


5.
ಕಾರ್ತೀಕ ಮುಖ್ಯರಸ್ತೆಯಿಂದ ಮಣ್ಣಿನ ರಸ್ತೆಯಲ್ಲಿ ಕತ್ತಲೆಯಲ್ಲಿ ನೆಡೆಯುತ್ತಲೆ ಇದ್ದ .ಮೊಬೈಲಿನ ಬೆಳಕಲ್ಲಿ ವಾಚು ನೋಡಿದ. ಹನ್ನೆರಡುವರೆ. ಇನ್ನು ಅರ್ದಮೈಲಿಇದೆ.
ನೆತ್ತರ ಹಳ್ಳವನ್ನು ದಾಟಿ ದಿಬ್ಬವೇರಿ ಮುನ್ನೆಡದರೆ ಎಡಕ್ಕೆ ತಿರಗಿದರೆ ಊರು ಬರುತ್ತದೆ. ಹಾಗೇ ಅಂದುಕೊಳುತ್ತಿರುವಾಗಲೇ ಹಳ್ದದ ಎಡದಂಡೆಯ ಮೇಲೆ ಬೆಳ್ಳನೆಯ ವ್ಯಕ್ತಿಯೊಂದು ನಿಂತಂತೆ ಅನಿಸಿತು. ಕಾರ್ತೀಕನ
ಮೈ ರೋಮವೆಲ್ಲ ನೆಟ್ಟಗೆ ನಿಂತಿತು.ನಾಲಿಗೆ ಒಣಗಿ ಕೈಕಾಲು ಕಂಪಿಸಿತು. ಮತ್ತೆಮತ್ತೆ ತಲೆಯನ್ನು ಮೇಲೆತ್ತದೆ ವಾರೆಗಣ್ಣಿನಿಂದ ನೋಡಿದ. ಕತ್ತಲೆಯಲ್ಲಿ ಸ್ಪಷ್ಟವಟಗಿ ಕಾಣುತ್ತಿಲ್ಲ ಆಕ್ರತಿಯೊಂದು ಇರುವುದು ಸ್ಪಷ್ಟವಾಗಿದೆ ಎನುಮಾಡುವುದು .ರಸ್ತೆಗು ಅದಕ್ಕು ದೂರವಿಲ್ಲ.ಪಕ್ಕದಲ್ಲೆ ಹೊಗಬೇಕು. ಎನಾದರು ಆದರೆ ಕೂಗಿಕೊಂಡರು ಯಾರು ಬರುವುದಿಲ್ಲ ಆಚಳಿಯಲ್ಲು ಕಾರ್ತೀಕ ಬೆವತುಬಿಟ್ಟ. ಹಿಂದೆ ಓಡಿಹೋಗೋಣವೆ ಎನಿಸಿತು. ಅಪ್ಪ ಹೇಳಿದ ಮಾತು ನೆನಪಿಗೆ ಬಂತು. ಬೂತ ದೆವ್ವಗಳು ಕಂಡರೆ ಬೆನ್ನುತೋರಿಸಿ ಓಡಬಾರದು ಅಂತ. ಹಾಗೇನಾದರು ಮಾಡಿದರೆ ಬಡಿದು ಹಾಕುತ್ತವೆಯಂತೆ.ಚಿಕ್ಕವನಿದ್ದಾಗ ಅಪ್ಪ ಹೇಳಿದ ಅನುಭವ.
ಕಾರ್ತೀಕ ಒಂದುಕ್ಷಣ ದೇವರನ್ನು ನೆನೆದ. ಹಾಗೆ ತಮ್ಮ ಊರಿನ ರಕ್ಷಣೆಗೆ ನಿಂತ ಬಂಗಿಬೂತನ ನೆನಪಾಯಿತು.ನಾಳೆಯೆನಿನಗೆ ಹಣ್ಣುಕಾಯಿ ಒಡೆಸುತ್ತೇನೆ
ನನಗೆ ತೊಂದರೆಯಾಗದಂತೆ ನೋಡಿಕೊ ಎಂದು ತಲೆತಗ್ಗಿಸಿ ಕತ್ತಲೆಯಲ್ಲೆ ಓಡಿದ. ಬೆಳ್ಳನೆಯ ಆಕೃತಿ ಇದ್ದಲ್ಲಿಂದ ಕದಲಲಿಲ್ಲ. ಅದನ್ನು ದಾಟಿಬರಬೇಕಾದರೆ ಉಸಿರು ಬಾಯಿಗೆ ಬಂದಿತ್ತು. ಸ್ವಲಪದೂರ ಬಂದಮೇಲೆ ಬದುಕಿದೆಯಾ ಬಡಜೀವವೆ ಅನಿಸಿತು. ನಿಜವಾಗಿ ಅದು ದೆವ್ವವಾ? ಅಥವಾ ಮತ್ತೇನಾದರು ಇರಬಹುದಾ? ಅರ್ಥವಾಗಲಿಲ್ಲ ಕಾರ್ತೀಕನಿಗೆ. ಹಾಗೆ ಊರಬಯಲಿನ
ಬೂತನಕಟ್ಟವರೆಗೆ ಬಂದ ಕಾರ್ತೀಕ ಸ್ವಲಪ ದೂರದಲ್ಲಿ ಬೆಂಕಿಉರಿಯುತ್ತಿತ್ತು. ಆಶ್ಚರ್ಯವಾಯ್ತು
ಕಾರ್ತೀಕನಿಗೆ. ಈನಡುರಾತ್ರಿಯಲ್ಲಿ ಯಾರು ಹಾಕಿರಬಹುದು? ಒಂದು ಗೊತ್ತಾಗಲಿಲ್ಲ.ಹತ್ತಿರಹತ್ತಿರ ಬರುತ್ತಿದ್ದಂತೆ ಅಲ್ಲೊಂದು ಆಕೃತಿ ಬೆಂಕಿಕಾಯಿಸುತ್ತಾ ಕುಳಿತಿರುವುದು ಕಂಡಿತು .ಹಾಗೆ ಒಂದು ಕೈಯಲ್ಲಿ ಕೊಳ್ಳಿಯನ್ನು ಹಿಡಿದುಕೊಂಡು ಅತ್ತ ಇತ್ತ ಆಡಿಸುತ್ತರುವುದು ಕಂಡಿತು ಕಾರ್ತೀಕನಿಗೆ ಮೈಚಳಿ ಶರುವಾಯಿತು. ಒಹೋ. ಅಪ್ಪ ಹೇಳಿದ ಕೊಳ್ಲಿದೆವ್ವ ಇದೇ ಇರಬೇಕು. ತನ್ನಕಥೆ ಇವತ್ತಿಗೆ ಮುಗೀತು ಅದು ಓಡಾಡುವಾಗ ಯಾರಾದರು ಸಿಕ್ಕಿದರೆ ಮುಗಿಯಿತು ಕಥೆ ಅಂತ ಅಪ್ಪ ಹೇಳುತ್ತಿದ್ದರು. ಬಹುಶ: ತನಗೆ ಅಪ್ಪ ಅಮ್ಮನ ಒಂದುಸಾರಿ ಕಣ್ತುಂಬ ನೋಡುವ ಅದೃಷ್ಟವು ಇಲ್ಲವೇನೊ ಅನಿಸಿತು ಕೈಕಾಲಿನ ತ್ರಾಣವೆ ಉಡುಗಿ ಹೋಯಿತು ಯಾವ ಮಗ್ಗುಲಲ್ಲಿ ಎದ್ದೆನೊ ಒಟ್ಟಿಗೆ ಇವತ್ತು ತನ್ನ ಗ್ರಹಚಾರ ಸರಿ ಇಲ್ಲ ಎನಿಸಿ ಮೈ ಬೆವರಿತು. ಹಾಗೆ ಎಣಿಸುತ್ತಾ ಸಪ್ಪಳವಾಗದಂತೆ ನಿದಾನ ಹಜ್ಜೆ ಇಡುತ್ತಾ ಸಾಗಿದ. ನೋಡುನೋಡುತ್ತಿದ್ದಂತೆ ಚಳಿಕಾಯಿಸುತ್ತಿದ್ದ
ಅದು ಧುತ್ತನೆ ಒಂದು ಕೊಳ್ಳಿಯನ್ನು ಹಿಡಿದು ನಿಂತಿತು. ಆಕಡೆಈಕಡೆ ರಭಸವಾಗಿ ಬೀಸುತ್ತ ಕಾರ್ತೀಕನಿರುವ ಕಡೆ
ಹೆಜ್ಜೆಹಾಕಿತು. ಕಾರ್ತಿಕನಿಗೆ ಭಯವಾಯಿತು ಮೈತುಂಬಾ ಕಪ್ಪುಕೊದಲು ಎತ್ತರವಾದ ದೇಹ ಉದ್ದವಾದ ಗಡ್ಡ ಎಲ್ಲವು ಬೆಂಕಿಯ ಮಂದ ಬೆಳಕಲ್ಲಿ ಕಂಡು ನಡುಗಿದ. ಅದು ಇನ್ನು ಹತ್ತಿರಕ್ಕೆ ಬಂದಿತು. ಕಾರ್ತಿಕ ಓಡಬೇಕೆಂದುಕೊಂಡ ಆಗಲಿಲ್ಲ. ಕಾಲುಗಳಲ್ಲಿ ನಡಕ ಶುರುವಾಯಿತು. ಬರತ್ತಿರುವ ವ್ಯಕ್ತಿ ಹೋಯ್ ಯಾರದು ಎಂದು ಗಡಸು ದ್ವನಿಯಲ್ಲಿ ಕೇಳತ್ತಿದ್ದಂತೆ ಅಮ್ಮಾ ಎಂದುಕೂಗುತ್ತಾ ತಲೆತಿರುಗಿಬಿದ್ದ ಕಾರ್ತೀಕ.ಕಾರ್ತೀಕನಿಗೆ ಎಚ್ಚರ ತಪ್ಪಿಹೋಗಿತ್ತು.

ಸಮಾಪ್ತಿ.

ಮರಳು ಶೆಟ್ಟಿ ಚಳಿಕಾಯಿಸಿ ಒಂದು ಬೀಡಿ ಹಚ್ಚುತ್ತಿರುವಾಗ ದಾರಿಯಲ್ಲಿ ಯಾರೋ ನೆಡೆದುಕೊಂಡುಬರುವ ಸಪ್ಪಳ ವಾಯ್ತು ಈ ಸಮಯದಲ್ಲಿ ಯಾರಿರಬಹುದು ಎನ್ನುವ ಕುತೂಹಲ, ಹಾಗೆ ಉರಿಯುತ್ತಿರುವ ಒಂದು ಕೊಳ್ಲಿಯನ್ನು ಹಿಡಿದುಕೊಂಡು
ರಭಸವಾಗಿ ಬೀಸಿ ಬೆಂಕಿ ಹೊತ್ತಿಸಿ ರಸ್ತೆಯಲ್ಲಿ ಬರುತ್ತಿದ್ದವರ ಹತ್ತಿರ ಬಂದು ಹೋಯ್ ಯಾರು ಎನ್ನುವಷ್ಟರಲ್ಲಿ ಎಚ್ಚರ ತಪ್ಪಿ ಬೀಳುತ್ತಿದ್ದ ಹುಡುಗನನ್ನು ಹಿಡಿದುಕೊಂಡ . ಕತ್ತಲೆಯಲ್ಲಿ ಯಾರು ಎನ್ನುವದು ಗೊತ್ತಾಗಲಿಲ್ಲ ದೊಂದಿಯ ಬೆಳಕನ್ನು ಅಡ್ಡಲಾಗಿ ಹಿಡುದು ಮುಖವನ್ನು ನೋಡಿದ. ಒಹ್! ಇವನು ಶಂಕರಣ್ಣನ ಮಗ. ಬೆಂಗಳೂರಿಂದ ಬಂದಿರುಕು ಸಾಕು. ತನ್ನ ನೋಡಿ ದೆವ್ವ ಅಂತ ಹೆದರ್ಕಂಡಿರಬೇಕು , ಅನ್ನುತ್ತಾ, ಅವನನ್ನು ಹೆಗಲಮೇಲೆ ಹಾಕಿಕೊಂಡು ಶಂಕರಣ್ಣ ವಡೆಯರ ಮನಿಗೆ ಬಂದು ಬಾಗಿಲು ತಟ್ದಿದ.

ಶಂಕರಣ್ಣನ ಹೆಂಡತಿ ದೀಪ ಉರಿಸಿ ಬಾಗಿಲಕದತೆಗೆದು ಯಾರು ಅಂದಳು ನಾನು ಅಮ್ಮ" ಮರುಳ "ಅಂದ ಶೆಟ್ಟಿ.
ನಿಧಾನವಾಗಿ ಹೆಗಲಮೇಲಿದ್ದ ಕಾರ್ತೀಕನನ್ನು ಕೆಳಗಿಳಿಸಿ ಜಗುಲಿಯ ಒಂದುಕಡೆ ಮಲಗಿಸಿದ. ಹಾಗೆ ಲೋಟದಲ್ಲಿ ನೀರು ತರಿಸಿ ಮಖಕ್ಕೆ ಚುಮುಕಿಸಿದ. ಅಷ್ಟೊತ್ತಿಗಾಗಲೆ ಶಂಕರಣ್ಣ ಮತ್ತು ಮಗಳು ಕಣ್ಣುಜ್ಜುತ್ತಾ ಬಂದರು .ಎಲ್ಲರಿಗು ಆಶ್ಚರ್ಯ. ಎನಾಗುತ್ತಿದೆ ಒಂದು ಅರ್ಥವಾಗುತ್ತಿಲ್ಲ. ಅಷ್ಟೊತ್ತಿಗೆ ಕಾರ್ತೀಕನಿಗೆ ಪ್ರಜ್ಞೆ ಬಂದಿತು.
ಸುತ್ತಮುತ್ತ ಇದ್ದವರಿನ್ನೆಲ್ಲ ಪಿಳಪಿಳನೆ ನೋಡಿದ. ಅವನಿಗೆ ಹಿಂದೆ ಮುಂದೆ ಏನು ತೋಚಲಿಲ್ಲ. ಒಂದುಕ್ಷಣ ಸಾವರಿಸಿಕೊಂಡು ನೋಡಿದ ಘಟನೆಗಳು ಒಂದೊಂದಾಗಿ ನೆನಪಿಗೆ ಬಂದಿತು.
ಶಂಕರಣ್ಣ ಕೇಳಿದರು ಎನಾಯಿತೊ. ಅಂತ ನೆಡೆದದ್ದನ್ನೆಲ್ಲ ಕಾರ್ತೀಕ ವಿವರ ವಾಗಿ ಹೇಳಿದ ಇನ್ನು ಸಣ್ಣಗೆ ನಡುಗುತ್ತಿದ್ದ. ಭಯದಿಂದ ಹದರಿದ್ದ ಕಾರ್ತೀಕನಿಗೆ ಜ್ವರ ಕಾಣ್ಸಿಕೊಂಡಿತ್ತು.
"ಹೌದು ನಿನಗೆ ಕಾರ್ತೀಕ ಎಚ್ಚರ ತಪ್ಪಿ ಬಿದ್ದದ್ದು ಹೆಂಗೆ ಗೊತ್ತಾಯಿತು ಮರಳು ಶೆಟ್ಟಿ" ಅಂತ ಕೇಳಿದ.ಶಂಕರಣ್ಣ. ಅಯ್ಯ ನಾನು ಮಗಳಮನಿಂದ ಬತ್ತಿದ್ದೆ ಬಹಳ ಚಳಿಆಯಿತು ಬೆಂಕಿ ಕಂಡ್ತಲ ಚೂರು ಚಳಿಕಾಸ್ಗಂಡು ಬೀಡಿ ಸೇದ್ಕಂಡು ಹೋಪ ಅಂತ ಇದ್ದೆ. ಅಷ್ಟೋತ್ತಿಗೆ ಯಾರೊ ಬಂದಾಗಾಯ್ತು ಹೋಗಿ ಹೋಯ್ ಯಾರು ಅಂದೆಕಾಣಿ ನಿಮ್ಮಮಗ ಎಚ್ರತಪ್ಪಿ ಬಿದ್ದ ಎಂದ ಮರುಳಶೆಟ್ಟಿ.

ಶಂಕರಣ್ಣನಿಗೆ ಆ ಸಮಯದಲ್ಲು ನಗು ಬಂತು ಎಂತ ಮಾರಾಯ ನೀನು ಸೊಡ್ಳುಗುಡ್ಡೇಲಿ ಹೋಗಿ ಚಳಿಕಾಸ್ಗಂಡು ಬೀಡಿಸೇದುದನ ಬುದ್ದಿ ಇತ್ತ ನಿನಗೆ ಅಂದರು.

ಎಂತಹೇಳ್ತ್ರಿ, ನಂಗೆ ಒಂದು ಅರ್ಥ ಆಯ್ಜಿಲ್ಲೆ ಅಂದ ಮರುಳ ಶೆಟ್ಟಿ....
ಎಂತಿಲ್ಲೆ ಮರಾಯ... ನಮ್ಮೂರ ದೇವಸ್ಥಾನದ ಬಟ್ಟರ ಮಗು ಇತ್ತಲೆ ಅದು ಸಾರಿನ ಪಾತ್ರೆಗೆ ಬಿದ್ದು ಸತ್ತಹೋಯ್ತು, ಸಂಜೆಪಾಗ ಎಲ್ಲರು ಹೋಗಿ ಸುಟ್ಟು ಬಂದ್ವು. ನೀನು ಅದರಲ್ಲಿ ಚಳಿಕಾಸುದನ.. ಶಂಕರಣ್ಣ ವಿವರವಾಗಿ ತಿಳಿಸಿದ.
ಗೊತ್ತಿಲ್ಲೆ ಶಂಕರಣ್ಣ ತಪ್ಪಮಾಡ್ದೆಅಂದ ಮರುಳ ಶೆಟ್ಟಿ.

ನಾಲ್ಕು ದಿನ ಊರಲ್ಲೆ ಇದ್ದ ಕಾರ್ತೀಕ ಕುತೂಹಲ ತಡೆಯಲಾಗದೆ ನೆತ್ತರ ಹೊಳೆ ಹತ್ತಿರ ಹೋಗಿ ನೋಡಿದ
ಅವನಿಗೆ ನಗು ತಡಯಲಾಗಲಿಲ್ಲ. ಕಾರಣ ಅವನು ಬರುವಾಗ ಆದಿನ ಕಂಡ ದೆವ್ವ ದೆವ್ವ ವಾಗಿರದೆ ಒಂದು ಆಳೆತ್ರದ ನಂದಿಮರದ ಬೊಡ್ಡೆಯಾಗಿತ್ತು. ಕತ್ತಲಿನಲ್ಲು ಯಾರೋ ನಿತ್ತಂತೆ ಬಾಸವಾಗುತ್ತಿತ್ತು.ಥೂ ಇದಕ್ಕಾಗಿ ತಾನು ಎಷ್ಟು ಹೆದರಿಕೊಂಡೆ ಎಂದು ಅವನಿಗೆ ನಾಚಿಕೆಯಾಯಿತು.

ಮತ್ತೆ ಯಾವತ್ತು ರಾತ್ರೆಹೊತ್ತು ತನ್ನ ಊರಿಗೆ ಬರಬಾರದು ಎಂದು ಅಂದುಕೊಂಡ. ಕಾಕತಾಳಿಯವಾಗಿ ಏನೆಲ್ಲಾ ನೆಡೆದುಹೋಗಿತ್ತು.

ಸಶೇಷ
*******

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.