ಅವಳೊಡನೆ ಮಾತಾಡಿದಾಗ

"ಸಾರ್, ಒಬ್ಬ ಒಳ್ಳೆ ಸಾಹಿತಿ ಆಗ್ಬೇಕಂದ್ರೆ ಒಬ್ಬನಲ್ಲಿರಬೇಕಾದ ಮುಖ್ಯವಾದ ಗುಣ ಯಾವುದು ಸಾರ್?" ನಾಡಿನ ಓರ್ವ ಹೆಸರಾಂತ ಸಾಹಿತಿಯೆದುರು ನಿಂತು ಹೀಗೆ ಸಾಗಿತ್ತು ನನ್ನ ಸ್ವಗತ! ಅವರೋ ನನ್ನ ಪ್ರಶ್ನೆಗೆ ಒಂದೇ ಒಂದು ಪದದಲ್ಲಿ ಉತ್ತರಿಸಿದರು! "ಅಬ್ಸರ್ವೇಶನ್ ಕಣಯ್ಯಾ! ಅಬ್ಸರ್ವೇಶನ್ ಭಾಳ ಇಂಪಾರ್ಟೆಂಟು!" ಅವತ್ತೆ ಕಣ್ರಿ ಈ ಅಬ್ಸರ್ವೇಶನ್ ಅನ್ನೋ ಭೂತ ನನ್ನೊಳಹೊಕ್ಕಿದ್ದು! ಕಂಡಕಂಡಿದ್ದನ್ನೆಲ್ಲಾ ಸೂಕ್ಷ್ಮವಾಗಿ ನೋಡು, ಅನಲೈಸ್ ಮಾಡು, ಏನೇನೋ ಅದರ ಬಗ್ಗೆ ನಾಲ್ಕು ಸಾಲು ಬರಿ, ಖುಷಿಪಡು! ಇದೇ ಆಗೋಯ್ತು! ಒಂದ್ ಹೊಸ ಸಿನೆಮಾ, ಹಾಡು, ಪೇಟಿಂಗ್ನಿಂದ ಹಿಡಿದು ಯಾರೋ ಅಪರಿಚಿತರ ಕೈಲಿರೋ ಮೊಬೈಲ್ ನೋಡಿದ್ರೂ ಏನಾದ್ರೂ ಒಂದು ವಿಶೇಷವಾದ ಅಂಶ ತಿಳಿದುಬರತೊಡಗಿತು! "ಸಖತ್ ಗುರೂ ಆ ಸಾಹಿತಿ!" ಅಂತ ಒಳಗೊಳಗೇ ಖುಷಿಯಾಯ್ತು! ಇಂತಹ ಒಂದು ಸಂದರ್ಭದಲ್ಲಿ ಕ್ಲಾಸಿಗೆ ಬಂಕ್ ಮಾಡಿ ಕ್ಯಾಂಟಿನ್ ಎದುರಿನ ಕಲ್ಲುಹಾಸಿನ ಮೇಲೆ ಕೂತು ಕಳೆದು ಹೋದವನ ಕಣ್ಣಿಗೆ ಬಿದ್ದವಳೇ 'ಅವಳು!'

ಅವಳ ಮೇಲೆ ನನಗೆ ಯಾವುದೇ ರೀತಿಯ ವಯೋಸಹಜ 'ಫೀಲಿಂಗು'ಗಳಿರದಿದ್ದರೂ ಅವಳ ಕಂಡರೆ ಒಂದು ರೀತಿಯ 'ಆಶ್ಚರ್ಯ' ಭಾವವಂತೂ ಇದ್ದಿತು! ಕಾರಣ "ಅಬ್ಸರ್ವೇಶನ್" ಎಂಬ ಗುಣ ಅಥವಾ ಚಟ(?)ವೇ ಎಂದು ಬಿಡಿಸಿ ಹೇಳಬೇಕಿಲ್ಲ! ನನ್ನ ಕುತೂಹಲದ ಕೇಂದ್ರಬಿಂದುವೆಂದರೆ ಅವಳ 'ಡ್ರೆಸ್ಸಿಂಗ್ ಸೆನ್ಸು'! ಮಧ್ಯಮಕ್ಕಿಂತ ಚೂರು ಜಾಸ್ತಿಯೇ ಎನ್ನುವ ಎತ್ತರ. ಸಾಧಾರಣ ಮೈಕಟ್ಟು. ನೀಳಕೇಶರಾಶಿಯಲ್ಲಿ ಮಿನುಗುವ ಸುಂದರಿ ಅವಳು! ಆ ಸ್ನಿಗ್ಧ ಸೌಂದರ್ಯಕ್ಕೆ ಅವಳು ತೊಡುವ ತರಹೇವಾರಿ ಉಡುಪುಗಳು ವಿಶೇಷ ಮೆರುಗನ್ನೇ ನೀಡುತ್ತಿದ್ದವು. ಅವಳು ತೊಡುವ ಉಡುಪು, ಚಪ್ಪಲಿ, ಬಳೆ, ವಾಚು, ಸರ, ಕಿವಿಯೋಲೆ, ಹೇರ್ ಬ್ಯಾಂಡು, ಮತ್ತು ಅವಳ ಸುಂದರ ಮೊಗ - ಇವೆಲ್ಲವನ್ನೂ ಒಂದೇ ಪ್ರೇಮಿನಲ್ಲಿ ಕಂಡಾಗ ಯಾವನಿಗಾದರೂ "ವ್ಹಾವ್!" ಎನಿಸದೇ ಇರದು! ಅವಳ ಆ ಶೈಲಿಗೆ ಆಡುಭಾಷೆಯಲ್ಲಿ "ಮ್ಯಾಚಿಂಗ್-ಮ್ಯಾಚಿಂಗ್" ಶೈಲಿ ಎನ್ನಬಹುದೇನೋ! ಅವಳ ಬಟ್ಟೆ, ಚಪ್ಪಲಿಯಿಂದ ಹೇರ್'ಬ್ಯಾಂಡಿನವರೆಗೆ ಎಲ್ಲವನ್ನೂ ಯಾವುದಾದರೂ ಮೊದಲ ನೋಟಕ್ಕೆ ಸಲೀಸಾಗಿ ನಿಲುಕುವ ಸಾಮಾನ್ಯ ನೋಟದ ಕೊಂಡಿಯೊಂದು ಯಾವಾಗಲೂ ಬಂಧಿಸಿರುತ್ತಿತ್ತು! ಹೀಗೆಯೇ ಕೆಲ ದಿನಗಳವರೆಗೆ ನನ್ನ 'ಅಬ್ಸರ್ವೇಶನ್' ಪ್ರಕ್ರಿಯೆ ಮುಂದುವರಿಯಿತು.

ಎಳೆನಿಂಬೆಗಳ ಕಣ್ಣುಕುಕ್ಕುವ ವಿಶೇಷವಾದ ಆಕರ್ಷಣೆ ಅವಳಲ್ಲಿದೆ, ಅವಳ ಶೈಲಿಯಲ್ಲಿದೆ ಎಂಬುದು ಸಂಪೂರ್ಣ ತಿಳಿದು ಹೋಯಿತು! ಈಗ ಮುಂದಿನ ಹಂತ! ಅನಲೈಸ್ ಮಾಡುವುದು! ಹೀಗೆ ಈ ಅನಲೈಸೇಶನ್ನಿನ ದಾರಿಯಲ್ಲಿ ನನ್ನ ಹಾಸ್ಟೆಲ್ ಬದುಕು ನೆನಪಾಗಿ, ನನ್ನ ಹಾಸ್ಟೆಲ್ಲಿನ ಬಹುತೇಕರ ಜೀವನಶೈಲಿ ಮತ್ತು ಅವಳ ಜೀವನಶೈಲಿಯ ನಡುವೆ ಒಂದುಕ್ಷಣ Comparisonನ್ನಿನ ಸೇತುವೆ ಮೂಡಿ ಅದರ ಮೇಲೆ ತರಹೇವಾರಿ ಪ್ರಶ್ನೆಗಳು ಮಿಂಚಿ ಮಾಯವಾದವು! ಎಲ್ಲವೂ ಆಶ್ಚರ್ಯಕರ ಚಿಹ್ನೆಯಲ್ಲಿ ಕೊನೆಯಾದ ಪ್ರಶ್ನೆಗಳೇ! "ಅವಳ ಬಳಿ ಅಷ್ಟೊಂದು ವಿಧವಿಧ ಬಟ್ಟೆಗಳಿವೆಯೇ?! ಅವುಗಳಿಗೆ ಹೊಂದಿಕೆಯಾಗುವ accessoryಗಳೆಷ್ಟಿರಬಹುದು ಹಾಗಾದರೆ?! ಇಷ್ಟೆಲ್ಲಾ ಅಲಂಕಾರಕ್ಕೆ ಅವಳ ಬಳಿ ಸಮಯವಿರುತ್ತದೆಯೇ?!" ನನಗೆ "ಅಬ್ಬಬ್ಬಾ!" ಎನಿಸದೆ ವಿಧಿಯಿರಲಿಲ್ಲ! ಎಲ್ಲಾ ಹುಡುಗಿಯರು ಅವಳಂತಿರಲಿಲ್ಲ. ಕೆಲವರು ತುಂಬಾ ಸರಳವಾಗಿಯೇ 'ಅದ್ಭುತ'ವಾಗಿದ್ದರು ಮತ್ತು ನನ್ನನ್ನು ಆಕರ್ಷಿಸಿದ್ದರೂ ಕೂಡ!

ಸಾಮಾನ್ಯವಾಗಿ, ನಮ್ಮ ಹುಡುಗರು ಬೆಳಿಗ್ಗೆ ಬೇಗನೇ ಏಳೋದಿಲ್ಲ. ಎದ್ದರು ಕೂಡ ಕೈಲಿ ಮೊಬೈಲ್ ಹಿಡಿದು ಹಾಸಿಗೇಲೇ ಇದ್ದುಬಿಡುತ್ತಾರೆ. ಅಂಥೂ ಹಾಸಿಗೆ ಬಿಟ್ಟು ಏಳುವುದು ಇನ್ನೇನು ಸಮಯದ ಕತ್ತಿ ತಲೆಯ ತಾಕುತಿದೆ ಎಂದಾಗಲೇ! ಹಾಸಿಗೆಬಿಟ್ಟ ನಂತರ ಅತ್ಯಾವಶ್ಯಕ ಎನಿಸುವ ಕಾರ್ಯಗಳನ್ನು ಹೊರತುಪಡಿಸಿ ಸ್ನಾನಾದಿ ನಿತ್ಯಕರ್ಮಗಳನ್ನು ಪೂರೈಸುವುದು ಅವರವರ ಭಾವಭಕುತಿಗೆ ಬಿಟ್ಟಂತಹ ವಿಚಾರಗಳು! ಸ್ನಾನಮಾಡಿ (ಸಾಧ್ಯವಾದರೆ!), ಅವಶ್ಯಕವಾಗಿ ತಿಂಡಿ ತಿಂದು, ರೂಮಿಗೆ ವಾಪಾಸಾದರೆ ಅಲ್ಲಿ ಕಬೋರ್ಡಿನಲ್ಲೋ ಬಕೆಟಿನಲ್ಲೋ ಟೇಬಲ್ ಮೇಲೆಯೋ ರಾಶಿ ಬಟ್ಟೆಗಳು ಅವುಗಳ ಯಾಜಮಾನರುಗಳ ಬೇಧವಿಲ್ಲದೆ ತಮಗಿಷ್ಟಬಂದಂತೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಆ ಅದ್ಭುತ ರಾಶಿಯಲ್ಲಿ, ಇತ್ತೀಚೆಗೆ ತೊಳೆದ ಬಟ್ಟೆಗಳೆಡೆಗೋ ಅಥವಾ ಕಡಿಮೆ ಬಾರಿ ಉಪಯೋಗಿಸಿದ ಬಟ್ಟೆಗಳೆಡೆಗೋ ಒಂದು ದೃಷ್ಟಿಯನ್ನು ಹಾಯಿಸಿ ಯಾವುದೋ ಒಂದು ಜತೆ ಬಟ್ಟೆಗಳನ್ನು ಆಯ್ದುಕೊಳ್ಳಲಾಗುತ್ತದೆ.

ಮೊಬೈಲಿನಲ್ಲಿ ಸಮಯ ನೋಡಿ, "ಲೇಟಾಗ್ತಿದೆ!" ಎಂದು ಮೆದುಳಿಗೆ ಸಂದೇಶ ಹೋಗಿ, ಲಗುಬಗೆಯಿಂದ ಬಟ್ಟೆಗಳನ್ನು ತೊಟ್ಟು, ಯಾವುದೋ ಒಂದು ಫ಼ೇರ್ನೆಸ್ ಕ್ರಿಮನ್ನೋ, ಪರ್ಪ್ಯೋಮನ್ನೋ ಹಾಕಿಕೊಳ್ಳಲಾಗುತ್ತದೆ (ಅದೂ ಸ್ವಂತದ್ದಾಗಿರುವುದು ಅತೀ ಅಪರೂಪ!). ಅಪ್ಪಿತಪ್ಪಿ ಕಾಲೇಜಿಗೆ ಲೇಟಾಗದಿದ್ದ ಪಕ್ಷದಲ್ಲಿ (ನಿತ್ಯ ಲೇಟಾಗುವುದೇ ಸತ್ಯ!) ಸು(?)ವಾಸನೆ ಭರಿತ ಕಾಲುಚೀಲಗಳನ್ನು ಹುಡುಕಿ, ಕೊಡವಿಕೊಂಡು, ಶೂಗಳನ್ನು ಧರಿಸಲಾಗುತ್ತದೆ. ಇಲ್ಲವಾದಲ್ಲಿ ಅತಿವೇಗದಲ್ಲಿ ಯಾರದೋ ಒಂದು ಜತೆ ಚಪ್ಪಲಿಗಳನ್ನು ಧರಿಸಿದ ಕಾಲುಗಳು ಓಡಿ ಹೋಗುತ್ತವೆ! (ಈ ಮೇಲಿನ ದಿನಚರಿಯು 'ಲವ್ವು-ಲೈಕು-ಕ್ರಷ್ಯು-ಅಟ್ರ್ಯಾಕ್ಷನ್ನು' ಮತ್ತೀತರ ಭಾವಸುಳಿಗಳಲ್ಲಿ ಬದುಕ ಸಾಗಿಸುವ ಮುಗ್ಧ ಹುಡುಗರಲ್ಲಿ ಬದಲಾಗುತ್ತದೆ! ಉಳಿದಂತೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ!) ಈ ಎಲ್ಲಾ ಯೋಚನೆಗಳು ನನ್ನನ್ನು ತೀವ್ರ ಗಲಿಬಿಲಿಗೆ ತಿರುಗಿಸಿದವು! ನನ್ನ ಪ್ರಶ್ನೆಗಳಿಗೆ ಉತ್ತರಗಳ ಅವಶ್ಯಕತೆಯಿದ್ದಿತು.

ಒಂದು ದಿನ ಧೈರ್ಯಮಾಡಿ ಅವಳನ್ನೇ ಕೇಳಿಬಿಡೋಣವೆಂದು ತೀರ್ಮಾನಿಸಿದೆ! ಕೇಳಿಯೇ ಬಿಟ್ಟೆ ಕೂಡ! ಅವಳಿಂದ ಉತ್ತರವನ್ನು ಕೇಳಿ ನನಗೆ ಕ್ಷಣಹೊತ್ತು ಮಾತೇ ಬರಲಿಲ್ಲ! "ಯು ನೋ ವ್ಹಾಟ್. ನನ್ ಹತ್ರ ಜಾಸ್ತಿ ಬಟ್ಟೆಗಳೇ ಇಲ್ಲ ಗೊತ್ತ? ನನ್ ಫ್ರೆಂಡ್ಸ್ ಹತ್ರ ನೋಡ್ಬೇಕು.........'' ಈ ಸ್ವಗತವನ್ನು ಕೇಳಿ ನನಗೆ ಕ್ಷಣಹೊತ್ತು ಮಾತೇ ಬರಲಿಲ್ಲ! ಇವೆಲ್ಲವನ್ನು ನೋಡಿ ಒಂದು ವಕ್ರತುಂಡೋಕ್ತಿ ನೆನಪಾಯಿತು. ಹುಡುಗಿಯರಿಗೆ ತಮ್ಮ ಕಪಾಟಿನ ಬಾಗಿಲನ್ನು ತೆರೆದಾಗ ಎರಡು ಮುಖ್ಯ ಸಮಸ್ಯೆಗಳು ಎದುರಾಗುತ್ತವಂತೆ; ಮೊದಲನೆಯದು 'ಹಾಕಿಕೊಳ್ಳುಲು ಬಟ್ಟೆಗಳಿಲ್ಲ ಮತ್ತು ಎರಡನೆಯದು ಬಟ್ಟೆಗಳಿಡಲು ಜಾಗವಿಲ್ಲ!'

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.