ಬಲವಂತದ ಬದುಕುಬಲವಂತದ ಬದುಕು ಸುಲಭವಲ್ಲ..ಏನಿದು ಬಲವಂತದ ಬದುಕು...? ಬಲವಂತಕ್ಕೂ ಬದುಕು ಮಾಡುತ್ತಾರಾ?..ಹೌದು ಕೆಲವೊಂದು ಬಾರಿ ಅನಿವಾರ್ಯತೆಗೆ ಬಲವಂತದ ಬದುಕಿನ ಬಾಗಿಲು ತಟ್ಟಲೇ ಬೇಕಾಗುತ್ತದೆ.ಅದರಾಳ ಅರಿತವರಿಗೇ ಗೊತ್ತು.‌..ಅಂತದ್ದೊಂದು ಬದುಕಿನ ಕರಾಳತೆಯ ಭೀಕರತೆ ಎಷ್ಟಿರುತ್ತದೆ ಎಂದು..

ತನ್ನದೊಂದು ಸ್ವಂತಿಕೆಯನ್ನು ಮರೆತು ಇನ್ಯಾರದೋ ಇಚ್ಛೆಯನ್ನು ಪೂರೈಸಲು, ಸಮಾಜದ ಬಾಯಿಗೆ ಆಹಾರವಾಗುತ್ತೇನೆನೋ ಎನ್ನುವ ಭಯದಿಂದ ಅಥವಾ ಭಾವನಾತ್ಮಕ ನಿಶ್ಯಕ್ತಿಯಿಂದ ಅಥವಾ ಇನ್ನೇನೋ ಕಾರಣದಿಂದ ಒಬ್ಬರ ಜೊತೆ ಇಷ್ಟವಿರದ ಕಷ್ಟದ ಬದುಕು ಸಾಗಿಸುವುದಿದೆಯಲ್ಲ ಅದರಂಥ ಘೋರವಾದ ನೋವು ಇನ್ನೊಂದಿಲ್ಲ‌.

ಒಂದು ಚಂದದ ಹುಡುಗಿ ಅನಿವಾರ್ಯತೆಗಾಗಿ ಆಯ್ದುಕೊಂಡ ಬಲವಂತದ ಬದುಕಿನ ನೈಜ ಘಟನೆ ಇದು.. ಆ ಚಂದದ ಹುಡುಗಿ ಒಬ್ಬನನ್ನ ಪ್ರೀತಿಸಿ ಕೈಬಿಟ್ಟಳು. ಕಾರಣಗಳು ಅವಳನ್ನೇ ಹುಡುಕಿಕೊಂಡು ಬಂದವೋ ಅವಳೇ ಕಾರಣಗಳನ್ನ ಹುಡುಕಿ ಹೋದಳೋ ಗೊತ್ತಿಲ್ಲ..ಅಮಾಯಕ ಜೀವವೊಂದು ನೋವಿನ ಕೂಪಕ್ಕೆ ಬಿದ್ದು ಒದ್ದಾಡಿತ್ತು.ಆ ಒದ್ದಾಟ ಕಂಡರೂ ಕರಗದ ಆ ಚಂದದ ಹುಡುಗಿ ಅವನಿಂದ ಕಾಣದ ಎಲ್ಲ ರೀತಿಯಲ್ಲೂ ಉತ್ತಮ ಬದುಕು ಕಾಣಲು ಎದುರು ನೋಡುತ್ತಿರುವಾಗ ಚಂದದ ಹುಡುಗನ ಆಗಮನ ಅವಳ ಬದುಕಿನಲ್ಲಿ.. ನೋಡಲು ಹೀರೋನ ಹಾಗಿರುವ ಆ ಹುಡುಗ ಒಂದು ನೋಟದಲ್ಲಿ ಅವಳನ್ನು ಸೆಳೆದುಬಿಟ್ಟ. ಒಂದು ಉತ್ತಮ ಕೆಲಸದಲ್ಲಿದ್ದ ಆ ಹುಡುಗಿ ಇನ್ನೂ ಚಂದವಾಗಿಯೇ ಕಂಡಿದ್ದಳವನಿಗೆ.. ಪ್ರಾರಂಭಿಕ ಜೀವನ ಅತೀ ಸುಂದರವಾಗಿತ್ತು‌.ಆ ಅಮಾಯಕನ ಬಗ್ಗೆ ಹೇಳಿದ ಮೇಲೂ ಆ ಹುಡುಗ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳಿದ್ದು ತನ್ನ ಕನಸುಗಳಿಗೆರಡು ರೆಕ್ಕೆ ಬಂದಂತೆಸಿತ್ತವಳಿಗೆ. ಚಂದದ ಹುಡುಗಿ ಬಣ್ಣ ಬಣ್ಣದ ಕನಸುಗಳನ್ನು ಹೆಣೆದು ತನ್ನ ಬದುಕಿನ್ನು ಸುಂದರ ಕಾಮನಬಿಲ್ಲೆಂದುಕೊಂಡಳು.ಅಷ್ಟು ಬೇಗ ಅವಳ ಬದುಕಿನ ಬಾನಿನಲ್ಲಿ ಬಂದ ಆ ಕಾಮನಬಿಲ್ಲು ಅಷ್ಟೇ ಬೇಗ ಬಣ್ಣ ಕಳೆದುಕೊಂಡು ಮಾಯವಾಗುತ್ತದೆ ಎಂದವಳು ಎಣಿಸಿರಲಿಲ್ಲ. ಮದುವೆಯ ನಾಟಕವೂ ಮುಗಿದೇ ಹೋಯಿತು. ನಗುನಗುತ್ತಲೇ ಅವನ ಮನೆಗೆ ಕಾಲಿಟ್ಟ ಅವಳ ಮುಖದಲ್ಲಿ ನಗು ಮಾಯವಾಗಿತ್ತು. ಹಿಟ್ಲರನ ಪುನರ್ಜನ್ಮ, ಹಣದ ದಾಸನಾಗಿದ್ದ ಆ ಚಂದದ ಹುಡುಗನ ಮುಖದ ಕರಾಳತೆ ಅವಳನ್ನು ಹಿಡಿಯಷ್ಟಾಗಿಸಿತ್ತು.ತಾನು ದುಡಿದ ಹಣವೆನ್ನುವುದು ಇನ್ಯಾರದೋ ಪಸಲು.. ಪ್ರೀತಿಯಂತೂ ಚಿಗುರಿನಲ್ಲೇ ಒಣಗಿ ಹೋಗಿತ್ತು.

ಅವನು ನೀಡುತ್ತಿದ್ದ ಮಾನಸಿಕ ಹಿಂಸೆಯನ್ನು ತಾಳಲಾಗದೇ ಹುಚ್ಚಿಯಂತೆ ಚೀರಾಡಿ, ಅವನನ್ನು ನಿಂದಿಸುವಾಗಲೆಲ್ಲ ಅವನು ಮನೆಯವರ ಎದುರು ಅವಳ ಹಳೆಯ ಪ್ರಿಯತಮನ ಬಗೆಗೆ ಹೇಳಿ ಅವಮಾನಿಸಿ, ಅವಳು ಪಾತಾಳಕ್ಕಿಳಿಯುವಂತೆ ಮಾಡುತ್ತಿದ್ದುದು ಅವಳಿಗೊಂದು ನುಂಗಲಾರದ ತುತ್ತಾಗಿತ್ತು. ಅತ್ತೆ, ಮಾವ, ಮನೆ ಮಂದಿಯ ಮುಂದೆಯೇ ತನ್ನ ಬಗ್ಗೆ ಗೊತ್ತಿದ್ದೂ ಮದುವೆಯಾದವನು ತನ್ನ ತೇಜೋವಧೆ ಮಾಡುತ್ತಿದ್ದುದು ತನ್ನನ್ನು ಇಂಚಿಂಚು ಇರಿದು ಕೊಲ್ಲುತ್ತಿರುವಂತೆ ಭಾಸವಾಗುತ್ತಿತ್ತವಳಿಗೆ. ಅವನು "ಬೇರೆ ಯಾವ ಗಂಡೂ, ನೀನೊಬ್ಬನ ಹಿಂದೆ ಸುತ್ತಾಡಿದವಳೆಂದು ಗೊತ್ತಿದ್ದೂ ನಿನ್ನನ್ನು ಹತ್ತಿರ ಸೇರಿಸುತ್ತಿರಲಿಲ್ಲ.. ಈ ಬದುಕು, ಸಮಾಜದಲ್ಲಿ ಗರತಿ ಎನ್ನುವ ಪಟ್ಟ ನಾನು ಕೊಟ್ಟ ಭಿಕ್ಷೆ.. ನೀನು ಒಂದು ಒಳ್ಳೆಯ ಉದ್ಯೋಗದಲ್ಲಿರುವುದಕ್ಕೆ ನಾನು ನಿನಗೆ ನನ್ನ ಹೆಂಡತಿಯ ಸ್ಥಾನ ಭಿಕ್ಷೆ ನೀಡಿದ್ದು. ಬದುಕನ್ನು ಭಾವನಾತ್ಮಕವಾಗಿ ನಾನು ನೋಡುವುದಿಲ್ಲ. ಪ್ರ್ಯಾಕ್ಟಿಕಲ್ ಆಗಿ ನೋಡುತ್ತೇನೆ. ಇರುವುದಾದರೆ ಇರು.. ಇಲ್ಲವೆಂದರೆ ಹೊರಟುಹೋಗು.. " ಎಂದು ಹೀಯಾಳಿಸುವಾಗಲೆಲ್ಲ ಬೀದಿ ಬದಿ ಭಿಕ್ಷೆ ಬೇಡುವವರ ಬದುಕೇ ನೆಮ್ಮದಿಯಾಗಿರುತ್ತದೆನೋ ಎಂದು ಒಳಗೊಳಗೆ ಕೊರಗಿದ್ದಳು.. ಇತ್ತೀಚೆಗೆ ಅವನನ್ನು ನಿಂದಿಸುವುದನ್ನು ಬಿಟ್ಟಿದ್ದಳು.. ನಿಂದಿಸಿದರೆ ಇರುವ ಒಂದು ನೋವಿಗೆ ಇನ್ನೊಂದು ನೋವಿನದೇ ಬಹುಮಾನ ಸಿಗುತ್ತಿತ್ತೇ ವಿನಃ ತನ್ನನ್ನು ನಂಬಿ ಬಂದ ಅವಳ ನೋವಿನ ತೀವ್ರತೆ ಅರ್ಥ ಮಾಡಿಕೊಳ್ಳುವಂತವ ಅವನಾಗಿರಲಿಲ್ಲ. ಹೆಚ್ಚಾಗಿ ಆ ಕಳೆದುಹೋದ ಅಮಾಯಕನ ವಿಷಯ ಅವರಿಬ್ಬರ ನಡುವಿನ ಕಂದಕವನ್ನು ಇನ್ನೂ ಆಳ ಮಾಡುವುದು ಅವಳಿಗೆ ಬೇಕಿರಲಿಲ್ಲ. ನಂಬಿದವನ ನಂಬಿಕೆದ್ರೋಹ ಹೃದಯದಲ್ಲಿ ವಾಸಿಯಾಗದ ಗಾಯ ಮಾಡಿತ್ತು‌. ಇತ್ತಿಚೆಗೆ ಪೂರ್ತಿ ಮೌನಕ್ಕೆ ಶರಣಾಗಿದ್ದಳು.. ಒಂದು ವರ್ಷದ ಒಳಗಾಗಿ ಆ ಬಣ್ಣ ಕಳೆದುಕೊಂಡ ಬದುಕು ಅದೆಷ್ಟು ಬೇಸರವಾಗಿತ್ತೆಂದರೆ ಅವನೊಂದಿಗಿನ ಜೀವನವೇ ಬೇಡವೆಂದು ಅವನ ಬದುಕಿನಿಂದ ಹೊರಬಂದಳು. ಗರತಿಯ ಪಟ್ಟ ಸಮಾಜದ ಕೀಳು ಹುಳುಗಳು ತಾವೇ ಕಲ್ಪಿಸಿ ಸೃಷ್ಟಿಸಿದ್ದ ಇನ್ಯಾವ್ಯಾವುದೋ ಪಟ್ಟಗಳಿಗೆ ಸೇರಿತ್ತು. ಆ ಚಂದದ ಹುಡುಗಿ ಸಮಾಜದ ಬಾಯಿಗೆ ಆಹಾರವಾಗಿದ್ದಳು‌‌. ರಣಹದ್ದುಗಳ ಕಣ್ಣಿಗೆ ದಾರಿಯಲ್ಲಿ ಬಿದ್ದ ಮಾಂಸದಂತೆ ಕಂಡಿದ್ದಳು. ತಪ್ಪು ಅವನದಿದ್ದರೇನು..? ಸಮಾಜದ ಕಣ್ಣಿನಲ್ಲಿ ಅವಳು ಹೆಣ್ಣು ಎನ್ನುವುದೇ ತಪ್ಪಾಗಿ ಕಾಣಿಸಿತ್ತು.. "ಏಯ್ ಕೇಳಿದೆಯೇನೇ...? ಅವಳು ಯಾವನದೋ ಜೊತೆ ಇರೋದನ್ನ ಅವಳ ಗಂಡ ನೋಡಿಬಿಟ್ಟನಂತೆ ಕಣೇ.. ಅದಕ್ಕೆ ಅವಳ ಗಂಡ ಬಿಟ್ಟಿದ್ದು.. "ಕಣ್ಣಾರೆ ಕಂಡ ಹಾಗೇಯೇ ಅನ್ನುವವಳು ಅದೇ ಹೆಣ್ಣೆನಿಸಿಕೊಂಡ ಒಬ್ಬಳಾದರೆ, "ಒಂದಿನ ನನ್ನ ಜೊತೆ ಬರ್ತಿಯಾ..?" ಅಂತ ಕೇಳೋ ಆ ಚಂದದ ಮುಖದ ಹುಡುಗನ ಹಾಗಿರುವ ಇನ್ನೊಬ್ಬ ಅಂತಹುದೇ ಗಂಡು.. ಹಾದಿಯಲ್ಲಿ ಬರುವವರ ಹಸಿದ ನೋಟ ಆ ಚಂದದ ಹುಡುಗಿಯ ಮೇಲೆ ಬಿದ್ದಾಗಲೆಲ್ಲ "ಅವ ಸತ್ತರೆ ಮುಂಡೆಯಾಗಿ ಬದುಕಬಹುದೇ ವಿನಃ ಅವನಿದ್ದೂ ತಾನು ಈ ರೀತಿ ಬದುಕಲು ಈ ಬೀದಿನಾಯಿಗಳು ಬಿಡುವುದಿಲ್ಲ " ಎನಿಸಿತ್ತು. ಅಷ್ಟೊತ್ತಿಗೆ ಅವಳು ನೋವಿನ ಕೂಪಕ್ಕೆ ಅವಳೇ ತಳ್ಳಿದ್ದ ಆ ಅಮಾಯಕ ಹುಡುಗನ ವಿಷಯ ಅವಳೆದುರು ಬಂದು ನಿಂತಿತ್ತು. "ಅವನಿನ್ನೂ ಮದುವೆಯಾಗದೇ ಹಾಗೆಯೇ ಕೊರಗುತ್ತಿದ್ದಾನೆ" ಎಂದು ಆ ಚಂದದ ಹುಡುಗಿಯ ಗೆಳತಿ ಹೇಳಿದ್ದಳು. "ನಿನ್ನನ್ನು ಈಗಲೂ.." ಎಂದವಳು ಮಾತು ಮುಂದುವರಿಸಿದ ಗೆಳತಿಯ ಮಾತುಗಳನ್ನು ಅರ್ಧಕ್ಕೆ ತುಂಡರಿಸಿದ್ದಳು ಆ ಚಂದದ ಹುಡುಗಿ. ನಿರ್ಲಿಪ್ತಳಾಗಿಯೇ "ಇನ್ನು ಮುಂದೆ ಅವನ ಕುರಿತು ಮಾತನಾಡುವುದಾದರೆ ನಮ್ಮಿಬ್ಬರ ಮಧ್ಯೆ ಮಾತುಗಳೇ ಬೇಡ.. ಗಂಡ ಯಾವತ್ತಿಗೂ ಗಂಡನೇ.. ಮೋಸಗಾರನಾಗಿದ್ದರೂ ಸರಿ.. ಕಟ್ಟಿದ ತಾಳಿಗೆ ದ್ರೋಹ ಮಾಡಲಾರೆ.. ಕೊನೆಯವರೆಗೂ ಆ ಮೋಸಗಾರ ಗಂಡನನ್ನೇ ಪ್ರೀತಿಸುತ್ತೇನೆ. ‌ "ಎಂದು ಹೇಳಿದ್ದಳು ಆ ಹುಡುಗಿ.. ನಿಜ.. ಮಾಂಗಲ್ಯ ಎನ್ನುವುದು ಯಾವಾಗ ತನ್ನ ಕೊರಳನ್ನು ಅಲಂಕರಿಸಿತ್ತೋ ಅಂದಿನಿಂದ ಅವಳೆಂದಿಗೂ ಅದಕ್ಕೆ ದ್ರೋಹವೆಸಗಿರಲಿಲ್ಲ.. ಮನಸ್ಸು ಮಾಡಿದ್ದರೆ ತನ್ನನ್ನೇ ಜೀವವೆಂದುಕೊಂಡ ಆ ಅಮಾಯಕನ ಬದುಕಿಗೆ ಮತ್ತವಳು ಹೋಗಬಹುದಿತ್ತು. ಆದರೆ ನಿಜವಾಗಿಯೂ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಅವಳು ಪ್ರೀತಿಸಿದ್ದು ಆ ಅಮಾಯಕನಾಗಿರಲಿಲ್ಲ.. ತನ್ನ ಚಂದದ ಬದುಕನ್ನು ಚಿಂದಿ ಮಾಡಿದವನನ್ನೇ ಅವಳು ಅತಿಯಾಗಿ ನಂಬಿದ್ದು, ಪ್ರೀತಿಸಿದ್ದು.. ಆ ಅಮಾಯಕನನ್ನು ತಾನು ತಿರಸ್ಕರಿಸದಿದ್ದರೆ ಈ ಬದುಕು ತನ್ನನ್ನಿಷ್ಟು ತಿರಸ್ಕರಿಸಲು ಸಾಧ್ಯವಿರಲಿಲ್ಲ ಎನ್ನುವ ಸತ್ಯ ತಿಳಿದಿದೆ ಅವಳಿಗೆ.. ಪವಿತ್ರ ವೈವಾಹಿಕ ಸಂಬಂಧವನ್ನು ಅತ್ಯತ್ತಮವಾಗಿ ಕಾಪಾಡಿಕೊಂಡು ಬರಬೇಕಾದ ಗರತಿಯ ಯೋಚನೆ ಹೀಗೆ ಕಳೆದುಕೊಂಡ ಬದುಕಿನ ಬಗೆಗೆ ಹರಿಯುವುದು ತಪ್ಪೆನ್ನುವ ಪಾಪದ ಭಾವನೆಯೂ ಅದೆಷ್ಟು ಸಾರಿ ಅವಳನ್ನು ಚುಚ್ಚಿ ನೋಯಿಸಿದೆಯೋ ಲೆಕ್ಕ ಅವಳಿಗೇ ಗೊತ್ತು.. ಅದೇ ಕೊನೆ ಆ ಗೆಳತಿ ಮತ್ತೆ ಆ ಅಮಾಯಕನ ಬಗ್ಗೆ ಮಾತಾಡಲಿಲ್ಲ. ಒಂದು ರಾತ್ರಿ ಪೂರ್ತಿ ನಿದ್ದೆ ಮಾಡದೇ ಅತ್ತ ಆ ಹುಡುಗಿಯ ಕಣ್ಣೀರು ಖಾಲಿಯಾಗಲು ಇಷ್ಟ ಪಟ್ಟ ಹಾಗೆ ಕಾಣಲಿಲ್ಲ. ಒಂದು ತಪ್ಪು ಹೆಜ್ಜೆ ಒಂದಿಡಿ ಚಂದದ ಬದುಕನ್ನು ನುಂಗಿಹಾಕಿತ್ತು.

ಮನಸು ಆ ಮೋಸಗಾರ ಗಂಡನನ್ನು ನೆನಪಿಸಿಕೊಳ್ಳುವುದೇ ಬೇಡ.. ಹೀಗೇ ಇದ್ದು ಬಿಡೋಣ ಅಂದುಕೊಂಡವಳ ಕಣ್ಣ ಮುಂದೆ ಅವಳ ವಯಸ್ಸಾದ ಅಪ್ಪ ಕೊರಗಿನಿಂದ ಸಣ್ಣಗಾಗಿರುವುದು ಕಂಡಿತ್ತು. ವಯಸ್ಸಾದ ಅಪ್ಪನ ಕಣ್ಣುಗಳು ಜೋಲು ಚರ್ಮದಲ್ಲಿ ಸ್ವಲ್ಪ ಒಳಹೋದಂತೆ ಕಂಡಿತ್ತು. ತನ್ನ ಪ್ರೀತಿಯ ಮಗಳ ಬದುಕು ಹೀಗಾದದ್ದು ಕಂಡು ಆ ಅಪ್ಪ ಮಗಳ ಮುಂದೆ ಮಗುವಿನಂತೆ ಜೊತೆಗೆ ಅತ್ತು ಸಂತೈಸಿದ್ದರು. ಬೆಳೆದು ನಿಂತ ತಂಗಿ,ತಮ್ಮನ ಬಗ್ಗೆಯೂ ಅವಳು ಯೋಚಿಸಲೇ ಬೇಕಿತ್ತು.

ಬಲವಂತದ ಬದುಕು ಅವಳಿಗಿಷ್ಟವಿರಲಿಲ್ಲ.ಅವನನ್ನ ಕಳೆದುಕೊಳ್ಳಲೂ ಅವಳು ತಯಾರಿರಲಿಲ್ಲ. ಯಾಕೆ ಗೊತ್ತಾ..?ಅವಳಿಗೊಂದು ಬದುಕು ಕೊಟ್ಟವನ ಬಗ್ಗೆ ಅವಳಿಗೆ ಕೃತಜ್ಞತೆ ಇತ್ತು. ಹೆಚ್ಚಾಗಿ ಆ ಮೋಸಗಾರ ಗಂಡನನ್ನು ತನ್ನ ಜಗತ್ತೆಂದುಕೊಂಡಿದ್ದಳು. ಇಚ್ಛಿಸಿದ್ದರೆ ಮತ್ತೊಂದು ಬದುಕನ್ನು ಅವಳು ಆಯ್ದುಕೊಳ್ಳಬಹುದಿತ್ತು‌. ಬದುಕನ್ನು ಎರಡು ಸಾರಿ ಆಯ್ದುಕೊಂಡದ್ದು ಸಾಕಾಗಿತ್ತವಳಿಗೆ.. ಆ ಅಮಾಯಕನ ನೋವು ಶಾಪವಾಗಿ ಕಾಡುತ್ತಿದೆಯೇನೋ ಎನ್ನವ ಯೋಚನೆ ಪಶ್ಚಾತ್ತಾಪದ ಕುಲುಮೆಯಲ್ಲಿ ಅವಳನ್ನಿನ್ನೂ ಬೇಯುವಂತೆ ಮಾಡಿತ್ತು.. ಪಶ್ಚಾತ್ತಾಪದ ಕುಲುಮೆಯಲ್ಲಿ ಬೆಂದವಳು ಮತ್ತೆ ಅದೇ ಗಂಡನ ಜೊತೆಗಿನ ಬದುಕೇ ಲೇಸೆಂದು ಅವನೊಂದಿಗೆ ಬದುಕಲು ತನ್ನ ಸ್ವಂತಿಕೆಯನ್ನು ಹಾದಿಯಲ್ಲಿ ಎಸೆದು ಹೋಗಿದ್ದಾಳೆ. ಕನಸುಗಳನ್ನು ಸಮಾಧಿ ಮಾಡಿ ಅವನ ಮನೆ ಸೇರಿದ್ದಾಳೆ. ಅವನೆಂದೂ ಅವಳ ಮನ ಸೇರಲು ಸಾಧ್ಯವಿಲ್ಲ. ಹಣದ ದಾಸ, ಹಿಟ್ಲರ್'ನ ಪುನರ್ಜನ್ಮ ತನ್ನ ಬದುಕನ್ನು ಅದೇನು ಸುಂದರಗೊಳಿಸಲು ಸಾಧ್ಯ? ಎಲ್ಲರೆದುರೂ ತನ್ನನ್ನೇ ನಂಬಿ ಬಂದ ಅವಳನ್ನು ಹೀನಾಯ ಬೈಗುಳಗಳಿಂದ ಶೃಂಗರಿಸುವ ಅವನೆಂದಿಗೂ ಪ್ರೀತಿಯ ಅರ್ಥ ಅರಿಯುವುದು ಸಾಧ್ಯವೇ ಇಲ್ಲ. ಅದವಳಿಗೂ ಗೊತ್ತು..ತನ್ನ ಬದುಕಿನ್ನು ಎಂದಿಗೂ ರಂಗೇರುವುದಿಲ್ಲ.. ಪ್ರೀತಿಯೊಂದು ಮರೀಚಿಕೆ.. ಈಗ ಲೋಕದ ಕಣ್ಣಿಗೆ ಅವಳವನ ಹೆಂಡತಿ.. ಸಮಾಜವೀಗ ಬಾಯಿ ಮುಚ್ಚಿದೆ.ಈಗವಳು ಗರತಿಯಂತೆ ಕಾಣುತ್ತಾಳೆ. ಆದರೆ ಈ ಸಮಾಜದ ಬಗೆಗೆ ಗರತಿಯ ಕಣ್ಣುಗಳಲ್ಲಿರುವ ವಿಷಾದ ನಂಬಿರುವ ಅವನಿಗೇ ಕಾಣದ ಮೇಲೆ ಉಳಿದವರಿಗೆ ಕಾಣಲು ಹೇಗೆ ಸಾಧ್ಯ?

ಸುಂದರವಾಗಿದ್ದ ಆ ಹುಡುಗಿಯ ಕಣ್ಣುಗಳ ಸುತ್ತ ತನ್ನಿರುವಿಕೆಯ ಸ್ಥಾಪಿಸಿರುವ ಕಪ್ಪು ವರ್ತುಲ ತೋರಿಸುತ್ತದೆ ಅವಳ ನೋವಿನ ತೀವ್ರತೆಯನ್ನು.. ಅವನೊಂದಿಗಿನ ಬಲವಂತದ ಬದುಕು ಹೈರಾಣವೆನಿಸಿದರೂ ಅವಳೆಂದುಕೊಳ್ಳುತ್ತಾಳೆ "ಅನಿವಾರ್ಯತೆಗೂ ಇಷ್ಟವಿರದ ಬದುಕು ಬದುಕಲೇಬೇಕಾಗುತ್ತದೆ" ಅಥವಾ ಮಾಡಿದ ತಪ್ಪಿಗೆ ಪಾಲಿಗೆ ಬಂದ ಬದುಕು ಅದೇಷ್ಟೇ ಕರಾಳವಾಗಿದ್ದರೂ ಆ ಕರಾಳ ಕೂಪದಲ್ಲಿ ಬಿದ್ದು ಒದ್ದಾಡಲೇ ಬೇಕಾಗುತ್ತದೆ. ಅವಳು ಮತ್ತೆ ಅದೇ ಕರಾಳ ಬದುಕಿಗೆ ಮತ್ತೆ ಅಡಿಯಿಡಲು ಯೋಚಿಸಿದ ದಿನವೇ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಹೇಳಿದ್ದಳು ತನ್ನ ಪ್ರೀತಿಯ ತಂಗಿಗೆ.. "ಬದುಕಿನಲ್ಲಿ ಯೋಚಿಸಿ ಹೆಜ್ಜೆಯಿಡು.. ಒಂದು ಹೆಜ್ಜೆ ತಪ್ಪಾದರೆ ಅದನ್ನು ಸರಿಪಡಿಸಿಕೊಂಡು ಬದುಕಲು ಈ ಸಮಾಜದ ಕೆಲ ಹುಳುಗಳು ಬಿಡುವುದಿಲ್ಲ.. ಬದುಕಿನ ಆಯ್ಕೆಯಲ್ಲಿ ದುಡುಕಬೇಡ.. ನಿನ್ನ ಬದುಕಾದರೂ ಸುಂದರವಾಗಿರಲಿ.. ಇಲ್ಲವಾದರೆ ನನ್ನಂತಹ ಬಲವಂತದ ಬದುಕು ಬದುಕಬೇಕಾದೀತು.." ಎಂದು. ಎದುರು ನಿಂತ ನನಗೂ ಖೇದವೆನಿಸಿತ್ತು..

ಅವಳ ಡೈರಿಯ ಪುಟದ ಕೊನೆಯ ಸಾಲುಗಳು

"ಬದುಕು ಬಣ್ಣ ಕಳೆದುಕೊಂಡಿದೆ..

ಬಲವಂತದ ಬದುಕಷ್ಟು ಸುಲಭವಲ್ಲ..

ಈ ಬದುಕು ನನಗೊಬ್ಬಳಿಗೇ ಕೊನೆಯಾಗಲಿ "

ಮನದಲ್ಲಿ ಗಂಡನ ಬಗ್ಗೆ ಅಸಹ್ಯದ ಭಾವನೆ ಉಳಿಸಿಕೊಂಡ ಗರತಿಯ ಎದುರು ಕುಳಿತು ಅವಳ ತಿಂಗಳ ಸಂಬಳದ ಹಣ ಎಣಿಸುತ್ತಿರುವ ಗಂಡನ ಕಂಡು ಅವಳ ಮುಖದಲ್ಲಿ ನೋವಿನೆಳೆಯೊಂದು ಕಂಡು ಮಾಯವಾಗುತ್ತದೆ.. ತನ್ನ ಬಲವಂತದ ಬದುಕಿನ ಬಗ್ಗೆ ಅಸಹ್ಯದ ಭಾವನೆಯೊಂದು ನುಸುಳಿ ಹೋಗುತ್ತದೆ..

ಒಂದು ಕ್ಷಣದ ತಪ್ಪು ನಿರ್ಧಾರ ಇಡೀ ಬದುಕನ್ನೇ ನುಂಗಿಹಾಕಬಹುದು.. ಚಂದದ ಬದುಕು ಜೋಪಾನ ಮಾಡಿಕೊಳ್ಳಿ.. ಗಂಡಾದರೂ...ಹೆಣ್ಣಾದರೂ.. ಬದುಕು ಒಂದೇ.. ಇಚ್ಛೆಯ ಬದುಕು ಬದುಕಲು "ಇದು ನನ್ನ ಬದುಕು" ಅಂದುಕೊಳ್ಳುವ ಮೊದಲು ಸಮಯ ತೆಗೆದುಕೊಳ್ಳಿ.. ಆತುರದ ನಿರ್ಧಾರಗಳು ಅನಿವಾರ್ಯತೆಗಾಗಿ ಅಥವಾ ಭಾವನಾತ್ಮಕ ನಿಶ್ಯಕ್ತಿಯಿಂದಾಗಿ ಬಲವಂತದಿಂದ ಬದುಕುವ ಹಾಗೆ ಮಾಡಿಬಿಡಬಹುದು..ಜೋಕೆ..!

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.