ನೀ ತರುವ ನಗುವಿಗಾಗಿ..ತಂಪಲೆಯ ತಂಪು ಇಂದೇಕೊ ನನ್ನ ತನುವಿಗೆ ತಣಿಸುತಿಲ್ಲ ಹುಡುಗಾ ನೀ ಬಾರದ ಈ ಘಳಿಗೆ, ನೀ ಜೊತೆಯಿದ್ದು ಹೆಜ್ಜೆ ಹಾಕಿದ ಘಳಿಗೆ ಬಿಸಿಗಾಳಿಯಲ್ಲೂ ತನು ಮನಕೆ ತಂಪೆನಿಸುತ್ತಿತ್ತು, ಜೊತೆಗೆ ನನ್ನೇ ನಾ ಮರೆಯುತ್ತಿದ್ದೆ, ನಿನ್ನ ಸಾನಿಧ್ಯದ ಒಲುಮೆಯಲ್ಲಿ ಮನಕೆ ಸಂತಸದ ಹೊನಲೇ ಆಸರೆಯಾಗಿತ್ತು. ಆ ಪ್ರೀತಿಯ ನದಿಯಲ್ಲಿ ನೀನು ಮತ್ತು ನಾನು ದೋಣಿಯಲ್ಲಿ ಸಾಗುವ ರಸಘಳಿಗೆ ಮತ್ತು ಒಂದೇ ಸಮನೆ ನಿನ್ನ ಕಣ್ಣೋಟದಲ್ಲಿ ಮುಳುಗೆದ್ದು ಒದ್ದೆಯಾದ ನನ್ನ ಮನ ನಿನ್ನಲ್ಲಿ ಲೀನವಾದ ಈ ಮುಗ್ದೆಯ ಮನದಲ್ಲಿ ನೀ ವಿರಾಜಿಸಿದ್ದೆ. ಆ ಕ್ಷಣವೇ ಮನದರಸನಾದ ನೀನು ಎಂದಿಗೂ ನನ್ನಿಂದ ಮರೆಯಲಾಗದ ಜೀವವಾದೆ ನೀನು. ನಿನ್ನ ಕಣ್ಣೋಟದಲ್ಲೇ ನನ್ನ ಕಣ್ಣೋಟ ಸದಾ ಬೆಸುಗೆಯಾಗಲೆಂಬ ಹಂಬಲದ ಹಠ ತಂದವನು ನೀನಾದೆ. ಎಂದಿಗೂ ಸಹಿಸಿಕೊಳ್ಳುವ ನವಿರು ನೋವು ನೀಡುವ ಅದರಲ್ಲೇ ಸುಖವೆಂಬ ಅನುಭೂತಿ ಕಲ್ಪಿಸಿದವನು, ಮನಕೆ ಅಮಲು ಹಿಡಿಸಿದ ಹುಡುಗನೂ ನೀನಾದೆ..

ತಂಗಾಳಿಯ ತಂಪಲ್ಲಿ ಒಲವ ಸೌಗಂಧ ತಂದು ನಿನ್ನ ಪ್ರೀತಿಯ ಕೈಗಳಿಂದ ನನ್ನ ಮೊಗವ ನೇವರಿಸಿ ಕೆಂಗುಲಾಬಿ ಕೊಟ್ಟವನು, ಪ್ರೀತಿಯ ನಾವೆಯಲ್ಲಿ ಬಿಗಿದಪ್ಪಿ ಸಾವಿರ ವರುಷಕೂ ಅಳಿಯದ ಪ್ರೀತಿ, ಮಮತೆಗಳನು ನೀಡುವೆನೆಂದು ವಚನಕೊಟ್ಟವನು ನೀನು. ಬೆಳದಿಂಗಳ ಇರುಳಲ್ಲಿ ಸರೋವರದ ನೀರಿನಲ್ಲಿ ಇಣುಕಿ ನೋಡುವ ಚಂದಿರನಂತೆ ನನ್ನ ಮನದ ಮನೆಯ ಕಿಟಕಿಯಲ್ಲಿ ನೀ ಇಣುಕಿದೆ. ಆ ಕ್ಷಣವೇ ಶರಣಾದ ನಾನು ಎಂದಿಂದಿಗೂ ನಿನ್ನನೂ ಮರೆಯಲಾಗದ ನಿನ್ನವಲಂಬಿಯಾದೆ ಗೆಳೆಯಾ. ನಿನ್ನ ಮನದಲ್ಲೂ ಹೀಗೇನೆ ಎಂಬುದು ನಿನ್ನೆದೆಯ ನೇವರಿಸಿ ತಂಪಿರುಳ ನದಿ ತಟದಲ್ಲಿ ನಿನ್ನೆದೆಯ ಸದ್ದನ್ನು ಆಲಿಸಿ ಅರಿತವಳು ನಾನು. ನಿನ್ನೆದೆಯ ಕೂಗು ಬಿಡುವು ನೀಡದೇ ಗುನುಗುತಿರುವುದು ನನ್ಹೆಸರು ಎಂಬುದನ್ನು ಅರಿತೊಡನೆ ಗೆಳೆಯ ಅದುವೇ ನಾ ಜೀವನದಲ್ಲಿ ಗಳಿಸಿದ ಅತೀ ಅಮೂಲ್ಯ ಘಳಿಗೆ.. ಅತೀ ಪ್ರೀತಿಯ ಕ್ಷಣ. ಅಂದು ನಿನ್ನೆದೆಯೂ ಅದೆಷ್ಟು ಹಿತವಾಗಿ ನನ್ನನ್ನೇ ಕೂಗುತ್ತಿತ್ತು. ಆಗಲೇ ನಾನು ವಿಸ್ಮಿತಳಾಗಿ ನಿನ್ನಲ್ಲಿ ಲೀನವಾಗಿದ್ದೆ. ನನ್ನ ಮೊಗವನ್ನು ನೀನು ಗುಲಾಬಿ ಎಸಳಿಂದ ನೇವರಿಸಿ ದುಂಡುಮಲ್ಲಿಗೆಯ ಮೊಗದವಳೆಂದು ನೀನು ಮುದ್ದಾಗಿ ಕಿವಿಯಲ್ಲಿ ಪಿಸುಗುಟ್ಟಿದ್ದು ನನಗೆ ಅತೀ ಇಷ್ಟವೆನಿಸುವ ಪದವಾಗಿದೆ. ಅರಳಿದ ನೈದಿಲೆ ಪ್ರೀತಿಸಿ ನಗುವ ಚಂದಿರನಂತೆ ನೀನು ನನಗೆಂದೇ ನಗುಮೊಗದಿಂದ ನಲಿಯುತಿರುವುದನ್ನು ಕಂಡು ನನ್ನ ಮನ ನವಿಲಂತೆ ಕುಣಿಯುತ್ತಿತ್ತು. ಸರೋವರದ ಹಂಸದಂತೆ ನೀ ನಡೆದರೆ ನನ್ನೊಂದಿಗೆ ಬೆಳದಿಂಗಳ ಪಥವೂ ಸಾರ್ಥಕ. ಒಲವದೊರೆ ಶಶಿಗೂ ಮನತೃಪ್ತಿಯೆಂದು ನೀನು ಹೇಳುತ್ತಾ ದಾರಿಯುದ್ದಕ್ಕೂ ನನ್ನೊಂದಿಗೆ ಕೈಹಿಡಿದು ಹರಟುತ್ತಾ ಗಂಟೆಗಟ್ಟಲೆ ಮೈಲುಗಟ್ಟಲೇ ಸವೆಸಿದ ಘಳಿಗೆ ನಿಮಿಷದಂತೆ ಕೆಲವೇ ಹೆಜ್ಜೆಗಳಂತೆ ಕರಗಿಹೋಯಿತು. ಆದರೆ ಅದು ಮುಧುರ ಪಯಣವಾಗಿ ನಿತ್ಯ ಕಾಡತೊಡಗಿದೆ. ಪ್ರೀತಿಯಿಂದ ನೀನು ಕೈಹಿಡಿದು ಕುಸುಮಗಳ ವನದಲ್ಲಿ ನನ್ನ ಜೊತೆಯಾಗಿ ನಡೆವಾಗ ಮೆಲುಗಾಳಿಗೆ ನಲಿವ ಹೂಗಳು ನನ್ನ ನೋಡಿ ನಾಚುತ್ತಿವೆ ಎಂದು ನೀನು ನನ್ನನು ಹೇಳಿದ್ದು ಜೊತೆಗೆ ನನ್ನ ಮೊಗದಲ್ಲಿ ತುಸು ನಗುವು ಹೆಚ್ಚಿಸಿ ನನ್ನ ವಿಸ್ಮಿತಗೊಳಿಸಿ ನಲಿವ ಕುಸುಮಗಳ ಜೊಂಪಲಿ ನಗುವ ಚೆಲುವೆ ನೀನೆಂದು ನನ್ನನ್ನು ಪದೇ ಪದೇ ಹೊಗಳಿದವನು ನೀನು. ಮನಕೆ ಸಿಹಿ ನೆನಪುಗಳನ್ನು ಹೊರೆಯಾಗಿ ನೀಡಿದವನು ನೀನು.

ಆದರೆ ಇಂದು ನೀ ಕಾಣದೇ ಉಳಿದೆ.. ಮನ ನಿನ್ನ ಎಡೆಬಿಡದೇ ನಿನ್ನ ಸೆರೆಯಲ್ಲಿ ನಿತ್ಯ ನಿನ್ನ ಜಪಿಸುತ್ತಿದ್ದೆ. ಮನದ ದಿಟ ಹಠವೊಂದೇ ಆಗಿದೆ. ಅದೂ ನೀ ಬಂದು ನನ್ನ ಕಾಣುವ ಘಳಿಗೆ. ಮನವು ಹೇಳುತಿದೆ..

‘ನೀ ಒಪ್ಪುವುದಾದರೆ ನನ್ನ ಒಪ್ಪಿಬಿಡು

ನಾ ವಿಧಿಯ ಅಪ್ಪುವ ಮುನ್ನಾ…

ಕಾಯಲಾರೆನು ಇನ್ನೂ ಕಡಲತಡಿಯಲಿಂದು’

ಎಂದು ಮನ ಜಪಿಸುತಿದೆ ನಿನ್ನನೂ. ಸಾವಿರ ನೆನಪುಗಳ ಭಾರವನು ನನ್ನ ಹೆಗಲೇರಿಸಿ ಏಕೆ ಮರೆಯಾದೆ ಇಂದು. ಸಾಗರ ನೇವರಿಸಿ ಬೀಸುವ ತಂಗಾಳಿಯು ನನ್ನ ಅಪ್ಪಿದರೂ ಮನ ತಣಿಯುತ್ತಿಲ್ಲ. ತನುವಿಗೆ ದಣಿವು ಕರಗುತ್ತಿಲ್ಲ. ತಂಗಾಳಿಗೂ ನನ್ನ ರೋಧನ ಕಂಡು ವ್ಯಸನವಾಗಿದೆ ಗೆಳಯಾ..ನನಗೇಕೆ ಹೀಗೆ..? ಎಲ್ಲಾ ನಿನ್ನಿಂದಲೇ ನೀ ಇರದ ನೋವಿಂದಲೇ.. ಮುಸ್ಸಂಜೆ ರಂಗಲ್ಲಿ ಇನನು ಮುಳುಗುವಾಗ ಅವನು ನನ್ನ ದುಗುಡವನ್ನು ಕಂಡು ದುಖಿಸಿದಂತೆ ಭಾವ ಅವನಲ್ಲಿ..ಆದರೆ ನಿನಗೇಕೆ ಅಂಜಿಕೆ ಪ್ರೀತಿಯ ಹುಡುಗಾ.. ನಾ ಕಾದಿದ್ದೇನೆ ನೀ ಬರುವ ಸವಿಘಳಿಗೆ ಕಾದು..ಕಾದು..ನೊಂದಿದ್ದೇನೆ. ಬೇಗನೇ ಅಂಜಿಕೆ ಮರೆತು ಆಗಮಿಸಿ ಕಡಲ ತಡಿಯಲ್ಲಿ ಸಿಹಿ ಮಾತುಗಳಿಂದ ನನ್ನ ಮನ ರಂಜಿಸು. ಮುದುಡಿದ ಕುಸುಮವಾಗಿದ ನನ್ನ ಮನವನ್ನು ನೀನು ನಗುವ ಗುಲಾಬಿಯನ್ನಾಗಿಸು.. ಸದಾ ಜೊತೆಯಾಗಿ ನೀ ನಗು ಗೆಳೆಯಾ.. ಬೀಸುವ ಕಡಲಲೆಗಳ ಎಣಿಸೀ.. ಎಣಿಸೀ..ನನ್ನ ನಯನವು ಮಬ್ಬು ಕವಿದಿದೆ, ನಿನ್ನಾಗಮನವನು ಬಯಸುತಾ. ನೀ ಬಂದು ನನ್ನ ನಯನಗಳ ಸಂತೈಸು ಗೆಳೆಯಾ. ಮುಸ್ಸಂಜೆಯ ರಂಗಲ್ಲಿ ಒವಲ ರಂಗೋಲಿ ಹಾಕೋಣ ಬಾ ಗೆಳೆಯಾ..

ನಾ ಕಾದಿರುವೆ ನಿನಗಾಗಿ..ನೀ ತರುವ ನಗುವಿಗಾಗಿ..

kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.