ಭಾಗ೧

" ಲೇ ಸುಮಿ, ಬೇಗ ಎದ್ದು ರೆಡಿಯಾಗು, ಸ್ಕೂಲ್ ಬಸ್ ಬರತ್ತೆ, ನಿನ್ನ ಟಿಫನ್ ಬಾಕ್ಸ್, ಬ್ಯಾಗ್ ಎಲ್ಲ ಟೇಬಲ್ ಮೇಲೆ ಇದೆ" ಎಂದು ಅಜ್ಜಿ ಮುಸುಕೆಳೆದರು. "ಛಿ ಏನಜ್ಜಿ ನಿನ್ನ ಗೋಳು, ಇವತ್ತು ಭಾನುವಾರ ಅಲ್ವ, ಒಳ್ಳೆ ಅರಳು ಮರುಳು ಅಜ್ಜಿ" ಮತ್ತೆ ಮುಸುಕೆಳೆದೆ. "ಬೆಳಗಾಗಿದೆ, ಸೋಮಾರಿ, ನಿನಗೆ ಎಂಟು ವರ್ಷ ತುಂಬಿತಲ್ಲೆ, ನನಗೇ ಅರಳು ಮರಳು ಅಂತೀಯಾ?" ಅಜ್ಜಿ ಗೊಣಗುತ್ತಿದ್ದಳು. "ಅಜ್ಜಿ ಅಮ್ಮ ಇವತ್ತೂ ಬರಲಿಲ್ಲವೇ?" ಮುಸುಕಿನಿಂದಲೇ ಕೂಗಿದೆ. ಅಜ್ಜಿಗೆ ನನ್ನ ಕೂಗು ಕೇಳಿಸಲಿಲ್ಲ

ಟೇಬಲ್ ಮೇಲಿದ್ದ ಗಡಿಯಾರದ ಅಲಾರಾಂ ರಾಗವಾಗಿ ಹಾಡಿತು. ಮುಸುಕು ತೆಗೆದು ಎದ್ದು ಕುಳಿತೆ. ಗಡಿಯಾರವನ್ನು ಕೈಗೆತ್ತಿಕೊಂಡು ಮೃದುವಾಗಿ ಸವರಿದೆ. ಅದು "ಪಪ್ಪ" ಕೊಟ್ಟ ಉಡುಗೊರೆ. ಸುತ್ತಲೂ ಕಣ್ಣಾಡಿಸಿದೆ. ಟೇಬಲ್ ಲ್ಯಾಂಪ್, ಸಣ್ಣ ಸ್ಟಡಿ ಟೇಬಲ್, ಚೇರ್, ಸೈಕಲ್ ಎಲ್ಲವೂ "ಪಪ್ಪ " ಕೊಡಿಸಿದ್ದು.

ಬೆಳಗಾದೊಡನೆ ಅವರ ರೂಮ್ಗೆ ಹೋಗಿ ಅವರು ಹೊದ್ದಿದ್ದ ಹೊದಿಕೆಯನ್ನು ಎಳೆದು ಹಾಕುತ್ತಿದ್ದೆ. ಪಪ್ಪ ನಿದ್ದೆ ಬಂದಂತೆ ಇರುತ್ತಿದ್ದರು. ನಾನು ಮತ್ತೆ ಅಯ್ಯೊ ಚಳಿ ಎಂದುಕೊಂಡು ಅವರಿಗೆ ಹೊದಿಕೆ ಹೊದಿಸುತ್ತಿದ್ದೆ. "ಲೇ ಕಳ್ಳಿ" ಎಂದು ಕೈಹಿಡಿದು ಎಳೆಯುತ್ತಿದ್ದರು. "ಪಪ್ಪಾ" ಎಂದು ಅವರ ಕುತ್ತಿಗೆಗೆ ಜೋತು ಬೀಳುತಿದ್ದೆ. ಅವರ ಕೂದಲು ಕೆದರಿ ನಗುತ್ತಿದ್ದೆ. ಅಮ್ಮ "ನಿಮ್ಮದು ಅತಿಯಾಯಿತು" ಎಂದು ಸುಮ್ಮನೆ ಕೋಪ ತೋರಿಸಿ ನಗುತ್ತಿದ್ದಳು. "ಪಪ್ಪನ" ಜೊತೆ ಅವರನ್ನು ಅಪ್ಪಿಕೊಂಡು ಮಲಗುತ್ತಿದ್ದೆ. ಅವರ ಕೈಬೆರಳುಗಳು ನನ್ನ ಹಣೆಯ ಮೇಲೆ ಆಡಿಸುತ್ತಿದ್ದರು. ಮತ್ತೆ ಎದ್ದಾಗ "ಪಪ್ಪಾ" ಆಫೀಸಿಗೆ ಹೋಗಿರುತ್ತಿದ್ದರು. ಅಮ್ಮ ಕಾಲೇಜಿಗೆ ಪಾಠ ಹೇಳಲು ಹೋಗುತ್ತಿದ್ದಳು.

ಮನೆಯಲ್ಲಿ ನಾನು ಮತ್ತು ಅಜ್ಜಿ. ಆಗಲೇ ನಾನು ಹೊಸದಾಗಿ ಶಾಲೆಗೆ ಸೇರಿದ್ದು. ಪಪ್ಪಾ ಆಸ್ಟ್ರೇಲಿಯಾ ಹೋಗಿದ್ದಾರೆ ಅಂತ ಅಜ್ಜಿಹೇಳಿದ್ದು. ಅಮ್ಮನ್ನ ಗೋಳಾಡಿಸಿ ಒಂದು ಗ್ಲೋಬ್ ತೆಗೆಸಿಕೊಂಡಿದ್ದೆ. ಅದನ್ನು ತಿರುಗಿಸಿ ತಿರುಗಿಸಿ "ಅಮ್ಮ ಇದೆ ಅಲ್ವ ಆಸ್ಟೇಲಿಯಾ" ಅಮ್ಮ ತಲೆಯಾಡಿಸುತ್ತಿದ್ದಳು. ಟೀಚರ್ ಹತ್ತಿರ ಕೇಳಿದ್ದೆ "ಆಸ್ಟ್ರೇಲಿಯಾ ತುಂಬಾ ದೂರಾನ ಮಿಸ್" ಅವರು ಹೌದು ಎಂದಿದ್ದರು

ಆಗಲೇ ಎರಡು ವರ್ಷವಾಯಿತು. ಕಣ್ಣಲಿ ನೀರು ತುಂಬಿತು. ಎದ್ದು ಹೋಗಿ ಅಪ್ಪನ ರೂಮ್ ಒಳಗೆ ಹೋದೆ. ಆ ನೀಲಿ ಷರಟನ್ನು ಹ್ಯಾಂಗೆರ್ ನಿಂದ ತೆಗೆದು ಹಾಕಿಕೊಂಡು ಕನ್ನಡಿ ಮುಂದೆ ನಿಂತೆ. ಅದು ಪಪ್ಪಾದು ಇಷ್ಟವಾದ ಷರಟು. ದೊಗಲು ದೊಗಲಾದ ಷರಟು. ಅಜ್ಜಿ ಬಂದಳು. "ಏನೇ ನಿನ್ನ ಅವತಾರ. ದಿನಕ್ಕೆ ಒಂದು ಷರಟು ಹಾಕಿಕೊಂಡು ಮನೆಯಲ್ಲಿ ಓಡಾಡುತ್ತೀಯ". ನಾನು "ಇದು ನನ್ನ ಪಪ್ಪಾದು, ನನ್ನಿಷ್ಟ, ಅಜ್ಜಿ, ನಿನಗೇನು ಕಷ್ಟ" ಮನದಲ್ಲೇ ಹಾಡು ಗುನುಗಿದೆ "ಪಪ್ಪಾ ಐ ಲವ್ಯು ಪಾ"

ಹೊರಗಡೆ ಅಜ್ಜಿ ಮಾತಾಡುತ್ತಿದ್ದಳು. ಒಹ್, ಅಮ್ಮ ಬಂದಿದ್ದಾಳೆ, ಒಂದು ವಾರ ಆಗಿದೆ ಹೋಗಿ. "ಅಮ್ಮ" ಎಂದು ಕೂಗುತ್ತ ಹೊರಗೆ ಬಂದೆ. ಅಮ್ಮ ಹೊಸ ಸೀರೆ ಉಟ್ಟಿದ್ದಳು. ಹಣೆಯಲ್ಲಿ ದೊಡ್ಡ ಕುಂಕುಮ ಚನ್ನಾಗಿ ಕಾಣುತ್ತಿದ್ದಳು. ಅಲ್ಲೇ ಸೋಫಾದಲ್ಲಿ ಯಾರೂ ಕುಳಿತಂತೆ ಕಾಣಿಸಿತು. "ಪಪ್ಪಾ" ಎಂದು ಕೂಗಿಕೊಂಡು ಹಿಂದಿನಿಂದ ಅವರನ್ನು ಅಪ್ಪಿಕೊಂಡೆ. ಮೆಲ್ಲನೆ ತಲೆ ಎತ್ತಿದೆ. ಅಯ್ಯೋ ಪಪ್ಪಾ ಅಲ್ಲ, ಡಾಕ್ಟರ್ ಅಂಕಲ್" ಎಂದುಕೊಂಡು ದೂರ ನಿಂತೆ.

ಅಜ್ಜಿ ಬಂದು "ಇವರೇ ನಿಮ್ಮ ಪಪ್ಪಾ ಕಣೆ" ಅಂದರು. ನಾನು ಕೋಪ ರೋಷದಿಂದ "ಇವರು ಪಪ್ಪಾ ಅಲ್ಲ, ಡಾಕ್ಟರ್ ಅಂಕಲ್, ನನಗೆ ಗೊತ್ತು" ಚೀರಿದೆ. ಅಮ್ಮ ದೂರದಿಂದ ನನ್ನನ್ನೇ ನೋಡುತ್ತಿದ್ದಳು. ಅಂಕಲ್ "ಪಾಪ ಪುಟ್ಟ ಮಗು. ಅವಳನ್ನು ಬಿಡಿ ನಾಲ್ಕು ದಿನದಲ್ಲಿ ಸರಿಯಾಗ್ತಾಳೆ" ನನಗೇನು ಅರ್ಥವಾಗದೆ ಅಲ್ಲೇ ನಿಂತಿದ್ದೆ.

ಸಂಜೆ ಮನೆಯಲ್ಲಿ ತುಂಬಾ ಜನ ಬಂದಿದ್ದರು. ಅಮ್ಮ ಮತ್ತು ಅಂಕಲ್ ಎಲ್ಲರನ್ನೂ ಮಾತಾಡುತ್ತಿದ್ದರು. ಊಟದ ವ್ಯವಸ್ಥೆ ಆಗಿತ್ತು. ಪಕ್ಕದ ಮನೆಯ "ಉಮಿ" ಹೇಳಿದಳು. "ಅವರು ನಿನ್ನ ಹೊಸ ಅಪ್ಪ ಅಂತೇ, ಅಮ್ಮ ಹೇಳುತ್ತಿದ್ದಳು" ನನಗೆ ಕೋಪ ಉಕ್ಕಿ ಬಂತು.. ಅಮ್ಮ ರೇಷ್ಮೆ ಸೀರೆ ಉಟ್ಟು ತುಂಬಾ ಖುಷಿಯಾಗಿ ಓಡಾಡುತ್ತಿದ್ದಳು. ಅಂಕಲ್ "ಹೇಮಾ" "ಹೇಮಾ" ಅಂತ ಅಮ್ಮನ ಹಿಂದೆ ಓಡಾಡುತ್ತಿದ್ದರು. ಅಂಕಲ್ ಒಂದೆರೆಡು ಸಲ ನನ್ನ ಕರೆದು ಮಾತಾಡಿಸಿದರು. ನಾನು ಮಾತು ಬರದ ಮೂಕಿಯಂತೆ ಇದ್ದೆ. ಬಂದ ಎಲ್ಲ ಜನರೂ ಹೊರಟು ಹೋದರು. ತುಂಬಾ ಉಡುಗೊರೆಗಳು.

ರಾತ್ರಿ ಅಮ್ಮ ಮತ್ತು ಅಂಕಲ್ ಇಬ್ಬರೂ ಪಪ್ಪಾ ರೂಮಿನ ಕಡೆಗೆ ಹೋಗುತ್ತಿದ್ದರು. ನಾನು ಓಡಿ ಹೋಗಿ ಬಾಗಿಲಿಗೆ ಅಡ್ಡವಾಗಿ ನಿಂತೆ. "ಇದು ನನ್ನ ಪಪ್ಪಾ ರೂಮು" ಹೇಳಿ ಬಾಗಿಲು ಹಾಕಿಕೊಂಡು ಮಂಚದ ಮೇಲೆ ಕುಳಿತೆ. ಅಜ್ಜಿ ಮತ್ತು ಅಮ್ಮ ಕೂಗುತ್ತಿದ್ದರು. ನಾನು ದೀಪ ಆರಿಸಿ ಅಲ್ಲೇ ಮಲಗಿಕೊಂಡೆ. ಮೈಯೆಲ್ಲಾ ಬಿಸಿಯಾಗಿ ಜ್ವರ ಬಂದಂತೆ ಆಗಿತ್ತು.

******************

ಭಾಗ೨

ಡಾಕ್ಟರ್ "ಆರಾಧನಾ" ಸುಮಿಯನ್ನು ಪರೀಕ್ಷಿಸುತ್ತಿದ್ದರು. ಅವರು "ಹೇಮಾ, ಪುಟ್ಟ ಹುಡುಗಿಗೆ ಮಾನಸಿಕ ಆಘಾತವಾಗಿದೆ, ವಾರದಲ್ಲಿ ಬಿಟ್ಟು ಬಿಟ್ಟು ಜ್ವರ ಬರುತ್ತಿದೆ. ತುಂಬಾ ಮಂಕಾಗಿದ್ದಾಳೆ. ಮೊದಲಿನಂತೆ ಆಗಲು ಸಮಯಬೇಕು" ಹೇಳಿದರು.

ನಾನು ತಲೆ ತಗ್ಗಿಸಿ ಕೇಳಿದೆ "ಡಾಕ್ಟರ್ ನಾನು ಮರು ಮದುವೆ ಮಾಡಿಕೊಂಡಿದ್ದು ತಪ್ಪೇ?, ನನ್ನ ಪತಿ ಶಂಕರ್ ಎರಡು ವರ್ಷದ ಹಿಂದೆ ಅಪಘಾತದಲ್ಲಿ ಮರಣಿಸಿದರು. ಡಾಕ್ಟರ್ ವಿವೇಕ್ ನಮ್ಮ ಫ್ಯಾಮಿಲಿ ಫ್ರೆಂಡ್, ವೆಲ್ ವಿಷೆರ್. ಶಂಕರ್ ಗೆ ಒಳ್ಳೆಯ ಸ್ನೇಹಿತರು ಆಗಿದ್ದರು. ಈ ಎರಡು ವರ್ಷ ನನ್ನ ಬೆಂಬಲಕ್ಕೆ ನಿಂತರು. ನನಗೆ ಬದುಕು ಕೊಡಲು ಬಂದವರು."

ಡಾಕ್ಟರ್ ಆರಾಧನಾ ಹೇಳಿದರು... "ನೀವು ಮಾಡಿದ್ದು ಖಂಡಿತ ತಪ್ಪಲ್ಲ. ಆದರೆ ನೀವು ಈ ಪುಟ್ಟ ಹುಡುಗಿಗೆ ಎಲ್ಲವನ್ನು ಹೇಳಬೇಕಿತ್ತು. ತಂದೆ ಸತ್ತವಿಷಯವನ್ನು ಮುಚ್ಚಿಟ್ಟಿದ್ದು ತಪ್ಪು." ನಾನು ೬ ವರ್ಷದ ಹುಡುಗಿಗೆ ಸಾವು ಎಂದರೆ ಏನು ಅರ್ಥವಾಗತ್ತೆ ಡಾಕ್ಟರ್" ಹೇಳಿದೆ.

"ಮಕ್ಕಳು ಮನಸ್ಸು ತುಂಬಾ ಡೆಲಿಕೇಟ್. ತಂದೆಯನ್ನು ತುಂಬಾ ಹಚ್ಚಿಕೊಂಡ ಹುಡುಗಿ. ನೀವು ನಿಧಾನವಾಗಿ ಪರಿಸ್ಥಿತಿ ತಿಳಿಸಬೇಕಿತ್ತು. ಅವಳಿಗೆ ಗೊತ್ತಿಲ್ಲದೇ ನೀವು ಮದುವೆ ಮಾಡಿಕೊಂಡು ಬಂದಿರಿ, ಇವೆಲ್ಲ ಪುಟ್ಟ ಹೃದಯದ ಮೇಲೆ ಆಘಾತವಾಗಿದೆ. ಏನಾಗಲಿ, ತುಂಬಾ ಪ್ರೀತಿಯಿಂದ ನೋಡಿಕೊಳ್ಳಬೇಕಾಗುತ್ತದೆ"

ಇವೆಲ್ಲ ಆಗಿ ಆಗಲೇ ಎರಡು ತಿಂಗಳಾಗಿವೆ. ಸುಮಿ ಸುಮ್ಮನೆ ಮಂಕಾಗಿ ಮಲಗಿರುತ್ತಾಳೆ. ಸ್ಕೂಲ್ ಗೆ ಹೋಗು ಎಂದರೆ ಇಲ್ಲ ಎಂದು ತಲೆಯಾಡಿಸುತ್ತಾಳೆ. ಅವಳು ಶಂಕರ್ ಅವರ ಷರಟುಗಳನ್ನು ಹಾಕಿಕೊಂಡು ಕೈಗಳನ್ನೂ ಆಡಿಸುತ್ತಾ ಕನ್ನಡಿಯ ಮುಂದೆ ನಿಲ್ಲತ್ತಾಳೆ. ನನ್ನ ಕಂಡರೆ ಸಿಡಿಮಿಡಿ ಮಾಡುತ್ತಾಳೆ. ಅಮ್ಮ ಇಲ್ಲದಿದ್ದರೆ ಅವಳನ್ನು ಸುಧಾರಿಸುವುದು ತುಂಬಾ ಕಷ್ಟವಾಗುತ್ತಿತ್ತು. ವಿವೇಕ್ ತುಂಬಾ ತಾಳ್ಮೆಯಿಂದ ಹೇಳುತ್ತಾರೆ "ನಾವು ಅವಳಿಗೆ ಸ್ವಲ್ಪ ತಿಳುವಳಿಕೆ ಕೊಡಬೇಕಿತ್ತು, ಅವಳಿಗೆ ಸ್ವಲ್ಪ ಸಮಯ ಬೇಕು, ಮನಸ್ಸು ಸತ್ಯವನ್ನು ವಾಸ್ತವವನ್ನು ಒಪ್ಪಿಕೊಳ್ಳಲು ಅವಳಿಗೆ ಅವಕಾಶ ಕೊಡಬೇಕು, ಡಾಕ್ಟರ್ ಆರಾಧನಾ ಒಳ್ಳೆಯ ಮಕ್ಕಳ ಮನಶಾಸ್ತ್ರಜ್ಞರು

ವಿವೇಕ್ ಸಮಯ ಸಿಕ್ಕಾಗಲೆಲ್ಲ ಸುಮಿ ಮುಂದೆಯೇ ಇರುತ್ತಾರೆ. ಅವಳನ್ನು ನಗಿಸಲು ಏನೇನೋ ಕಥೆ ಹೇಳುತ್ತಾರೆ. ಆದರೆ ಸುಮಿ ತುಂಬಾ ಗಂಭೀರವಾಗಿ ಅವರನ್ನೇ ನೋಡುತ್ತಾಳೆ. ನಾನು ಮತ್ತು ವಿವೇಕ್ ಮನೆಯ ಮೇಲಿನ ಸಣ್ಣ ರೂಮ್ ನಲ್ಲಿ ಮಲಗುತ್ತೇವೆ.

ಅಂದು ಸುಮಿಗೆ ವಿಪರೀತ ಜ್ವರ ಬಂದಿತ್ತು. ವಿವೇಕ್ ಅವಳ ಜೊತೆಯಲ್ಲಿ ಇರುತ್ತಿದ್ದರು. ಅವಳಿಗೆ ಹಾಲು ಮಾತ್ರೆಗಳನ್ನು ಅವರೇ ಕೊಡುತ್ತಿದ್ದರು. ಜ್ವರದ ತಾಪದಲ್ಲಿ "ಪಪ್ಪಾ" "ಪಪ್ಪಾ...." ಎಂದು ಕನವರಿಸುತ್ತಿದ್ದಳು. ನನಗಂತೂ ಕರುಳು ಕಿತ್ತು ಬಂದಂತೆ ಆಗುತಿತ್ತು. ನಾನು ತಪ್ಪು ಮಾಡಿದೆ ಎಂದು ಅನಿಸಿತು.

ಒಂದು ವಾರ ವಿವೇಕ್ ಅವಳ ಜೊತೆಯಲ್ಲಿ ಇದ್ದರು. ಅವಳ ಪುಟ್ಟ ಕೈಗಳನ್ನು ಹಿಡಿದುಕೊಂಡು ಪ್ರೀತಿಯಿಂದ ಮಾತಾಡುತ್ತಿದ್ದರು. ಅವಳ ಕಣ್ಣೀರನ್ನು ಒರೆಸುತ್ತಿದ್ದರು. ಮದ್ಯೆ ಮದ್ಯೆ ಸುಮಿ ಕಣ್ಣು ಬಿಟ್ಟು ನೋಡುತ್ತಿದ್ದಳು. ಮತ್ತೆ ಕಣ್ಣು ಮುಚ್ಚಿ ಮಲಗುತ್ತಿದ್ದಳು.

ಆ ಬೆಳಗಿನ ಜಾವಾ ನಾವು ಮೇಲಿನ ರೂಮ್ ನಲ್ಲಿ ಮಲಗಿದ್ದೆವು. ಯಾರೋ ಬಾಗಿಲು ಮೆಲ್ಲನೆ ತಳ್ಳಿದಂತಾಯಿತು.. ನಾನು ಮೆಲ್ಲನೆ ಕಣ್ಣು ತೆರೆದೆ. ಸುಮಿ ಬಾಗಿಲು ತಳ್ಳಿಕೊಂಡು ಒಳಗೆ ಬಂದಳು. ನಾನು ಮತ್ತೆ ಕಣ್ಣು ಮುಚ್ಚಿದಂತೆ ಎಲ್ಲವನ್ನು ಗಮನಿಸುತ್ತಿದ್ದೆ.

ಅವಳು ವಿವೇಕ್ ಹತ್ತಿರ ಬಂದಳು. ಅವರ ಹೊದಿಕೆ ನೆಲದ ಮೇಲೆ ಬಿದ್ದಿತ್ತು. ಅವಳು ನಿಧಾನವಾಗಿ ಅದನ್ನು ಎತ್ತಿ ವಿವೇಕ್ ಗೆ ಹೊದೆಸಿದಳು. ವಿವೇಕ್ ತಕ್ಷಣ "ಲೇ ಕಳ್ಳಿ, ನನಗೆ ಗೊತ್ತು ನೀನು ಬಂದಿರೋದು" ನಗುತ್ತ ಅವಳ ಕೈ ಹಿಡಿದು ಎಳೆದರು. ಅವಳು ಅಳುತ್ತಿದ್ದಳು. "ಅಳಬಾರದು ಬಾ ಇಲ್ಲಿ" ಎಂದು ಅವಳನ್ನು ಅಪ್ಪಿಕೊಂಡರು. ಅವಳು ಪುಟ್ಟ ಕೈಗಳಿಂದ ಅವರ ಕೊರಳಿಗೆ ಜೋತು ಬಿದ್ದಳು. ನನ್ನ ಮನಸಿನ ದೊಡ್ಡ ಭಾರ ದೂರವಾದಂತೆ ಅನಿಸಿ ನಾನು ಎದ್ದಿರುವುದು ಇಬ್ಬರಿಗೂ ತಿಳಿಯಬಾರದು ಎಂದು ಬಲವಾಗಿ ಕಣ್ಣು ಮುಚ್ಚಿದೆ. ಹಿತವಾದ ನಿದ್ದೆಯಲ್ಲಿ ಮುಳುಗಿಹೋದೆ.

******************


kannada@pratilipi.com
+91 9845990788
ನಮ್ಮನ್ನು ಸಾಮಾಜಿಕ ಮಾಧ್ಯಮದಲ್ಲಿ ಹಿಂಬಾಲಿಸಿ
     

ನಮ್ಮ ಬಗ್ಗೆ
ನಮ್ಮ ಜೊತೆ ಕಾರ್ಯ ನಿರ್ವಹಿಸಿ
ಗೌಪ್ಯತಾ ನೀತಿ
ನಿಯಮಗಳಿಗೆ
© 2017 Nasadiya Tech. Pvt. Ltd.